Friday, 20th September 2024

ವೈರಾಗ್ಯ ಬೋಧಿಸುವ ಕ್ಲಾಸ್; ಸಾವಿರ ರು.ಫೀಸ್

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಒತ್ತಡದ ಬದುಕು, ತೀರದ ಬಯಕೆಗಳು, ಕಾಡುವ ರೋಗಗಳು ಇದರಿಂದಾಗಿ ಮಾತ್ರೆಗಳನ್ನು ನುಂಗಿ ನುಂಗಿ ಔಷಧ ಕುಡಿದು ಕುಡಿದು ಅದರ ಸೈಡ್ ಎಫೆಕ್ಟ್‌ ಗಳಿಂದಲೂ ಬೇಸತ್ತ ಅನೇಕ ವಿದ್ಯಾವಂತರು, ಶ್ರೀಮಂತರು, ಸಾಮಾನ್ಯರು ಎಲ್ಲರೂ ಯೋಗ, ಧ್ಯಾನ, ತಪಸ್ಸು, ಆಶ್ರಮ, ಜಪ ಎಂದೆಲ್ಲ ಈಗ ಇವಕ್ಕೆ ಜೋತು
ಬೀಳಲಾರಂಭಿಸಿದ್ದಾರೆ.

ಹೀಗಾಗಿ ಅನೇಕ ಭೋಗಿಗಳೂ ಈಗ ಯೋಗದ ಹೆಸರಿನಲ್ಲಿ ಬಿಳಿ ಬಟ್ಟೆ ಧರಿಸಿ, ಉದ್ದಕ್ಕೆ ದಾಡಿ ಬಿಟ್ಟು ಆಶ್ರಮ ಗಳನ್ನು ತೆರೆಯುತ್ತಿದ್ದಾರೆ. ಯೋಗ, ತಪಸ್ಸು, ವೈರಾಗ್ಯಗಳೂ ಈಗ ಮಾರಾಟಕ್ಕಿರುವ ವಸ್ತುಗಳು ‘ನಿಸ್ಸಾರ ಜೀವನಕ್ಕೆ ವೈರಾಗ್ಯ ಸೂತ್ರಗಳನ್ನು ಹೇಳಿಕೊಡಲಾಗುತ್ತದೆ.

ಸಾವಿರ ರೂಪಾಯಿ ಸದಸ್ಯತ್ವ ಫೀ ತುಂಬಿ ಸದಸ್ಯರಾಗಿ’ ಎಂಬ ಫಲಕಗಳು, ಬ್ಯಾನರ್‌ಗಳು, ಟಿ.ವಿಯಲ್ಲಿ ಜಾಹಿರಾತುಗಳು. ವೈರಾಗ್ಯ ಹೇಳಿಕೊಡುವ ಸ್ವಾಮಿಗಳು ಮೈತುಂಬಾ ಆಭರಣಗಳನ್ನು ಹೇರಿಕೊಂಡು, ಐಷಾರಾಮಿ ಕಾರುಗಳಲ್ಲಿ ಬಂದಿಳಿಯುವ ದೃಶ್ಯಗಳೊಂದಿಗೆ ಜನಜಂಗುಳಿ ಮಧ್ಯೆ ಹೂವುಗಳನ್ನು ಎರಚಿಸಿ ಕೊಳ್ಳುತ್ತಾ ತಮ್ಮ ಮೇಲೆ ಎಸೆದ ಹೂಗಳನ್ನೇ ತುಳಿಯುತ್ತಾ ಬರುವ ಸ್ವಾಮಿಗಳು, ಬೆಲೆ ಬಾಳುವ ಸಿಂಹಾಸನ ದಂತಿರುವ ಕುರ್ಚಿ ಮೇಲೆ ಫೋಕಸ್ ಮಾಡಿ, ನಗು ನಗುತ್ತಾ ವೇದಿಕೆ ಏರಿ ಕುಳಿತು ಕೊಳ್ಳುವುದನ್ನು ತೋರಿ ಸುವ ವಿಡಿಯೊಗಳು, ಹತ್ತು ಬೆರಳಿಗೆ ಇಪ್ಪತ್ತು ವಜ್ರ ಖಚಿತ ಉಂಗುರಗಳ ಕೈಯನ್ನು ಜೋಡಿಸಿ ತೋರಿಸುತ್ತಾ ಬರುವ ಸ್ವಾಮಿಗಳು ಭಕ್ತರಿಗೆ ಹೇಳುವ ವಿಷಯ ಜೀವನದಲ್ಲಿ ವೈರಾಗ್ಯದ ಅವಶ್ಯಕತೆ.

ನಿಜ ವೈರಾಗ್ಯ ಮೂರ್ತಿಗಳಾದ ವೇಮನ ಮಹರ್ಷಿ, ಸರ್ವಜ್ಞ, ಅಲ್ಲಮಪ್ರಭು, ಅಕ್ಕಮಹಾದೇವಿ, ಶ್ರೀ ರಮಣ ಮಹರ್ಷಿ, ರಾಮಕೃಷ್ಣ ಪರಮ ಹಂಸರು, ಶ್ರೀಧರ ಸ್ವಾಮಿಗಳು ಇವರನ್ನೆಲ್ಲ ಫೋಟೊಗಳಲ್ಲಿ ನೋಡಿದ್ದೇವೆ. ಅವರ ವೇಷಭೂಷಣಗಳು ಹೇಗಿವೆ? ಅವರ ಪುಸ್ತಕಗಳನ್ನೆ, ಅವರ ವಿಚಾರಗಳನ್ನೆ ಹೇಳುವ ಇವರ, ಈಗಿನ ಗುರುಗಳ ಸ್ವಾಮಿಗಳ ವೇಷ-ಭೂಷಣ ಹೇಗಿದೆ? ಗಮನಿಸಿಯೂ, ನೋಡಿಯೂ, ನಮ್ಮ ಜನ ಹೈಟೆಕ್ ಗುರುಗಳ ಹೈಟೆಕ್ ಆಶ್ರಮಗಳ ಮೊರೆ ಹೋಗಿ ನಾವು ಧನ್ಯರಾದೆವು ಎಂದುಕೊಳ್ಳುತ್ತಾರಲ್ಲ, ಇದಕ್ಕಿಂತ ನಿಸ್ಸಾರ ಜೀವನ, ವೈರಾಗ್ಯ ಬೇಕೆ? ‘ನಾನು ದಿನಾ ಊಟ ಮಾಡ್ತೆನೆ’, ‘ದಿನಾ ನಿದ್ದೆ ಮಾಡ್ತೇನೆ’ ಎಂಬಷ್ಟೆ ಸಹಜವಾಗಿ ನಾನು ಧ್ಯಾನ ಮಾಡ್ತೆನೆ, ಯೋಗ ಮಾಡ್ತೇನೆ ಎಂದು ಸಲೀಸಾಗಿ ಹೇಳುವ ನಮ್ಮ ಜನರಿಗೆ ಇವುಗಳ ಕಲ್ಪನೆಯೂ ಇರಲಿಕ್ಕಿಲ್ಲ ಪಾಪ.. ಎನಿಸುತ್ತದೆ.

ಧ್ಯಾನದ ವ್ಯಾಖ್ಯೆ ಹೀಗಿದೆ, ‘ಧ್ಯಾನದಲ್ಲಿ ನಾವು ಸುಮ್ಮನಿರಬೇಕು, ದೇವರು ನಮ್ಮ ಜತೆಗೆ ಮಾತನಾಡಬೇಕು. ಇದು ಧ್ಯಾನ. ಧ್ಯಾನಕ್ಕೆ ವಿವೇಕ-ವೈರಾಗ್ಯಬೇಕು. ಮೊದಲಿಗೆ ಸಾಧಕನು ನಾನು ಎಂಬ ಅಹಂಕಾರ ಬಿಡಬೇಕು, ನಾನು ಸ್ವತಂತ್ರ ಕರ್ತಾರ ಎಂಬ ತಪ್ಪು ತಿಳುವಳಿಕೆ ಬಿಡಬೇಕು. ನನ್ನನ್ನು ನಿಮಿತ್ಯವಾಗಿಸಿಕೊಂಡು
ಪರಮಾತ್ಮನೇ ಎಲ್ಲವನ್ನೂ ನಡೆಸುವನೆಂಬುದಾಗಿ ತಿಳಿಯಬೇಕು. ಇದು ಧ್ಯಾನದ ಗುಟ್ಟು’ ಎನ್ನುತ್ತಾರೆ ಸಂತ ತುಕಾರಾಮರು.

ನಮ್ಮ ಧ್ಯಾನ ಈಗೀಗ ಹೇಗಾಗುತ್ತದೆ ಎಂಬುದಕ್ಕೆ ಶ್ರೀ ರಾಮಕೃಷ್ಣ ಪರಮಹಂಸರು ಒಂದು ಉದಾಹರಣೆ ಕೊಡುತ್ತಿದ್ದರಂತೆ. ಅದು ಇಂದಿಗೂ ಪ್ರಸ್ತುತ. ನಿತ್ಯ ಧ್ಯಾನ ಶಿಬಿರಗಳಲ್ಲಿ ನಡೆಯುವ ಪ್ರಕ್ರಿಯೆಯ ಒಂದು ತಮಾಷೆ ಪ್ರಸಂಗ ಹೀಗಿದೆ, ಕೊಲ್ಕತ್ತಾದ ಬ್ರಹ್ಮೋ ಸಮಾಜದ ಕೇಶವಚಂದ್ರಸೇನರು ಒಮ್ಮೆ ತಮ್ಮ ಪ್ರಾರ್ಥನಾ ಸಭೆಗೆ ಬರಬೇಕೆಂದೂ, ಅಲ್ಲಿನ ಶಿಸ್ತು, ನಿಯಮಗಳನ್ನು ತಾವು ನೋಡಲೇಬೇಕೆಂದು ಶ್ರೀ ರಾಮಕೃಷ್ಣ ಪರಮಹಂಸರನ್ನು ಆಹ್ವಾನಿಸಿದರಂತೆ. ಸಭೆ ಆರಂಭವಾಯಿತು.

ಮೊದಲಿಗೆ ಐದು ನಿಮಿಷ ಮೌನ, ಐದು ನಿಮಿಷ ಧ್ಯಾನ, ಬಳಿಕ ಉಪಾಹಾರ, ಉಪಹಾರದ ಗಂಟೆ ಬಾರಿಸಿದಾ ಕ್ಷಣ ಎಲ್ಲರೂ ದಿಗ್ಗನೆದ್ದು, ಒಂದೊಂದು ತಟ್ಟೆ ಹಿಡಿದು ಸಾಲಾಗಿ ಉಪಹಾರಕ್ಕೆ ನಿಂತುಬಿಟ್ಟರಂತೆ. ಎಲ್ಲವೂ ಕ್ಲುಪ್ತ ಕಾಲದಲ್ಲಿ ನಡೆಯಬೇಕೆಂಬ ಪೂರ್ವ ಸೂಚನೆಯ ಶಿಸ್ತು ಇತ್ತು, ನಂತರ ಎಲ್ಲರೂ ತಟ್ಟೆಯಲ್ಲಿ
ಉಪಹಾರ ಹಾಕಿಸಿಕೊಂಡು ತಿನ್ನುತ್ತಾ ನಿಂತರು. ಆಗ ರಾಮಕೃಷ್ಣರು ‘ಓ, ಕೇಶವಚಂದ್ರ, ಇದು ನಿಮ್ಮ ಧ್ಯಾನವೇ? ಇದನ್ನು ನೋಡಲು ನಾನು ಇಲ್ಲಿಗೆ ಬರಬೇಕಿರಲಿಲ್ಲ. ಇದನ್ನು ನೋಡಿದರೆ ನಮ್ಮ ದಕ್ಷಿಣೇಶ್ವರ ಪಂಚವಟಿಯಲ್ಲಿ ನಡು ಮಧ್ಯಾಹ್ನ ಮರದ ಮೇಲೆ ಉರಿಬಿಸಿಲು ತಾಳಲಾರದೇ ಅನೇಕ ಕೋತಿಗಳು ಹೀಗೆ ಕಣ್ಮುಚ್ಚಿ ಕುಳಿತಿರುತ್ತವೆ. ನೋಡಲು ಅವು ಧ್ಯಾನ ಮಾಡುತ್ತಿರುವಂತೆ ಕಾಣುತ್ತಿರುತ್ತದೆ.

ಆದರೆ, ಅವು ಧ್ಯಾನಿಸುವ ಮನದ ವಸ್ತು ಯಾರ ತೋಟದ ಯಾವ ಗಿಡದಲ್ಲಿ ಎಳೆ ಸೌತೆಕಾಯಿ ಇವೆ, ಯಾರ ತೋಟದಲ್ಲಿ ಎಳೆನೀರು ಇದೆ, ಯಾರ ಬಯಲಿನಲ್ಲಿ ತರಕಾರಿಗಳು ಹಬ್ಬಿವೆ ಎಂದು ಯೋಚಿಸುತ್ತಾ, ಛಂಗನೆ ಹಾರಿ ತಿನ್ನಲು ಓಡುತ್ತವೆ, ನಿನ್ನ ಈ ಸಮಾಜದ ಧ್ಯಾನಸ್ಥರಾದ ಸದಸ್ಯರು ಗಂಟೆಯಾದ ತಕ್ಷಣ
ದಿಗ್ಗನೆದ್ದು ತಿಂಡಿಗೆ ಸಾಲಾಗಿ ನಿಂತರು, ಅದನ್ನು ನೋಡಿ ನನಗೆ ಆ ಕೋತಿಗಳ ಧ್ಯಾನವೇ ನೆನಪಾಯಿತಪ್ಪ’ ಎಂದುಬಿಟ್ಟರಂತೆ. ತಾತ್ಪರ್ಯವಿಷ್ಟೆ, ಇದನ್ನು ಶ್ರೀ ಮದಾನಂದ ತೀರ್ಥರು ತಮ್ಮ ತಂತ್ರಸಾರ ಎಂಬ ಗ್ರಂಥದಲ್ಲಿ ಅದ್ಭುತವಾಗಿ ಹೇಳಿದ್ದಾರೆ. ಈ ಶ್ಲೋಕದ ಗಾಂಭಿರ್ಯತೆಯೇ ಅದಕ್ಕೆ ಸಾಕ್ಷಿ.

‘ಖಂಡ ಸ್ಮತಿ ಧಾರಣಾ ಸ್ಯಾತ್ ಅಖಂಡಾ ಧ್ಯಾನ ಮುಚ್ಯತೆ |
ಅಪ್ರಯತ್ನಾತ್ ಸಮಾಽಶ್ಚ ದರ್ಶನಂ ಚಿರಯಾ ತಯಾ |
ಅಥವಾ ಸತತಂ ಶಾಸ ವಿಮರ್ಶೇಣ ಭವಿಷ್ಯತಿ |
ಪರಮ ಸ್ನೇಹ ಸಂಯುಕ್ತಃ ಯಥಾರ್ಥ ಜ್ಞಾನತೋಭವೇತ್ |
ಸಾ ಭಕ್ತರಿತಿ ವಿeಯಾ ಸಾಧನಂ ಭೋಗ ಮೋಕ್ಷಯೋಃ ||

(ಅರ್ಥ: ‘ಧಾರಣ ಎಂದರೆ ತಡೆತಡೆದು ನಡೆಯುವುದು, ಧ್ಯಾನ ಎಂದರೆ ಸತತ ಧಾರೆಯಂತೆ ಬಿಡದೆ ನೆನೆಯುವುದು, ಸಮಾಧಿ ಎಂದರೆ ಪ್ರಪಂಚದ ಅರಿವೇ ಇಲ್ಲದೇ ಮೈ ಮರೆತು ನೆನೆಯುವುದು, ಇದರಿಂದಲೇ ಸಾಕ್ಷಾತ್ಕಾರ. ಹಾಗೆಯೇ ಸಚ್ಛಾಸಗಳ ಚಿಂತನೆ ವಿಮರ್ಶೆಗಳಿಂದಲೂ ಧಾರಣ, ಧ್ಯಾನ ಸಮಾಧಿ ಸಿದ್ಧಿಸಿ ಅದರಿಂದಲೂ ಸಾಕ್ಷಾತ್ಕಾರ ಸಾಧ್ಯ. ಶಾಸ್ತ್ರಜ್ಞಾನದಿಂದ ಭಕ್ತಿ, ಆ ಜ್ಞಾನಪೂರ್ವಕ ಭಕ್ತಿಯಿಂದ ಮುಕ್ತಿ’) ಎಂಬುದೇ ಈ ಶ್ಲೋಕದ ಸಾರಾಂಶ.

ಅಲ್ಲದೇ ಪರಮಾತ್ಮನೇ ಸರ್ವ ಸ್ವಾಮಿಯೆಂದು ಆತನ ಮಾನಸ ಮೂರ್ತಿಯನ್ನು ಗುಣ ಸ್ಮರಣಪೂರ್ವಕವಾಗಿ ತನ್ನ ಹೃದಯದಲ್ಲಿ ನೀಡುತ್ತಾ, ಅವನ ಅಪ್ರಾಕೃತ ವಾದ ರೂಪವನ್ನು ಎಡೆಬಿಡದೇ ಭಕ್ತಿಯಿಂದ ಚಿಂತಿಸುವುದೇ ಧ್ಯಾನ.

ಸಮಾಧಿಯಲ್ಲಿ ಮಾನಸಮೂರ್ತಿ ಮರೆಯಾಗಿ ಪರಮಾತ್ಮನ ಅಪ್ರಾಕೃತ ರೂಪದ ದರ್ಶನವು ಅವನ ಅನುಗ್ರಹ ಸಮಾಧಿ. ಅದೇ ಅಪರೋಕ್ಷ. ನೋಡಿದಿರಾ? ಇಷ್ಟು ಗೂಢವಾಗಿರುವ, ಹಂತ ಹಂತವಾಗಿ ಪ್ರಯತ್ನದ ಮೂಲಕ ಮಾಡುವ ಧ್ಯಾನವಿರುವಾಗ ‘ನಾವು ಟೆನ್-ಫಿಪ್ಟೀನ್ ಮಿನಿಟ್ಸ್ ಮೆಡಿಟೇಷನ್ ಮಾಡ್ತೀವಿ’ ಅನ್ನುವವರನ್ನು ನೋಡಿದಾಗ ಅಯ್ಯೋ ಪಾಪ.. ಎನಿಸುವುದಿಲ್ಲವೇ? ನಮ್ಮಲ್ಲಿ ಧ್ಯಾನ, ಯೋಗ ಮಾಡುವ ಸಾಮಾನ್ಯ ಜನರಿದ್ದಾರೆ. ಆದರೆ ಅದರಿಂದ ಹಣ ಮಾಡಲು ಬೀದಿಗೊಂದು, ರಸ್ತೆಗೊಂದು ಯೋಗಾ ಸೆಂಟರ್, ಧ್ಯಾನ ಸೆಂಟರ್‌ಗಳನ್ನು ತೆಗೆದು ಅಧ್ವಾನಗೊಳಿಸುತ್ತಿದ್ದಾರೆ.

ಇನ್ನು ಜನ ಹೇಗಿದ್ದಾರೆ, ಹೇಗಾಗಿಬಿಟ್ಟಿದ್ದಾರೆಂದರೆ, ಒಬ್ಬ ಒಂದು ಪುಸ್ತಕ ಬರೆದ, ಅದರ ಹೆಸರು ದೊಡ್ಡವರ ಸಣ್ಣ ತಪ್ಪುಗಳು. ಅದರ ಲಕ್ಷಾಂತರ ಪ್ರತಿಗಳು ಮಾರಾಟವಾಗಿ ಹೋದವು. ಓದಿದ ಜನರು ಅಂತಹವರೇ ತಪ್ಪು ಮಾಡಿದ್ದಾರೆಂದರೆ ನಾವು, ನಮ್ಮದು ಎಂತಹ ಲೆಕ್ಕಕ್ಕೆ ಬಿಡಿ ಎಂದು ಸಮಾಧಾನಪಟ್ಟು ಕೊಂಡರು. ಅದೇ ಇನ್ನೊಬ್ಬ ಬರೆದ ಮತ್ತೊಂದು ಪುಸ್ತಕದ ಹೆಸರು ದೊಡ್ಡವರ ದೊಡ್ಡ ಗುಣಗಳು ಇದರ ಪ್ರತಿಗಳು ಮೊದಲ ಪುಸ್ತಕದಷ್ಟು ಪ್ರತಿಗಳು ಖರ್ಚಾಗಲೇ ಇಲ್ಲ, ಏಕೆಂದರೆ ಓದಿದ ಕೆಲವರು ‘ಅವರು ದೊಡ್ಡವರಪ್ಪಾ, ಹಾಗೆ ಅವರಂತೆ ನಡೆದುಕೊಳ್ಳುವುದು ನಮ್ಮಂಥಹ ಸಾಮಾನ್ಯರ ಕೈಯಲ್ಲಿ ಆಗದ ಮಾತು’ ಎಂದು ಬಿಟ್ಟರು.

ಧ್ಯಾನಕ್ಕೂ, ಯೋಗಕ್ಕೂ ಇದೇ ಗತಿಯಾಗುತ್ತಿದೆ. ನಮ್ಮ ಪೂರ್ವಿಕರು ಕೆಲವನ್ನು ಗೌಪ್ಯವಾಗಿಟ್ಟಿದ್ದು ಇದಕ್ಕೆ ಎನಿಸುತ್ತದೆ. ತನ್ಮಯತೆಯಿಂದ ಆಳಕ್ಕಿಳಿಯದೇ ಏನೂ ಸಾಧ್ಯವಿಲ್ಲ. ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವಂತೆ ನಮಗಿರುವುದು ಅರೆಗಣ್ಣು, ನಮಗಿರುವುದು ಅರೆಜ್ಞಾನ ಅಷ್ಟೆ. ನಮ್ಮ ಕೈಗೆ ಸಿಲುಕುವಷ್ಟನ್ನೇ ನಾವು ನಮಗೆಲ್ಲ ಸಿಕ್ಕಿತು ಎಂದುಕೊಡುಬಿಡುತ್ತೇವೆ. ಅಧ್ಯಯನ, ಅನುಭವ, ಜನಸಂಪರ್ಕಗಳಿಲ್ಲದೇ ಅರ್ಧ ಗಂಟೆ ಒಂದೇ ಕಡೆ ಕುಳಿತು ಕೊಳ್ಳುವುದರಿಂದ ನಮಗೆ ಧ್ಯಾನ, ಪ್ರಾಣಾಯಾಮ, ಯೋಗ ಸಿಕ್ಕಿಬಿಟ್ಟಿತು ಎಂದುಕೊಳ್ಳುತ್ತೇವೆ.

ಕೆಲವು ಕಡೆ ಅಹರ್ನಿಶಿ ಕೆಲಸ, ಪರೋಪಕಾರ, ಸೇವೆಗಳಿಂದಲೇ ಧ್ಯಾನಿ ಎನಿಸಿಕೊಂಡವರಿದ್ದಾರೆ. ಕೇವಲ ಮೌನವಾಗಿರುವುದೇ ಧ್ಯಾನವಲ್ಲ ಎಂದಿದ್ದಾರೆ.
ನಾನು ಏಳನೆಯ ತರಗತಿಯ ಬಾಲಕನಾಗಿದ್ದಾಗ ಸ್ನೇಹಿತರನ್ನು ಗುಂಪು ಮಾಡಿಕೊಂಡು ಧರ್ಮವ್ಯಾಧ ಎಂಬ ನಾಟಕವಾಡಿದ್ದೆ. ಅದು 1974-75ನೇ ಇಸವಿ, ಅದು ನಮಗೆ ಪಠ್ಯಪುಸ್ತಕದ ಒಂದು ಪಾಠವಾಗಿತ್ತು. ಅದರಲ್ಲಿ ಅರಣ್ಯದಲ್ಲಿ ತಪಸ್ಸಿಗೆ ಕುಳಿತ ಒಬ್ಬ ಋಷಿ ಮೇಲೆ ಮರದ ಮೇಲೆ ಕುಳಿತ ಪಕ್ಷಿಯೊಂದು ಹಿಕ್ಕೆ ಹಾಕಿ ಆತನ ತಪಸ್ಸನ್ನು ಹಾಳುಗೆಡವುತ್ತದೆ.

ರೋಷಗೊಂಡ ಋಷಿ, ಕೊಂಬೆಯ ಮೇಲೆ ಕುಳಿತ ಹಕ್ಕಿಯನ್ನು ಗೋಣು ಎತ್ತಿ ನೋಡುತ್ತಾನೆ. ನೋಡಿದ ಮಾತ್ರಕ್ಕೆ ಆತನ ಕಣ್ಣುಗಳಿಂದ ಹೊರಟ ಕಿಡಿಗಳು ಆ ಪಕ್ಷಿಯನ್ನು ಸುಟ್ಟು ಹಾಕುತ್ತದೆ. ತನ್ನ ತಪಶಕ್ತಿಗೆ ಬೆರಗಾದ ಆ ಋಷಿಯು ತನ್ನ ಧ್ಯಾನ, ತಪಸ್ಸು ಫಲಿಸಿದೆ ಎಂದು ಹಿಗ್ಗುತ್ತಾ, ನಾನಿನ್ನು ಯಾರನ್ನು ಬೇಕಾದರೂ ಅಂಜಿಸಿ ಬದುಕಬಹುದೆಂದು ಸಮೀಪದ ಊರೊಳಗೆ ಪ್ರವೇಶ ಮಾಡಿ, ಒಂದು ಮನೆಯ ಮುಂದೆ ನಿಂತು ಭಿಕ್ಷಾಂದೇಹಿ ಎಂದು ಕೂಗುತ್ತಾನೆ.

ಒಂದು.. ಎರಡು.. ಮೂರು… ಸಾರಿ ಕೂಗಿದರೂ ಯಾರೂ ಬರದಾಗ ಕ್ರೋಧಾವಿಷ್ಟನಾಗಿ ಮತ್ತೊಮ್ಮೆ ಭವತಿ ಭಿಕ್ಷಾಂದೇಹಿ ಎಂದು ಕರ್ಕಶವಾಗಿಯೇ ಅರಚು ತ್ತಾನೆ. ಆಗ ಕೈಯಲ್ಲಿ ಭಿಕ್ಷೆ ತಂದ ಒಬ್ಬ ಹೆಂಗಸು ‘ಕ್ಷಮಿಸಿ ಸ್ವಾಮಿ, ನನ್ನ ಗಂಡನ ಆರೋಗ್ಯ ಸರಿಯಿಲ್ಲ, ಅವರ ಸೇವೆಯಲ್ಲಿದ್ದೆ, ಬರುವುದು ತಡವಾಯಿತು’ ಎನ್ನುತ್ತಾಳೆ. ಈ ತಪಸ್ವಿಗಿಂತ ನಿನ್ನ ಸಾಮಾನ್ಯ ಮನುಷ್ಯನಾದ ಗಂಡನ ಸೇವೆಯೇ ಹೆಚ್ಚಾಯಿತೇ? ಎಂದು ಹೂಂಕರಿಸಿ, ಕಣ್ಣುಗಳಿಂದ ಕೆಂಡಗಳನ್ನು ಉಗುಳುತ್ತಾ, ಆಕೆಯನ್ನು ದುರುಗುಟ್ಟಿ ನೋಡುತ್ತಾನೆ. ಆದರೆ ಆ ಕಣ್ಣಿನ ನೋಟಕ್ಕೆ ಬೆದರದ ಆ ಗೃಹಿಣಿ ‘ಸ್ವಾಮಿ.. ತಪಸ್ವಿಗಳಾದ ನಿಮಗೆ ಈ ಕ್ರೋಧ ಒಳ್ಳೆಯ ದಲ್ಲ, ಹಾಗೆ ನೀವು ಕೆಂಡದಂತೆ ಉರಿಯುವ ಕಣ್ಣುಗಳಿಂದ ನೋಡಿದ ಮಾತ್ರಕ್ಕೆ ಉರಿದು ಸುಟ್ಟು ಬೂದಿಯಾಗಿ ನಿಮ್ಮ ಮುಂದೆ ಬೀಳಲು, ಅರಣ್ಯದಲ್ಲಿ ನೀವು ಕುಳಿತಿದ್ದ ಮರದ ಮೇಲಿನ ಪಕ್ಷಿಯು ನಾನಲ್ಲ’ ಎಂದು ಬಿಡುತ್ತಾಳೆ.

ಹೌಹಾರಿದ ತಪಸ್ವಿ ಆಕೆಯ ಕಾಲ ಬಳಿಯೇ ಕುಸಿಯುತ್ತಾನೆ. ಆಗ ಆಕೆಯು ‘ಯೋಗದಿಂದ ಕರ್ಮದಲ್ಲಿ ಕುಶಲತೆ ಬರುತ್ತದೆ, ಅಲ್ಲದೇ ಕುಶಲತೆಯಿಂದ ಮಾಡುವ ಸೇವಾ ಕರ್ಮವೂ ಯೋಗ, ತಪಸ್ಸು, ಧ್ಯಾನ ಎನಿಸಿಕೊಳ್ಳುತ್ತದೆ. ನನ್ನ ಪತಿ ಸೇವೆಯೇ ನನಗೆ ಎಲ್ಲವನ್ನೂ ನೀಡುವ ತಪಸ್ಸು’ ಎನ್ನುತ್ತಾಳೆ. ಮಾಡುವ ಸೇವೆ, ನಡೆ, ನುಡಿ, ಸ್ನೇಹ, ಸೌಹಾರ್ದ, ಅನುಕಂಪ, ಪರಹಿತ ಚಿಂತನೆಗಳು ನಿಮ್ಮ ದಿನಚರಿಯಲ್ಲಿ ಬಂದರೆ ನೀವೂ ಒಬ್ಬ ಯೋಗಿಯೇ. ಧ್ಯಾನ, ಯೋಗ ಬೇಡವೆಂದು ನಾನು ಹೇಳುತ್ತಿಲ್ಲ. ಇವನ್ನೂ ಖಂಡಿತ ಮಾಡಿ, ಆದರೆ, ಇವುಗಳಿಂದ ಸಂಚಿತವಾದ ಶಕ್ತಿ, ಶುದ್ಧತೆಗಳನ್ನು ಸುತ್ತಲಿನ ಜನರ ಕಷ್ಟಗಳಿಗೆ ಬಳಸಿರಿ.

ಚರಂಡಿಯಲ್ಲೋ, ದಾರಿಯಲ್ಲೋ ಬಿದ್ದ ಮುದುಕನನ್ನು, ಮಹಿಳೆ, ಮಕ್ಕಳನ್ನೂ ಎತ್ತದೇ, ನಿಮ್ಮ ಗಾಡಿಯಲ್ಲಿ ಅವರನ್ನು ಅವರ ಮನೆಗೆ ಮುಟ್ಟಿಸದೇ “ಮೆಡಿಟೇಷನ್ ಕ್ಲಾಸ್‌ಗೆ ಟೈಮ್ ಆಯಿತು” ಎಂದು ಹೋಗಬೇಡಿ ಅಷ್ಟೆ.