Thursday, 12th December 2024

ಜನನಾಯಕರು ಹಾಗೂ ಆಶ್ವಾಸನೆ

ಅಭಿಪ್ರಾಯ

ಗೌರಿ ಚಂದ್ರ ಕೇಸರಿ

ಬೀಸುವ ದೊಣ್ಣೆ ಏಟು ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬ ಮಾತಿನಂತೆ ಇಂದಿನ ರಾಜಕಾರಣಿಗಳು ‘ಆಶ್ವಾಸನೆ’ ಎಂಬ ಅಸ್ತ್ರವನ್ನು ಉಪಯೋಗಿಸಿ ಜನರ ಬಾಯಿಯನ್ನು ಮುಚ್ಚಿಸುತ್ತಾರೆ. ಜನರು ತಾವು ಮತ ಹಾಕಿ ಆರಿಸಿ ಕಳಿಸಿದ ನೇತಾರನಲ್ಲಿ ಸಮಾಜ ಸೇವಕನನ್ನು ಕಾಣುತ್ತಾರೆ. ಆದರೆ ಅಧಿಕಾರದ ಗದ್ದುಗೆಯನ್ನು ಏರುವವರೆಗೂ ಪೊಳ್ಳು ಭರವಸೆಗಳನ್ನು ಬಿತ್ತುತ್ತ ಹೋಗುವ ರಾಜಕಾರಣಿಗಳು ಅಧಿಕಾರ ಕೈಗೆ ಬರುತ್ತಲೇ ಸ್ವಕಾರ್ಯ, ಸ್ವಂತ ಲಾಭ, ಅಽಕಾರದ ಅಮಲಲ್ಲಿ ಮೈಮರೆತು ಬಿಡುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದಾಗ ಜನರೇ ಜನನಾಯಕರ ಕರ್ತವ್ಯವನ್ನು ನೆನಪಿಸುವ ಪರಿಸ್ಥಿತಿ ಇಂದಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ.

ಮಳೆಗಾಲದಲ್ಲಿ ಪ್ರವಾಹದಂತಹ ಪ್ರಕೃತಿ ವಿಕೋಪಗಳು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ರಾಜ ಕಾಲುವೆಗಳ ಒತ್ತುವರಿ ಒಂದು ಕಡೆಯಾದರೆ ಗುಂಡಿ ಬಿದ್ದ ರಸ್ತೆಗಳು, ಕಸ ವಿಲೇವಾರಿಯ ಸಮಸ್ಯೆ ಹೀಗೆ ಸಮಸ್ಯೆ ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಜನ ನಾಯಕರೆನ್ನಿಸಿಕೊಂಡ ಕೆಲವರು ಈ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ.

ತಮ್ಮ ಕ್ಷೇತ್ರದ ಕಡೆಗೆ ತಲೆ ಕೂಡ ಹಾಕುವುದಿಲ್ಲ. ಒಂದು ಹಂತದವರೆಗೂ ಸಮಸ್ಯೆಯನ್ನು ಎದುರಿಸಿ ಹೈರಾಣಾದ ಜನರು ಒಂದಿಲ್ಲ ಒಂದು ದಿನ ಪ್ರತಿಭಟನೆಗೆ ಇಳಿಯುತ್ತಾರೆ. ಆಗ ಕಾಟಾಚಾರಕ್ಕೆಂದೋ, ಜನರ ಪ್ರತಿಭಟನೆಯನ್ನು ಹತ್ತಿಕ್ಕಲೆಂದೋ ಆ ಸ್ಥಳಕ್ಕೆ ಇವರು ದೌಡಾಯಿಸು ತ್ತಾರೆ.

ಸಮಸ್ಯೆ ಸರಳವಾಗಿರಲಿ, ಕ್ಲಿಷ್ಠವಾಗಿರಲಿ ‘ಬಗೆಹರಿಸೋಣ, ಖಂಡಿತ ಮಾಡಿ ಕೊಡೋಣ, ಈ ಬಗ್ಗೆ ಗಮನ ಹರಿಸುತ್ತೇವೆ’ ಎನ್ನುವ ಪುಂಖಾನುಪುಂಖ ಆಶ್ವಾಸನೆಗಳು ಹೊರ ಬೀಳುತ್ತವೆ. ಮುಗ್ಧ ಜನರು ತಮ್ಮ ಸಮಸ್ಯೆ ಗೊಂದು ಪರಿಹಾರ ಇಷ್ಟರಲ್ಲಿಯೇ ಸಿಗಲಿದೆ ಎಂದು ನಂಬುತ್ತಾರೆ. ಆದರೆ ಆಶ್ವಾಸನೆಯನ್ನು ನೀಡಿ ಹೋದವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಅಲ್ಲಿಂದ ನುಣುಚಿಕೊಳ್ಳುತ್ತಾರೆ.

ಸ್ಮಾರ್ಟ್ ಸಿಟಿ ಎಂಬ ಯೋಜನೆಗೆ ಧಾರಾಳವಾಗಿ ಹರಿದು ಬರುವ ಹಣ ನಗರದ ಅಂದಕ್ಕೆ ಮಾತ್ರ ಮೀಸಲಾಗಿದೆ. ಕಾಮಗಾರಿಯು ಅನಗತ್ಯವಾಗಿದ್ದರೂ ಬಂದ ಅನುದಾನ ವಿನಿಯೋಗವಾಗಲೇಬೇಕೆಂಬ ಉದ್ದೇಶದಿಂದ ಕಂಡ ಕಂಡಲ್ಲಿ ಗುಂಡಿಗಳನ್ನು ತೋಡುವುದು, ಅಗೆಯು ವುದು ನಡೆದೇ ಇರುತ್ತದೆ. ಆದರೆ ಹಲವಾರು ವರ್ಷಗಳಿಂದ ಇರುವ ಸಮಸ್ಯೆಗಳು ಪರಿಹಾರ ಕಾಣದೇ ಶಾಶ್ವತ ವಾಗಿ ಉಳಿದು ಬಿಡುತ್ತವೆ. ಜನ ನಾಯಕರು ಕೊಡುವ ಪೊಳ್ಳು ಆಶ್ವಾಸನೆಗಳಿಗೆ ನಾವು ಒಗ್ಗಿ ಹೋಗಿದ್ದೇವೆ. ನಮ್ಮ ಪ್ರತಿಭಟನೆಗಳೂ ತಾತ್ಕಾಲಿಕ ಎಂಬ ಅರಿವು ಅವರಿಗಿದೆ.

ಹೊಸದಾಗಿ ಹುಟ್ಟುವ ಸಮಸ್ಯೆಗಳು ಹಳೆಯ ಸಮಸ್ಯೆಗಳನ್ನು ಮರೆ ಮಾಚಿ ಬಿಡುತ್ತವೆ ಎಂದು ನಮ್ಮ ಜನ ಪ್ರತಿನಿಧಿಗಳಿಗೂ ಗೊತ್ತು. ಹಾಗಾಗಿಯೇ ತಮ್ಮ ಬತ್ತಳಿಕೆಯಲ್ಲಿ ‘ಆಶ್ವಾಸನೆ’ ಎಂಬ ಅಸವನ್ನು ಅಧಿಕಾರದಲ್ಲಿ ಇರುವವರೆಗೂ ಇಟ್ಟುಕೊಂಡು ನಿರಾಳವಾಗಿರುತ್ತಾರೆ. ಜನರ ಸಮಸ್ಯೆ ತಮ್ಮ ಸಮಸ್ಯೆ ಎಂಬ ಮನೋಭಾವ ಬರದ ಹೊರತು ನಮ್ಮ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುವಲ್ಲಿ ‘ಆಶ್ವಾಸನೆ’ ಎಂಬುದರ ಕೊಡುಗೆ ಮಹತ್ತರವಾಗಿದೆ.