ಬೆಂಗಳೂರು ಜಿಲ್ಲೆಯ ೧ ಕೋಟಿ ಜನರಿಗೆ ಲಸಿಕೆ
ಡಿಸಿ ಮಂಜುನಾಥ್ ವಿನೂತನ ಪ್ರಯೋಗ ಯಶಸ್ವಿ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಕೋವಿಡ್ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಇಡೀ ದೇಶವೇ ನಡೆಸುತ್ತಿರುವ ಹೋರಾಟಕ್ಕೆ ರಾಜಧಾನಿ ಬೆಂಗಳೂರು ಅಚ್ಚರಿಯ ಸಾಥ್ ನೀಡುತ್ತಿದೆ. ಅಂದರೆ ಕೋವಿಡ್ ಸೋಂಕು ಮತ್ತೆ ರಾಜಧಾನಿಗೆ ವಕ್ಕರಿಸಬಾರದೆನ್ನುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಬೆಂಗಳೂರು ನಗರ ಜಿಲ್ಲೆ ಲಸಿಕೆ ಹಾಕುವುದರಲ್ಲಿ ದೇಶದ ಪ್ರಥಮ ಎನ್ನುವ ಸಾಧನೆ ಮಾಡಿದೆ.
ಎಲ್ಲ ವಯೋಮಾನದ ಜನರಿಗೂ ಲಸಿಕೆ ಹಾಕುವುದರಲ್ಲಿ ಬೆಂಗಳೂರು ನಗರ ಜಿಲ್ಲೆಯ ಬುಧವಾರ 1 ಕೋಟಿ ಮೀರಿದ ಸಾಧನೆ ಮಾಡಿದ್ದು, ಈ ಮೂಲಕ ದೇಶದ ಪ್ರಥಮ ಜಿಲ್ಲೆ ಎನಿಸಿಕೊಂಡಿದೆ. ಅಂದರೆ ಪ್ರಥಮ ಮತ್ತು ದ್ವಿತೀಯ ಹಂತದ ಲಸಿಕೆ ಹಾಕಿಸುವುದರಲ್ಲಿ ಜಿಲ್ಲೆ ಮಾಡಿರುವ 1 ಕೋಟಿ ಮೀರಿದ (1,00,34,598
ಮಂದಿಗೆ ) ಸಾಧನೆ ದೇಶದ ಇತರ ಯಾವುದೇ ಜಿಲ್ಲೆಗಳಲ್ಲೂ ದಾಖಲಾಗಿಲ್ಲ ಎಂದು ಹೇಳಲಾಗಿದೆ.
ಲಸಿಕೆ ವಿಚಾರವಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕೈಗೊಂಡಿದ್ದ ವಿಶೇಷ ಕಾರ್ಯಯೋಜನೆಗೆ ಜಿಲ್ಲೆ ವ್ಯಾಪ್ತಿಯ ಪ್ರತಿನಿಽಗಳು, ಸೇವಾ ಸಂಸ್ಥೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದರ ಪರಿಣಾಮ ಜಿಲ್ಲೆಯಲ್ಲಿ ಉತ್ತಮ ಸಾಧನೆಯಾಗಿದ್ದು, ಇದಕ್ಕಾಗಿ ಮಂಜುನಾಥ್ ಅವರನ್ನು ಬರೀ ಸೇವಾ ಸಂಸ್ಥೆಗಳು ಮಾತ್ರವಲ್ಲದೆ,
ಸರಕಾರ ಕೂಡ ಪ್ರಶಂಶಿಸಿದೆ.
ಬೆಂಗಳೂರು ಪ್ರಥಮ ಹೇಗೆ?: ಲಸಿಕೆ ಹಾಕುವುದರಲ್ಲಿ ಬೆಂಗಳೂರು ಜಿಲ್ಲೆ ಪ್ರಥಮ ಸ್ಥಾನ ಗಿಟ್ಟಿಸಲು ಮೂಲ ಕಾರಣ ಹೆಚ್ಚಿನ ಜಾಗೃತಿ. ಹಾಗೆಯೇ ಲಸಿಕೆ ಪೂರೈಕೆ ಮತ್ತು ಹಾಕಿಸಿಕೊಳ್ಳುವಂತೆ ಪ್ರೇರಣೆ ಮಾಡುವಲ್ಲಿ ಅಧಿಕಾರಿಗಳು ತೋರಿಸಿದ ವಿಶೇಷ ಆಸಕ್ತಿ. ಅಂದರೆ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗುವ
ಮುನ್ನವೇ ಬೆಂಗಳೂರು ಜಿಲ್ಲಾಡಳಿತ ಲಸಿಕೆ ಹಾಕಿಸಲು ವಿಶೇಷ ಕ್ರಮಗಳನ್ನು ಕೈಗೊಂಡಿತ್ತು. ಜನತೆ ಲಸಿಕೆ ಯನ್ನು ಗಂಭೀರವಾಗಿ ಪರಿಗಣಿಸುವ ಮುನ್ನವೇ ಜಿಡಳಿತ ಲಸಿಕೆ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಹೆಚ್ಚಿನ ಜನರು ಲಸಿಕೆ ಪಡೆಯುವಂತೆ ಮಾಡಿತ್ತು.
ನಂತರ ಎರಡನೇ ಅಲೆ ವೇಳೆಗೆ ಲಸಿಕೆ ಬೇಡಿಕೆ ಹೆಚ್ಚಾಗಿ ಸಮರ್ಪಕ ಪೂರೈಕೆ ಇಲ್ಲದಿದ್ದಾಗ ಜಿಲ್ಲಾಧಿಕಾರಿ ಅವರು ತೊಂದರೆಯನ್ನು ಸರಕಾರದ ಗಮನಕ್ಕೆ ತಂದು ಹೆಚ್ಚಿನ ಲಸಿಕೆ ಪೂರೈಕೆಯಾಗುವಂತೆ ಮಾಡಿದ್ದರು. ಹಾಗೆಯೇ ಸಮರ್ಪಕವಾಗಿ ಹಂಚಿಕೆಯಾಗುವಂತೆ ಮಾಡಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ ಲಸಿಕೆ ಹಾಕಿಸಿ ಕೊಳ್ಳುವವರಿಗೆ ಲಸಿಕಾ ಕೇಂದ್ರಗಳಿಗೆ ವಾಹನ ಸೌಲಭ್ಯ ಸಿಗುವಂತೆ ಮಾಡಿದ್ದರು. ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಹೆಚ್ಚಿನ ಸಂಖ್ಯೆಯ ಐಟಿಬಿಟಿ ಮಂದಿಗೆ ಲಸಿಕೆ ಕೊಡಿಸಿದ್ದರು. ಪರಿಣಾಮ ಕೋವಿಡ್ ಎರಡನೇ ಅಲೆಯ ವೇಳೆಗೆ ಅನೇಕ ಗ್ರಾಮಗಳಲ್ಲಿ ಲಸಿಕೆ ಕಾರ್ಯದಲ್ಲಿ ಉತ್ತಮ ಸಾಧನೆಯಾಗಿತ್ತು. ಇದರಿಂದ ಎರಡನೇ ಅಲೆ ಸಂದರ್ಭದಲ್ಲಿ ಕೆಲವು ಗ್ರಾಮಗಳಿಗೆ ಕೋವಿಡ್ ಪ್ರವೇಶವನ್ನೇ ಮಾಡಲಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಜನಪ್ರತಿನಿಧಿಗಳ ಪೈಪೋಟಿ
ಕೋವಿಡ್ ಎರಡನೇ ಅಲೆ ನಂತರ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಲಸಿಕೆ ಪಡೆಯಲು ಜನ ಅಷ್ಟಾಗಿ ಆಸಕ್ತಿ ತೋರಿಸದಿದ್ದರೂ ಜನಪ್ರತಿನಿಧಿಗಳು ಮಾತ್ರ ಕಾಳಜಿ ವಹಿಸಿದ್ದರು. ಅಂದರೆ ತಮ್ಮ ಕ್ಷೇತ್ರಗಳಲ್ಲಿ ಮತ್ತು ತಮ್ಮ ವಾರ್ಡ್ಗಳಲ್ಲಿ ಲಸಿಕೆ ಹಾಕಿಸುವುದರಲ್ಲಿ ಹೆಚ್ಚು ಸಾಧನೆ ಮಾಡಬೇಕೆನ್ನುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪೈಪೋಟಿಯನ್ನೇ ನಡೆಸಿದ್ದರು. ಅನೇಕ ಶಾಸಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು ಲಸಿಕೆ ಹಾಕಿಸಿ ತಮ್ಮ ವ್ಯಾಪ್ತಿಯಲ್ಲಿ ಮತ್ತೆ ಸೋಂಕು ಹೆಚ್ಚಾಗಿ ಹಾಸಿಗೆ ಸಮಸ್ಯೆ ತಲೆದೋರದಂತೆ ಮಾಡಬೇಕು ಶ್ರಮಿಸಿದ್ದರು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಏನಿದು ಲಸಿಕೆ ಸಾಧನೆ?
ಸುಮಾರು 2196 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಬೆಂಗಳೂರು ನಗರ ಜಿಲ್ಲೆ ಐದು ತಾಲೂಕುಗಳು ಹಾಗೂ ಬಿಬಿಎಂಪಿಯ 198 ವಾರ್ಡ್ ಗಳನ್ನು ಒಳಗೊಂಡು ಬಹು ವಿಶಾಲವಾಗಿದೆ. 2021ರ ಜನವರಿ 16ರಿಂದ ಲಸಿಕೆ ಕಾರ್ಯ ಆರಂಭಿಸಿದ ನಗರ ಜಿಲ್ಲೆ ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ನಂತರ ಕೋವಿಡ್ ಪ್ರಂಟ್ ಲೈನ್ ವಾರಿಯರ್ಸ್ಗಳಿಗೆ, 60 ವರ್ಷ ಮೆಲ್ಪಟ್ಟವರಿಗೆ ಆನಂತರದಲ್ಲಿ ೪೫ವರ್ಷ ಮೇಲಿನವರಿಗೆ ಹಾಗೂ ಅಂತಿಮವಾಗಿ 18 ವರ್ಷ ಮೆಲ್ಪಟ್ಟ ವರಿಗೆ ಲಸಿಕೆ ಆರಂಭಿಸಲಾಗಿತ್ತು.
ಹೀಗೆ ಎಲ್ಲ ರೀತಿಯ ಲಸಿಕಾ ಕಾರ್ಯಕ್ರಮಗಳಲ್ಲೂ ಬೆಂಗಳೂರು ನಗರ ಜಿಲ್ಲೆ ಮುಂಚೂಣಿಯಲ್ಲಿದ್ದು, ರಾಜ್ಯದ ಪ್ರಥಮ ಎನ್ನುವಂತೆ ಪ್ರಗತಿ ತೋರಿಸುತ್ತಿತ್ತು. ನಂತರದಲ್ಲಿ ಲಸಿಕೆ ಕಾರ್ಯವನ್ನು ಹೆಚ್ಚು ಚುರುಕುಗೊಳಿಸಿ ಅತ್ಯಂತ ಕಡಿಮೆ ಅವಽಯಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಹಾಕಿಸಿ ಗುರಿ ಮೀರಿದ ಸಾಧನೆ ಮಾಡಲಾಗಿದೆ. ಅಂದರೆ ಈ ತನಕ ಸುಮಾರು 10034598 ಮಂದಿಗೆ ಲಸಿಕೆ ಹಾಕಲಾಗಿದ್ದು, ಇವರಲ್ಲಿ 18 ವರ್ಷ ಮೇಲ್ಪಟ್ಟವರು 50,63,651 ಮಂದಿ ಪಡೆದಿದ್ದು, 45 ವರ್ಷಕ್ಕೂ ಅಧಿಕ ವಯಸ್ಸಿನವರು 39,78,341 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.
***
ಕೋವಿಡ್ ಲಸಿಕೆಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿ ಎಲ್ಲ ಕಡೆ ಕೊಡಿಸಲು ಆಸಕ್ತಿ ತೋರಿಸಿದ್ದರಿಂದ ಇಂದು 1 ಕೋಟಿ ಮೀರಿದ ಸಾಧನೆ ಮಾಡಲು ಸಾಧೆ ಮಾಡಲು ಸಾಧ್ಯವಾಯಿತು. ಈ ಸಾಧನೆಗೆ ಇಡೀ ಜಿಲ್ಲಾಡಳಿತ, ಆರೋಗ್ಯ ಕಾರ್ಯಕರ್ತರು ಮತ್ತು ಮುಖ್ಯಮಂತ್ರಿ ಅವರ ಸಹಕಾರ ಕಾರಣವಾಗಿದೆ.
-ಜೆ.ಮಂಜುನಾಥ್
ಬೆಂಗಳೂರು ನಗರ ಜಿಲ್ಲಾಧಿಕಾರಿ