ಲಖನೌ: ತಮ್ಮ ಲೋಕಸಭಾ ಕ್ಷೇತ್ರವಾದ ಲಖನೌನಲ್ಲಿ ₹1,710 ಕೋಟಿಗೂ ಅಧಿಕ ಮೌಲ್ಯದ 180 ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಚಾಲನೆ ನೀಡಿದರು.
‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕ್ಷೇತ್ರವಾಗಿದ್ದ ಲಖನೌನಲ್ಲಿ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಮೂಲಕ ರಾಜನಾಥ್ ಅವರು ವಾಜಪೇಯಿ ಕನಸನ್ನು ಈಡೇರಿಸುತ್ತಿದ್ದಾರೆ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದರು.
ಲಖನೌಗೆ ಆಗಮಿಸಿದ ರಾಜನಾಥ್ ಸಿಂಗ್ ಅವರು ಇಲ್ಲಿ 90 ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 90 ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದರು.
ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ ಮುಖ್ಯಮಂತ್ರಿಗಳಾದ ದಿನೇಶ್ ಶರ್ಮಾ ಮತ್ತು ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಇತರೆ ಸಚಿವರು ಉಪಸ್ಥಿತರಿದ್ದರು.