ತನ್ನಿಮಿತ್ತ
ಪ್ರಕಾಶ್ ಶೇಷರಾಘವಾಚಾರ್
sprakashbjp@gmail.com
ಕಳೆದ ವರ್ಷ ಕರೋನಾ ದೇಶಕ್ಕೆ ಅಪ್ಪಳಿಸಿದ ತರುವಾಯ ಭಾರತೀಯ ರೈಲ್ವೆ ಸೇವೆಯು ಅಸ್ಥವ್ಯಸ್ತಗೊಂಡು ಬಹುತೇಕ ರೈಲು ಸಂಚಾರವು ಸ್ಥಗಿತಗೊಂಡಿತು. ತತ್ಪರಿಣಾಮವಾಗಿ ರೈಲ್ವೆ ಪ್ರಯಾಣಿಕರ ಟಿಕೆಟ್ ದರದ ಆದಾಯವು 53 ಸಾವಿರ ಕೋಟಿಯಿಂದ 15 ಸಾವಿರ ಕೋಟಿಗೆ ಧುತ್ತನೆ ಕುಸಿಯಿತು.
ಈ ಅವಽಯಲ್ಲಿ ರೈಲ್ವೆ ಇಲಾಖೆಯ ಕೈಹಿಡಿದಿದ್ದು ಸರಕು ಸಾಗಣೆಯ ಆದಾಯ. ಇದು 20-21ರಲ್ಲಿ ಸರಕು ಸಾಗಣೆಯಲ್ಲಿ 1,17,386 ಕೋಟಿ ಆದಾಯವನ್ನು ಗಳಿಸಿ ಕಳೆದ ಬಾರಿಗಿಂತ ಶೇ.2ರಷ್ಟು ಪ್ರಗತಿ ಕಂಡಿತ್ತು. ವಾಸ್ತವವಾಗಿ ರೈಲ್ವೆ ಇಲಾಖೆಯು ಪ್ರಮುಖವಾಗಿ ಆದಾಯಗಳಿಸುವುದು ಸರಕು ಸಾಗಣೆಯಿಂದ ಮಾತ್ರ. ಕಳೆದ ಅನೇಕ ವರ್ಷಗಳಿಂದ ಟಿಕೆಟ್ ದರದಲ್ಲಿ ಯಾವುದೆ ಬದಲಾವಣೆಯಾಗಿಲ್ಲ. ಈ ದೇಶದಲ್ಲಿ ರಾಜಕೀಯ ಕಾರಣಗಳಿಗೆ ಪ್ರಯಾಣಿಕರ ಟಿಕೆಟ್ ದರದಲ್ಲಿ ಏರಿಕೆ ಮಾಡುವುದು ದುಸ್ತರವಾದ ಸಂಗತಿ.
ಸರಕು ಸಾಗಣೆಯಲ್ಲಿ ಪರ್ಯಾಯ ಸೇವೆಗಳ ಪ್ರಬಲ ಪೈಪೋಟಿಯಿಂದ 1950ರಲ್ಲಿ ಶೇ. 85 ರಷ್ಟು ಇದ್ದ ಪಾಲು 2020ರಲ್ಲಿ ಶೇ. 35ಕ್ಕೆ ಕುಸಿದಿದೆ. ಸರಕು ಸಾಗಣೆಯಲ್ಲಿ ಆಗುತ್ತಿದ್ದ ವಿಳಂಬ ಮತ್ತು ಅಽಕಾರಿಶಾಹಿಯ ಧೋರಣೆಯ ಫಲವಾಗಿ ರೈಲ್ವೆ ಸೇವೆಯಿಂದ ಅನೇಕರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಂಡಿ ದ್ದಾರೆ. ಪ್ರಯಾಣಿಕರ ಮತ್ತು ಸರಕು ಸಾಗಣೆಯ ರೈಲುಗಳು ಒಂದೇ ಹಳಿಯನ್ನು ಉಪಯೋಗಿಸುವ ಕಾರಣದಿಂದ ಪ್ರಯಾಣಿಕರ ರೈಲಿಗೆ ಆದ್ಯತೆಯು ದೊರೆಯುವ ಕಾರಣದಿಂದ ಸರಕುಗಳು ಗಮ್ಯಸ್ಥಾನವನ್ನು ತಲುಪಲು ವಿಳಂಬವಾಗುತ್ತಿದೆ.
ಬದಲಾಗುತ್ತಿರುವ ಆರ್ಥಿಕ ರಂಗದ ಬೇಡಿಕೆಯ ಸವಾಲನ್ನು ಸ್ವೀಕರಿಸಿ ಕಳೆದುಕೊಂಡಿರುವ ಪಾಲನ್ನು ಮತ್ತೆ ಗಳಿಸಿಕೊಳ್ಳಲು ತನ್ನ ಸೇವೆಯಲ್ಲಿ ಸುಧಾರಣೆ ಕೈಗೊಳ್ಳುವುದು ಭಾರತೀಯ ರೈಲ್ವೆಗೆ ಅತ್ಯಾವಶ್ಯಕವಾಗಿತ್ತು. ಇದಕ್ಕಾಗಿ ಬೃಹತ್ ಯೋಜನೆಯ ಹಾಗೂ ದೊಡ್ಡ ಬಂಡವಾಳ ಹೂಡಿಕೆ ಬೇಕಾಗಿತ್ತು. 2006ರಲ್ಲಿ ಯುಪಿಎ ಸರಕಾರವು Dedicated Freight Corridor ಯೋಜನೆಯನ್ನು ಘೋಷಿಸಿತ್ತು. ಕಾರ್ಪೋರೇಟ್ ಪ್ರಪಂಚ ದಲ್ಲಿ ಇದಕ್ಕೆ ಗೇಮ್ ಚೇಂಜರ್ ಹೆಜ್ಜೆ ಎನ್ನುತ್ತಾರೆ ಅಂತಹ ಮಹತ್ವಪೂರ್ಣ ಯೋಜನೆಗೆ ಚಾಲನೆ ದೊರೆಯಿತು.
ಈ ಬೃಹತ್ ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಗೆ ಪ್ರತ್ಯೇಕವಾದ Dedicated Freight Corridor Corporation ರಚಿಸಲಾಗಿದೆ. ಈ ನಿಗಮವು ಪೂರ್ವ ಮತ್ತು ಪಶ್ಚಿಮಗಳ ಎರಡು ಸರಕು ಸಾಗಣೆ ಕಾರಿಡಾರ್ ನಿರ್ಮಾಣ ಮಾಡುವ ಹೊಣೆಯನ್ನು ಹೊತ್ತಿದೆ. ಪಶ್ಚಿಮ ಕಾರಿಡಾರ್ ಉತ್ತರ ಪ್ರದೇಶದ ದಾದ್ರಿಯಿಂದ ಆರಂಭವಾಗಿ ನವಿ ಮುಂಬಯಿ ವರಗೆ 1509ಕಿಮಿ ಉದ್ದದ ಕಾರಿಡಾರ್. ಪೂರ್ವ ಕಾರಿಡಾರ್ ಪಂಜಾಬ್‌ನ ಲೂಽಯಾನದಲ್ಲಿ ಆರಂಭವಾಗಿ ಪಶ್ಚಿಮ ಬಂಗಾಳದ ಡನ್ ಕುನಿಯವರಗೆ 1839 ಕಿಮಿ ಉದ್ದದ ಕಾರಿಡಾರ್ ಇದಾಗಿದೆ.
ಯಥಾಪ್ರಕಾರ ಯುಪಿಎ ಅವಽಯ ಹಲವಾರು ಯೋಜನೆಗಳು ಘೋಷಣೆಗೆ ಸೀಮಿತವಾದ ಹಾಗೆ ಕಾರಿಡಾರ್ ಯೋಜನೆಯೂ ಹೊರತಾಗಿರಲಿಲ್ಲ. 2006 ರಿಂದ 2014 ರತನಕ ಒಂದೇ ಒಂದು ಕಿಮಿ ರೈಲು ಮಾರ್ಗ ನಿರ್ಮಾಣ ಮಾಡಲಿಲ್ಲ. ಸಂಪನ್ಮೂಲ ಕೊರತೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ಯೋಜನೆಯ ಅನುಷ್ಟಾನದಲ್ಲಿ ಬದ್ಧತೆಯ ಕೊರತೆಯಿಂದ ಕಾರಿಡಾರ್ ನಿರ್ಮಿಸುವ ದಿಕ್ಕಿನಲ್ಲಿ ಯುಪಿಎ ಸರಕಾರ ಯಾವ ಪ್ರಗತಿಯನ್ನು ಸಾಧಿಸಲಿಲ್ಲ.
2006 ರಲ್ಲಿ ಈ ಯೋಜನೆಯು ಘೋಷಿಸಿದಾಗ ಇದರ ವೆಚ್ಚ 40 ಸಾವಿರ ಕೋಟಿ ದಾಟಿರಲಿಲ್ಲ. ಆದರೆ 2014ರ ವೇಳೆಗೆ ಇದರ ಅಂದಾಜು ವೆಚ್ಚವು 82
ಸಾವಿರ ಕೋಟಿಯಾಗಿದೆ. ಪೂರ್ವ ಕಾರಿಡಾರ್ 31 ಸಾವಿರ ಕೋಟಿ ಮತ್ತು ಪಶ್ಚಿಮ ಕಾರಿಡಾರ್ 51 ಸಾವಿರ ಕೋಟಿ ಯಾಗಿದೆ. ಪಶ್ಚಿಮ ಕಾರಿಡಾರ್ ನಲ್ಲಿ
ಡಬ್ಬಲ್ ಸ್ಟಾಕ್ ಕಂಟೇನರ್ ಬಳಸಬಹುದಾಗಿದೆ. ಆಶ್ಚರ್ಯವೆಂದರೆ ಪೂರ್ವ ಕಾರಿಡಾರ್‌ನಲ್ಲಿ ಈ ಸೌಲಭ್ಯವನ್ನು ನೀಡುತ್ತಿಲ್ಲ. ಇದೊಂದು ಯೋಜನೆಯ ನ್ಯೂನತೆ ಯೆಂದೇ ಹೇಳಬಹುದು. ಈ ಯೋಜನೆಯ ಅನುಷ್ಟಾನಕ್ಕೆ ವಿಶ್ವಬ್ಯಾಂಕ್ ರೂ.13,578 ಕೋಟಿ ಮತ್ತು ಜಪಾನ್ ಜೀಕಾ ರೂ.37960 ಕೋಟಿ ಸಾಲವನ್ನು ನೀಡಿದೆ. ಈ ಯೋಜನೆಗೆ 2006ರಿಂದ 2014ರ ತನಕ ವೆಚ್ಚ ಮಾಡಿದ ಹಣವು ಕೇವಲ ರೂ.4 ಸಾವಿರ ಕೋಟಿಗಳು ಆದರೆ 2014ರಿಂದ 2020ರವರಗೆ ವೆಚ್ಚ ಮಾಡಿರುವ ಹಣ 45 ಸಾವಿರ ಕೋಟಿಗಳು ಸದ್ಯ ಸರಕು ಸಾಗಣೆಯ ರೈಲಿನ ವೇಗವು ಗಂಟೆಗೆ ಕೇವಲ 26 ಕಿ.ಮೀಗಳು ಮಾತ್ರ.
ಒಮ್ಮೆ ಸರಕು ಸಾಗಣೆ ಕಾರಿಡಾರ್ ಸಿದ್ಧವಾದರೆ ರೈಲುಗಳ ವೇಗವು 100ಕಿ.ಮೀನಲ್ಲಿ ಚಲಿಸಬಹುದಾಗಿದೆ. ಈಗಾಗಲೆ ಬಾವುಪುರ ಮತ್ತು ಖುಜ್ರಾ ನಡುವೆ
ಪ್ರಯೋಗಾತ್ಮಕವಾಗಿ ಸಂಚರಿಸಿದ ಸರಕು ರೈಲು 100 ಕಿಮಿ ವೇಗದಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಈ ಕಾರಿಡಾರ್‌ನಲ್ಲಿ ಹಾಲಿ 700 ಮೀಟರ್ ಉದ್ದದ ರೈಲಿನಿಂದ 1300 ಮೀಟರ್ ಉದ್ದದ ರೈಲು ಇರುವುದು ಇದರಿಂದ 5400ಟನ್ ಸರಕಿನಿಂದ 13ಸಾವಿರ ಟನ್ ಸರಕು ಸಾಗಿಸಬಹುದು. ಈ ಯೋಜನೆಯು ಪೂರ್ಣವಾದ ತರುವಾಯ ಒಂದು ಲಕ್ಷ ಟ್ರಕ್ ಸಾಗಿಸುವ ಸರಕನ್ನು ಒಂದು ದಿನದಲ್ಲಿ ಸಾಗಿಸಬಹುದಾಗಿದೆ.
ಸರಕು ಸಾಗಣೆ ಕಾರಿಡಾರ್ ಹಾದು ಹೋಗುವ ಮಾರ್ಗ ಆಹಾರ ಪದಾರ್ಥಗಳು, ಕಬ್ಬಿಣ ಮತ್ತು ಉಕ್ಕು, ರಸಗೊಬ್ಬರ ,ಸಿಮೆಂಟ್ ಮತ್ತು ಕಲಿದ್ದಲು ಸಾಗಣೆ ಅಧಿಕವಾಗಿರುವ ಕಡೆಯಲ್ಲಿಯೇ ನಿರ್ಮಾಣ ಮಾಡಿರುವುದು. 2016-17ರ ಮುಂಗಡ ಪತ್ರದಲ್ಲಿ ಮತ್ತೆ ನಾಲ್ಕು ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ, ದಕ್ಷಿಣ-
ದಕ್ಷಿಣ ಮತ್ತು ಪೂರ್ವ-ದಕ್ಷಿಣ ಸರಕು ಸಾಗಣೆ ಕಾರಿಡಾರ್ ನಿರ್ಮಾಣವನ್ನು ಘೋಷಿಸಲಾಗಿದೆ. ಈಗಾಗಲೇ 750 ಕಿಮಿ ಉದ್ದದ ನ್ಯೂ ಪಾಲಂಪುರ – ಪಶ್ಚಿಮ ಕಾರಿಡಾರ್ ನ 306 ಕಿಮಿ. ಮದಾರ್ – ರೇವಾರಿ ಜಂಕ್ಷನ್ ಮತ್ತು ಪೂರ್ವ ಕಾರಿಡಾರ್ ನ 351 ಕಿಮಿ ಉದ್ದದ ನ್ಯೂಖಜ್ರ – ನ್ಯೂ ಬಾವ್ ಪುರ ಮಾರ್ಗಗಳು ಸರಕು ಸಾಗಣೆಗೆ ಮುಕ್ತವಾಗಿದೆ.
ಪಶ್ಚಿಮ ಕಾರಿಡಾರ್‌ನಲ್ಲಿ ಡಬ್ಬಲ್ ಸ್ಟ್ಯಾಕ್ ಕಂಟೇನರ್ ರೈಲನ್ನು ಮತ್ತು 3 ರಿಂದ 4 ಕಿಮಿ ಉದ್ದದ ಶೇಷನಾಗ್ ಹೆಸರಿನಲ್ಲಿ ಪ್ರಯೋಗಾತ್ಮಕವಾಗಿ ಯಶಸ್ವಿಯಾಗಿ ಸಂಚಾರ ಕೈಗೊಳ್ಳಲಾಗಿದೆ. ಈ ಕಾರಿಡಾರ್ ನಲ್ಲಿ ಸಂಚರಿಸುವ ರೈಲುಗಳನ್ನು ನಿಯಂತ್ರಿಸಲು ಮತ್ತು ವಿದ್ಯುತ್ ಸಂಪರ್ಕವನ್ನು ನೋಡಲು ಯಾವುದೇ ತುರ್ತು ಸಂದರ್ಭದಲ್ಲಿ ಶೀಘ್ರವಾಗಿ ಕ್ರಮ ಕೈಗೊಳ್ಳಲು ಎರಡು ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಪೂರ್ವ ವಲಯದ ನಿಯಂತ್ರಣ ಕೇಂದ್ರ ವನ್ನು ಪ್ರಧಾನ ಮಂತ್ರಿಗಳು ಪ್ರಯಾಗ್ ರಾಜ್ ನಲ್ಲಿ ಉದ್ಘಾಟನೆ ಮಾಡಿದ್ದಾರೆ. 4.2 ಎಕರೆ ಪ್ರದೇಶದಲ್ಲಿ 13030 ಚದರ ಮೀಟರ್ ಕಟ್ಟಡವನ್ನು ನಿರ್ಮಿಸ ಲಾಗಿದೆ. ಇದರಲ್ಲಿ 90 ಮೀಟರ್ ಉದ್ದದ ಎಲ್ ಇ ಡಿ ಪರದೆಯನ್ನು ಅಳವಡಿಸಲಾಗಿದೆ.
ಇದು ವಿಶ್ವದಲ್ಲೆ ಎರಡನೇ ದೊಡ್ಡ ನಿಯಂತ್ರಣ ಕೊಠಡಿ ಎನ್ನುತ್ತಾರೆ ಡಿ.ಎಫ್.ಸಿ. ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಸಾಚನ್‌ಅವರು. ಸರಕು ಸಾಗಣೆ ಕಾರಿಡಾರ್ ಪೂರ್ಣಗೊಂಡ ತರುವಾಯ ರೈಲ್ವೆ ಪ್ರಸಕ್ತ ಸರಕು ಸಾಗಣೆಯ ಶೇ. 30 ಪಾಲಿನಿಂದ ಶೇ. 45 ಕ್ಕೆ ಪಾಲು ಹೆಚ್ಚಳವಾಗುವ ವಿಶ್ವಾಸ ಅನುರಾಗ್ ಸಾಚನ್‌ಅವರದು. ಈ ಕಾರಿಡಾರ್ ಹಾದು ಹೋಗುವ ಮಾರ್ಗ ಪ್ರಮುಖ ನಗರಗಳು ಮತ್ತು ಬಂದರುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ತ್ವರಿತ ಸರಕು
ಸಾಗಣೆಗೆ ಸಹಾಯವಾಗುವುದು. ಕಾರಿಡಾರ್ ಹಾದು ಹೋಗುವ ಮಾರ್ಗದಲ್ಲಿ ಕೈಗಾರಿಕಾ ಪಾರ್ಕ್, ಡಿಫೆನ್ಸ್ ಕಾರಿಡಾರ್ ಮುಂತಾದ ಔದ್ಯೋಗಿಕ ಚಟುವಟಿಕೆ ಗಳನ್ನು ಆರಂಭಿಸಲಾಗುತ್ತಿದೆ. ಕಾರಿಡಾರ್ ಮಾರ್ಗವು ಸವಾಂಗೀಣ ಆರ್ಥಿಕ ಬೆಳವಣಿಗೆಗೆ. ಮತ್ತು ಉದ್ಯೋಗಾವಕಾಶಗಳಿಗೆ ವರದಾನವಾಗುತ್ತದೆ.
ಸರಕು ಸಾಗಣೆ ಕಾರಿಡಾರ್ ಕಾಮಗಾರಿಯಲ್ಲಿ ರೈಲ್ವೆ ಹಳಿಗಳನ್ನು ಅಳವಡಿಸಲು ಅತ್ಯಾಧುನಿಕ New Track Construction Machine ಬಳಕೆ ಮಾಡ ಲಾಗಿದೆ. ಇದರ ಸಹಾಯದಿಂದ ದಿನವೊಂದಕ್ಕೆ 1.5 ಕಿಮಿ ರೈಲು ಹಳಿಯನ್ನು ಅಳವಡಿಸಬಹುದಾಗಿದೆ. ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣ ಗೊಳಿಸಲು ಮತ್ತು ಕೋವಿಡ್‌ನಿಂದ ಉಂಟಾದ ವಿಳಂಬವನ್ನು ಸರಿದೂಗಿಸಲು ೨೪ ಗಂಟೆ ವಾರದ ಎಲ್ಲಾ ದಿನಗಳು ಕೆಲಸ ನಡೆಯುತ್ತಿರುವ ಕಾರಣ ನಿಗದಿತ ಅವಧಿಗೆ ಯೋಜನೆಯು ಪೂರ್ಣವಾಗುತ್ತದೆ ಎಂಬ ವಿಶ್ವಾಸ ರೈಲ್ವೆ ಬೋರ್ಡ್ ಅಧ್ಯಕ್ಷ ಸುನೀತ್ ಶರ್ಮಾ ಅವರದು.
ಇಡೀ ಯೋಜನೆಯು ಡಿಸೆಂಬರ್ 2022 ರೊಳಗೆ ಪೂರ್ಣಗೊಳಿಸಲು ಸಮರೋಪಾದಿಯಲ್ಲಿ ಕೆಲಸವು ನಡೆಯುತ್ತಿದೆ. ರೈಲ್ವೆ ಸಚಿವರು ಪ್ರತಿ ವಾರಕ್ಕೊಮ್ಮೆ ಕಾಮಗಾರಿಯ ಪ್ರಗತಿಯನ್ನು ವಿಶ್ಲೇಷಿಸುತ್ತಿದ್ದಾರೆ ಯಾವುದೇ ಸಮಸ್ಯೆಗಳು ಎದುರಾದರೆ ಅದನ್ನು ತ್ವರಿತವಾಗಿ ಬಗೆಹರಿಸಿ ಕಾಮಗಾರಿಯು ಕುಂಠಿತವಾಗದ ಹಾಗೆ ಮಾಡುತ್ತಿರುವುದರಿಂದ 2021 ಡಿಸೆಂಬರ್ ಒಳಗೆ ಯೋಜನೆಯನ್ನು ಮುಗಿಸಲು ಸಮರೋಪಾದಿಯಲ್ಲಿ ಕೆಲಸ ನಡೆಸುತ್ತಿರುವುದು.
ಸ್ವತ: ಪ್ರಧಾನಿಯವರು ಇದರ ಅನುಷ್ಟಾನದ ಪ್ರಗತಿಯನ್ನು ಆಗ್ಗಾಗ್ಗೆ ಪರಿಶೀಲಿಸುತ್ತಿರುವುದು ಸರಕಾರ ಇದಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
ಕಾರಿಡಾರ್ ಯೋಜನೆಯು ಮುಕ್ತಾಯವಾದ ತರುವಾಯ ಶೇ. 70ರಷ್ಟು ಸರಕು ಸಾಗಣೆಯು ಕಾರಿಡಾರ್‌ಗೆ ಬದಲಾಗುವುದರಿಂದ ಆ ಜಾಗವು ಪ್ರಯಾಣಿಕರ ರೈಲು ಸಂಚಾರಕ್ಕೆ ಲಭ್ಯವಾಗುತ್ತದೆ. ಆಗ ಪ್ರಯಾಣಿಕರ ರೈಲು ಸೇವೆಯನ್ನು ಹೆಚ್ಚಿಸಲು ವಿಪುಲ ಅವಕಾಶವಿರುವುದು. ಇದನ್ನು ಮನಗಂಡಿಯೇ ರೈಲ್ವೇ ಇಲಾಖೆಯು ಖಾಸಗಿಯವರಿಗೆ ರೈಲು ಸೇವೆ ಒದಗಿಸಲು ಅವಕಾಶ ಕಲ್ಪಿಸಲು ತೀರ್ಮಾನ ಮಾಡಿರುವುದು.
ಪ್ರಯೋಗಾತ್ಮಕವಾಗಿ IRCTCಯವರಿಗೆ “ವಂದೇ ಮಾತರಂ” ರೈಲು ಸಂಚಾರ ನಿರ್ವಹಣೆ ನೀಡಲಾಗಿದೆ. ಪ್ರಾಯಶ: ಕರೋನಾ ಸಂಕಟ ಎದುರಾಗದಿದ್ದರೆ ಇತರ ಖಾಸಗಿಯವರು ಸಹಾ ಈ ವೇಳೆಗೆ ರೈಲು ಸೇವೆ ನೀಡಲು ಆರಂಭಿಸುತ್ತಿದ್ದ ಸಾಧ್ಯತೆಯು ನಿರೀಕ್ಷಿಸಬಹುದಾಗಿತ್ತು. ಮೋದಿ ಏನು ಮಾಡಿದ್ದಾರೆ ಎಂದು ಕೇಳುವವರು ಒಮ್ಮೆ ಕಣ್ಣು ಬಿಟ್ಟು ನೋಡಿದರೆ ಇಂತಹ ಅನೇಕ ಅದ್ಭುತ ಯೋಜನೆಗಳು ಜನರ ಬದುಕಿನಲ್ಲಿ ಅಪಾರವಾದ ಪರಿವರ್ತನೆಯನ್ನು ತರುತ್ತಿರುವುದನ್ನು ಕಾಣಬಹುದು. ಆದರೆ ಇದು ಸ್ಪಷ್ಟವಾಗಿ ಕಾಣುವುದು ಪೂರ್ವಾಗ್ರಹ ಮನಸ್ಥಿತಿಯಿಂದ ಹೊರಬಂದಾಗ ಮಾತ್ರ.
ಸರಕು ಸಾಗಣೆ ಮೀಸಲು ಕಾರಿಡಾರ್ ಭಾರತೀಯ ರೈಲ್ವೆಯನ್ನು ಸರಕು ಸಾಗಣೆಯಲ್ಲಿ ಅತ್ಯಂತ ಶಕ್ತಿಶಾಲಿಯನ್ನಾಗಿ ಮಾಡುತ್ತದೆ. ಮುಂಬರುವ ದಿನಗಳಲ್ಲಿ ಭಾರತದ ರೈಲ್ವೆ ಚಿತ್ರಣವು ಬದಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ