Saturday, 23rd November 2024

ಆಂಡರ್ಸನ್, ಓವರ್ಟನ್ ದಾಳಿಗೆ ವಿರಾಟ್‌ ಪಡೆ ಧೂಳೀಪಟ

ಹೆಡಿಂಗ್ಲೆ: ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ ದಿನಾಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 120 ರನ್ ಗಳಿಸಿದೆ.

ಈ ಮೂಲಕ ಆತಿಥೇಯ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ವಿರುದ್ಧ 42 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. ಲೀಡ್ಸ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 78 ರನ್ ಗಳ ಅತ್ಯಲ್ಪ ಮೊತ್ತಕ್ಕೆ ಸರ್ವಪತನ ಕಂಡು ನಿರಾಸೆ ಮೂಡಿಸಿತು. ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ಬೌಲಿಂಗ್ ನ್ನು ಎದುರಿಸಲಾಗದೆ ಭಾರತ ತಂಡ ವಿಫಲ ವಾಯಿತು.

ಭಾರತದ ಅತ್ಯಲ್ಪ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಯಾವುದೇ ವಿಕೆಟ್ ನಷ್ಟವಿಲ್ಲದೇ ದಿನಾತ್ಯಕ್ಕೆ 120 ರನ್ ಗಳನ್ನು ಗಳಿಸಿ ಭಾರತದ ವಿರುದ್ಧ 42 ರನ್ ಗಳ ಮುನ್ನಡೆ ಸಾಧಿಸಿದೆ. ಹಸೀಬ್ ಹಮೀದ್ 130 ಎಸೆತಗಳಿಗೆ 60 ರನ್ ಗಳನ್ನು ಗಳಿಸಿದರೆ, ರೋರಿ ಜೋಸೆಫ್ ಬರ್ನ್ಸ್ 125 ರನ್ ಗಳಿಗೆ 52 ರನ್ ಗಳನ್ನು ಗಳಿಸಿದ್ದಾರೆ.

ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಸಾಧಿಸಿದ ಐತಿಹಾಸಿಕ ಗೆಲುವಿನ ಗುಂಗಿನಲ್ಲಿದ್ದ ಪ್ರವಾಸಿ ಭಾರತ ತಂಡಕ್ಕೆ ಆತಿಥೇಯ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನವೇ ತಿರುಗೇಟು ನೀಡಿತು.

ಸತತ ಟಾಸ್ ಸೋಲಿನಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಡೆಗೂ ಟಾಸ್ ಜಯಿಸಿದರೂ ಸಂಭ್ರಮ ಮಾತ್ರ ಹೆಚ್ಚು ಹೊತ್ತು ಇರಲಿಲ್ಲ. 19 ವರ್ಷಗಳ ಬಳಿಕ ಹೆಡಿಂಗ್ಲೆಯಲ್ಲಿ ಕಣಕ್ಕಿಳಿದ ಭಾರತ ತಂಡವನ್ನು ಜೇಮ್ಸ್ ಆಂಡರ್‌ಸನ್ (6ಕ್ಕೆ 3) ಸಾರಥ್ಯ ದಲ್ಲಿ ಇಂಗ್ಲೆಂಡ್ ವೇಗಿಗಳು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು. 2ನೇ ಟೆಸ್ಟ್ ಪಂದ್ಯದ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಇಂಗ್ಲೆಂಡ್ ತಂಡ ದಿಟ್ಟ ತಿರುಗೇಟು ನೀಡಿದ್ದು, ಮೊದಲ ದಿನದಾಟದಲ್ಲೇ ಇನಿಂಗ್ಸ್ ಮುನ್ನಡೆ ಸಾಧಿ ಸುವ ಮೂಲಕ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ 9ನೇ ಕನಿಷ್ಠ ಮೊತ್ತ ಇದಾಗಿದೆ. ಇಂಗ್ಲೆಂಡ್ ನೆಲದಲ್ಲಿ ದಾಖಲಿಸಿದ 3ನೇ ಕನಿಷ್ಠ ಮೊತ್ತವಾಗಿದೆ.

ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಮೊದಲ ಓವರ್‌ನಲ್ಲೇ ಭಾರತಕ್ಕೆ ಆಘಾತ ನೀಡಿದರು. ಕನ್ನಡಿಗ ಕೆಎಲ್ ರಾಹುಲ್ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿದರು. ಬಳಿಕ ಬಂದ ಚೇತೇಶ್ವರ ಪೂಜಾರ (1) ಹಾಗೂ ನಾಯಕ ವಿರಾಟ್ ಕೊಹ್ಲಿ (7) ಜೋಡಿಗೂ ರಾಹುಲ್ ಮಾದರಿಯಲ್ಲೇ ಆಂಡರ್‌ಸನ್ ಪೆವಿಲಿಯನ್ ದಾರಿ ತೋರಿದರು.

ಆರಂಭಿಕ ರೋಹಿತ್ ಶರ್ಮ (19ರನ್) ಹಾಗೂ ಉಪನಾಯಕ ಅಜಿಂಕ್ಯ ರಹಾನೆ (18ರನ್) ಜೋಡಿ ಕೆಲಕಾಲ ಆಸರೆಯಾಯಿತು. 4ನೇ ವಿಕೆಟ್‌ಗೆ 35 ರನ್ ಪೇರಿಸಿದ್ದ ವೇಳೆ ಒಲಿ ರಾಬಿನ್‌ಸನ್, ಅಜಿಂಕ್ಯ ರಹಾನೆಗೆ ಪೆವಿಲಿಯನ್ ದಾರಿ ತೋರಿದರು. ರಿಷಭ್ ಪಂತ್ (2) ಬಂದಷ್ಟೇ ವೇಗವಾಗಿ ವಾಪಸಾದರೆ, ತಾಳ್ಮೆಯಿಂದ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮ, ಓವರ್‌ಟನ್ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಕೈಹಾಕಿ ಮಿಡ್ ಆನ್‌ನಲ್ಲಿದ್ದ ರಾಬಿನ್‌ಸನ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಭಾರತ ಕನಿಷ್ಠ 80ರ ಗಡಿ ದಾಟುವುದು ದುಸ್ತರವಾಯಿತು.