Thursday, 12th December 2024

ಒಕ್ಕೂಟ ಭಾರತವೆಂದು ಅರಚುವ ಅತೃಪ್ತ ಆತ್ಮಗಳಿಗೆ 3 ನಿಮಿಷ ಮೌನ !

ವೀಕೆಂಡ್ ವಿಥ್ ಮೋಹನ್

ಮೋಹನ್ ವಿಶ್ವ

camohanbn@gmail.com

ಭಾರತೀಯರೆಲ್ಲರೂ ಆಗ 15ರಂದು 75ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭದಲ್ಲಿ ಕೆಲವು ಕನ್ನಡ ಹೋರಾಟ ಗಾರರು ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷವಾಗಿ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಬಿಟ್ಟಿ ಪ್ರಚಾರದ ತೆವಲಿನ ಹಿಂದೆ ಬಿದ್ದಿರುವ ಕೆಲವು ಅತೃಪ್ತ ಆತ್ಮಗಳು ತಮ್ಮ ಅಜ್ಞಾನದ ಪರಮಾವಧಿಯಿಂದ ಆಗಾಗ ಈ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತಾರೆ. ತಾಲಿಬಾನಿಗಳ ತಲೆಯಲ್ಲಿ ಅಜ್ಞಾನವು ತಾಂಡವವಾಡುವ ಹಾಗೆ ಇವರ ತಲೆಯಲ್ಲಿಯೂ ತಾಂಡವವಾಡುತ್ತಿದೆ ಇಂತಹ ಮನಸ್ಥಿತಿಯವರಿಗೆ ಎಷ್ಟು ನೇರವಾಗಿ ಹೇಳಿದರೂ ಬುದ್ದಿ ಬರುವುದಿಲ್ಲ. ಬ್ರಿಟಿಷರಿಂದ ಮುಕ್ತಿ ಪಡೆಯಲು ಅಖಂಡ ಭಾರತದ ಹೋರಾಟಗಾರರು ನಡೆಸಿ ದಂತಹ ಚಳುವಳಿ ಗಳ ಅರಿವಿಲ್ಲದ ಅತೃಪ್ತ ಆತ್ಮಗಳು ಕನ್ನಡದ ಹೋರಾಟದ ನೆಪದಲ್ಲಿ ಭಾರತೀಯ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಟೊಕಿಯೋ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಾಗ ಇಡೀ ದೇಶವೇ ಆನಂದದಲ್ಲಿ ಮಿಂದೆದ್ದಿತ್ತು ಆದರೆ ಇತ್ತ ಕನ್ನಡ ಹೋರಾಟ ಗಾರನೊಬ್ಬ ಒಕ್ಕೂಟ ಭಾರತವು ಚಿನ್ನದ ಪದಕ ಗೆದ್ದಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ.

ಭಾರತದ ಸಂವಿಧಾನದ ಮೊದಲನೇ ಪರಿಚ್ಛಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಸಂವಿಧಾನದಲ್ಲಿ ಅದೇ ರೀತಿ ಬರೆಯಲಾಗಿದೆಯೆಂದು ವಾದವನ್ನೂ ಸಹ ಮಾಡಿದ್ದ. ಒಕ್ಕೂಟ ದೇಶ ಹಾಗೂ ರಾಜ್ಯಗಳ ಒಕ್ಕೂಟಕ್ಕೂ ವ್ಯತ್ಯಾಸ ತಿಳಿಯದೆ ಮಾತನಾಡುವುದೆಂದರೆ ಇದೇ. ಅಮೆರಿಕವನ್ನು UNITED STATES OF AMERICA ಎಂದು ಕರೆಯುತ್ತಾರೆಹಾಗಾದರೆ ಅಮೆರಿಕವು ಒಕ್ಕೂಟ ದೇಶವೇ ? ಭಾರತದ ಸಂವಿಧಾನವು ಹಲವು ಕಡೆ ಕೆನಡಾ ದೇಶದ ಸಂವಿಧಾನವನ್ನು ಹೋಲುತ್ತದೆ ಕೆನಡಾ ದೇಶದಲ್ಲಿ ಒಟ್ಟು 10 ರಾಜ್ಯಗಳಿವೆ ಹಾಗಾದರೆ ಕೆನಡಾ ಒಕ್ಕೂಟ ದೇಶವೇ? ಭಾರತೀಯ ಸಂವಿಧಾನದವನ್ನು -ಡರಲ ಆಧಾರದ ಮೇಲೆ ರಚಿಸ ಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವನ್ನು ಅಳುತ್ತಿದ್ದಂತಹ ಹಲವು ರಾಜ ಮನೆತನಗಳು 1947ರ ನಂತರ ಸ್ಥಾಪನೆಯಾದಂತಹ ಪ್ರಜಾಪ್ರಭುತ್ವದಲ್ಲಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಗುರುತಿಸುವಿಕೆಯಾಯಿತು. ಸಂವಿಧಾನದ ಪಿತಾಮಹ ಅಂಬೇಡ್ಕರ್‌ರವರೇ ಎಲ್ಲಿಯೂ ಸಹ ಒಕ್ಕೂಟ ಭಾರತವೆಂದು ಹೇಳಲಿಲ್ಲ ದಿರುವಾಗ ಈ ಅರ್ಧಂಬರ್ಧ ತಿಳಿದಿರುವ ಅತೃಪ್ತರು ಬಾಯಿಗೆ ಬಂದಂತೆ ಕರ್ನಾಟಕವನ್ನು ಪ್ರತ್ಯೇಕಿಸುವ ಮಾತುಗಳನ್ನಾಡುತ್ತಾರೆ.

ಬ್ರಿಟಿಷರ ವಿರುದ್ಧ ಹೋರಾಡಿದಂತಹ ಹಲವು ಹೋರಾಟಗಾರರು ಭಾರತಕ್ಕೆ ಸ್ವಾತಂತ್ರ್ಯಬೇಕೆಂದು ಹೋರಾಡಿದರೆ ಹೊರತು ಅವರವರ ರಾಜ್ಯಕ್ಕೆ ಸ್ವಾತಂತ್ರ್ಯ
ಬೇಕೆಂದು ಹೋರಾಡಲಿಲ್ಲ. ಆ ಹೋರಾಟಗಾರರ ಕಲ್ಪನೆಯಲ್ಲಿ ಕೇವಲ ಅಖಂಡ ಭಾರತ ಹಾಗೂ ಭಾರತ ಮಾತೆಯೊಬ್ಬಳೇ ಕಾಣುತ್ತಿದ್ದಳು. ತಮಿಳುನಾಡಿನ
ಚೆಟ್ಟಿಯಾರ್‌ಗಳು ಆಗರ್ಭ ಶ್ರೀಮಂತರು ಆಗ್ನೇಯ ಏಷ್ಯಾ ಭಾಗದ ವಿಯೆಟ್ನಾಂ ಸಿಂಗಾಪುರ್ ಮಲೇಷ್ಯಾಗಳಲ್ಲಿ ಹಲವು ದಶಕಗಳಿಂದ ನೆಲೆಸಿದ್ದಾರೆ. ಸುಭಾಷ್ ಚಂದ್ರ ಬೋಸರು ಬ್ರಿಟಿಷರ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷ ತೊರೆದು ವಿಯೆಟ್ನಾಂ ದೇಶದ ಸೈಗಾನ್ ನಗರಕ್ಕೆ ಬಂದಾಗ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಲು ಬೇಕಾದಂತಹ ಹಣ ಸಂಗ್ರಹ ಮಾಡಿ ಕೊಟ್ಟಿದ್ದು ಅಲ್ಲಿನ ಚೆಟ್ಟಿಯಾರ್‌ಗಳು.

ಅವರೆಂದು ಸಹ ತಾವು ತಮಿಳುನಾಡಿನವರು ಬೋಸರು ಪಶ್ಚಿಮ ಬಂಗಾಳದವರೆಂದು ಯೋಚಿಸಲಿಲ್ಲ ಅಥವಾ ನಾವ್ಯಾಕೆ ಉತ್ತರ ಭಾರತದವರಿಗೆ ಸಹಾಯ ಮಾಡಬೇಕೆಂದು ಅವರಿಗನಿಸಿರಲಿಲ್ಲ. ಆದರೆ ಈಗ ನೋಡಿ ತಮಿಳುನಾಡಿನ ಸುಳ್ಳು ದ್ರಾವಿಡ ಸಿದ್ಧಾಂತವನ್ನು ಪ್ರತಿಪಾದಿಸುವವರು ಉತ್ತರ ಹಾಗೂ ದಕ್ಷಿಣವೆಂಬ ಮಾತುಗಳನ್ನು ಯಾವಾಗಲು ಆಡುತ್ತಲೇ ಇರುತ್ತಾರೆ. 1891ರಲ್ಲಿ ಅಮೆರಿಕ ದೇಶದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾ ನಂದರು ಭಾರತವನ್ನು ಪ್ರತಿನಿಧಿಸಲು ಕಾರಣವಾದದ್ದು ಚಿಕ್ಕಮಗಳೂರಿನ ಅಳಸಿಂಗ ಪೆರುಮಾಳ್ ಅದೆಷ್ಟು ಕನ್ನಡ ಹೋರಾಟಗಾರರಿಗೆ ಈ ವಿಷಯ ಗೊತ್ತು ? ಹಿಂದೂ ಧರ್ಮದ ಬಗ್ಗೆ ಅಮೆರಿಕ ದೇಶದಲ್ಲಿ ಮಾತನಾಡಬಲ್ಲ ವ್ಯಕ್ತಿಯೊಬ್ಬನನ್ನು ಗುರುತಿಸಿದ್ದು ಒಬ್ಬ ಕನ್ನಡಿಗ.

ಅಂದು ಅಳಸಿಂಗ ಪೆರುಮಾಳ್ ವಿವೇಕಾನಂದರನ್ನು ಒಬ್ಬ ಪಶ್ಚಿಮ ಬಂಗಾಳದ ಸಂತನ್ನಾಗಿ ನೋಡಲಿಲ್ಲ ಬದಲಾಗಿ ಭಾರತೀಯ ಹಿಂದೂ ಧರ್ಮ ಸಂಸ್ಕೃತಿಯ ಪ್ರತಿನಿಧಿಯನ್ನಾಗಿ ನೋಡಿದ್ದರು. ಇಂದಿನ ಕೆಲ ಕನ್ನಡ ಹೋರಾಟಗಾರರೇನಾದರೂ ಅಂದು ಇದ್ದಿದ್ದರೆ ಬಹುಷ್ಯ ಕರ್ನಾಟಕ ಹಾಗು ಪಶ್ಚಿಮ ಬಂಗಾಳವೆಂದು ಹೋರಾಟ ಮಾಡಿ ಉತ್ತರ ಭಾರತದವರು ಹೋಗುವುದು ಬೇಡವೆನ್ನುತ್ತಿದ್ದರು. ಸ್ವಾಮಿ ವಿವೇಕಾನಂದರನ್ನು ಸರ್ವ ಧರ್ಮ ಸಮ್ಮೇಳನಕ್ಕೆ ಕಳುಹಿಸಬೇಕೆಂಬ ಒಂದೇ ಒಂದು ಉದ್ದೇಶದಿಂದ ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡಿ ಅಂದಿನ ಕಾಲದಲ್ಲಿಯೇ ಸುಮಾರು 4000 ರು.ಯನ್ನು ಅಳಸಿಂಗ ಪೆರುಮಾಳ್ ಸಂಗ್ರಹಿಸಿದ್ದರು. ಈ ವಿಷಯವು ಸ್ವಾತಂತ್ರ್ಯ ಹೋರಾಟದ ಪ್ರಮುಖ ಭಾಗವಾಗದಿದ್ದರೂ ಸಹ ರಾಜ್ಯ ಭಾಷೆಗಳ ಗಡಿಯನ್ನು ಮೀರಿ ಭಾರತವೆಂಬ ಒಂದೇ
ಒಂದು ಅಭಿಮಾನದಿಂದ ಮಾಡಿದ ಪ್ರಮುಖ ಕೆಲಸಕ್ಕೊಂದು ಉದಾಹರಣೆಯಾಗಿದೆ.

ಕನ್ನಡದ ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆಯನ್ನು ಶಾಲೆಗಳಲ್ಲಿ ಪ್ರಾರ್ಥನೆಯನ್ನಾಗಿ ಹೇಳಿಕೊಂಡು ಬಂದಿರುವ ನಾವುಗಳು ಕಲಿತಿದ್ದು ಜೈ ಭಾರತ
ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ. ತಾಯಿ ಭಾರತಾಂಬೆಯ ಮಗಳು ಕರ್ನಾಟಕ ಮಾತೆ ಎಂದು ಕನ್ನಡದ ಶ್ರೇಷ್ಠ ಕವಿಯೇ ಹೇಳಿರುವಾಗ ಈ ಹೋರಾಟಗಾರರದ್ದೇನು ತಕರಾರು ? ಜನನಿಯ ಜೋಗುಳ ವೇದದ ಘೋಷವೆಂದು ಭಾರತಾಂಬೆಯ ಮಗಳಾದ ಕರ್ನಾಟಕ ಮಾತೆಗೆ ವೇದವನ್ನೇ
ಲಾಲಿ ಹಾಡಾಗಿ ಹಾಡಿದವಳು ಭಾರತ ಮಾತೆಯೆಂಬ ಅದ್ಭುತ ಸಾಲುಗಳನ್ನು ನಾಡಗೀತೆಯಲ್ಲಿ ಬರೆದದ್ದು ಕುವೆಂಪು ಚೈತನ್ಯ ಪರಮಹಂಸ ವಿವೇಕರ ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂಬ ಸಾಲುಗಳಲ್ಲಿ ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದರನ್ನು ತಂದವರು ಕನ್ನಡದ ಕವಿ ಕುವೆಂಪು.

ಕುವೆಂಪುರವರು ನಾಡಗೀತೆಯನ್ನು ರಚಿಸುವಾಗ ಭಾರತವು ಗಣರಾಜ್ಯವಾಗಿತ್ತು ಅವರೆಂದೂ ಸಹ ಕರ್ನಾಟಕದ ನಾಡಗೀತೆಯನ್ನು ಬರೆಯುವಾಗ ಪಶ್ಚಿಮ
ಬಂಗಾಳದ ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರನ್ನು ಒಕ್ಕೂಟ ಭಾರತದ ಸಂತರೆನ್ನಲಿಲ್ಲ. ಇಂದಿನ ಕೆಲ ಕನ್ನಡ ಹೋರಾಟಗಾರರಿಗೆ ಅರಗಿಸಿ ಕೊಳ್ಳಲು ಆಗದ ನಾಡಗೀತೆಯನ್ನು ಕುವೆಂಪು ಬರೆದಿzರೆ ತಾವು ಏನೇ ಹೇಳಿದರೂ ಭಾರತೀಯರು ಒಪ್ಪುವುದಕ್ಕೆ ಸಿದ್ಧವಿಲ್ಲವೆಂಬ ಅಂಶವೂ ಸಹ ಅವರಿಗೆ ತಿಳಿದಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಿಂದಿವಾಲಗಳ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರಿಗೆ ಮುಸಲ್ಮಾನರ ಉರ್ದು ಭಾಷೆ ಯಾಕೆ ಕಾಣುತ್ತಿಲ್ಲ ? ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ನೂರಾರು ವರ್ಷಗಳಿಂದ ಕನ್ನಡವನ್ನು ಸರಿಯಾಗಿ ಕಲಿಯದೇ ಉರ್ದು ಭಾಷೆಯನ್ನು ಮಾತನಾಡುವವರ ವಿರುದ್ಧ
ಹೋರಾಡುವ ಧೈರ್ಯ ಇವರಿಗಿಲ್ಲ.

ತಮಿಳುನಾಡು ಕೇರಳ ರಾಜ್ಯಗಳಲ್ಲಿಲ್ಲದ ಉರ್ದು ಶಾಲೆಗಳು ಕರ್ನಾಟಕದಲ್ಲಿ ಮಾತ್ರ ಏಕಿವೆ ? ಕೇರಳದಲ್ಲಿ ಮಲಯಾಳಂ ಕಲೆಯುವ ಮುಸಲ್ಮಾನರು ಕರ್ನಾಟಕದಲ್ಲಿ ಕನ್ನಡ ಕಲೆಯಲು ಹಿಂದೇಟು ಹಾಕುತ್ತಾರೆ ತಮಿಳುನಾಡಿನಲ್ಲಿ ತಮಿಳು ಭಾಷೆಯನ್ನು ಕಳೆಯುವ ಮುಸಲ್ಮಾನರು ಕರ್ನಾಟಕದಲ್ಲಿ ಕನ್ನಡ ಕಲಿಯಲು ಇಚ್ಛಿಸುವುದಿಲ್ಲ. ಟಿಪ್ಪು ಸುಲ್ತಾನನ ಕಾಲದಲ್ಲಿ ಶುರುವಾದಂತಹ ಉರ್ದು ಹೇರಿಕೆಯ ಬಗ್ಗೆ ಒಕ್ಕೂಟ ಭಾರತದ ಬಗ್ಗೆ ಮಾತನಾಡುವ ಹೋರಾಟಗಾರ
ಮಾತನಾಡುವುದಿಲ್ಲ. ಕೊತ್ತಂಬರಿ ಸೊಪ್ಪು ಎಂದು ಸರಿಯಾಗಿ ಹೇಳಲು ಬಾರದ ಮುಸಲ್ಮಾನ್ ಮಹಿಳಾ ಮಣಿಗಳಿದ್ದಾರೆ.

ಕೆಜಿ ಹಳ್ಳಿ, ಡಿಜೆ ಹಳ್ಳಿ, ಗೋರಿಪಾಳ್ಯ, ಶಿವಾಜಿನಗರ, ಪಾದರಾಯನಪುರದ ರಸ್ತೆಗಳಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವ ಧೈರ್ಯ ತೋರಿಸಲಿ ಅಥವಾ ಕನ್ನಡದ ಕವಿಗಳ ಪ್ರತಿಮೆಯನ್ನಾದರೂ ಅನಾವರಣಗೊಳಿಸುವ ಧೈರ್ಯ ತೋರಲಿ. ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಕನ್ನಡವನ್ನು ಕಲಿಸಿ ತೋರಿಸಬೇಕಿದೆ ಕೇವಲ ಕನ್ನಡವಿಲ್ಲದ ಫಲಕಗಳನ್ನು ತೆಗೆದರೆ ಕನ್ನಡದ ವಿರುದ್ಧ ಹೋರಾಡಿದ ಹಾಗಲ್ಲ ಅಥವಾ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಿದ ತಕ್ಷಣ ತಾನೊಬ್ಬ ಕನ್ನಡ ಹೋರಾಟಗಾರನಾಗುವುದಿಲ್ಲ.

ಕೇಂದ್ರವು GST ಬಾಕಿಯನ್ನು ಕೊಡುವಲ್ಲಿ ತಡ ಮಾಡುತ್ತಿದೆಯೆಂಬ ಒಂದೇ ಒಂದು ಕಾರಣಕ್ಕೆ ಪರೋಕ್ಷವಾಗಿ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸುವ ಯೋಚನಾ ಲಹರಿಯ ಅತೃಪ್ತ ಆತ್ಮಗಳಿಗೆ ಮೂರು ನಿಮಿಷದ ಮೌನಾಚರಣೆ ಮಾಡಬೇಕಷ್ಟೆ. ನಾಡು ನೆಲ ಜಲದ ವಿಷಯ ಬಂದಾಗ ಕರ್ನಾಟಕವೇ ಪ್ರಥಮ ಹಾಗಂತ ತಾಯಿ ಭಾರತಿಯನ್ನು ಬಿಟ್ಟು ಕೊಡುವ ಮಾತೆ ಇಲ್ಲವೆಂಬ ಅಂಶವನ್ನು ಅರಿತುಕೊಳ್ಳಬೇಕು. ಕನ್ನಡ ಭಾಷಾ ಶುದ್ದೀಕರಣದಲ್ಲಿ ಸಂಸ್ಕೃತ ಬಗ್ಗೆ ಮಾತ್ರ
ಮಾತನಾಡುವ ಕೆಲ ಹೋರಾಟಗಾರರು ರಾಜ್ಯ ಸರಕಾರದ ಕಂದಾಯ ಇಲಾಖೆಯ ಕಡತದಲ್ಲಿರುವ ಟಿಪ್ಪು ಸುಲ್ತಾನನು ಹೇರಿರುವ ಉರ್ದು ಶುದ್ದೀಕರಣದ ಬಗ್ಗೆ ಯಾಕೆ ಮಾತನಾಡುವುದಿಲ್ಲ ? ಜಮೀನಿನ ವಿವರವನ್ನು ನೀಡುವ ಪಹಣಿ ಯಾವ ಭಾಷೆ ? ಪಹಣಿಯಲ್ಲಿ ಕಾಣ ಸಿಗುವ ಮತ್ತೊಂದು ಪದ ಖರಾಬು ಇದು ಯಾವ ಭಾಷೆ ? ಹಳೇ ಮೈಸೂರಿನ ದುಬಾರೆ ಮತ್ತಿಗೋಡು ಬಳ್ಳೆ ಆನೆ ಶಿಬಿರದಲ್ಲಿ ಆನೆಗಳಿಗೆ ಮಾವುತರು ನೀಡುವ ಸೂಚನೆಯ ಭಾಷೆ ಉರ್ದು ಹಾಗು ಬಂಗಾಳಿ ಟಿಪ್ಪು ಸುಲ್ತಾನನ ಕಾಲದಲ್ಲಿ ಆನೆಗಳನ್ನು ಹಿಡಿದು ಪಳಗಿಸುವ ಸಂದರ್ಭದಲ್ಲಿ ಮಾವುತರಿಗೆ ತರಬೇತಿ ನೀಡುವಾಗ ಬಳಸಿದ್ದಂತಹ ಭಾಷೆ ಉರ್ದು.

ಅದೇ ಭಾಷೆಯು ಮಾವುತರ ಪೀಳಿಗೆಗಳಿಗೆ ಮುಂದುವರೆದುಕೊಂಡು ಬಂದಿದೆ. ಹಾಗಂತ ದಸರಾ ಉತ್ಸವದ ವೇಳೆ ಚಾಮುಂಡಿ ದೇವಿಯ ವಿಗ್ರಹವನ್ನು ಹೊತ್ತು
ತರುವ ಆನೆಯ ಮುಂದೆ ಹೋಗಿ ಪ್ರತಿಭಟನೆ ಮಾಡುತ್ತಾರಾ ? ಹಿಂದಿ ಹೇರಿಕೆಯ ಮೊದಲು ನಮ್ಮ ಮೇಲಾಗಿರುವ ಉರ್ದು ಹೇರಿಕೆಯನ್ನು ವಿರೋದಿಸುವ ಧೈರ್ಯ ತೋರುವುದಿಲ್ಲ ಯಾಕೆ ? ಕರ್ನಾಟಕದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ GST ಸಂಗ್ರಹವಾಗುವುದು ಬೆಂಗಳೂರಿನಲ್ಲಿ ಹಾಗಂತ ನಾವು ನಮ್ಮ ಪಾಲಿನ ತೆರಿಗೆ ಹಣವನ್ನು ಮೈಸೂರಿಗೆ ಕೊಡುವುದಿಲ್ಲವೆಂದು ಹೇಳಿ ಹೋರಾಟ ಮಾಡಲಾದೀತೇ? ಹುಬ್ಬಳ್ಳಿ, ಬೆಳಗಾವಿ ನಗರಗಳಿಗೆ ಕಡಿಮೆ ಅನುದಾನವನ್ನು ನೀಡಲಾ ದೀತೇ? ಹಿಂದುಳಿದ ಜಿಗಳಿಂದ ಅತ್ಯಂತ ಕಡಿಮೆ ತೆರಿಗೆ ಸಂಗ್ರಹ ವಾಗುತ್ತದೆ ಆದರೆ ಆ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತದೆ. ಕರ್ನಾಟಕದ ಒಟ್ಟು ಜಿಲ್ಲೆಗಳು ಹೇಗೆ ನಮ್ಮ ಅಣ್ಣ ತಮ್ಮಂದಿರೋ ಭಾರತದ ಅಷ್ಟು ರಾಜ್ಯಗಳು ನಮ್ಮ ಅಣ್ಣ ತಮ್ಮಂದಿರು.

ತೆರಿಗೆ ಬಾಕಿ ನೀಡುವಲ್ಲಿ ವಿಳಂಬವಾಗಿರುವುದು ಸತ್ಯ ಹಾಗಂತ ಹೆತ್ತ ತಾಯಿಯ ಕಾಲು ಕತ್ತರಿಸುವ ಕೆಲಸ ಮಾಡಲಾದೀತೇ? ಜನಪ್ರತಿನಿಧಿಗಳ ಮೇಲೆ
ಒತ್ತಡ ಹೇರಿ ಬಾಕಿ ಇರುವ ಮೊತ್ತವನ್ನು ತರಿಸಿಕೊಳ್ಳಬೇಕೇ ಹೊರತು ಈ ರೀತಿಯ ಕೆಲಸವನ್ನು ಮಾಡಬಾರದು. ದೇಶ ವಿಭಜನೆಯ ಕರಾಳ ಮನಸ್ಥಿತಿ ಕೇವಲ ಕಮ್ಯುನಿಸ್ಟರಿಗೆ ಮಾತ್ರ ಬರಲು ಸಾಧ್ಯ ಅವರೆಂದೂ ಸಹ ದೇಶದ ಪರವಾಗಿ ನಿಂತಿಲ್ಲ ನಿಲ್ಲುವುದೂ ಇಲ್ಲ. ಒಂದು ದೇಶವನ್ನು ಸಾಕುವುದು ಒಂದು ಕುಟುಂಬವನ್ನು ಸಾಕುವುದಕ್ಕೆ ಸಮಾನ. ಕರ್ನಾಟಕದಲ್ಲಿರುವ ಹಿಂದುಳಿದ ಜಿಲ್ಲೆಗಳ ರೀತಿಯಲ್ಲಿಯೇ ಭಾರತದಲ್ಲಿಯೂ ಹಿಂದುಳಿದ ರಾಜ್ಯಗಳಿವೆ ರಾಜ್ಯ ಮಟ್ಟದಲ್ಲಿ ನಮ್ಮ ಹಿಂದುಳಿದ ಜಿಲ್ಲೆಗಳಿಗೆ ಕೊಟ್ಟ ಪ್ರಾತಿನಿಧ್ಯವನ್ನು ಸಮರ್ಥಿಸುವ ರೀತಿಯಲ್ಲಿಯೇ ಹಿಂದುಳಿದ ರಾಜ್ಯಗಳ ಅನುದಾನವನ್ನೂ ಸಮರ್ಥಿಸಿಕೊಳ್ಳಬೇಕು.

ಭಾರತ ಮಾತೆಯ ಪುತ್ರರು ಒಟ್ಟು ೨೮ ರಾಜ್ಯಗಳು ರಾಜ್ಯ ಮಟ್ಟದಲ್ಲಿ ಜಿಗಳಿಗೆ ತೆರಿಗೆಯ ಹಣ ಹಂಚಿಕೆಯಾಗುವ ರೀತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯಗಳಿಗೆ
ತೆರಿಗೆಯ ಹಣ ಹಂಚಿಕೆಯಾಗುತ್ತದೆ. ಒಂದಾನೊಂದು ಕಾಲದಲ್ಲಿ ಪಕ್ಕದ ತಮಿಳುನಾಡಿನಿಂದ ಮನೆ ಕಟ್ಟುವ ಕೆಲಸಗಾರರು ಬೆಂಗಳೂರಿಗೆ ಬರುತ್ತಿದ್ದರು ಜಯಲಲಿತಾ ಸರಕಾರ ಉಚಿತ ಯೋಜನೆಗಳ ಸರಮಾಲೆಯನ್ನು ನೀಡಲು ಶುರುಮಾಡಿದ ಮೇಲೆ ಕೆಲಸ ಮಾಡುವ ಅಗತ್ಯತೆಯಿಲ್ಲದ ಕಾರಣ ತಮಿಳುನಾಡಿನ ಜನ ಕೆಲಸವನ್ನರಸಿ ಬೆಂಗಳೂರಿಗೆ ಬರುವುದನ್ನು ನಿಲ್ಲಿಸಿಬಿಟ್ಟರು.

ಆದರೆ ತುಂಬಾ ಹಿಂದೆ ಬೆಂಗಳೂರಿಗೆ ಬಂದಂತಹ ಹಲವು ತಮಿಳು ಕುಟುಂಬಗಳು ಇಂದು ಬೆಂಗಳೂರಿನಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದಾರೆ. ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಹೂವುಹಣ್ಣು ಮಾರುವ ಬಹುತೇಕರು ತಮಿಳರು. ಸರಿಯಾಗಿ ಕನ್ನಡ ಮಾತನಾಡಲು ಬಾರದೆ ತಮಿಳಿನಲ್ಲಿಯೇ ವ್ಯವಹರಿಸುವ ಈ ತಮಿಳರ ಬಳಿ ಕನ್ನಡದವರಾದ ನಾವು ವ್ಯಾಪಾರ ಮಾಡಲಾಗುವುದಿಲ್ಲ. ಅವರ ಬಾಯಲ್ಲಿ ಬರುವ ಬೈಗುಳಗಳನ್ನು ಕೇಳಲಾಗುವುದಿಲ್ಲ ಅವರು ಹೇಳಿದ್ದಷ್ಟು ಹಣ ನೀಡದಿದ್ದರೆ ತಮಿಳಿನಲ್ಲಿ ಹೀನಾಯವಾಗಿ ಬೈದುಕೊಳ್ಳುತ್ತಿರುತ್ತಾರೆ. ಕನ್ನಡಿಗರು ಮಾರುಕಟ್ಟೆಗೆ ಹೋಗುವುದಕ್ಕೆ ಹಿಂದೇಟು ಹಾಕುವಂತಹ ಪರಿಸ್ಥಿತಿ ಕೃಷ್ಣ ರಾಜೇಂದ್ರ ಮಾರುಕಟ್ಟೆಯಲ್ಲಿ ನಿರ್ಮಾಣವಾಗಿದೆ.

ಇಡೀ ಮಾರುಕಟ್ಟೆಯನ್ನು ತಮಿಳು ವ್ಯಾಪಾರ ಮಾಫಿಯಾ ಅವರಿಸಿಕೊಂಡಿರುವಾಗ ಕನ್ನಡ ಹೋರಾಟಗಾರರು ಕನ್ನಡಿಗರ ಪರವಾಗಿ ಮಾರುಕಟ್ಟೆಯಲ್ಲಿ
ಹೋರಾಟ ಮಾಡಿದ್ದುಂಟೇ? ಅಥವಾ ತಮಿಳುನಾಡಿನವರಿಂದ ಕನ್ನಡದವರು ವ್ಯಾಪಾರ ಮಾಡಬಾರದು ನಮ್ಮದು ಬೇರೆ ರಾಜ್ಯ ಅವರದ್ದು ಬೇರೆ ರಾಜ್ಯವೆನ್ನಲು ಸಾಧ್ಯವೇ ? ಕಾವೇರಿ ಹಾಗೂ ಮೇಕೆದಾಟಿನ ವಿಷಯದಲ್ಲಿ ಕರ್ನಾಟಕದಲ್ಲಿನ ತಮಿಳರ ನಿಲುವೇನೆಂಬುದನ್ನು ಕೇಳಲು ಸಾಧ್ಯವೇ? ಅದೇ ರೀತಿ ತಮಿಳು ನಾಡಿನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಬಳಿ ಕಾವೇರಿ ಹಾಗು ಮೇಕೆದಾಟಿನ ವಿಷಯದಲ್ಲಿ ಕನ್ನಡಿಗರ ನಿಲುವೇನೆಂಬುದನ್ನು ಕೇಳಲು ಸಾಧ್ಯವೇ ? ಅವರನ್ನು ಕೇಳಿದರೂ ಸಹ ಅಲ್ಲಿನ ಹೋರಾಟಗಾರರ ಭಯದಿಂದ ಆಯಾ ರಾಜ್ಯದ ಪರವಾಗಿ ನಿಲ್ಲುತ್ತಾರಷ್ಟೆ. ನನ್ನ ವೈಯಕ್ತಿಕ ನಿಲುವಂತೂ ಕಾವೇರಿ ಹಾಗು ಮೇಕೆದಾಟಿನ ವಿಷಯದಲ್ಲಿ ಸ್ಪಷ್ಟನೆಗೆ ಕರ್ನಾಟಕವೇ ಮೊದಲು.

ರಾಜ್ಯವೆಂಬ ಪರಿಕಲ್ಪನೆಯೇ ಇಲ್ಲದ ಸಮಯದಲ್ಲಿ ಒಟ್ಟಾಗಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದಂತಹ ದೇಶ ಭಾರತ. ಜಾತಿ ಭಾಷೆ ನಾಡು ನುಡಿಯೆಂಬ ಬೇಧ ಭಾವವಿಲ್ಲದೇ ಹೋರಾಡಿ ಗಳಿಸಿಕೊಂಡಂತಹ ಸ್ವಾತಂತ್ರ್ಯ ನಮ್ಮದು. ಗುಜರಾತಿನಲ್ಲಿ ಹುಟ್ಟಿ ಬೆಳೆದ ಮಹಾತ್ಮಾ ಗಾಂಧೀಜಿ ಕರ್ನಾಟಕಕ್ಕೆ ಬರಲಿಲ್ಲವೇ? ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರು ಗುಜರಾತಿನ ಮಹಾತ್ಮ ಗಾಂಧಿಯನ್ನು ದೇಶದ ನಾಯಕನ್ನಾಗಿ ಒಪ್ಪಿಕೊಳ್ಳಲಿಲ್ಲವೇ? ಇಂದು ಗುಜರಾತಿಗಳ ಬಗ್ಗೆ ಮಾತನಾಡುವವರಿಗೆ ಮಹಾತ್ಮಾ ಗಾಂಧಿಯವರೂ ಒಬ್ಬ ಗುಜರಾತಿಯೆಂಬ ಅರಿವಿಲ್ಲವೆ? ಇಂದಿರಾ ಗಾಂಧಿಗೆ ರಾಜಕೀಯ ಮರುಜೀವ ಕೊಟ್ಟಂತಹ ಜಿಲ್ಲೆ ಚಿಕ್ಕಮಗಳೂರು ಚುನಾವಣೆಯಲ್ಲಿ ನಿಂತಾಗ ಅಲ್ಲಿನ ಜನ ಇಂದಿರಾ ಗಾಂಽಯ ಮುಖ ನೋಡಿ ಮತ ಹಾಕಿದ್ದರು.

ಅವರು ಅಂದು ಇಂದಿರಾ ಗಾಂಧಿಯನ್ನು ಉತ್ತರ ಭಾರತದವರೆಂದು ನಿರ್ಲಕ್ಷಿಸಿದ್ದರೆ ಬಹುಷ್ಯ ಇಂದಿರಾ ಗಾಂಧಿಯವರ ರಾಜಕೀಯ ಜೀವನವೇ ಮುಗಿದು
ಹೋಗಿರುತ್ತಿತ್ತು. ಕಾವೇರಿಯ ವಿಚಾರದಲ್ಲಿ ಪ್ರತಿಭಟನೆಗಳು ನಡೆದರೆ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಬೆಂಬಲ ಸಿಗುವುದಿಲ್ಲ ನೇತ್ರಾವತಿಯ ಎತ್ತಿನ ಹೊಳೆಯ ವಿಚಾರದಲ್ಲಿ ದಕ್ಷಿಣ ಕನ್ನಡದಲ್ಲಿ ಪ್ರತಿಭಟನೆಯಾದರೆ ಬೆಂಗಳೂರಿನಲ್ಲಿ ಹೆಚ್ಚಿನ ಬೆಂಬಲ ಸಿಗುವುದಿಲ್ಲ ಕೃಷ್ಣ ನದಿಯ ನೀರು ಹಂಚಿಕೆ ವಿಚಾರದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರತಿಭಟನೆಯಾದರೆ ಬೆಂಗಳೂರಿನಲ್ಲಿ ಹೆಚ್ಚಿನ ಬೆಂಬಲ ಸಿಗುವುದಿಲ್ಲ ಕೊಡಗಿನಲ್ಲಿ ಟಿಪ್ಪು ಸುಲ್ತಾನನ ವಿರುದ್ಧ ನಡೆಯುವ ಪ್ರತಿಭಟನೆಗೆ ಬೆಂಗಳೂರಿನಲ್ಲಿ ಹೆಚ್ಚಿನ ಬೆಂಬಲ ಸಿಗುವುದಿಲ್ಲ. ಒಕ್ಕೂಟ ಭಾರತವೆಂದು ಅರಚುವವರ ರೀತಿಯಲ್ಲಿ ಮುಂದೊಂದು ದಿನ ಒಕ್ಕೂಟ ಕರ್ನಾಟಕವೆಂದು ದಕ್ಷಿಣ ಕನ್ನಡದ ತುಳುವರು, ಕೊಡಗಿನ ಕೂರ್ಗಿಗಳು, ಗೋಕರ್ಣದ ಕೊಂಕಣಿಗಳು ಅರಚಲು ಶುರು ಮಾಡುವುದಿಲ್ಲವೆಂಬುದಕ್ಕೆ ಏನು ಗ್ಯಾರಂಟಿ? ಬ್ರಿಟಿಷರು ಭಾರತವನ್ನು ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿ ಶತಮಾನಗಳ ಕಾಲ ಆಳಿದರು ಈಗ ಒಕ್ಕೂಟದ ಹೆಸರಿನಲ್ಲಿ ಕೆಲವು ಹೋರಾಟಗಾರರು ತಮ್ಮ ಬೇಳೆ
ಬೇಯಿಸಿಕೊಳ್ಳಲು ಮತ್ತದೇ ಕೆಲಸವನ್ನು ಮಾಡುತ್ತಿರುವುದು ಎದ್ದು ಕಾಣುತ್ತಿದೆ.