Sunday, 15th December 2024

ಹೊಸ ಮೆಟ್ರೋ ಕೆಲಸ – ನಾವು ಮತ್ತು ನಮ್ಮ ಕಂಪನಿ

ಅಭಿಪ್ರಾಯ

ವಿನಾಯಕ ಭಟ್ಟ

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಜಾಮ್ ವಿಶ್ವಕುಖ್ಯಾತ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ ಹೌದು. ಆದರೆ ಕಳೆದ ಒಂದೂವರೆ ವರ್ಷ ದಿಂದ ಈ ಕರೋನ ಕಾರಣದಿಂದ ವರ್ಕ್ ಫ್ರಮ್ ಹೋಂ ಹೆಚ್ಚು ಪ್ರಚಲಿತದಲ್ಲಿ ಬಂದು, ಸ್ವಲ್ಪ ಮಟ್ಟಿಗೆ ಟ್ರಾಫಿಕ್‌ನ ಸಮಸ್ಯೆ ಕಡಿಮೆ ಆಗಿತ್ತು.

ಒಬ್ಬೊಬ್ಬರೇ ಕಾರಿನಲ್ಲಿ ಆಫೀಸಿಗೆ ಹೋಗುವ ಚಾಳಿ ಹೆಚ್ಚಿರುವ ಬೆಂಗಳೂರಿನ ರಸ್ತೆಗಳು ಎಷ್ಟು ಅಗಲವಿದ್ದರೂ ಸಾಲುವುದಿಲ್ಲ. ಇಂತಹ ಎಲ್ಲ ಅಂಶಗಳನ್ನು ಪರಿಗಣಿಸಿ ಹಿಂದೆ ಬಂದ ಎಲ್ಲ ಸರಕಾರಗಳೂ ವಾಹನಗಳ ರಸ್ತೆ ದಾಹವನ್ನು ತಣಿಸಲು ಶತ ಪ್ರಯತ್ನ ಮಾಡಿದ್ದು ನಿಜವಾಗಿಯೂ ಪ್ರಶಂಸನೀಯ. ಅದೆಷ್ಟು ಮೇಲು ರಸ್ತೆಗಳು, ಕೆಳ ರಸ್ತೆಗಳು ಮಾಡಿದರೂ ಸಾಕಾಗುವುದಿಲ್ಲ ಅನ್ನುವಷ್ಟರ ಮಟ್ಟಿಗೆ ನಮ್ಮ ಬೆಂಗಳೂರಿನ ವಾಹನ ದಟ್ಟಣೆ. ಇದನ್ನು ಕಡಿಮೆ ಮಾಡಲು ಸಮೂಹ ಸಾರಿಗೆಗೆ ಒತ್ತು ಕೊಟ್ಟು, ಮೆಟ್ರೋ ರೈಲು ಕೂಡ ಓಡಾಡುತ್ತ, ಮತ್ತೂ ಹೆಚ್ಚಿನ ಜಾಲ ವಿಸ್ತರಣೆಗೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆ.

ಈ ನಿಟ್ಟಿನಲ್ಲಿ, ಬೆಂಗಳೂರಿನ ಹೊರ ವರ್ತುಲ ರಸ್ತೆಯ ಗುಂಟ ಮೆಟ್ರೋ ರೈಲ್ ರೂಟ್ ನಿರ್ಮಾಣ ಕಾರ್ಯ ಸದ್ಯದಲ್ಲೇ ಆರಂಭ ಆಗುತ್ತಿದೆ ಎಂಬ ಸುದ್ದಿ ಬಂದಿದೆ. ಬಹಳ ಮಹತ್ವದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಸಂಪರ್ಕ ಕೊಂಡಿ ಈ ಹೊರ ವರ್ತುಲ ರಸ್ತೆ. ಈಗ ಅದೇ ರಸ್ತೆಯಲ್ಲಿ ಮೆಟ್ರೋ ಕಾರ್ಯ ಶುರುವಾಗುತ್ತಿರುವು ದರಿಂದ, ಅಲ್ಲಿ ಓಡಾಡುತ್ತಿದ್ದ, ಓಡಾಡಲಿರುವ ವಾಹನಗಳ ಪರಿಸ್ಥಿತಿಯನ್ನು ಗಮನಿಸಿ ಸರಕಾರ ಅದಕ್ಕೆ ಬೇಕಾಗಿ ಕೆಲವೊಂದು ಸಂಚಾರ ಸಂಬಂಧಿ ನಿರ್ಣಯ ವನ್ನು ಕೈಗೊಂಡಿದೆ.

ಮೊದಲನೆಯದು ನಿರ್ಮಾಣ ಕಾರ್ಯ ಆಗುವ ದಾರಿಯಲ್ಲಿ ಬಸ್ ಲೇನ್‌ಗಳನ್ನು ರೂಪಿಸಿ, ಸಮೂಹ ಸಾರಿಗೆಗೆ ಹೆಚ್ಚು ಒತ್ತು ಕೊಡುವುದು. ಆದರೆ ನಮ್ಮಲ್ಲಿ ಎಷ್ಟು ಜನ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಅಪೇಕ್ಷೆ ಹೊಂದಿರುತ್ತಾರೆ? ಸಾಂಕ್ರಾಮಿಕ ರೋಗ ಹರಡಿರುವ ಈ ಕಾಲದಲ್ಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಾಗದದ ಮೇಲೆ ಮಾತ್ರ ಅನ್ನುವುದು ಗೊತ್ತಿದ್ದೂ, ಸಾರ್ವಜನಿಕರ ಮಧ್ಯೆ ಓಡಾಡುತ್ತ ಬಸ್ ಗಳಲ್ಲಿ ಸಂಚರಿಸುವುದು ಅಪಾಯ ಅನ್ನುವ ಕಾಳಜಿ ತಪ್ಪಲ್ಲ. ಲಸಿಕೆಯ ಮೇಲಿನ ಧೈರ್ಯದಿಂದ ಬಸ್ಸಿನಲ್ಲಿ ಹೋಗೋಣ ಅಂದುಕೊಂಡರೂ, ಆಫೀಸಿನ ಸಮಯ ಪಾಲನೆಗೆ ಅದೆಷ್ಟು ಹೆಚ್ಚು ಕಷ್ಟ ಪಡಬೇಕು ಅನ್ನುವುದು ಮತ್ತೊಂದು ಸಂಗತಿ.

ಇವುಗಳ ಜೊತೆಗೆ ಅದೆಷ್ಟೋ ಜನ ಅಷ್ಟೊಂದು ದುಡ್ಡು ಸುರಿದು ಖರೀದಿಸಿರುವ ಕಾರಿನಲ್ಲಿ ಹೋಗುವುದನ್ನು ಬಿಟ್ಟು, ಬಸ್ಸಿನಲ್ಲಿ ಹೋಗುವುದಾ! ಪ್ರತಿಷ್ಠೆಗೆ ಧಕ್ಕೆ
ಅಂದುಕೊಳ್ಳುತ್ತಾರೆ. ಪ್ರತಿಷ್ಠೆಯನ್ನು ಸ್ವಲ್ಪ ಬದಿಗಿಟ್ಟು ನಾವು ಸಮೂಹ ಸಾರಿಗೆಯ ಬಳಕೆಯನ್ನು ಹೆಚ್ಚಿಸಿಕೊಂಡು ಸರ್ಕಾರಕ್ಕೆ ನಮ್ಮಿಂದಾದ ಸಹಕಾರ ಕೊಡುವುದು ಒಳ್ಳೆಯದು. ಇನ್ನು ಮತ್ತೊಂದು ವಿಚಾರ ಸರಕಾರದ್ದು ವರ್ಕ್ ಫ್ರಮ್ ಹೋಂ ನ್ನು 2022ರ ವರೆಗೆ ವಿಸ್ತರಿಸಿ ಅನ್ನುವುದು. ಬಹುತೇಕ ಕಂಪನಿಗಳು ಒಪ್ಪಿಕೊಳ್ಳುವುದು ಸಂಶಯವೇ. ಈಗಾಗಲೇ ಅದೆಷ್ಟೋ ಕಂಪನಿಗಳು ಆದಷ್ಟು ಹೆಚ್ಚು ನೌಕರರನ್ನು ಆಫೀಸಿಗೆ ಕರೆಯುತ್ತಿವೆ.

ಮನೆಯಲ್ಲಿ ಕೆಲಸ ಮಾಡುವುದರಿಂದ ಏಕಾಗ್ರತೆ ಸಾಧ್ಯವಿಲ್ಲ, ಕೆಲಸದ ಪ್ರಮಾಣ ಮತ್ತು ಗುಣಮಟ್ಟ ಕಡಿಮೆ ಆಗುತ್ತಿದೆ ಅನ್ನುವುದು ವಾದ. ಅದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಬೇರೆ ಪ್ರಶ್ನೆ. ಆದರೆ, ಆಫೀಸಿಗೆ ಕರೆಸಬೇಕೆಂಬ ತರಾತುರಿಯಂತೂ ಇದ್ದೇ ಇದೆ. ಹೀಗಿರುವಾಗ ಈ ಸರ್ಕಾರದ ವಿನಂತಿಯನ್ನು ಎಷ್ಟರಮಟ್ಟಿಗೆ ಆಚರಿಸುತ್ತವೆ ಎನ್ನುವುದು ಕಷ್ಟ. ಇದಕ್ಕೆ ಕೈ ಜೋಡಿಸಲು ಕಂಪನಿಗಳೇ ಹೆಚ್ಚಿನ ಸಮೂಹ ಸಾರಿಗೆಯನ್ನು ವ್ಯವಸ್ಥೆ ಮಾಡುವುದು ಅನುಕೂಲಕರ. ಆಫೀಸಿಗೆ ಹೋದ ಮೇಲೆ ಹೇಗೂ ಒಟ್ಟಿಗೆ ಕೆಲಸ ಮಾಡುವುದರಿಂದ, ಹೋಗುವಾಗ ಒಟ್ಟಿಗೆ ಹೋಗುವುದು ಅಂಥಾ ಹೆದರಿಕೆಯ ವಿಷಯ ಆಗದಿದ್ದೀತು. ಒಂದು ವೇಳೆ ವರ್ಕ್ ಫ್ರಮ್ ಹೋಂ ಕೊಡುವುದು ಆಗದಿದ್ದ ಪಕ್ಷದಲ್ಲಿ, ಈ ರೀತಿಯಿಂದಲಾದರೂ ಕೊಡುಗೆ ಕೊಡುತ್ತವೆಯೋ ನೋಡಬೇಕು.

ಇನ್ನು ಸೈಕಲ್ ಪಥಗಳ ಬಗ್ಗೆ ಕೂಡ ಸರಕಾರ ಮಾತಾಡಿದೆ. ಯಾವ ರೀತಿಯಲ್ಲಿ ನಾವು ಇಂಥ ಸುಧಾರಣೆಗಳಿಗೆ ತಯಾರಿದ್ದೇವೆಯೋ ಗೊತ್ತಿಲ್ಲ. ನಡೆದಾಡಲು ಬಳಸುವ ಫುಟ್ ಪಾತ್ ಮೇಲೆಯೇ ಬೈಕ್ ಓಡಿಸುವ ನಾವು, ರಸ್ತೆಯಲ್ಲಿ ಸೈಕಲ್ಲಿಗೆ ಜಾಗ ಬಿಟ್ಟೇವೆಯೇ! ಅಷ್ಟರ ಮಟ್ಟಿಗಿನ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಂಡು, ಹೆಚ್ಚು ಸೈಕಲ್ ಉಪಯೋಗಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ನಮಗೇ ಒಳ್ಳೆಯದು. ಪೆಟ್ರೋಲ್ ಬಳಕೆ ಕಡಿಮೆ ಮಾಡುವ ಪ್ರಯತ್ನ ನಮ್ಮಿಂದಾದರೆ ಉತ್ತಮ. ಎಲ್ಲ ಉತ್ತಮ ಕೆಲಸವನ್ನು ಸರ್ಕಾರ ಮಾತ್ರ ಮಾಡಬೇಕು ಅನ್ನುವುದನ್ನು ಬಿಟ್ಟು, ಸರ್ಕಾರದ ಒಳ್ಳೆಯ ಉದ್ದೇಶಕ್ಕೆ ಕೂಡ ನಮ್ಮಿಂದಾದ ಕೊಡುಗೆ ಗಳನ್ನು ಕೊಡುತ್ತಾ, ಉತ್ತಮ ವ್ಯವಸ್ಥೆಗೆ ನಾವೇನು ಮಾಡಬಹುದು ಎಂದು ವಿಚಾರ ಮಾಡಿ, ಜೀವನ ಕ್ರಮ ರೂಢಿಸಿಕೊಂಡರೆ ಎಲ್ಲರಿಗೂ ಒಳ್ಳೆಯದು ಅಲ್ಲವಾ.