Thursday, 12th December 2024

ಮನಸೇ ಎಲ್ಲಕ್ಕೂ ಮೂಲ, ಮನಸ್ಸಿದ್ದರೇ ಮಾರ್ಗ !

ಅಭಿಮತ

ಸಂದೀಪ್ ಶರ್ಮಾ

mooteri.sandeepsharma@gmail.com

ಆಗ ಮುಗಿಯುವ ಸನ್ನಿಹಿತದಲ್ಲಿದೆ. ಇನ್ನು ನಾಲ್ಕು ತಿಂಗಳು ಕಳೆದರೆ 2021 ಮುಗಿದು 2022ಕ್ಕೆ ಹೆಜ್ಜೆ ಇಡುತ್ತೇವೆ. ನವ ವರ್ಷದ ಹೊಸ್ತಿಲಲ್ಲಿ ನಿಂತಿದ್ದರೂ ಕರೋನಾ ನೆರಳು ರೂಪದಲ್ಲಿ ಅವಿತಿದ್ದರು, ಮತ್ತಿನ್ನೊಂದು ಅಲೆಗಳ ಮೂಲಕ ಮಾರಿಯು ದಾಳಿ ಮಾಡದಿರಲಿ ಎಂದು ಆಶಿಸುವ ಸಮಯ ಬಂದಿದೆ. ಈ ವಿಷಮ ಪರಿಸ್ಥಿತಿ ಆದಷ್ಟು ಬೇಗ ತೀರಲಿ ಹೊಸತನ ಮೈಗೂಡಿಸಿಕೊಂಡು ಹೊಸ ದಿಕ್ಕಿನೆಡೆಗೆ ನಡೆಯಲಿ ಎನ್ನುವ ಆಸೆ ಎಲ್ಲರ ಮನಸ್ಸು ಬೇಡುತ್ತಿದೆ.

ಎಲ್ಲರ ಮನದಲ್ಲೂ ಸಂಕಲ್ಪ ಶಕ್ತಿಗಳು ಹರಿದಾಡುತ್ತಿವೆ. ಹೊಸ ಬದುಕಿನ ನಿರ್ಣಯಗಳು ಮತ್ತು ಪ್ರಾಮಿಸರಿ ನೋಟುಗಳು ಮನದಲ್ಲಿ ಮೆಲ್ಲನೆ ನಮೂದಿಸಲ್ಪಡು ತ್ತಿದೆ. ನಮ್ಮ ಮನಸ್ಸೆ ಹಾಗೆ. ಇವತ್ತಿನ ಎಲ್ಲ ಆಸೆಗಳು ಕರಗಿ ಚೈತನ್ಯ ತುಂಬಿಕೊಳ್ಳುವ ತಿರುವಿನ ದಿನಕ್ಕಾಗಿ, ಎಲ್ಲ ನೋವುಗಳು ಮರೆತು ಹೊಸ ಸಂಭ್ರಮ ಆವಾಹನೆ ಯಾಗುವ ನಿರ್ಣಾಯಕ ಘಳಿಗೆಗಾಗಿ, ಅದರಾಚೆಗೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಸಾಂತ್ವನಕ್ಕಾಗಿ ಹಾತೊರೆಯುತ್ತಿರುತ್ತದೆ.

ಅದಕ್ಕಾಗಿಯೇ ಹೊಸ ವರ್ಷ, ಯುಗಾದಿ, ಗಣೇಶೋತ್ಸವ, ವಿಜಯದಶಮಿ, ದೀಪಾವಳಿ, ಜನ್ಮ ದಿನಾಚರಣೆ, ವಿವಾಹ ದಿನಾಚರಣೆ, ಹೀಗೆ ಹಲವು ಸಂಕ್ರಮಣ ಗಳು ಬದುಕು ಬದಲಿಸುವ ನಿರ್ಣಾಯಕ ದಿನಗಳಾಗಿ ಭರವಸೆ ಮೂಡಿಸುತ್ತವೆ. ಹಾಗಿದ್ದರೆ ಆ ದಿನಗಳಂದು ಮಾಡಿಕೊಂಡ ಸಂಕಲ್ಪಗಳು ಫಲಿಸುತ್ತವೆಯೇ? ನಿರ್ಣಯಗಳು ಕೈಗೂಡುತ್ತವೆಯೇ? ಇದು ಅವರವರ ವಿವೇಚನೆಗೆ ಬಿಟ್ಟ ವಿಚಾರ.

ವಿಪರ್ಯಾಸವೆಂದರೆ, ಹೆಚ್ಚಾಗಿ ಹೊಸ ವರ್ಷದ ದಿನದಂದೇ ಹೊಸ ಹೊಸ ಸಂಕಲ್ಪಗಳು ಹೆಚ್ಚಾಗಿಯೇ ಕೇಳ ಲ್ಪಡುತ್ತೇವೆ. ಮಿಕ್ಕ ಹಬ್ಬ ಹರಿದಿನಗಳಂದು ಸಂಕಲ್ಪ ವೆಂಬ ಪದವನ್ನೇ ನೆನಪಿಸಿಕೊಳ್ಳುವುದಿಲ್ಲ, ಅಲ್ಲವೇ? ಪರಮ ಭಕ್ತಿಯಿಂದ, ಅತ್ಯಂತ ಶ್ರದ್ಧೆಯಿಂದ, ತುಂಬ ದೊಡ್ಡ ಕನಸುಗಳೊಂದಿಗೆ ಮಾಡಿಕೊಂಡ ಹೊಸ ವರ್ಷದ ಸಂಕಲ್ಪ ಗಳಲ್ಲಿ ಯಶಸ್ವಿಯಾಗುವವರು ಶೇಕಡಾ 10 ಜನ ಮಾತ್ರವಂತೆ. ನೂರರಲ್ಲಿ 90 ಜನರ ಬದುಕು ಒಂದೇ ವಾರಕ್ಕೆ ಮರಳಿ ಹಳೆ ರಸ್ತೆಯಲ್ಲಿ ಓಡುತ್ತಿರುತ್ತವೆ.

ಬದುಕಿನ ಸಾಧನೆಯಲ್ಲಿ ಸಂಕಲ್ಪಗಳು ದಾರಿದೀವಿಗೆಗಳು. ಅದು ನೀಲ ನಕಾಶೆ ಇದ್ದ ಹಾಗೆ. ಬದುಕನ್ನು ಬಂದ ಹಾಗೆ ಸ್ವೀಕರಿಸುತ್ತೇನೆ ಎನ್ನುವುದು ಒಂದು ರೀತಿ, ಅದರ ತುಂಬು ಸೌಂದರ್ಯದೊಂದಿಗೆ ಸವಿಯುತ್ತೇನೆ ಎನ್ನುವುದು ಇನ್ನೊಂದು ರೀತಿ. ನಾಳೆ ಹೇಗಿರಬೇಕು, ಹೇಗಿರಬಾರದು ಎನ್ನುವುದನ್ನು ತೀರ್ಮಾನಿಸುವುದು ಸಂಕಲ್ಪಗಳೇ.

ಒಂದು ಮಾತಿದೆ: ಗುರಿ ಸಾಧನೆ ಮಾಡಲಾಗದೆ ಇರುವುದು ಸೋಲಲ್ಲ, ಗುರಿಗಳೇ ಇಲ್ಲದಿರುವುದು ಸೋಲು. ಮನಸು ಎನ್ನುವುದೊಂದು ಅದ್ಭುತ ಪ್ರಯೋಗ ಶಾಲೆ. ಯಾವ ಪ್ರಯೋಗಕ್ಕೂ ಅದು ಒಗ್ಗಿಕೊಳ್ಳುತ್ತದೆ. ನಾಳೆ ಸಂಕಲ್ಪ ತೊಟ್ಟುಕೊಂಡ ಕಾರ್ಯವನ್ನು ಮುಗಿಸಿದರೆ ಉತ್ತೇಜನ ತಾನಾಗಿಯೇ ಹೆಚ್ಚುತ್ತದೆ. ಹೊಸ ತೇನೋ ಕಲಿಯಬೇಕು, ಗುರಿಯನ್ನು ಮುಟ್ಟಬೇಕು ಅನ್ನುವ ಆಸೆಗೆ ಅದು ಹೆಗಲೆಣೆಯಾಗಿ ನಿಲ್ಲಲಾರದೆ? ಸಂಕಲ್ಪ ಮಾಡಿಕೊಂಡವರೆಲ್ಲರೂ ಗೆದ್ದಿದ್ದಾರೆ ಎಂದು ಹೇಳಲಾಗುವುದಿಲ್ಲ ಹಾಗೆಯೇ ಎಲ್ಲರೂ ಸೋತಿಲ್ಲ. ಅಂಕಿ ಅಂಶಗಳೇ ಹೇಳುವ ಹಾಗೆ ಶೇ.10 ಜನ ಗೆಲ್ಲುತ್ತಾರೆ.

ಅವರಲ್ಲಿ ನಾವೂ ನೀವೂ ಇರಬಹುದು? ಹಾಗಾಗಿ, ಸಂಕಲ್ಪ ಮಾಡಲು ಹೊಸ ವರ್ಷದ ದಿನದಂದೇ ಆಗಬೇಕಿಲ್ಲ ತೆಗೆದುಕೊಳ್ಳಲೂ ಹಿಂಜರಿಯಬೇಕಿಲ್ಲ. ನಿರ್ಣಯ ಗಳನ್ನು ಮಾಡಿ ನಾಲ್ಕೆ ದಿನದಲ್ಲಿ ಕೆಚೆಲ್ಲಿದರೇನೂ ನಷ್ಟವಿಲ್ಲ. ಒಂದೊಮ್ಮೆ ಅದು ಒಂದು ಪ್ರಬಲ ಇಚ್ಛಾಶಕ್ತಿಯಾಗಿ, ಬದುಕಿನ ದೊಡ್ಡ ತಿರುವಾಗಿ ಪರಿಣಮಿಸಿದರೆ. ಅದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದಿಲ್ಲ.

೦೦೦