Friday, 22nd November 2024

ಪ್ರವಾಹಕ್ಕೆ ಇನ್ನಷ್ಟು ಬಿಗಡಾಯಿಸಿದ ಅಸ್ಸಾಂ

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭಾನುವಾರ ಬಿಗಡಾಯಿಸಿದ್ದು, 14 ಜಿಲ್ಲೆಗಳಲ್ಲಿ 2.58 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹ ಸಂಕಷ್ಟದಲ್ಲಿದ್ದಾರೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯಂತೆ, ಕಾರ್ಡಿಂಗ್, ಬಾರ್ಪೇಟಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ಧೇಮಾಜಿ, ದಿಬ್ರುಘರ್, ಗೋಲಘಾಟ್, ಜೋರ್ಹತ್, ಕಾಮರೂಪ್, ಲಖಿಂಪುರ್, ಮಜುಲಿ, ನಾಗಾಂವ್, ಶಿವಸಾಗರ್ ಮತ್ತು ತಿನ್ಸುಕಿಯಾ ಜಿಲ್ಲೆಗಳಲ್ಲಿ ಪ್ರವಾಹದಿಂದ 2,58,100 ಕ್ಕೂ ಹೆಚ್ಚು ನಿರಾಶ್ರಿತರಾಗಿದ್ದಾರೆ.

ಸದ್ಯ 732 ಗ್ರಾಮಗಳು ನೀರಿನಿಂದ ಮುಳುಗಡೆಯಾಗಿದ್ದು, ಅಸ್ಸಾಂನಾದ್ಯಂತ  24,704.86 ಹೆಕ್ಟೇರ್ ಕೃಷಿಭೂಮಿ ಹಾನಿಗೊಳಗಾಗಿದೆ ಎಂದು ಎಎಸ್ ಡಿಎಂಎ ತಿಳಿಸಿದೆ.

ಸರ್ಕಾರವು 10 ಜಿಲ್ಲೆಗಳಲ್ಲಿ 91 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ನಡೆಸುತ್ತಿದೆ. ಅಲ್ಲಿ 6218 ಜನರು ಆಶ್ರಯ ಹೊಂದಿದ್ದಾರೆ ಎಂದು ಮಾಹಿತಿ ನೀಡಿದೆ.

ನೆರೆ ಸಂತ್ರಸ್ತರಿಗೆ 2,841.07 ಕ್ವಿಂಟಾಲ್ ಅಕ್ಕಿ, ಬೇಳೆ ಮತ್ತು ಉಪ್ಪು, 11,711.42 ಲೀಟರ್ ಸಾಸಿವೆ ಎಣ್ಣೆ, 831.82 ಕ್ವಿಂಟಾಲ್ ಜಾನುವಾರು ಆಹಾರ ಮತ್ತು ಇತರ ಪ್ರವಾಹ ಪರಿಹಾರ ವಸ್ತುಗಳನ್ನು ವಿತರಿಸಲಾಗಿದೆ.