Friday, 22nd November 2024

ಶಿಕ್ಷೆ ರದ್ದು: ಕುಸ್ತಿ ಪಟು ವಿನೇಶ್ ಪೋಗಟ್’ಗೆ ರಿಲೀಫ್

ನವದೆಹಲಿ: ಅಶಿಸ್ತು ವರ್ತನೆ ಕಾರಣದಿಂದ ಅಮಾನತು ಶಿಕ್ಷೆಗೆ ಒಳಗಾಗಿದ್ದ ಪ್ರತಿಭಾನ್ವಿತ ಕುಸ್ತಿ ಪಟು ವಿನೇಶ್ ಪೋಗಟ್ ಅವರ ಮೇಲಿನ ಶಿಕ್ಷೆಯನ್ನು ಹಿಂಪಡೆಯಲಾಗಿದೆ.

ಟೊಕಿಯೊ ಒಲಿಂಪಿಕ್ಸ್ ನಡೆಯುವ ವೇಳೆ ವಿನೇಶ್ ಅವರು ಸಹವರ್ತಿಗಳೊಡನೆ ವಾಸ್ತವ್ಯ ಹೂಡಲು ನಿರಾಕರಿಸಿದ್ದರು. ಅಲ್ಲದೆ ತಂಡದ ಪ್ರಾಯೋಜಕರು ನೀಡಿದ್ದ ಜೆರ್ಸಿಯನ್ನು ತೊಡದೆ ಬೇರೆ ಜೆರ್ಸಿಯನ್ನು ತೊಟ್ಟಿದ್ದರು. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು.

ದೂರು ಸಂಬಂಧ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ವಿಚಾರಣೆ ನಡೆಸಿತ್ತು. ಫೋಗಟ್ ಅವರು ತಾವು ಕರೊನಾ ಕಾರಣದಿಂದ ಪ್ರತ್ಯೇಕ ವ್ಯವಸ್ಥೆ ಬೇಕೆಂದು ಮತ್ತು ಬೇರೆ ಜೆರ್ಸಿ ತೊಟ್ಟಿದ್ದು ಅಚಾತುರ್ಯದಿಂದ ಉಂಟಾದ ಪ್ರಮಾದ ಎಂದು ಸ್ಪಷ್ಟನೆ ನೀಡಿದ್ದರು.

ವಿನೇಶ್ ಜೊತೆ ಕುಸ್ತಿ ಪಟುಗಳಾದ ಸೋನಂ ಮತ್ತು ದಿವ್ಯಾ ಅವರ ಮೇಲೂ ದೂರು ದಾಖಲಾಗಿತ್ತು. ಮೂವರಿಗೂ ಮುಂದೆ ಅಶಿಸ್ತು ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಗಿದೆ. ಘಟನೆ ಮರುಕಳಿಸಿದಲ್ಲಿ ಅವರಿಗೆ ಆಜೀವ ನಿಷೇಧ ಹೇರುವುದಾಗಿ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ತಿಳಿಸಿದೆ.