200 ಎಕರೆ ಜಮೀನು ಅಗತ್ಯ
ಮುಮ್ಮಿಗಟ್ಟಿ, ಗಾನಮಗಟ್ಟಿ, ಇಟ್ಟಿಗಟ್ಟಿಗಳಲ್ಲಿ ಸ್ಥಳ ಪರಿಶೀಲನೆ
ಬಡ ಹಾಗೂ ಮಧ್ಯಮ ರೋಗಿಗಳಿಗೆ ಸಕಲ ಚಿಕಿತ್ಸೆ
ವಿಶೇಷ ವರದಿ: ಚಂದ್ರಕಾಂತ ಬಾರಕೇರ ಹುಬ್ಬಳ್ಳಿ
ಆಲ್ ಇಂಡಿಯಾ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಸಂಸ್ಥೆ ಸ್ಥಾಪನೆಗೆ ಕೇಂದ್ರ ತಂಡ ಈಗಾಗಲೇ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಹೊರ ವಲಯದಲ್ಲಿನ ಮೂರು ಪ್ರದೇಶಗಳ ಪರಿಶೀಲನೆ ನಡೆಸಿದ್ದು, ಏಮ್ಸ್ ಸಂಸ್ಥೆ ಸ್ಥಾಪನೆಗೆ ಅಂತಿಮಗೊಳ್ಳುವ ಸ್ಥಳದ ಕುರಿತು ಕುತೂಹಲ ಹೆಚ್ಚಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಏಮ್ಸ್ ಸ್ಥಾಪನೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಲಭ್ಯವಿರುವ ಜಮೀನು ಪರಿಶೀಲನೆಗೆ ಕೇಂದ್ರದ ತಂಡ ಆಗಮಿಸಿ ಗಾಮನಗಟ್ಟಿ, ಮುಮ್ಮಿಗಟ್ಟಿ ಹಾಗೂ ಇಟ್ಟಿಗಟ್ಟಿ ಕೈಗಾರಿಕಾ ಪ್ರದೇಶವನ್ನು ಪರಿಶೀಲಿಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಅಂತಿಮವಾಗಿ ಯಾವ ಸ್ಥಳದಲ್ಲಿ ಏಮ್ಸ್ ಸ್ಥಾಪನೆಯಾಗ ಬೇಕು ಎಂಬುದು ಕೇಂದ್ರ ಸರಕಾರಕ್ಕೆ ಬಿಟ್ಟಿದೆ.
ಏಮ್ಸ್ ಸ್ಥಾಪನೆಗೆ ಕನಿಷ್ಠ 200 ಎಕರೆ ಜಮೀನಿನ ಅಗತ್ಯವಿದೆ. ರಾಜ್ಯ ಸರಕಾರ ಈಗಾಗಲೇ ಕೈಗಾರಿಕಾ ಉದ್ದೇಶ ಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಇಟ್ಟಿಗಟ್ಟಿ, ಮಮ್ಮಿಗಟ್ಟಿ ಹಾಗೂ ಗಾಮನಗಟ್ಟಿ ಕೈಗಾರಿಕಾ ಪ್ರದೇಶಗಳಿಗೆ ಜಿಲ್ಲಾಡಳಿತದೊಂದಿಗೆ ತೆರಳಿದ್ದ ಕೇಂದ್ರದ ತಂಡ ಅಗತ್ಯ ಜಮೀನಿನ ಲಭ್ಯತೆಯನ್ನು ಸ್ಪಷ್ಟಪಡಿಸಿ ಕೊಂಡಿದೆ. ಮಾತ್ರವಲ್ಲದೆ, ಯಾವ ಸ್ಥಳದಲ್ಲಿ ಏಮ್ಸ್ ಸ್ಥಾಪನೆಯಾದರೆ ಸೂಕ್ತ ಎಂಬುದರ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚಿಸ ಲಾಗಿದ್ದು, ಯಾವ ಸ್ಥಳದಲ್ಲಿ ಏಮ್ಸ್ ಸ್ಥಾಪನೆಯಾಗಲಿದೆ ಎಂಬುದು ನಿಗೂಢವಾಗಿದೆ.
ಉತ್ತರ ಕರ್ನಾಟಕದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳ ಪಾಲಿನ ಸಂಜೀವಿನಿ ಎಂದೇ ಪ್ರಖ್ಯಾತಿ ಪಡೆದಿ ರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ನ ಒಟ್ಟು ವಿಸ್ತೀರ್ಣ 100 ಎಕರೆ. ಈಗಾಗಲೇ ಕಿಮ್ಸ್ ಸ್ಥಾಪನೆಗೊಂಡು ಶತಮಾನ ಸಮೀಪಿಸುತ್ತಿದೆ. ಕಾಲಕ್ರಮೇಣ ಬದಲಾದ ರೋಗಿಗಳ ಸಂಖ್ಯೆ, ವೈದ್ಯಕೀಯ ವಿಜ್ಞಾನ ಕ್ಷೇತ್ರಗಳಲ್ಲಿನ ಪ್ರಗತಿಗೆ ತಕ್ಕಂತೆ ಕಿಮ್ಸ್ನ ಖಾಲಿ ಪ್ರದೇಶದಲ್ಲಿ ಅನೇಕ ಅಂಗ ಸಂಸ್ಥೆಗಳು ತಲೆ ಎತ್ತಿವೆ. ಅಲ್ಲದೆ, ರಾಜ್ಯ ಹಾಗೂ ಕೇಂದ್ರ ಸರಕಾರಗಳ ಅನೇಕ ವಿನೂತನ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನಗೊಂಡಿವೆ.
ಹೀಗಾಗಿ ಏಮ್ಸ್ ಸ್ಥಾಪನೆಗೆ ಕನಿಷ್ಠ 200 ಎಕರೆ ಜಮೀನಿನ ಅಗತ್ಯವಿದೆ. ಹೀಗಿದ್ದರೂ ಹೆಚ್ಚುವರಿ ಜಮೀನಿನ ಲಭ್ಯತೆ ಉತ್ತಮ ಎಂದು ಕೇಂದ್ರದ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ಕಾರಣಕ್ಕಾಗಿಯೇ ಸರಕಾರ ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ ಸಾವಿರಾರು ಎಕರೆ ಜಮೀನಿರುವ ಗಾಮನಗಟ್ಟಿ, ಮಮ್ಮಿಗಟ್ಟಿ ಹಾಗೂ ಇಟ್ಟಿಗಟ್ಟಿ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳ ಪರಿಶೀಲಿಸಲಾಗಿದೆ.
ದಾಖಲೆಗಳೊಂದಿಗೆ ತೆರಳಿದ ಕೇಂದ್ರದ ತಂಡ: ಹುಬ್ಬಳ್ಳಿಯ ಗಾಮನಗಟ್ಟಿ, ಧಾರವಾಡದ ಹೊರ ವಲಯದ ಮಮ್ಮಿಗಟ್ಟಿ, ಇಟ್ಟಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿನ ನೂರಾರು ಎಕರೆ ಜಮೀನನ್ನು ಪರಿಶೀಲಿಸಿರುವ ಕೇಂದ್ರದ ತಂಡ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ಪಡೆದುಕೊಂಡು ತೆರಳಿದೆ.
ಹುಬ್ಬಳ್ಳಿಯ ಗಾಮನಗಟ್ಟಿ ಪ್ರದೇಶದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಭಾಗಶಃ ಏಮ್ಸ್ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿಯೇ ಸ್ಥಾಪನೆಯಾಗುತ್ತದೆ ಎನ್ನಲಾಗುತ್ತಿದೆ. ಈ ಹಿಂದೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಕಲಬುರ್ಗಿಯ ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಸಲ್ಲಿಸಿತ್ತು. ಆದರೆ, ಆ ಪ್ರಸ್ತಾವವನ್ನು ಕೇಂದ್ರ ಪರಿಗಣಿಸಿಲ್ಲ.
ಹೀಗಾಗಿ ರಾಜ್ಯ ಸರಕಾರ ಹುಬ್ಬಳ್ಳಿ-ಧಾರವಾಡದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡ ಗಾಮನಗಟ್ಟಿ, ಮಮ್ಮಿಗಟ್ಟಿ, ಇಟ್ಟಿಗಟ್ಟಿ ಪ್ರದೇಶ ಗಳಲ್ಲಿ ಜಮೀನು ನೀಡಲು ನಿರ್ಧರಿಸಿದೆ. ಯಾವ ಪ್ರದೇಶದಲ್ಲಿ ಏಮ್ಸ್ ಸಂಸ್ಥೆ ಸ್ಥಾಪಿಸಬೆಕು ಎಂಬುದನ್ನು ಕೇಂದ್ರ ಸರಕಾರ ಅಂತಿಮಗೊಳಿಸಿಲ್ಲ.
ಸಕಲ ರೀತಿಯ ಚಿಕಿತ್ಸೆ ಲಭ್ಯ
ಉತ್ತರ ಕರ್ನಾಟಕದ ಹೆಬ್ಬಾಗಿಲು ಖ್ಯಾತಿಯ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹಲವು ದಶಕಗಳಿಂದ ರೋಗಿಗಳ ಪಾಲಿನ ಸಂಜೀವಿನಿಯಂತೆ ಕಾರ್ಯ ನಿರ್ವಹಿಸುತ್ತಿರುವ ಕಿಮ್ಸ್ನ್ನು, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟ, ಬಳ್ಳಾರಿ ಜಿಲ್ಲೆಗಳ ರೋಗಿಗಳು ಅವಲಂಬಿಸಿದ್ದಾರೆ. ಸದ್ಯ ಭಾಗಶಃ ಚಿಕಿತ್ಸೆಗಳು ಕಿಮ್ಸ್ನಲ್ಲಿ ಲಭ್ಯವಿದ್ದರೂ ಕೆಲವೊಂದು ಅಪರೂಪದಲ್ಲಿ ಅಪರೂಪ ಎನ್ನುವಂತಹ ಕಾಯಿಲೆಗಳಿಗೆ ಕಿಮ್ಸ್ನಲ್ಲಿ ಚಿಕಿತ್ಸೆ ಲಭಿಸುವುದಿಲ್ಲ. ಇದೇ ಕಾರಣ ಕ್ಕಾಗಿಯೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿಶೇಷ ಪ್ರಯತ್ನದಿಂದಾಗಿ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಲಭಿಸಲಿದೆ.
ಏಮ್ಸ್ ಸ್ಥಾಪನೆಯಿಂದಾಗಿ ಉತ್ತರ ಕರ್ನಾಟಕದ ಬೀದರ, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಗದಗ, ವಿಜಯಪುರ, ಬಾಗಲಕೋಟ, ಹಾವೇರಿ, ಧಾರವಾಡ ಜಿಲ್ಲೆಗಳ ಬಡ ಹಾಗೂ ಮಧ್ಯಮ ರೋಗಿಗಳಿಗೆ ಸಕಲ ರೀತಿಯ ಚಿಕಿತ್ಸೆ ಸರಕಾರದಿಂದಲೇ ದೊರೆಯುವಂತಾಗುತ್ತದೆ. ಅಲ್ಲದೆ, ವೈದ್ಯಕೀಯ ವಿಜ್ಞಾನ ಕ್ಷೇತ್ರದ ಎಲ್ಲ ವಿಭಾಗಗಳ ತಜ್ಞ ವೈದ್ಯರು ಇಲ್ಲಿ ಲಭ್ಯವಿರುತ್ತಾರೆ. ಹೀಗಾಗಿ ಏಮ್ಸ್ ಸ್ಥಾಪನೆಯಿಂದಾಗಿ ಉತ್ತರ ಕರ್ನಾಟಕದ ವೈದ್ಯಕೀಯ ಸೌಲಭ್ಯದ ಕೊರತೆ ನೀಗಿದಂತಾಗುವುದರಲ್ಲಿ ಸಂದೇಹವಿಲ್ಲ.