ಯಡಿಯೂರಪ್ಪನವರ ನಂತರ ಬರೋಬ್ಬರಿ 22 ತಿಂಗಳ ಬಳಿಕ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಿದ್ದಾರೆ
ವಿಶೇಷ ವರದಿ: ಅರವಿಂದ ಬಿರಾದಾರ, ವಿಜಯಪುರ
ಆಲಮಟ್ಟಿಯಲ್ಲಿ ಕೃಷ್ಣೆಗೆ ಅಡ್ಡಲಾಗಿರುವ ಲಾಲ ಬಹದ್ದೂರ್ ಶಾಸ್ತ್ರೀ ಜಲಾಶಯ ತುಂಬಿ ನಿಂತಿದೆ. ಆದರೆ ತುಂಬಿದ ಕೃಷ್ಣೆಗೆ ಮುಖ್ಯಮಂತ್ರಿ ಯಾವಾಗ ಬಾಗಿನ
ಅರ್ಪಿಸುತ್ತಾರೆ ಎಂದು ಕೃಷ್ಣೆಯ ಒಡಲ ಮಕ್ಕಳು ಕಾತರದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ.
2019ರ ಆ.5ರಂದು ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಬಿ.ಎಸ್ .ಯಡಿಯೂರಪ್ಪ ನವರು ಕೃಷ್ಣೆಗೆ ಬಾಗಿನ ಅರ್ಪಿಸಿದ್ದರು. ಅದಾದ ನಂತರ ಬರೋಬ್ಬರಿ 22 ತಿಂಗಳ ಬಳಿಕ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲು ಬರುತ್ತಿದ್ದಾರೆ. ಇದೆ ತಿಂಗಳ 21ರಂದು ಉತ್ತರ ಕರ್ನಾಟಕದವರೆ ಆದ ಬಸವರಾಜ ಬೊಮ್ಮಾಯಿ ಯವರು ಬಾಗಿನ ಅರ್ಪಿಸಲಿದ್ದಾರೆ.
ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬಂದು ತಿಂಗಳುಗಟ್ಟಲೇ ಲಕ್ಷಾಂತರ ಕ್ಯೂಸೆಕ್ ನೀರು ಜಲಾಶಯದಿಂದ ಹೊರಬಿಡಲಾಗಿತ್ತು. ಇದೀಗ ಕೃಷ್ಣೆ ಒಡಲು ತುಂಬಿದ್ದು, ಸರಕಾರ ಕೃಷ್ಣೆಗೆ ಸರಕಾರದಿಂದ ಬಾಗಿನ ಅರ್ಪಿಸಲು ತಯಾರಿ ನಡೆಸಿದೆ. ಈ ಹಿಂದೆ 2018ರಲ್ಲಿ ಬಾಗಿನ ಅರ್ಪಣೆಗೆ ದಿನಾಂಕ ನಿಗದಿ ಯಾಗಿದ್ದರೂ ಹುಬ್ಬಳ್ಳಿ ಯಲ್ಲಿ ಮಳೆಯಾಗಿದ್ದ ರಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಬಾಗಿನ ಅರ್ಪಿಸಲು ಆಗಮಿಸುತ್ತಾರೆ ಎಂದು ಇಡೀ ಪ್ರದೇಶವನ್ನು ನವ ವಧುವಿ ನಂತೆ ಶೃಂಗರಿಸಲಾಗಿತ್ತು. ಆದರೆ ಇಬ್ಬರೂ ನಾಯಕರು ಸಮಾರಂಭಕ್ಕೆ ಬರದೇ ಮಳೆ ನೆಪ ಹೇಳಿ ಕಾರ್ಯಕ್ರಮ ರದ್ದುಗೊಳಿಸಿದ್ದರು.
ಈಗ ಬೊಮ್ಮಾಯಿಯವರು ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಗೊಳಿಸಿದ್ದು ಈ ಕಾರ್ಯಕ್ರಮವಾದರೂ ಯಾವುದೇ ರೀತಿಯ ಅಡೆತಡೆ ಆಗದೆ ಬಾಗಿನ ಅರ್ಪಿಸಲಿ ಎಂಬುದು ಈ ಭಾಗದ ಜನರ ಆಸೆಯಾಗಿದೆ.
ಕಾವೇರಿಗೆ ಇರುವ ಮಹತ್ವ ಕೃಷ್ಣೆಗೇಕಿಲ್ಲ ?
2020 ಅ.22ರಂದು ಕೃಷ್ಣೆಗೆ ನಿಗದಿಯಾಗಿದ್ದ ಬಾಗಿನ ಅರ್ಪಣೆ ಹವಾಮಾನ ವೈಪರೀತ್ಯದಿಂದ ನೆರೆ ಹಾವಳಿಗೆ ತುತ್ತಾಗಿದ್ದ ಪ್ರದೇಶ ವೀಕ್ಷಿಸಿ ನಂತರ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪನವರು ಆಲಮಟ್ಟಿಗೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ ಎಂದು ಜಿಲ್ಲೆಯ ಜನಪ್ರತಿನಿಧಿಗಳು, ರೈತರು, ಮಠಾಧೀಶರು ಆಗಮಿಸಿ ದ್ದರು. ಆದರೆ ಆ ಕಾರ್ಯಕ್ರಮವೂ ರದ್ದಾಗಿತ್ತು. ಕಾವೇರಿ ನದಿ ತುಂಬುವ ವೇಳೆಯಲ್ಲಿ ಜಲಾಶಯಕ್ಕೆ ಹಿಂದಿನ ಎಲ್ಲ ಸರಕಾರಗಳು ಬಾಗಿನ ಅರ್ಪಿಸುತ್ತಲೇ ಬಂದಿವೆ. ಕೃಷ್ಣೆ ತುಂಬಿದ್ದರೂ ಬಾಗಿನ ಅರ್ಪಿಸಲು ಇಲ್ಲಸಲ್ಲದ ನೆಪಗಳು ಕೇಳಿ ಬರುತ್ತಲೇ ಇತ್ತು. ಇದರಿಂದ ಕೃಷ್ಣೆಯ ಮಕ್ಕಳು, ನಮ್ಮ ಸರಕಾರಗಳು ಕಾವೇರಿಗೆ ಕೊಡುವ ಮಹತ್ವ ಕೃಷ್ಣೆಗೇಕಿಲ್ಲ? ಎಂದು ಪ್ರಶ್ನಿಸುತ್ತಿದ್ದರು.