Thursday, 12th December 2024

ಮಳೆ ಸುರಿಯುತ್ತಲೇ ಇದೆ ಎಚ್ಚರ, ಎಚ್ಚರ !

ವಿರಾಜಯಾನ

ವಿರಾಜ್ ಕೆ.ಅಣಜಿ

virajkvishwavani@gmail.com

ಇದನ್ನು ಹಾಟ್ ನ್ಯೂಸ್ ಎನ್ನಬೇಕೋ, ಇನ್ನೆಂಥ ನ್ಯೂಸ್ ಎನ್ನಬೇಕೋ ತಕ್ಷಣಕ್ಕೆ ಗೊತ್ತಾಗುತ್ತಿಲ್ಲ. ಆದರೆ, ಖಂಡಿತ ಇದೊಂದು ಎಚ್ಚರಿಕೆಯ ನ್ಯೂಸ್. ಹೌದಾ, ಏನದು ಅಂಥಾದ್ದು ಎಂದು ನೀವು ಕೇಳಬಹುದು. ಮೂರ‍್ನಾಲ್ಕು ದಿನಗಳಿಂದ ಬಂದ ಪತ್ರಿಕೆಗಳನ್ನೆಲ್ಲ ಒಮ್ಮೆ ತೆರೆದು ನೋಡಿ, ಅಥವಾ ನೀವೀಗಾಗಲೇ ನೋಡಿ ರಲೂಬಹುದು, ಅಲ್ಲೊಂದು ಮಳೆಯ ವರದಿಯಿದೆ. ಅದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಮಳೆ ಬರುತ್ತದೆ ಹೋಗತ್ತದೆ, ಅದರಲ್ಲೇನು ಹೊಸತು ಎಂದು ಅನಿಸಲೂಬಹುದು. ಆದರೆ, ನಾನೀಗ ಹೇಳ ಹೊರಟಿರುವುದು ಮೊದಲ ಬಾರಿಗೆ ಬಿದ್ದ ಮಳೆಯ ಬಗ್ಗೆ.

ಗ್ರೀನ್‌ಲ್ಯಾಂಡ್ ಹೆಸರಿನಲ್ಲಿ ಗ್ರೀನ್ ಇದ್ದರೂ ನಿಜವಾದ ಅರ್ಥದಲ್ಲಿ ಅದು ಐಸ್‌ಲ್ಯಾಂಡ್ (ಈ ಹೆಸರಿನ ಬೇರೆ ದೇಶವೂ ಇದೆ) ಆರ್ಕ್‌ಟಿಕ್ ಮತ್ತು ಅಟ್ಲಾಂಟಿಕ್ ಸಮುದ್ರಗಳ ನಡುವಿನ ಹರಡಿಕೊಂಡಿರುವ ಜಗತ್ತಿನ ಅತ್ಯಂತ ದೊಡ್ಡ ದ್ವೀಪ. ಅಲ್ಲಿನ ಹಿಮ ನಮ್ಮ ದುರ್ಗದ ಕೋಟೆಯ ಕಲ್ಲುಬಂಡೆಯಷ್ಟೇ ವಜ್ರ ಕಠಿಣ. ಅಂತಹ ಜಾಗದಲ್ಲೀಗ ಕಳೆದ ಶನಿವಾರ ದಪದಪನೇ ಮಳೆ ಸುರಿದಿದೆ. ಅಮೆರಿಕದ ರಾಷ್ಟ್ರೀಯ ಹಿಮ ಮತ್ತು ಮಂಜು ಅಧ್ಯಯನ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಗ್ರೀನ್‌ಲ್ಯಾಂಡ್‌ನ ಮಂಜುಗಡ್ಡೆಗಳ ಮೇಲೆ ಸುರಿದ ಈ ಮಳೆಯೂ 1950ರ ನಂತರದ ದಾಖಲೆಯ ಮಳೆಯಂತೆ.

ಕಳೆದ ಭಾನುವಾರ ಗ್ರೀನ್‌ಲ್ಯಾಂಡ್‌ನಲ್ಲಿ ಕರಗಿದ ಮಂಜಿನ ಹನಿಯ ಪ್ರಮಾಣವು, ಕಳೆದ ವರ್ಷದ ದಿನದ ಸರಾಸರಿಗೆ ಹೋಲಿಸಿದರೆ, ಏಳು ಪಟ್ಟು ಹೆಚ್ಚು. ಇದನ್ನು ಒಂದಷ್ಟು ಬಿಡಿಸಿ ಹೇಳಿದರೆ ಅರ್ಥವಾಗಬಹುದು. ಗ್ರೀನ್‌ಲ್ಯಾಂಡ್ 656000 ಚದರ ಮೈಲಿಯಷ್ಟು ಮಂಜುಗಡ್ಡೆಯನ್ನೇ ಹೊದ್ದು ಮಲಗಿದೆ. (1 ಚದರ ಮೀಟರ್ 2.59 ಚದರ ಕಿಲೋಮೀಟರ್‌ಗೆ ಸಮ) ಅಂತಹ ಕಡೆ ಕಳೆದ ಶನಿವಾರ, ಭಾನುವಾರ ಸುರಿದ ಮಳೆಗೆ 337000 ಚದರ ಮೈಲಿಯಷ್ಟು ಭಾಗದಲ್ಲಿ ಮಂಜು ಕರಗಿದೆ. ಅಂದರೆ 8,72,826 ಚದರ ಕಿಲೋ ಮೀಟರ್‌ ನಷ್ಟು ಮಂಜು ಕರಗಿ ನೀರಾಗಿದೆ. ಬಿದ್ದ ಮಳೆಯ ತೂಕ 7 ಬಿಲಿಯನ್ ಟನ್!

ಬಹುಶಃ ಈಗಲೂ ಇದರ ಅಗಾಧತೆ ಸಂಪೂರ್ಣ ಅರ್ಥವಾಗದೇ ಇರಬಹದು. ಹಾಗಾಗಿ, ಭಾರತ ಮತ್ತು ಗ್ರೀನ್‌ಲ್ಯಾಂಡ್‌ನ ಭೂ ವಿಸ್ತೀರ್ಣವನ್ನೊಮ್ಮೆ ಹೋಲಿಕೆ ಮಾಡಿ ನೋಡೋಣ. ಭಾರತವು ಗ್ರೀನ್‌ಲ್ಯಾಂಡ್‌ಗಿಂತ ಎರಡು ಪಟ್ಟು (ಶೇ.52) ಹೆಚ್ಚು ಭೂ ಭಾಗ ಹೊಂದಿದೆ. ಈಗ ಅಲ್ಲಿ ಕರಗಿದ ಹಿಮ ಒಂದು ಲೆಕ್ಕದಲ್ಲಿ ಭಾರತದ ಭೂಭಾಗದ ಕನಿಷ್ಠ ಶೇ.20 ಆಯಿತು! ಗ್ರೀನ್‌ಲ್ಯಾಂಡ್‌ನಲ್ಲಿ ಮಂಜು ಕರಗುತ್ತಿರುವುದು ಹೊಸದೇನೂ ಅಲ್ಲ. 2019ರಲ್ಲಿ ಹವಾಮಾನ ವೈಪರೀತ್ಯದ ಕಾರಣಗಳಿಂದ ಗ್ರೀನ್‌ಲ್ಯಾಂಡ್‌ನ 532 ಬಿಲಿಯನ್ ಟನ್ ಮಂಜು ಕರಗಿ ಸಮುದ್ರದತ್ತ ಹರಿದು ಹೋಗಿತ್ತು.

ಗಮನಾರ್ಹ ಅಂಶವೆಂದರೆ ಅದೇ ವರ್ಷ ಜಾಗತಿಕವಾಗಿ ಸಮುದ್ರ ಮಟ್ಟವು 1.5 ಮಿ.ಲಿ ಮೀಟರ್‌ನಷ್ಟು ಏರಿಕೆಯಾಗಿದೆ ಎಂಬ ವರದಿಯೂ ಬಂದಿತ್ತು. ಇದಕ್ಕೆಲ್ಲ ಕಾರಣ ಭೂಮಿಯ ತಾಪಮಾನ. ನಾವು ಇಲ್ಲಿಯವರೆಗೂ ಮಾಡಿರುವ ಮಾಲಿನ್ಯದ ಪರಿಣಾಮವೀಗ ದೂರದ ಗ್ರೀನ್‌ಲ್ಯಾಂಡ್ ತನಕವೂ ಹೋಗಿ ತಲುಪಿದೆ.
ಕಳೆದ ವಾರ ಇದೇ ಅಂಕಣದಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಐಪಿಸಿಸಿ (Intergovernmental Panel for Climate Change) ನೀಡಿದ ವರದಿ ಬಗ್ಗೆ ಪ್ರಸ್ತಾಪಸಿದ್ದೆ. ಆ ವರದಿಯಲ್ಲಿ ಅಭಿವೃದ್ಧಿ, ಪ್ರಗತಿ ಜಾಗತೀಕರಣದ ಹೆಸರಿನಲ್ಲಿ ನಾವು ಮಾಡುತ್ತಿರುವ ಚಟುವಟಿಕೆಗಳೇ ಭೂಮಿಯಲ್ಲಿ ಆಗುತ್ತಿರುವ ಇಷ್ಟೆಲ್ಲ
ಪ್ರಾಕೃತಿಕ ವಿಕೋಪಗಳಿಗೆ ಹೊಣೆ ಎಂದು ಹೇಳಲಾಗಿದೆ.

ಭೂಮಿಯ ತಾಪಮಾನವು 21ನೇ ಶತಮಾನದ ಆರಂಭದಿಂದ ಅತ್ಯಂತ ಗಂಭೀರವಾಗಿ ಏರಿಕೆಯಾಗುತ್ತಿದೆ, ಇದೊಂದು irreversible process  ಆಗಿರಲಿದೆ. ಇದರಿಂದಾಗಿಯೇ ಚಂಡಮಾರುತ, ಅಕಾಲಿಕ ಮಳೆ, ಪ್ರವಾಹ, ಕಾಡ್ಗಿಚ್ಚು, ಭೂಕುಸಿತಗಳು ಆಗಾಗ ಸಂಭವಿಸುತ್ತಲೇ ಇರುತ್ತದೆ. ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಅಮೇಜಾನ್, ಸೈಬೀರಿಯಾದ ಕಾಡುಗಳೀಗ ಹೊಗೆಯ ಗೂಡುಗಳಾಗುತ್ತಿವೆ. ಇದು ಬರೀ ಟೀಸರ್ ಅಷ್ಟೇ ಆಗಿದ್ದು, ‘ಪಿಕ್ಚರ್ ಅಭೀ ಬಾಕಿ ಹೈ’ ಎಂಬುದು ಐಪಿಸಿಸಿ ವರದಿಯ ಒಂದು ಲೈನ್ ಸ್ಟೋರಿಯಾಗಿತ್ತು.  ‘ಎತ್ತಿಗೆ ಜ್ವರ ಬಂದರೆ ಎಮ್ಮೆ’ಗೆ ಬರೆ ಹಾಕಿದ ಹಾಗಾಯ್ತು ಅಂತ ನಮ್ಮಲ್ಲೊಂದು ಗಾದೆ ಮಾತಿದೆ. ಇದು ನಮಗೂ ಕೂಡ ಹೋಲಿಕೆ ಆಗುತ್ತಿದೆ. ಏಕೆಂದರೆ, ಅಭಿವೃದ್ಧಿ ಹೊಂದಿರುವ ದೇಶಗಳು ಮಾಡುತ್ತಿರುವ ಮಾಲಿನ್ಯದ ನೇರ ಪರಿಣಾಮ ಆಗುತ್ತಿರುವುದೇ ಬಡ ರಾಷ್ಟ್ರಗಳ ಮೇಲೆ.

ಅದರಲ್ಲೂ ದಿನ ನಿತ್ಯದ ತುತ್ತು ಅನ್ನಕ್ಕಾಗಿ ಪರದಾಡುವ ಬಡ ಜನರ ಮೇಲೆ ಚಂಡಮಾರುತ, ಪ್ರವಾಹ, ಭೂಕಂಪ, ಬಿಸಿಲಿನ ತಾಪಗಳು ಇನ್ನಿಲ್ಲದಂತೆ ಕಾಡು ತ್ತಿವೆ. ನಾವಿರುವ ಅಪಾರ್ಟ್’ಮೆಂಟ್‌ನ ಹತ್ತನೇ ಮಹಡಿಯಿಂದ ನೋಡಿದರೆ ನಮ್ಮ ನಗರಗಳಲ್ಲಿ ನುಗ್ಗಿ ಬಂದ ಪ್ರವಾಹ ಚೆನ್ನಾಗಿಯೇ ಕಾಣಬಹುದು, ಯಾವುದೋ ದ್ವೀಪದಲ್ಲಿ ನಾವು ವಾಸವಿದ್ದೇವೆ ಎನಿಸಬಹುದು. ಆದರೆ, ಅಲ್ಲೇ ಪಕ್ಕದಲ್ಲೆಲ್ಲೋ ಜೋಪಡಿ ಹಾಕಿಕೊಂಡು ಬದುಕುತ್ತಿರುವವರ ಬಗ್ಗೆಯೂ ನಾವು ಒಂದಷ್ಟು ಯೋಚನೆ ಮಾಡ ಬೇಕಲ್ಲವೇ? ಮೊನ್ನೆ ಮೊನ್ನೆಯಷ್ಟೇ ದೆಹಲಿಯಲ್ಲಿ ಸುರಿದ ಭಾರಿ ಮಳೆಗೆ ಮಹಾತ್ಮ ಗಾಂಧಿಯವರ ಸಮಾಧಿ ಸ್ಥಳ ರಾಜ್‌ಘಾಟ್ ಬಹುತೇಕ ಮುಳುಗಿ ಹೋಗಿತ್ತು.

ಕೇಂದ್ರ ಸರಕಾರದ ರಕ್ಷಣೆ, ನಿರ್ವಹಣೆ ಇರುವ ಅಂತಹ ಸ್ಥಳಗಳೇ ನೀರಲ್ಲಿ ಮುಳುಗಿ ಹೋಗುತ್ತಿವೆ. ಅಂಥದ್ದರಲ್ಲಿ ಹುಟ್ಟುವಾಗಲೂ ಅನಾಥರಾಗಿ, ಸಾಯು ವಾಗಲೂ ಅನಾಥರಾಗಿಯೇ ಹೋಗುವ ಬಡವರು, ನಿರ್ಗತಿಕರ ಬದುಕು ಹೇಗಾಗಿರಬೇಡ. ನಮ್ಮದಾದರೆ ಜೀವ, ಜೀವನ. ಇನ್ನೊಬ್ಬರದ್ದು ನಮಗೇಕೆ ಉಸಾಬರಿ ಎಂಬ ಮನಸ್ಥಿತಿಗೆ ತಲುಪಿದ್ದೇವೆಯೇ ಎಂಬುದನ್ನು ಒಮ್ಮೆ ಅವಲೋಕನ ಮಾಡಿಕೊಳ್ಳುವ ಸಮಯವಿದು. ಮೋದಿ ಸರಕಾರ ಬಿಟ್ಟಿದ್ದೆಲ್ಲ ಬೊಗಳೆ, ಉದ್ಯೋಗ ಸೃಷ್ಟಿ ಮಾಡಿಲ್ಲ, ಅಭಿವೃದ್ಧಿ ಮಾಡಿಲ್ಲ ಎಂದು ದಿನಕ್ಕೆ ಹತ್ತು ಪೋಸ್ಟ್ ಹಾಕಿ ಬೈಯುವುದನ್ನೇ ಮಾಡುತ್ತಿದ್ದೇವೆ.

ಅದು ನಿಜವೋ ಸುಳ್ಳೋ ಎಂಬುದು ಬೇರೆಯದ್ದೇ ಚರ್ಚೆ. ಆದರೆ, ಅಭಿವೃದ್ಧಿ ಕೆಲಸಗಳು ಗಮನಾರ್ಹವಾಗಿ ಆಗಬೇಕು ಎಂದರೆ ಹಿಂದೆ ಆಗಿರುವ ಕೆಲಸಗಳು
ಉಳಿಯಬೇಕು, ಹೊಸ ಯೋಜನೆಗಳು ಆರಂಭವಾಗಬೇಕಲ್ಲವೇ? ಆದರೆ ಈಗೇನಾಗುತ್ತಿದೆ ನೀವೇ ನೋಡಿ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಪರಿಹಾರಕ್ಕೆ ಸಾವಿರ ಕೋಟಿ, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ, ಅದರ ಪರಿಹಾರಕ್ಕೆ ತಲಾ ಕನಿಷ್ಠ ಸಾವಿರ ಕೋಟಿ. ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಯಾಸ್, ಗುಜರಾತ್‌ಗೆ ತೌಕ್ತೆ ಚಂಡಮಾರುತದ ಹೊಡೆತ ಪರಿಹಾರಕ್ಕೆ ಸಾವಿರ ಕೋಟಿ, ಕೊಡಗಿನಲ್ಲಿ ಭೂಕುಸಿತ ಪರಿಹಾರಕ್ಕೆ ಸಾವಿರ ಕೋಟಿ… ವರ್ಷದಲ್ಲಿ ಅರ್ಧ ಬರೀ ಇಂಥದ್ದೇ ಸುದ್ದಿ ನೋಡುತ್ತಿದ್ದೇವೆ.

ಅದರ ನಡುವೆ, ಕರೋನಾದಂಥ ಮಹಾಮಾರಿ ವಕ್ಕರಿಸಿ, ಜನರಿಗೂ, ಸರಕಾರಕ್ಕೂ ನಯಾ ಪೈಸೆ ಆದಾಯ ಇಲ್ಲದಂತೆ ಮಾಡಿದ್ದೂ ಇದೆ. ಜಗತ್ತು, ದೇಶ ಎಂದು ಅಷ್ಟೆಲ್ಲ ದೂರ ಹೋಗುವುದೇ ಬೇಡ, ನಮ್ಮ ಮನೆಯಂಗಳದ ವಿದ್ಯಮಾನಗಳತ್ತಲೇ ಸೂಕ್ಷ್ಮವಾಗಿ ಗಮನ ಹರಿಸಿದರೂ ಪರಿಸ್ಥಿತಿ ಎಷ್ಟು ಭೀಕರ ಎಂಬುದು ತುಸು
ಅರ್ಥವಾದೀತು. ಇದೇ ಜುಲೈ 22ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಕೇಳರಿಯದಂಥ ಮಳೆ ಬಂತು. ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಿರುವ
ಅಂಕೋಲಾ, ಶಿರಸಿ, ಯಲ್ಲಾಪುರ, ಕುಮಟಾ ತಾಲೂಕಿನಲ್ಲಿ ಊರುಗಳೆಲ್ಲ ನಡುಗಡ್ಡೆಗಳಾದವು.

ಬಿಡದೇ ಸುರಿದ ರಕ್ಕಸ ಮಳೆಗೆ ಮಲೆನಾಡಿನ ಹೂ ಮನಸ್ಸಿನಂಥ ಜನರ ಬದುಕು ನಿರ್ನಾಮವೇ ಆಗಿ ಹೋಯಿತು. ಅಂಕೋಲಾ ಭಾಗದಲ್ಲಿರುವ ಡೋಂಗ್ರಿ
ಎಂಬ ತೀರಾ ಹಿಂದುಳಿದ ಹಳ್ಳಿ ಮತ್ತು ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕಕ್ಕೆ ಕಳೆದ ಎರಡ್ಮೂರು ವರ್ಷದಿಂದ ಯಾವುದೇ ರಸ್ತೆಯಿಲ್ಲ. ಅಲ್ಲಿಗಿದ್ದ ಒಂದು ಸೇತುವೆಯೂ ಕೊಚ್ಚಿ ಹೋಗಿದ್ದು, ಇದ್ದ ಇನ್ನೊಂದು ಸೇತುವೆ ಕಾಣದಷ್ಟುಜಲಾವೃತವಾಗಿದೆ. ಡೋಂಗ್ರಿಗೆ ಹೋಗಬೇಕೆಂದರೆ ಇರುವ ಮತ್ತಿಘಟ್ಟ ಕಡೆಯ ದಾರಿ ಆ ದೇವರಿಗೇ ಪ್ರೀತಿ.

ಇದು ಸಣ್ಣ ಉದಾಹರಣೆಯಷ್ಟೇ. ಇಂಥವು ನೂರಿವೆ, ಸಾವಿರಾರಿವೆ. 2020ರ ವರ್ಷವನ್ನಂತೂ ನಾವ್ಯಾರೂ ಮರೆಯುವಂತೆಯೇ ಇಲ್ಲ. ಮಾರ್ಚ್‌ನಿಂದ ಕರೋನಾ ಆರ್ಭಟ ಶುರುವಾಗಿತ್ತು. ಆಗಿಂದಲೂ ಸರಕಾರಕ್ಕೆ ಖರ್ಚಿನ ಮೇಲೆ ಖರ್ಚು. ಜನರಿಗೆ ಆದಾಯವಿಲ್ಲ. ಲಾಕ್‌ಡೌನ್‌ನಿಂದ ವ್ಯಾಪಾರ ವಹಿವಾಟು ಆಗದೇ ತೆರಿಗೆ ಸಂಗ್ರವಾಗುತ್ತಿಲ್ಲ. ಇದ್ದಬದ್ದ ಹಣವನ್ನೆಲ್ಲ ಕೂಡಿ, ಹೇಗೋ ಆಡಳಿತ ಯಂತ್ರ ನಿರ್ವಹಣೆ ಮಾಡಲಾಗುತ್ತಿತ್ತು. ಆಗಲೇ ಬಂತು ಆಗಸ್ಟ್‌ನ ಮಳೆ. ಅದರ ಹೊಡೆತ ಸಹಿಸುವ ಮುನ್ನವೇ ಸೆಪ್ಟೆಂಬರ್, ಅಕ್ಟೋಬರ್‌ಗೆ ಮತ್ತೆ ರಣಭೀಕರ ಮಳೆ. ಮಹಾರಾಷ್ಟ್ರದ ಮಳೆ ನೀರು ಕೂಡ ನಮ್ಮತ್ತ ನುಗ್ಗಿದ ಅವಾಂತರದಿಂದ
ಆದ ನಷ್ಟ ಕೇಳಿದರೆ ತಬ್ಬಿಬ್ಬಾಗಲೇಬೇಕು. ಆ ಮಳೆಗೆ ಕಲಬುರಗಿ, ವಿಜಾಪುರ ಮತ್ತು ಕರಾವಳಿ ಉಡುಪಿ ಭಾಗದಲ್ಲಿ ಕನಿಷ್ಠ 34,749 ಮನೆಗಳಿಗೆ ಹಾನಿ ಯಾಗಿತ್ತು.

16 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಕೃಷಿ ಪ್ರದೇಶ ಕೆರೆಯಂತಾಯಿತು, ಇದೆಲ್ಲದರ ಅಂದಾಜು ನಷ್ಟ 15410 ಕೋಟಿ ರು. ! ಈ ವರದಿಯನ್ನು ಸರಕಾರವೇ ಅಧಿಕೃತ ವಾಗಿ ನೀಡಿದ್ದು, ಕಣ್ಣಿಗೆ ಕಾಣದೇ ಕೊಚ್ಚಿ ಹೋದ ನಷ್ಟದ ಬಗ್ಗೆ ಲೆಕ್ಕ ಹಾಕಲಾಗದು. ಇಷ್ಟು ಲುಕ್ಸಾನದ ನಂತರವೂ ಸುಮ್ಮನಾಗುವಂತಿಲ್ಲ. ಎನ್‌ಡಿಆರ್‌ಎಫ್ ನಿಂದ ೫೫೧ ಕೋಟಿ ರು., ಎಸ್‌ಡಿಆರ್‌ಎಫ್ ನಿಂದ ೪೬೫ ಕೋಟಿ ರು. ಹಣವನ್ನು ಪರಿಹಾರ ಮತ್ತು ಬಿದ್ದ ಮನೆಗಳ ರಿಪೇರಿಗೆಂದು ನೀಡಲಾಯಿತು. ಅಂದರೆ, ಹದಿನೈದು ಸಾವಿರ ಕೋಟಿಯ ಮೇಲೆ ಮತ್ತೊಂದು ಸಾವಿರ ಕೋಟಿ ಹಣವನ್ನು ನಾವು ಮೊದಲಿದ್ದ ಹಾಗೇ ಮತ್ತೆ ಬದುಕು ಕಟ್ಟಿಕೊಳ್ಳಲು ವ್ಯಯ ಮಾಡಬೇಕಾ ಯಿತು. ಇನ್ನೆಲ್ಲಿಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ? ನಮಗೆಲ್ಲ ನೆನಪಿರಲಿ, ಅರ್ಜಿ ಹಾಕಿದಂತೆಲ್ಲ ಕೋಟಿ ಕೋಟಿ ಹಣ ಮಂಜೂರು ಮಾಡಲು ಸರಕಾರದ ಬಳಿ ದುಡ್ಡಿನ ಮರವಿಲ್ಲ.

ನಮಗಾಗಿ ಖರ್ಚು ಮಾಡುವ ದುಡ್ಡನ್ನು ನಮ್ಮ ಜೇಬಿನಿಂದಲೇ ಅವರು ಸಂಗ್ರಹಿಸಬೇಕು. ಇದರಿಂದ ಸಹಜ ವಾಗಿಯೇ ಎಲ್ಲದರ ಬೆಲೆಯೂ ಏರಿಕೆ ಆಗುತ್ತದೆ, ತೆರಿಗೆ ಹೇರಿಕೆ ಹೆಚ್ಚಾಗುತ್ತದೆ. ನೂರು ರುಪಾಯಿ ಆಗಿರುವ ಪೆಟ್ರೋಲ್ ಒಂದೆರಡು ವರ್ಷದಲ್ಲಿ ಇನ್ನೂರಾದರೂ ಅಚ್ಚರಿಯಿಲ್ಲ. ಇದೆಲ್ಲದರ ನಡುವೆ ಧರ್ಮ, ಜಾತಿ ಹೆಸರಲ್ಲಿ ಏನಾದರೊಂದು ಕೊಂಕು ತಗೆದು ಬಸ್‌ಗಳಿಗೆ, ಬೀದಿ ದೀಪಗಳಿಗೆ ಕಲ್ಲು ಹೊಡೆಯುವ ಪರಿಪಾಠವಿನ್ನೂ ನಿಂತಿಲ್ಲ. ಮಹಾತ್ಮ ಗಾಂಧಿ ಅವರ ಫ್ಲೆಕ್ಸ್ ಇಟ್ಟುಕೊಂಡು ಶಾಂತಿಯುತವಾಗಿ ಆರಂಭವಾಗುವ ಹರತಾಳಗಳು, ಕೊನೆಗೆ ಕೈಗೆ ಸಿಕ್ಕಿದಲ್ಲೆವನ್ನೂ ಧ್ವಂಸ ಮಾಡಿಯೇ ಮುಗಿಯಬೇಕು. ಬಸ್‌ಗಳೇನು ನಿಮ್ಮಪ್ಪನ ಆಸ್ತಿಯಲ್ಲ, ಹೊಡಿ ಇನ್ನೊಂದು ಕಲ್ಲು ಎಂದು ಹೇಳಿಕೊಂಡುವಂಥ ಸಂಕುಚಿತ ನಾಯಕರೇ ನಮ್ಮ ನಡುವಿದ್ದಾರೆ. ರಸ್ತೆ ಮಧ್ಯೆ ಟಯರ್‌ಗಳನ್ನು ಹಾಕಿ ಸುಟ್ಟರೆ ಅದೇನು ಸಿಗುವುದೋ ದೇವರಿಗೂ ಗೊತ್ತಿಲ್ಲ.

ಆದರೆ, ಟಯರ್ ಸುಟ್ಟಾಗ ಬರುವ ಕಾರ್ಬನ್ ಪರಿಸರಕ್ಕೆ ಎಷ್ಟು ಮಾಲಿನ್ಯಕರ ಎಂಬ ಯೋಚನೆಯನ್ನೂ ಮಾಡಲ್ಲ. ಇದರಿಂದ ಪರಿಸರಕ್ಕೂ ಹಾನಿ, ಹಾನಿಯಿಂದ ಆರ್ಥಿಕತೆಗೂ ಹೊಡೆತ. ಇಷ್ಟೆಲ್ಲದರ ಉದ್ದೇಶ ಯಾರ ಮೇಲೆ ದೂಷಣೆ ಮಾಡುವುದಲ್ಲ. ಯಾರೊಬ್ಬರ ಮೇಲೆ ಉಚಿತವಾದ ಮಮಕಾರವೂ ಅಲ್ಲ. ನಮ್ಮ ಬದುಕನ್ನು ನಾವು ಉಳಿಸಿಕೊಳ್ಳೋಣ ಎಂಬ ಕಾಳಜಿಯಷ್ಟೇ. ನಮ್ಮೆಲ್ಲರಿಗೂ ದಿನದ ದುಡಿಮೆಯೇ ಕಷ್ಟವಾಗಿರುವಾಗ ಪರಿಸರ ರಕ್ಷಣೆಯ ಪಾಠ ಮಾಡಿದರೆ ಯಾರ ಕಿವಿಗೂ ಮುಟ್ಟುವುದಿಲ್ಲ ಎಂಬ ಅರಿವು ನನಗಿದೆ.

ಸಾಲುಮರದ ತಿಮ್ಮಕ್ಕನಂತೆ, ಸುಂದರಲಾಲ್ ಬಹುಗುಣರಂತೆ ಪ್ರಕೃತಿಗಾಗಿ ಜೀವನವನ್ನು ಮುಡುಪಿಡಿ ಎಂಬ ನೀತಿ ಕತೆಯೂ ಇದಲ್ಲ. ಆದರೆ, ಭೂಮಂಡಲದ ವಾತಾವರಣವಂತೂ ಬದಲಾವಣೆ ಆಗುತ್ತಿರುವುದಂತೂ ಖಚಿತ. ಅದಕ್ಕೆಲ್ಲ ವೈಯುಕ್ತಿಕವಾಗಿ ನಾವು ಪಾಲುದಾರರು. ಪರಿಸರದಲ್ಲಿ ಈಗಾಗುತ್ತಿರುವ ಸಣ್ಣಪುಟ್ಟ ವಿಕೋಪಗಳು ನಮಗೆ ಈಗ ನೇರವಾಗಿ ಪರಿಣಾಮ ಬೀರದಿರಬಹುದು. ಎತ್ತರದ ಕಟ್ಟಡಗಳಲ್ಲಿದ್ದು ನಾವೀಗ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳುತ್ತಿರಬಹುದು. ಆದರಿದು ಕಳ್ಳ-ಪೊಲೀಸ್ ಆಟವಲ್ಲ. ಈಗ ಸಹಿಸಿಕೊಳ್ಳುತ್ತಿರುವ ಪರಿಸರವೆಂಬ ಪೊಲೀಸ್, ನಮಗೇನಾದರೂ ಒಮ್ಮೆ ಶಿಕ್ಷೆ ಕೊಟ್ಟರೆ ಪರಿಣಾಮ ಭಯಂಕರ ಎಂಬುದನ್ನು ನೆನಪಿದ್ದರೆ ಸಾಕು.

You must be the change you want to see in the world ಎಂಬ ಗಾಂಧೀಜಿಯ ಮಾತಿನಂತೆ, ನಮ್ಮ ದೈನಂದಿನ ಬದುಕಿನಲ್ಲಿ ನಾವು ಮಾಡಿ ಕೊಳ್ಳಬಲ್ಲ ಕೆಲ ತಿದ್ದುಪಡಿಗಳೂ ಕೂಡ ಪರಿಸರದ ರಕ್ಷಣೆಗೆ ದೊಡ್ಡ ಕೊಡುಗೆ ನೀಡಬಲ್ಲದು. ಅನಗತ್ಯವಾಗಿ ವಾಹನ ಬಳಕೆ, ತೋರ್ಪಡಿಕೆಗಾಗಿ ಮನೆಯಲ್ಲಿ ಎ.ಸಿ, ರೆಫ್ರಿಜರೇಟರ್, ಓವನ್ ತಂದಿಟ್ಟುಕೊಳ್ಳುವ ಬುದ್ಧಿಯನ್ನು ಬಿಡುವುದು ಕೂಡ ನಾವು ಅನುಸರಿಸಬಹುದಾದ ಸರಳವಾದ ಪ್ರಕೃತಿ ಪಾಠ. ನಮ್ಮ ಜೀವಮಾನದಲ್ಲಿ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು, ಅದನ್ನು ಪೋಷಿಸಿ ಸಲಹಿ, ಮರವನ್ನಾಗಿ ಬೆಳೆಸೋಣ. ಸತ್ತ ನಂತರ ಗೋರಿಯ ಮೇಲೆ ನಮ್ಮ ಹೆಸರು ಕೆತ್ತಿಸಿಕೊಳ್ಳುವ ಬದಲು, ನಾವು ಬೆಳೆಸಿದ ವೃಕ್ಷದಲ್ಲಿ ನಮ್ಮುಸಿರು ಜೀವಂತವಾಗಿರಲಿ.