ಅಭಿಮತ
ಡಾ.ಅರ್ಚನಾ ಆರ್.
ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲು, ಮೌಲ್ವಿಕ ವಿಚಾರಗಳನ್ನು ತಿಳಿಯಲು, ವೈಚಾರಿಕ ಪ್ರಜ್ಞೆ ಬೆಳೆಯಲು, ಸುಸಂಸ್ಕೃತ ನಡತೆಗೆ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕೆ ಓದು ಮಾತ್ರವೇ ರಹದಾರಿ. ಶಿಕ್ಷಣದಲ್ಲಿ ಭಾಷೆಯ ಕಲಿಕೆಯು ಕೇವಲ ಅಂಕಗಳಿಸಲು ಸೀಮಿತವಾಗದೆ ಸಾಹಿತ್ಯ ಓದುವ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು ಶಾಲೆಗಳಲ್ಲಿ ನೈತಿಕ ಶಿಕ್ಷಣದ ಜೊತೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವಂತಾಗಬೇಕು. ಮೂರುದಶಕಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಅಸ್ತಿತ್ವಕ್ಕೆ ಬರುವ ಈ ಹೊತ್ತಿನಲ್ಲಿ ಹೊಸ ನಿರೀಕ್ಷೆಗಳು ಹುಟ್ಟಿವೆ. ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಈ ಹೊಸ ಶಿಕ್ಷಣ ನೀತಿ ಪೂರಕವಾಗಲಿ ಮಕ್ಕಳಲ್ಲಿ ಸಾಹಿತ್ಯದ ಓದು, ಬರವಣಿಗೆಯ ಅಭಿರುಚಿಗಳನ್ನು ಬೆಳೆಸುವಂತಹ ಶಿಕ್ಷಣ ಜಾರಿಯಾಗಲಿ.
ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ, ಅಕ್ಷರ ಸಂಸ್ಕೃತಿ, ಸಾಹಿತ್ಯಾಭಿಮಾನ, ಪುಸ್ತಕ ಪ್ರೀತಿ , ಗ್ರಂಥಾಲಯಗಳ ಬಗೆಗಿನ ಅಭಿರುಚಿಗಳು ಕಡಿಮೆಯಾಗುತ್ತಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಈಗಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇಲ್ಲವೆಂಬುದು ಅಧ್ಯಾಪಕಿಯಾಗಿ ನಾನು ಗಮನಿಸಿದಾಗಲೆಲ್ಲ ತೀವ್ರವಾದ ನೋವಾಗುತ್ತದೆ.
ತರಗತಿಯಲ್ಲಿ ಪಂಪ, ರನ್ನ, ಬಸವಣ್ಣ, ಕುವೆಂಪು, ಬೇಂದ್ರೆ, ತೇಜಸ್ವಿ, ಕಾರಂತರನ್ನು ಕುರಿತ ಪಠ್ಯಗಳನ್ನು ವಿವರಿಸುವಾಗ ವಿದ್ಯಾರ್ಥಿಗಳಲ್ಲಿನ ನಿರಾಸಕ್ತಿ, ಭಾಷಾ ತರಗತಿಗಳನ್ನು ಕುರಿತ ಅವರ ಅಸಡ್ಡೆಯ ಪ್ರತಿಕ್ರಿಯೆ ಗಳು ಆತಂಕವನ್ನುಂಟು ಮಾಡುತ್ತದೆ. ಕೇವಲ ಹಾಜರಾತಿಯ ಕಾರಣಕ್ಕೆ ತರಗತಿಯಲ್ಲಿ ಅವರನ್ನು ಕಟ್ಟಿ
ಹಾಕಬೇಕಾಗಿರುವ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸಲು ಸಾಧ್ಯವೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಿವಿಧ ಸಾಮಾಜಿಕ ಜಾಲತಾಣಗಳು ಮಾಧ್ಯಮಗಳತ್ತ ಆಕರ್ಷಿತ ರಾಗಿವ ನಮ್ಮ ಮಕ್ಕಳು ಸೃಜನಶೀಲತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.
ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಅಭಿಮಾನವನ್ನ ಹುಟ್ಟಿಸುವ ಮೂಲಕ ಅವುಗಳ ಮಹತ್ವವನ್ನು ಮನದಟ್ಟು ಮಾಡುವ ಅಗತ್ಯವಿದೆ. ಪುಸ್ತಕಗಳು ಜ್ಞಾನದ ಕಿಟಕಿ, ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಅರಿವಿನ ಗುರಿಗೆ ಪುಸ್ತಕವೇ ಗುರು, ಎಂಬೆಲ್ಲ ಮಾತುಗಳು ನಿಜ. ಆದರೆ ಇವೆಲ್ಲಾ ಆಗಬೇಕಾದರೆ ಪುಸ್ತಕಗಳು ಮಕ್ಕಳಿಗೆ ಕೈಗೆಟುಕಬೇಕು ನಂತರ ಅವುಗಳ ಓದು ದಕ್ಕಬೇಕು ಹಾಗಾದಲ್ಲಿ ಮಾತ್ರವೇ ಮಕ್ಕಳ ಬುದ್ಧಿ ಮತ್ತು ಭಾವಲೋಕದ ವಿಕಾಸವಾಗಲು ಸಾಧ್ಯ.
ಮಾನಸಿಕವಾಗಿ, ಭಾವನಾತ್ಮಕವಾಗಿ, ಮಕ್ಕಳಿಗೆ ನೈತಿಕ ಸ್ಥೈರ್ಯ ಮತ್ತು ಧೈರ್ಯ ನೀಡುವಲ್ಲಿ ಶಾಲೆಗಳ ಹಿಂದೆ ಪೋಷಕರು ಮತ್ತು ಪೋಷಕರ ಜತೆ ಶಾಲೆಗಳ ಸಹಯೋಗದ ಅಗತ್ಯವಿದೆ. ಹೀಗಾದಲ್ಲಿ ಮಕ್ಕಳಲ್ಲಿ ಭದ್ರತೆಯ ಭಾವ ಮೂಡಿ ಉತ್ತಮ ಜೀವನ ಮೌಲ್ಯ ಗಳನ್ನು ರೂಢಿಸಿಕೊಳ್ಳಲು ಸಾಧ್ಯ ವಾಗುತ್ತದೆ. ಪ್ರಸ್ತುತ ಯುವ ಜನತೆಯಲ್ಲಿ ಅಪರಾಧಗಳು ಮನೋಭಾವ ಹೆಚ್ಚುತಿರುವುದು, ಶಾಲೆಗೆ ಹೋಗುವ ಮಕ್ಕಳಿಂದ ಕೂಡ ಅಪರಾಧಗಳು ಅಧಿಕವಾಗುತಿರುವುದನ್ನು ನೋಡಿದರೆ ಅಪರಾಧಗಳ ಹಿಂದಿನ ಕಾರಣ ಪೋಷಕರು, ಶಾಲೆಗಳು ಮತ್ತು ಸಮಾಜ ಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ವಿಫಲವಾಗುತ್ತಿರುವುದೇ ಆಗಿದೆ. ಮೃದುವಾದ ಮುಗ್ಧ ಮನಸ್ಸುಗಳು ಒರಟಾಗಿ ಬದಲಾಗುತಿರುವುದನ್ನು ನೋಡಿದಾಗ ಆತಂಕ ವಾಗದೆ ಇರಲಾರದು.
ಮಕ್ಕಳನ್ನು ಸರಿಯಾಗಿ ಬೆಳೆಸುವುದಕ್ಕಿಂತ ಸಹಜವಾಗಿ ಬೆಳೆಸುವುದಕ್ಕೆ ಆದ್ಯತೆ ನೀಡಬೇಕು. ಆಧುನಿಕತೆಯ ಒತ್ತಡದ ಬದುಕಿನಲ್ಲಿ ಮಕ್ಕಳ ಜೊತೆ ಒಂದಷ್ಟು ಸಮಯ ಕಳೆಯುವುದಕ್ಕೆ ಪೋಷಕರು, ಶಿಕ್ಷಕರು ಮುಂದಾಗಬೇಕು. ಮೊಬೈಲ, ಟಿವಿ ರಿಮೋಟ್ ಅವರ ಕೈಗಿಟ್ಟು ಅವರ ಪಾಡಿಗೆ ಅವರನ್ನು ಬಿಟ್ಟು ದೊಡ್ಡವರು ತಮ್ಮ ಕೆಲಸದಲ್ಲಿ ಮಗ್ನರಾಗಿ ಕೂತಿರುವುದು ಮಕ್ಕಳಿಗೆ ಪುಸ್ತಕ ಲೋಕದಿಂದ ದೂರ ಉಳಿಯುವಂತೆ ಮಾಡಿದೆ.
ಹಿಂದೆಲ್ಲಾ ರಾಮಾಯಣ, ಮಹಾಭಾರತ ಜನಪದ ಹಾಡು, ಕಥೆಗಳನ್ನು ಮನೆಯ ಕಲಿಯಲು, ತಿಳಿಯಲು ಅವಕಾಶವಿರುತ್ತಿತ್ತು. ಆದರೆ ಈಗ ಹಳ್ಳಿಗಳಲ್ಲೂ ಈ ಸಂಸ್ಕೃತಿ ಕಣ್ಮರೆಯಾಗಿದೆ. ಹಾಗಾಗಿಯೇ ಒಂದು ಸುಸ್ಥಿರ ಸಮಾಜಕ್ಕೆ ಅಗತ್ಯವಾದ ಯಾವುದೇ ಮೌಲ್ಯಗಳನ್ನು ನಾವು ಕಾಣಲಾಗುತ್ತಿಲ್ಲ. ಪ್ರೀತಿ, ವಾತ್ಸಲ್ಯ, ಮಮತೆ, ಸ್ನೆಹ, ಸೌಹಾರ್ದ, ಭ್ರಾತೃತ್ವ, ನಿಸ್ವಾರ್ಥತೆ, ಸಹಿಷ್ಣುತೆ, ಸಹಬಾಳ್ವೆ ಹೀಗೆ ಯಾವ ಮಾನವೀಯ ಮೌಲ್ಯಗಳು ಸಮಾಜಕ್ಕೆ ಅಗತ್ಯವೋ ಅವುಗಳೆಲ್ಲ ಕಣ್ಮರೆಯಾಗಿವೆ.
ಇಂತಹ ಮೌಲ್ಯಗಳನ್ನು ಬಿತ್ತುವಲ್ಲಿ ಮನೆ, ಶಾಲೆ, ಸಮಾಜ ಒಂದಾಗಿ ಶ್ರಮಿಸಬೇಕು. ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲು, ಮೌಲ್ವಿಕ ವಿಚಾರಗಳನ್ನು ತಿಳಿಯಲು, ವೈಚಾರಿಕ ಪ್ರಜ್ಞೆ ಬೆಳೆಯಲು, ಸುಸಂಸ್ಕೃತ ನಡತೆಗೆ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕೆ ಓದು ಮಾತ್ರವೇ ರಹದಾರಿ.
ಶಿಕ್ಷಣದಲ್ಲಿ ಭಾಷೆಯ ಕಲಿಕೆಯು ಕೇವಲ ಅಂಕಗಳಿಸಲು ಸೀಮಿತವಾಗದೆ ಸಾಹಿತ್ಯ ಓದುವ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು ಶಾಲೆಗಳಲ್ಲಿ ನೈತಿಕ ಶಿಕ್ಷಣದ ಜೊತೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವಂತಾಗಬೇಕು.
ಮೂರುದಶಕಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಅಸ್ತಿತ್ವಕ್ಕೆ ಬರುವ ಈ ಹೊತ್ತಿನಲ್ಲಿ ಹೊಸ ನಿರೀಕ್ಷೆಗಳು ಹುಟ್ಟಿವೆ. ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ
ಈ ಹೊಸ ಶಿಕ್ಷಣ ನೀತಿ ಪೂರಕವಾಗಲಿ ಮಕ್ಕಳಲ್ಲಿ ಸಾಹಿತ್ಯದ ಓದು, ಬರವಣಿಗೆಯ ಅಭಿರುಚಿಗಳನ್ನು ಬೆಳೆಸುವಂತಹ ಶಿಕ್ಷಣ ಜಾರಿಯಾಗಲಿ. ಸಾಹಿತ್ಯ
ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಮಕ್ಕಳಿಂದಲೇ ಕಥೆ, ಕವನ, ರಚನೆ, ವಾಚನ ಮಾಡಿಸುವ ಪರಿಪಾಠ ಬೆಳೆಯಬೇಕು. ಪಠ್ಯದಲ್ಲಿರುವ ಜೀವನಮೌಲ್ಯಗಳು ಪರೀಕ್ಷೆಗೆ ಮಾತ್ರ ಸೀಮಿತವಾಗದೆ ಬದುಕಿನಲ್ಲಿ ಅಳವಡಿಸಿ ಕೊಳ್ಳುವಂತಾಗಬೇಕು ದಿನಪತ್ರಿಕೆ ಓದಿಸುವುದು, ಕಗ್ಗದ ಸಾಲುಗಳನ್ನು, ಭಗವದ್ಗೀತೆಯ ಶ್ಲೋಕ ಗಳನ್ನು ವ್ಯಾಖ್ಯಾನಿಸುವುದು, ವಚನ, ಕೀರ್ತನೆ, ಸರ್ವಜ್ಞನ ತ್ರಿಪದಿಗಳು, ಜನಪದ ಗೀತೆಗಳನ್ನು ಹಾಡಿಸುವುದು. ಎಲ್ಲಾ ಬಗೆಯ ಕಲಾ ಪ್ರಕಾರಗಳನ್ನು ಪರಿಚಯಿಸಿ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಬೇಕು.
ಪ್ರತಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಮೂಡಿಸಲು ವಾರ್ಷಿಕ ಸಂಚಿಕೆಗಳನ್ನು ಹೊರತರಬೇಕು. ಈ ಸಂಚಿಕೆಗಳು ಮಕ್ಕಳಲ್ಲಿ ಬರವಣಿಗೆಯ ಆಸಕ್ತಿಯನ್ನುಂಟು ಮಾಡುವಂತಾಗ ಬೇಕು. ಇದರಿಂದ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ. ಸಾಹಿತ್ಯವು ಸಹಿತವನ್ನು ಬೆಳೆಸುತ್ತದೆ ಎನ್ನುವಂತೆ ಮುಂದಿನ ಪೀಳಿಗೆ ಸಹೃದಯರಾಗುವುದಕ್ಕೆ ನಾವು ಉತ್ತಮ ವಾತಾವರಣವನ್ನು ಹೀಗೆ ಸೃಷ್ಟಿಸುವ ಅಗತ್ಯವಿದೆ. ಮಕ್ಕಳ ಚಿಂತನೆಗೆ ನಿರ್ದಿಷ್ಟ, ಸ್ಪಷ್ಟ gಪ ಕೊಡುವುದು ಸಾಧ್ಯವಾದರೆ ಭವಿಷ್ಯದಲ್ಲಿ ಉತ್ತಮ ಸೃಜನಾತ್ಮಕ ಸಾಹಿತ್ಯ ಪರಂಪರೆ ಕನ್ನಡ ಸಾಹಿತ್ಯಲೋಕದಲ್ಲಿ ಬೆಳೆದೀತು. ಇಂದಿನ
ದಿನಪತ್ರಿಕೆಗಳು ಆ ನಿಟ್ಟಿನಲ್ಲಿ ಉತ್ತಮ ಪ್ರಯತ್ನಗಳನ್ನು ಮಾಡುತ್ತಿವೆ.
ಸಾಹಿತ್ಯದ ಅಭಿರುಚಿ ಬದುಕನ್ನು ಸಮಗ್ರವಾಗಿ ಗ್ರಹಿಸಲು, ಅನುಭವಿಸಲು ಕಲಿಸುತ್ತದೆ, ವ್ಯಕ್ತಿತ್ವವನ್ನು ಸಂಸ್ಕರಿಸುತ್ತದೆ, ಕಲ್ಪನಾಲೋಕವನ್ನು ವಿಸ್ತೃತ ಗೊಳಿಸುತ್ತದೆ. ಅಲ್ಲದೆ ಬೆಳೆಯುವ ಮಕ್ಕಳ ಭಾವಲೋಕವನ್ನು ಶುದ್ಧವಾಗಿಸುತ್ತದೆ. ಮತ್ತು ಉತ್ತಮ ಚಿಂತನೆಗಳನ್ನು ರೂಪಿಸಿ ಬೆಳೆಸುತ್ತದೆ, ಅಲ್ಲದೆ ಭಾಷೆ ಮತ್ತು ಸಾಹಿತ್ಯದ ಉಳಿವಿಗೆ ಪೂರಕವಾಗುತ್ತದೆ. ಹಿರಿಯರು ಬೆಳೆಸಿದ ಶ್ರೀಮಂತವಾದ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳಸು ವಲ್ಲಿ ನಮ್ಮ ಜವಾಬ್ದಾರಿ, ಕರ್ತವ್ಯಗಳು ಬಹುದೊಡ್ಡದಾಗಿವೆ.