ಯಶೋ ಬೆಳಗು
ಯಶೋಮತಿ ಬೆಳಗೆರೆ
1947 ಅನ್ನುವುದು ಇತಿಹಾಸದ ಪುಟಗಳಲ್ಲಿ ಮಹತ್ವದ ತಿರುವು ಕೊಟ್ಟ ವರ್ಷ. ಆಡಳಿತ ವ್ಯವಸ್ಥೆಯ ದಿಕ್ಕು ಬದಲಿಸಿದ ವರ್ಷ. ರಾಜಾಡಳಿತದಿಂದ ಪ್ರಜಾ ಪ್ರಭುತ್ವದ ಆಡಳಿತವಾಗಿ ಮಾರ್ಪಾಟಾದ ವರ್ಷ. ಹಿಂದೂಸ್ಥಾನವಾಗಿದ್ದ ಸಂಸ್ಥಾನ, ಭಾರತ ಹಾಗೂ ಪಾಕಿಸ್ತಾನವಾಗಿ ವಿಭಜನೆಯಾದ ವರ್ಷ. ಬ್ರಿಟಿಷರನ್ನು ಒಕ್ಕಲೆಬ್ಬಿಸಿದ ವರ್ಷ. ಸೂರ್ಯೋದಯಕ್ಕೂ ಕಾಯದೆ ನಡುರಾತ್ರಿಯ ರೆಕ್ಕೆ ಬಿಚ್ಚಿದ ಸ್ವಾತಂತ್ರ್ಯ ಇನ್ನೂ ಸಂಪೂರ್ಣ ಬೆಳಕು ಕಂಡೇ ಇಲ್ಲ. ಕಾಣುವ
ಭರವಸೆಯೂ ಕಾಣುತ್ತಿಲ್ಲ.
ಒಮ್ಮೆ ಕಳೆದುಕೊಂಡಾಗಲೇ ನಮಗೆ ಅದರ ಮಹತ್ವವೇನು ಎಂಬುದರ ಅರಿವಾಗುವುದು ಎನ್ನುವ ಮಾತಿನಂತೆ ಇಂದಿನ ಪೀಳಿಗೆಯವರಿಗೆ ಸ್ವಾತಂತ್ರ್ಯದ ಮಹತ್ವದ ಅರಿವೇ ಇಲ್ಲ. ಎಲ್ಲರೂ ಹಣದಾಹಿಗಳಾಗಿಬಿಟ್ಟಿದ್ದಾರೆ. ಅಧಿಕಾರದಲ್ಲಿರುವ ಪ್ರತಿಯೊಬ್ಬರೂ ಕುಬೇರರೇ. ಜನಸಾಮಾನ್ಯರ ಮೇಲೆ ಹೊರಲಾಗದಷ್ಟು ತೆರಿಗೆಯನ್ನು ಹೇರುತ್ತಿದ್ದರೂ ಬೊಕ್ಕಸ ಮಾತ್ರ ತಿರುಪತಿ ತಿಮ್ಮಪ್ಪನ ಹುಂಡಿಯಂತೆ ತುಂಬುತ್ತಲೇ ಇಲ್ಲ. ಆದರೆ ಒಂದೇ ಒಂದು ಕ್ಷಣ ಕುಳಿತು ಆಲೋಚನೆ ಮಾಡಿ, ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಅನ್ನುವ ಹಾಗೆ ಅದೆಷ್ಟು ಜನರು ದಹಿಸಿ ಹೋಗಿದ್ದಾರೆ, ಮನೆ-ಮಠ ಸಂಸಾರಗಳನ್ನು ಕಳೆದುಕೊಂಡಿ ದ್ದಾರೆ, ಚರ್ಮ ಕಿತ್ತುಹೋಗುವಂತೆ ಲಾಟಿ ಏಟು ತಿಂದಿದ್ದಾರೆ, ಊಟವಿಲ್ಲದೆ ಹಸಿವಿನಿಂದ ಬಳಲಿದ್ದಾರೆ, ನೇಣಿಗೇರಿದ್ದಾರೆ, ಜೈಲುಪಾಲಾಗಿದ್ದಾರೆ, ತಬ್ಬಲಿ ಗಳಾಗಿದ್ದಾರೆ ಈ ಒಂದು ಸ್ವಾತಂತ್ರ್ಯಕ್ಕಾಗಿ ಅನ್ನುವ ಕಿಂಚಿತ್ ಕಾಳಜಿಯೂ ಇಲ್ಲ ಇಂದಿನ ಯುವ ಪೀಳಿಗೆಗೆ.
ಯಾಕಂದರೆ ಅವರಿಗೆ ದಾಸ್ಯದ ಅನುಭವವೇನೆಂಬುದೇ ಗೊತ್ತಿಲ್ಲ. ಅನುಭವಕ್ಕೆ ಬಾರದ ಹೊರತು ಅದರ ನೋವೇ ನೆಂಬುದು ಕೂಡ ಅರಿವಿಗೆ ಬರುವುದಿಲ್ಲ. ಮನೆಗೆ ಬಂದ ಅತಿಥಿಗಳು ನಗುನಗುತ್ತಲೇ ಮಾತನಾಡುತ್ತಾ ಕ್ರಮೇಣ ಮನೆಯನ್ನೆಲ್ಲ ಆಕ್ರಮಿಸಿಕೊಳ್ಳುತ್ತಾ ಒಂದು ದಿನ ನಮ್ಮನ್ನೇ ಜೀತಕ್ಕಿಟ್ಟುಕೊಂಡು ದಬ್ಬಾಳಿಕೆ ನಡೆಸಿ ದಂತಾಗಿತ್ತು ಬ್ರಿಟಿಷರ ವರ್ತನೆ. ಆದರೆ ಅದಕ್ಕೆಲ್ಲ ನಮ್ಮವರೇ ರತ್ನಗಂಬಳಿ ಹಾಸಿಕೊಟ್ಟದ್ದು ಅನ್ನುವುದು ಬೇರೆ ಮಾತು. ಈಗಿನವರಿಗೆ ಗಾಂಧೀಜಿ ಯಾರು ಅಂತ ಕೇಳಿದರೆ ‘ವಹೀ ಚಷ್ಮಾ ಪೆಹನ್ತಾ ಹುವಾ ಟಕ್ಲು ಹೆನಾ?’ ಅನ್ನುವ ಮಾತು ಕೇಳಿದಾಗ ಯಾರಿಗೂ ನೋವಾಗುವುದಿಲ್ಲ.
ಯಾಕೆಂದರೆ ಯಾರಿಗೂ ಈಗ ಗಾಂಧೀಜಿಯಾಗಲೀ, ಸುಭಾಶ್ ಚಂದ್ರ ಬೋಸ್ ಆಗಲಿ, ಚಂದ್ರಶೇಖರ ಆಜಾದ್ ಆಗಲೀ, ರಾಜಾರಾಮ್ ಮೋಹನ್ ರಾಯ್ ಆಗಲೀ ಬೇಕಾಗಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀ ಬಾಯಿಯಂಥ ಹೆಣ್ಣುಮಕ್ಕಳು ಕೂಡ ಈಗ ಎಲ್ಲೂ ಕಾಣುವುದಿಲ್ಲ. ಈಗ ಎಲ್ಲರೂ ಸರ್ವ
ಸ್ವತಂತ್ರರು. ವೆಚ್ಚಕ್ಕೆ ಹೊನ್ನು, ಬೆಚ್ಚನೆಯ ಮನೆ, ಇಚ್ಛೆಯನರಿಯುವ ಸಂಗಾತಿಯಷ್ಟೇ ನಮ್ಮ ಬದುಕಿನ ಆದ್ಯತೆಗಳಾಗಿ ಹೋಗಿವೆ. ಇಂದು ಗಾಂಧೀಜಿಯ ಹೆಸರೆತ್ತಿದ ಕೂಡಲೇ ಕಾಂಟ್ರೊವರ್ಸಿಯ ಮಾತುಗಳು ಆರಂಭಗೊಂಡು ಬ್ರ್ಯಾಂಡ್ ಮಾಡಿ ಒಂದು ರಾಜಕೀಯ ಪಕ್ಷಕ್ಕೆ ಸೀಮಿತಗೊಳಿಸಿಬಿಡುತ್ತಾರೆ ನಮ್ಮನ್ನು. ತಪ್ಪುಗಳನ್ನು ಎತ್ತಿ ಹಿಡಿಯುವಂತೆ ಅವರು ಮಾಡಿದ ಸಾಧನೆಗಳನ್ನೇಕೆ ಮೆಚ್ಚುವ ಗುಣವಿಲ್ಲ ನಮಗೆ? ಇದೆಲ್ಲವನ್ನು ನೋಡುವಾಗ ನನಗನ್ನಿಸುವುದು ಇಷ್ಟೆ.
ಯಾಕೆ ಗಾಂಧೀಜಿ ಅಷ್ಟೆಲ್ಲ ಉಪವಾಸ ಸತ್ಯಾಗ್ರಹಗಳನ್ನು ಮಾಡಿ, ಕಾಲ್ನಡಿಗೆಯಲ್ಲಿ ದೇಶದುದ್ದಗಲಕ್ಕೂ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಿತ್ತು? ಅದ್ಯಾರೋ ಹರಿದ ತುಂಡು ಬಟ್ಟೆಯುಟ್ಟು ಬಟ್ಟೆ ತೊಳೆಯುತ್ತಿದ್ದ ಮಹಿಳೆಯನ್ನು ನೋಡಿ, ನನ್ನ ದೇಶದ ಜನರಿಗೆ ತೊಡಲು ಬಟ್ಟೆಯಿಲ್ಲದೆ ಉಣ್ಣಲು ಅನ್ನವಿಲ್ಲದೆ ಇರುವ ಪರಿಸ್ಥಿತಿಯಲ್ಲಿ ನಾನು ಸೂಟು ಬೂಟು ಹಾಕಿಕೊಂಡು ಓಡಾಡುವುದು ತರವೇ ಎಂದು ಜೀವನಮಾನವಿಡೀ ತುಂಡುಬಟ್ಟೆಯ ಇರುವ ನಿರ್ಧಾರ ಮಾಡಿ
ಫಕೀರನಾಗಿಯೇ ಬದುಕಬೇಕಾಗಿತ್ತು? ಅದ್ಯಾವ ಬಡತನವಿತ್ತು ಅವರಿಗೆ? ಉತ್ತಮ ಮನೆತನ, ಉನ್ನತ ವ್ಯಾಸಂಗ, ವಿದೇಶದಲ್ಲಿ ನೌಕರಿ ಎಲ್ಲವೂ ಇದ್ದಾಗ್ಯೂ
ಆದ ಒಂದೇ ಒಂದು ಸಣ್ಣ ಅವಮಾನದಿಂದಾಗಿ ಅವರ ಬದುಕಿನ ದಿಕ್ಕನ್ನೇ ಬದಲಿಸಿಕೊಂಡು ಕೇವಲ ದೇಶದ ಒಳಿತಿಗಾಗಿ ನಿಲ್ಲಬೇಕಿತ್ತು? ಉಪ್ಪಿಗೆ ತೆರಿಗೆ ಕಟ್ಟುವು ದಿಲ್ಲ ಅಂತ ಹೋರಾಟ ಮಾಡಬೇಕಿತ್ತು? ಸ್ವದೇಶಿ ಆಂದೋಲನದಡಿಯಲ್ಲಿ ತಾವೇ ಚರಕದಲ್ಲಿ ನೂಲು ತೆಗೆಯುತ್ತಾ ಕೂರಬೇಕಿತ್ತು? ದೇಶದ ಸ್ವಚ್ಛತೆಗಾಗಿ ತಾವೇ ಪೊರಕೆ ಹಿಡಿದು ಶೌಚಾಲಯಗಳನ್ನು, ಬೀದಿಬೀದಿಗಳನ್ನು ಗುಡಿಸಿ ಸ್ವಚ್ಛ ಮಾಡಬೇಕಿತ್ತು? ಒಂದು ಸಣ್ಣ ಕಾಂಪ್ರೊಮೈಸ್ ಮಾಡಿಕೊಂಡು ಹೆಂಡತಿ-ಮಕ್ಕಳು-ಅಧಿಕಾರ- ಕಾರು-ಬಂಗಲೆ ಅಂತ ಐಷಾರಾಮಿ ಜೀವನ ನಡೆಸಿಕೊಂಡು ನೆಮ್ಮದಿಯಾಗಿ ಬಿಟ್ಟದಿದ್ದರೆ ಬಂದೂಕಿನಿಂದ ಹಾರಿದ ಗುಂಡು ಅವರೆದೆಯನ್ನು ಸೀಳು ತ್ತಿರಲಿಲ್ಲ.
ಯಾಕೆ ಬೇಕಿತ್ತು ಇದೆಲ್ಲ? ಅಷ್ಟೆಲ್ಲ ಮಾಡಿದ್ದಕ್ಕೆ ಕಟ್ಟಕಡೆಗೆ ಸಿಕ್ಕ ಫಲವೇನು? ಅಂತ ಯೋಚಿಸಿದಾಗ ಬಹಳ ನಿರಾಶೆ ಕಾಡುತ್ತದೆ. ಇದು ಕೇವಲ ಗಾಂಧೀಜಿಯ ಬಗ್ಗೆ ಮಾತ್ರವಲ್ಲ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ನೆತ್ತರು ತೆತ್ತ ಪ್ರತಿಯೊಂದು ಮಹಾನ್ ಜೀವಗಳ ಬಗ್ಗೆಯೂ ಹೀಗೇ ಅನ್ನಿಸುತ್ತದೆ. ಇಲ್ಲಿ ಗಾಂಧೀಜಿ ಕೇವಲ
ಒಂದು ಉದಾಹರಣೆಯಷ್ಟೆ. ಇಂದು ಎಲ್ಲ ರೀತಿಯ ಸೌಕರ್ಯಗಳನ್ನು ಸವಿಯುತ್ತಾ ಪುರುಷನಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲವೆನ್ನುವುದನ್ನು ನಿರೂಪಿಸಲು ಎಲ್ಲದರಲ್ಲೂ ದಾಪುಗಾಲಿಕ್ಕುತ್ತಿರುವ ಮಹಿಳೆಯರು ಕೂಡ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿಯೂ ಸಮಪಾಲಿಗರು ಅನ್ನುವುದು ಕೂಡ
ಗಮನಿಸಬೇಕಾದ ಅಂಶವೇ.
ಅಡುಗೆ ಮಾಡುವಾಗ ಕುಕ್ಕರ್ ತಾಗಿ Zಕ್ರಿಂದು ಸಣ್ಣಗೆ ಚರ್ಮ ಸುಟ್ಟರೇ ವಾರಗಟ್ಟಲೆ ಕಣ್ಣೀರಿಡುವ ನಾವು ಅಂದು ಸತೀಪದ್ಧತಿಯ ನೆಪದಲ್ಲಿ ಗಂಡನ ಜತೆ ಜತೆಗೇ
ಚಿತೆಯಲ್ಲಿ ಜೀವಂತ ಸುಟ್ಟುಹಾಕುತ್ತಿದ್ದ ದೃಶ್ಯಗಳನ್ನು ನೆನೆದಾಗ ಆ ಪದ್ಧತಿಯ ನಿರ್ಮೂಲನೆಗಾಗಿ ಹೋರಾಡಿದ ರಾಜಾರಾಮ್ ಮೋಹನ್ ರಾಯ್ ರವರು ಅದೆಷ್ಟು ಜನಕ್ಕೆ ನೆನಪಿದ್ದಾರೆ ಕೇಳಿ ನೋಡಿ ಬೇಕಾದರೆ… ಹೀಗಾಗಿ ಸಾಕಷ್ಟು ಹೋರಾಟ, ಚಳವಳಿಗಳು ಅದರ ಮೂಲ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಜತೆ ಜತೆಯ ಅದರ ದುರ್ಬಳಕೆಯಿಂದಾಗಿ ಅರ್ಥ ಹೀನವೆನ್ನಿಸತೊಡುತ್ತದೆ.
ಆದರೆ ಕೇವಲ ಕೆಲವು ಅಭಿಪ್ರಾಯಗಳಿಗೆ ಮಣೆಹಾಕುತ್ತಾ ಅದನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ. ನಮ್ಮ ದೇಶದ ಕೋಟ್ಯಂತರ ಜನಸಾಗರದಲ್ಲಿ ಇಂದಿಗೂ ಆ ಹೋರಾಟದ ಕಿಡಿ ಜೀವಂತವಾಗೇ ಇದೆ. ಅದನ್ನು ಗುರುತಿಸಿ ಮುಂಚೂಣಿಗೆ ತರುವುದು ಮಾಧ್ಯಮಗಳ ಕೈಯಲ್ಲಿದೆ. ಜಾತಿ, ಧರ್ಮ, ಭಾಷೆಗಳಿಂದಾಗಿ ಸಣ್ಣ
ಸಣ್ಣ ಚೂರುಗಳಾಗಿ ಹೋಗುವ ಬದಲಿಗೆ ಅದನ್ನೇ ಸುಂದರ ವರ್ಣಗಳಾಗಿ ಬದಲಿಸಿ ಸಂಭ್ರಮಿಸುವ ಕಾಲ ಬಂದರೆ ಎಷ್ಟು ಚೆನ್ನ? ಪ್ರತಿಯೊಂದು ವರ್ಣಗಳಿಗೂ ಅದರದೇ ಆದ ಹೊಳಪಿದೆ. ಬಹುಶಃ ಅದನ್ನು ಪರಿಗಣಿಸಿಯೇ ವರ್ಣಪದ್ದತಿ ಜಾರಿಗೆ ಬಂದಿದ್ದರಬಹುದು.
ಅದರೊಳ ಒಳಗೇ ಇನ್ನಷ್ಟು ವಿಭಜನೆಗಳಾಗಿ ಜಾತಿ ಪದ್ಧತಿಗಳು ಹುಟ್ಟಿಕೊಂಡು ಇಂದು ಪೆಡಂಭೂತವಾಗಿ ಬೆಳೆದು ಎಲ್ಲರನ್ನೂ ತನ್ನ ಬಿಗಿಮುಷ್ಟಿಯಲ್ಲಿ ಹಿಡಿದು ತನಗೆ ಬೇಕಾದಂತೆ ಆಡಿಸುವ ಸೂತ್ರಧಾರನಂತಾಗಿ ಬಿಟ್ಟಿದೆ. ಕೆಳಗಿದ್ದವರನ್ನು ಮೇಲೆತ್ತಲು ಅಸ್ತಿತ್ವಕ್ಕೆ ಬಂದ ಮೀಸಲಾತಿ ಪದ್ಧತಿ ಬೆಳೆದ ನಂತರವೂ ಸಿಗುತ್ತಿರುವ ಸವಲತ್ತುಗಳನ್ನು ಬಳಸಿಕೊಳ್ಳುತ್ತಾ ಅಡ್ಡಡ್ಡಕ್ಕೂ ಬೆಳೆಯಲಾರಂಭಿಸಿದೆ. ಕಷ್ಟಪಟ್ಟು ದುಡಿಯುವ ಜೀವಗಳಿಗೆ ತಲೆಯೆತ್ತಿ ನೋಡದೆ ದುಡಿಯುವ
ಅಭ್ಯಾಸವಾಗಿ ಹೋಗಿದೆ. ಯಾರು ಗೆದ್ದು ಯಾರು ಬಂದರೇನು? ನನ್ನ ಅನ್ನಕ್ಕಾಗಿ, ನನ್ನನ್ನು ನಂಬಿರುವ ಜೀವಗಳಿಗಾಗಿ ನಾನು ದುಡಿಯಲೇ ಬೇಕು. ಅನ್ನುತ್ತ
ದಿನ ಬೆಳಗಾದರೆ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುವ ಶ್ರಮಿಕನಿಗೆ ನಿಜವಾದ ಮನ್ನಣೆ ಸಲ್ಲಬೇಕು.
ಅಲ್ಲಿ ಮೇಲು ಕೀಳುಗಳೆಂಬ ಭಾವನೆ ಮನೆ ಮಾಡದೆ, ಮಾಡುವ ಪ್ರತಿಯೊಂದು ಕೆಲಸಕ್ಕೂ ಗೌರವ, ಮನ್ನಣೆ ನೀಡುತ್ತಾ ಒಬ್ಬರಿಗೊಬ್ಬರು ಆಸರೆಯಾಗಿದ್ದಿದ್ದರೆ ಎಲ್ಲರೂ ಅದೆಷ್ಟು ಸುಖಿಗಳಾಗಿರಬಹುದಿತ್ತು? ಒಣ ಜಂಭ, ಅಹಂಕಾರ, ದ್ವೇಷ, ಶ್ರೇಷ್ಠತೆಯ ಅಸೂಯೆಗಳು ತುಂಬಿಕೊಂಡು ದೇಶದ ಪ್ರಗತಿಗೆ ಮಾರಕ ವಾಗುತ್ತಿವೆ. ಯಾವ ಧರ್ಮ ತೋಳು ಚಾಚಿ ಎಲ್ಲರನ್ನೂ ತೆಕ್ಕೆಯಲ್ಲಿ ತೆಗೆದುಕೊಳ್ಳುತ್ತದೋ ಅದು ಬೆಳೆಯುತ್ತಾ ಹೋಗುತ್ತದೆ. ಗೆರೆ ಗೀಚಿ ತಮಗೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತದೆಯೋ ಅದು ಬೆಳೆಯದೆ ನಿಂತ ನೀರಾಗಿ ಕೊಳೆಯಲಾರಂಭಿಸುತ್ತದೆ ಅನ್ನುವುದನ್ನು ನೋಡಿದಾಗ ಧರ್ಮದ ಹೆಸರಲ್ಲಿ ಬಂಧಿಗಳಾಗಿ ಹೋಗಿರುವ ದೇವರು ಕೂಡ ಅದೆಷ್ಟೊಂದು ನಿಸ್ಸಹಾಯಕನಲ್ಲವೇ ಅನ್ನಿಸುತ್ತದೆ.
ಹೀಗೆ ಇತಿಹಾಸದ ಪುಟಗಳನ್ನು ತಿರುವುವಾಗ ಅದಿಂದು ವ್ಯಕ್ತಿಗಳ ಜತೆಗೆ ವ್ಯಕ್ತಿತ್ವದ ಪರಿಚಯವಾಗುತ್ತಾ ಹೋಗುತ್ತದೆ. ಅವೆಲ್ಲವೂ ಅಂದು ಅವರು ಅವರ ಬದುಕಿನಲ್ಲಿ ಎದುರಾದ ಸವಾಲುಗಳಿಗೆ ಪ್ರತಿಕ್ರಿಯಿಸಿದ ರೀತಿ. ಹಾಗಾಗಿ ಮತ್ತೊಬ್ಬ ಗಾಂಧೀಜಿಯಾಗಲಿ, ಸರದಾರ ವಲ್ಲಭ ಬಾಯಿ ಪಟೇಲ್ ಆಗಲಿ, ಬಾಲ ಗಂಗಾಧರ ತಿಲಕ್ ಆಗಲಿ ಹುಟ್ಟಲಿಲ್ಲ ಹಾಗೂ ಹುಟ್ಟುವ ಅವಶ್ಯಕತೆಯೂ ಇಲ್ಲ. ನಮ್ಮ ನಮ್ಮ ಕಾಲಕ್ಕೆ ಎದುರಾಗುವ ಸಮಸ್ಯೆಗಳಿಗೆ ನಾವು ಹೇಗೆ
ಪ್ರತಿಕ್ರಿಯಿಸುತ್ತೇವೆ ಅನ್ನುವುದು ಬಹಳ ಮುಖ್ಯವಾಗುತ್ತದೆ. ಅದು ಅಂದಿನ ಸಾಮಾಜಿಕ ಸ್ಥಿತಿಗೆ ಹಿಡಿದ ಕನ್ನಡಿಯಷ್ಟೆ. ಕನ್ನಡಿಯಲ್ಲಿನ ಪ್ರತಿಬಿಂಬ ನಿಜದ ಬಿಂಬವಲ್ಲ. ಆದರೆ ಅವರ ಬಗ್ಗೆ ಒಂದು ಮೆಚ್ಚುಗೆ ಹಾಗೂ ಗೌರವವಿರಲಿ ಅಷ್ಟೆ.
ಹಗುರಾಗಿ ಮಾತಾಡಿ ಅವರನ್ನು ಅವರ ಸಾಧನೆಯನ್ನು ಮಣ್ಣುಗೊಳಿಸುವ ಪ್ರಯತ್ನ ಬೇಡ. ಇಂದು ನಮಗೆ ನಮ್ಮದೇ ಆದ ವಿಭಿನ್ನವಾದ ಸಮಸ್ಯೆಗಳಿವೆ. ಅದಕ್ಕೆ ನಾವು ನಮ್ಮದೇ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ಭಯೋತ್ಪಾದನೆ ಅನ್ನುವ ಕರಾಳ ಛಾಯೆ ಇಂದು ದೇಶ ವಿದೇಶಗಳನ್ನು ಆವರಿಸಿಕೊಳ್ಳುತ್ತಿದೆ. ಅದಕ್ಕಾಗಿ ನಿರಂತರ ಶ್ರಮಿಸುತ್ತಿರುವ ತಂಡಗಳು ರಚನೆಗೊಳ್ಳುತ್ತ ಯಾರ ಗಮನಕ್ಕೂ ಬರದೆ ತಮ್ಮ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ.
ಹಾಗೇ ಗಡಿಯಲ್ಲಿ ಹಗಲೂ ರಾತ್ರಿ ವೈರಿಯ ಎದೆಗೆ ಬಂದೂಕು ಹಿಡಿದು ಕಾವಲಿಗೆ ನಿಂತ ಸೈನಿಕ ತಾನು ನಿದ್ರೆಗೆಟ್ಟು ನಾವೆಲ್ಲ ನೆಮ್ಮದಿಯಿಂದ ನಿದ್ರಿಸುವಂತೆ
ಮಾಡುತ್ತಿದ್ದಾನೆ. ಹಿಂದೆ ರಾಮಾಯಣ ಮಹಾಭಾರತಗಳದಂತೆ ಯುದ್ಧಗಳಿಲ್ಲ.
ವೇದ ಪುರಾಣಗಳಲ್ಲಿರುವಂತೆ ರಾಕ್ಷಸ-ದೇವತೆಗಳ ನಡುವಿನ ಅತೀಂದ್ರಿಯ ಶಕ್ತಿಪ್ರದರ್ಶನವೂ ಇಲ್ಲ. ಈಗೆಲ್ಲ ವೈರಾಣುಗಳದ್ದೇ ಕಾರುಬಾರು. ಅದರಿಂದ
ರಕ್ಷಿಸಿಕೊಳ್ಳಲು ನಾವು ಪಡುತ್ತಿರುವ ಪಾಡು ಮುಗಿಲು ಮುಟ್ಟುತ್ತಿದೆ. ದಿನಗಳು ತುಂಬಿ ವರುಷಗಳಾಗುತ್ತಿದ್ದರೂ ರಕ್ತಬೀಜಾಸುರನಂತೆ ಕರೋನಾ ಅನ್ನುವ ಕಣ್ಣಿಗೆ ಕಾಣದ ವೈರಾಣು ಕೂಡ ರೂಪಾಂತರ ಹೊಂದುತ್ತ ನಮ್ಮ ಮೇಲೆ ಆಕ್ರಮಣ ಮಾಡುತ್ತ ನಮ್ಮೆಲ್ಲ ಕೆಲಸಕಾರ್ಯಗಳನ್ನು ನಿರ್ಬಂಧಿಸಿ ಮನೆಗಳಲ್ಲಿ ಬಂದಿಗಳ ನ್ನಾಗಿಸಿಬಿಟ್ಟಿದೆ ಇಂದು. ಇದು ಇಂದು ನಮ್ಮೆದುರಿಗಿರುವ ಸವಾಲು.
ಅದರ ನಿರ್ಮೂಲನೆಗಾಗಿ ನಾವೆಲ್ಲ ಒಟ್ಟಿಗೆ ಕೈಜೋಡಿಸುವ ಅಗತ್ಯವಿದೆ. ಅದರಿಂದ ಬಿಡುಗಡೆ ಹೊಂದಿದ ದಿನ ಮತ್ತೆ ನಾವು ಸ್ವತಂತ್ರರು. ‘ಗೆದ್ದೇ ಗೆಲ್ಲುವೆವು ಒಂದು ದಿನ ಅನ್ನುವ ಆತ್ಮವಿಶ್ವಾಸ’ವಿದ್ದರೆ ಯಶಸ್ಸು ಖಂಡಿತಾ ನಮ್ಮದೇ. ನೆಮ್ಮದಿಯ ಕಾಲದಲ್ಲಿ ಜನ ಮೂವರನ್ನು ಮರೆತುಬಿಡುತ್ತಾರೆ. ದೇವರನ್ನ, ವೈದ್ಯರನ್ನ ಹಾಗೂ ಸೈನಿಕರನ್ನ ಅನ್ನುವ ಮಾತಿನ ಜತೆಗೆ ನಮ್ಮೆಲ್ಲರ ಹಸಿವಿಂಗಿಸುವ ರೈತನನ್ನೂ ಸೇರಿಸಿಕೊಳ್ಳುತ್ತ ಎಲ್ಲರ ಸೇವೆ ಹಾಗೂ ಸಾಧನೆಗಳನ್ನು ನೆನೆಯುತ್ತಾ, ನಮ್ಮ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತಾ ನಮ್ಮ ಮುಂದಿನ ಬದುಕನ್ನು ಚೆಂದಗೆ ಅರ್ಥಪೂರ್ಣಗೊಳಿಸಿಕೊಳ್ಳೋಣ ಅಲ್ಲವೇ?