Friday, 22nd November 2024

ಪ್ಯಾರಾಲಿಂಪಿಕ್ಸ್: ಇತಿಹಾಸ ನಿರ್ಮಿಸಿದ ಭಾವಿನಾಬೆನ್ ಪಟೇಲ್

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತದ ಭಾವಿನಾಬೆನ್ ಪಟೇಲ್ ಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿರುವ ಭಾವಿನಾ, ಈಗ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್‌ನ ಟೇಬಲ್ ಟೆನಿಸ್‌ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಪ್ಯಾರಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್ ಕ್ಲಾಸ್‌ 4 ವಿಭಾಗದಲ್ಲಿ ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ ಭಾವಿನಾಬೆನ್, ಚೀನಾದ ಜಾಂಗ್‌ ಮಿಯಾವೊ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿದರು. 34 ವರ್ಷದ ಭಾವಿನಾ, ವಿಶ್ವ ನಂ.3 ಆಟಗಾರ್ತಿ ವಿರುದ್ಧ 34 ನಿಮಿಷಗಳ ಹೋರಾಟದ ಅಂತ್ಯದಲ್ಲಿ 7-11 11-7 11-4 9-11 11-8ರಲ್ಲಿ ಗೆಲುವು ದಾಖಲಿಸಿದರು. ಚಿನ್ನದ ಪದಕಕ್ಕಾಗಿ ಹೋರಾಟದಲ್ಲಿ ಭಾವಿನಾ ವಿಶ್ವ ನಂ.1 ಸ್ಪರ್ಧಿ ಚೀನಾದವರೇ ಆಗಿರುವ ಯಿಂಗ್ ಜೌ ಸವಾಲನ್ನು ಎದುರಿಸಲಿದ್ದಾರೆ.

ಭಾವಿನಾಬೆನ್ ಎಂಟರಘಟ್ಟದಲ್ಲಿ ಹಣಾಹಣಿಯಲ್ಲಿ 11-5 11-6 11-7ರಿಂದ ಹಾಲಿ ಚಾಂಪಿಯನ್‌, ಸರ್ಬಿಯಾದ ಬೊರಿಸ್ಲಾವಾ ಪೆರಿಚ್‌ ರ‍್ಯಾಂಕೊವಿಚ್‌ ಅವರನ್ನು ಪರಾಭಗೊಳಿಸಿದರು. 16ರ ಘಟ್ಟದ ಪಂದ್ಯದಲ್ಲಿ ಭಾರತದ ಆಟ ಗಾರ್ತಿಯು 12-10, 13-11, 11-6ರಿಂದ ಬ್ರೆಜಿಲ್‌ನ ಜಾಯ್ಸ್ ಡಿ ಒಲಿವೆರಾ ಅವರನ್ನು ಮಣಿಸಿದ್ದರು.