Friday, 22nd November 2024

6ರಿಂದ 8ನೇ ತರಗತಿ ತರಗತಿಯವರೆಗಿನ ಶಾಲೆಗಳ ಪುನಾರಂಭ

ಬೆಂಗಳೂರು: ರಾಜ್ಯಾದ್ಯಂತ ಸೋಮವಾರ 6ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳು ಪುನಾರಂಭಗೊಂಡಿವೆ.

ರಾಜ್ಯ ಸರ್ಕಾರ ಸದ್ಯಕ್ಕೆ 2ನೇ ಹಂತದಲ್ಲಿ 6ನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಿದ್ದು ಶೇ.50ರಷ್ಟು ವಿದ್ಯಾರ್ಥಿಗಳ ಹಾಜರಾತಿಯಲ್ಲಿ ವಿಭಾಗಗಳನ್ನಾಗಿ ಮಾಡಿ ಸೂಕ್ತ ಕರೋನಾ ಮಾರ್ಗಸೂಚಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸರ್ಕಾರ ಶಾಲೆಗಳನ್ನು ಆರಂಭಿಸಿದೆ.

ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಶಾಲೆಗೆ ಬರುವಂತೆ ಸೂಚಿಸಲಾಗಿದೆ. ಕರೋನಾ ಮೂರನೇ ಅಲೆ ಭೀತಿಯಿರುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆಯ ಆವರಣದಲ್ಲಿ ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಒಂದೂವರೆ ವರ್ಷದ ನಂತರ 6ನೇ ತರಗತಿಯ ನಂತರದ ಮಕ್ಕಳು ಇಂದು ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ವಾರದ ಐದು ದಿನ ಮಾತ್ರ ಸದ್ಯಕ್ಕೆ ಶಾಲೆ ನಡೆಸಲಾಗುತ್ತಿದ್ದು, ದಿನ ಬಿಟ್ಟು ದಿನ ವಿದ್ಯಾರ್ಥಿಗಳು ಶಾಲೆಗೆ ಬರಲಿದ್ದಾರೆ. ಶನಿವಾರ, ಭಾನುವಾರ ಶಾಲೆಯ ಸ್ವಚ್ಛತೆ ಮಾಡುವಂತೆ ಸೂಚಿಸಲಾಗಿದೆ.

6 ರಿಂದ 8ನೇ ತರಗತಿಯವರೆಗೆ ಶಾಲೆ ಪುನರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳನ್ನು ಪೋಷಕರು ನಿರಾತಂಕವಾಗಿ ಶಾಲೆಗೆ ಕಳುಹಿಸಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.