ಅಭಿಪ್ರಾಯ
ಹೃತಿಕ್ ಕುಲಕರ್ಣಿ
hritikulkarni@gmail.com
ಒಂದು ರಾಷ್ಟ್ರ ತನ್ನ ಪ್ರಜೆಗಳ ಮತ್ತು ಭೌಗೋಳಿಕ ಸ್ಥಾನಗಳ ರಕ್ಷಣೆಗೆ ಮತ್ತೊಂದು ರಾಷ್ಟ್ರದ ಸೇನೆಯ ಮೇಲೆ ಅವಲಂಬಿತವಾಗಿದ್ದರೆ ಏನಾಗುತ್ತದೆ ಎಂದು ತಿಳಿಯಬೇಕಾದರೆ ಸ್ವಲ್ಪ ಅಫ್ಘಾನಿಸ್ತಾನದ ಕಡೆ ಕಣ್ಣು ಹಾಯಿಸಬೇಕು. ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡದ್ದೇ ತಡ ಅಫ್ಘಾನಿಸ್ತಾನ ಮತ್ತೆ ತಾಲಿಬಾನ್ ಮಯವಾಗಿದೆ. ಆ ದೇಶದ ೧೫ ಪ್ರಾಂತಿಯ ರಾಜಧಾನಿಗಳನ್ನು (ಕಂದಹಾರ್, ಲಷ್ಕರ್ ಗಹಾ, ಹೆರತ್ ಸೇರಿದಂತೆ ಇನ್ನು 12) ತಾಲಿಬಾನ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಅಫ್ಘಾನಿಸ್ತಾನದ ಸರಕಾರ ಯಾವ ಹಂತಕ್ಕೆ ಹೋಗಿದೆ ಎಂದರೆ ಈ ಉಗ್ರ ಸಂಘಟನೆಯೊಂದಿಗೆ ರಾಜಿಗೆ ಸಿದ್ಧವಾಗಿದೆ ಮತ್ತು ಅಷ್ಟೇ ಅಲ್ಲ ಅಧಿಕಾರ ಹಂಚಿಕೆಗೂ ತವಕಿಸುತ್ತಿದೆ. ಅಮೆರಿಕದ ಅಲ್ಲಿನ ಅಽಕಾರಿಗಳ ಪ್ರಕಾರ ಅಫ್ಘಾನ್ ಸರಕಾರ ಇನ್ನೊಂದು ತಿಂಗಳೂ ಆಡಳಿತದಲ್ಲಿರಲಾರದಂತೆ. ಅಂದರೆ ಸಂಪೂರ್ಣ ಅಫ್ಘಾನಿ ಸ್ತಾನ ದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮತ್ತೆ ತಾಲಿಬಾನ್ ತನ್ನ ಕ್ರೂರ ಆಡಳಿತ ಶುರು ಮಾಡಲಿದೆ.
ಹಿಂದೆ ನಿಂತು ಕುಮ್ಮಕು ಕೊಡುತ್ತಿರುವ ಪಾಕಿಸ್ತಾನ ಅಫ್ಘಾನಿಸ್ತಾನದಿಂದ ತನ್ನ ರಾಯಭಾರಿಯನ್ನು ವಾಪಾಸ್ ಕರೆಸಿಕೊಳ್ಳುವುದರ ಮೂಲಕ ಇದರಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ವಿಶ್ವಕ್ಕೆ ತೋರಿಸಲು ಪ್ರಯತ್ನಿಸುತ್ತಿದೆಯಾದರೂ ನಂಬುವವರಾರು!! ತನ್ನ ರಕ್ಷಣೆಗೆ ವಿಶ್ವಾಸಕ್ಕೆ ಅರ್ಹವಲ್ಲದ ಅಮೆರಿಕಯನ್ನು ನಂಬಿ ಕುಳಿತ ಅಫ್ಘಾನಿಸ್ತಾನಕ್ಕೆ ತಕ್ಕ ಶಾಸ್ತಿಯೇ ಆಗಿದೆ.
ಮಾಡುವುದೆ ಮಾಡಿ ಅಮೆರಿಕ ಅಧ್ಯಕ್ಷ ಹೇಳುತ್ತಾರೆ ‘ನಾವೇನು ಅಲ್ಲಿ ರಾಷ್ಟ್ರ ನಿರ್ಮಾಣಕ್ಕಾಗಿ ನಿಂತಿಲ್ಲ’ ಎಂದು. ರಾಷ್ಟ್ರ ನಿರ್ಮಾಕ್ಕಾಗಿ ನಿಂತಿಲ್ಲ ಎನ್ನುವುದು ಹೌದಾದರೂ ಆ ರಾಷ್ಟ್ರ ರಕ್ಷಣೆಗೆ ನಿಂತಿದ್ದ ಅಮೆರಿಕ ಸೈನ್ಯವನ್ನು ಒಂದು ತಾಲಿಬಾನ್ ಹೆದರಿಸಿತು ಎಂದರೆ ಅದು ಆ ಸೈನ್ಯದ ದೌರ್ಬಲ್ಯವಲ್ಲ, ಆ ಸೈನ್ಯದ ಜವಾಬ್ದಾರಿ ಹೊತ್ತ ಕಮಾಂಡರ್ ಇನ್ ಚೀನಾ ಜೋ ಬೈಡೆನ್ರ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಅದು ಅವರ ದೌರ್ಬಲ್ಯ. ಸೇನೆಯ ಹಿಂಕರೆಸಿಕೊಳ್ಳುವಿಕೆಗೆ ಅವರು ಈಗ ಏನೇ ನೆಪ ಹೇಳಿ ಕಾರಣ ಕೊಟ್ಟರೂ ಅದು ಈಗ ಅವರ ದೌರ್ಬಲ್ಯ ಪ್ರದರ್ಶನವನ್ನು ಮಾತ್ರ ತೋರಿಸುತ್ತದೆ.
ಇಪ್ಪತ್ತು ವರ್ಷ ಅಫ್ಘಾನಿಸ್ತಾನ ಕಾಯ್ದ ಅಮೆರಿಕ ತನ್ನ ಶ್ರಮವನ್ನೆ ತಾನೇ ವ್ಯರ್ಥಮಾಡಿಕೊಂಡಿತು ಅಫ್ಘಾನಿಸ್ತಾನವನ್ನು ತಾಲಿಬಾನಿಗಳಿಗೆ ಬಿಟ್ಟುಕೊಟ್ಟು. ಇಡೀ ಅಫ್ಘಾನಿಸ್ತಾನದ ಇಂದಿನ ಅಸಹಾಯಕ ಮತ್ತು ಹೀನಾಯ ಅವಸ್ಥೆಗೆ ವಿಶ್ವಸಮುದಾಯ ನೇರ ಹೊಣೆಗಾರನನ್ನಾಗಿ ನಿಲ್ಲುಸುವುದು ಅಮೆರಿಕ ಅಧ್ಯಕ್ಷರನ್ನು. ರಾಷ್ಟ್ರ ರಕ್ಷಣೆಗೆ ನಿಂತಿದ್ದ ಅಮೆರಿಕ ಎಂದೂ ಹಾಗೇ ನಿಲ್ಲಲಾರದು ಎಂದು ಅಫ್ಘಾನಿಸ್ತಾನ ಇಪ್ಪತ್ತು ವರ್ಷಗಳ ಹಿಂದೆಯೇ ಅರಿತು ರಾಷ್ಟ್ರ ಕಟ್ಟುವಲ್ಲಿ, ತನ್ನ ಸ್ವಂತ ಸೈನ್ಯ ಕಟ್ಟುವಲ್ಲಿ ಕಾರ್ಯನಿರತವಾಗಿದ್ದಿದ್ದರೆ ಇವತ್ತು ಈ ಪರಿಸ್ಥಿತಿಯಲ್ಲಿ ಆ ದೇಶ ಇರುತ್ತಿರಲಿಲ್ಲ.
ಟ್ವಿಟರ್ನಲ್ಲಿ ಅಫ್ಘಾನಿಗಳ ಅಳಲು, ಆಕ್ರಂದನ, ಭಯ, ಭವಿಷ್ಯದ ಚಿಂತೆ ಬರಹಗಳ ರೂಪದಲ್ಲಿ ವ್ಯಕ್ತವಾಗುತ್ತಿರುವುದನ್ನು ಓದುತ್ತಿದ್ದರೆ ಅವರಿಗಾಗಿ ಹೃದಯ ಮಿಡಿಯುತ್ತಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತು ಇನ್ನೊಂದೆರೆಡು ನಗರಗಳನ್ನು ಬಿಟ್ಟರೆ ಉಳಿದೆ ನಗರಗಳು ತಾಲಿಬಾನ್ ವಶವಾಗಿವೆ. ಕಾಬೂಲ್ ಮೇಲೆ ಕೂಡ ಕೆಲವೇ ದಿನಗಳಲ್ಲಿ ತಾಲಿಬಾನ್ ತನ್ನ ಅಽಕಾರ ವಿಸ್ತರಿಸುವುದು ಖಚಿತ ಎಂದೆನಿಸುತ್ತಿದೆ.