ಸಿಎಂ ಬೊಮ್ಮಾಯಿ ಮೂರನೇ ಬಾರಿ ಭಾಗಿ ಏಕೆ?
ಅಮಿತ್ ಶಾ ಹೇಳಿಕೆ ಪರಿಣಾಮ ಏನಾಗಬಹುದು?
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿ ವಿವಾಹ ಮುಗಿದು ವಾರವೇ ಕಳೆಯುತ್ತಿದ್ದು, ಆರತಕ್ಷತೆಗಳು ಮಾತ್ರ ಇನ್ನೂ ಮುಗಿಯುತ್ತಿಲ್ಲ. ಇದು ವೈಯಕ್ತಿಕವಾಗಿರುವ ಕಾರಣ ಪ್ರಶ್ನೆಗೆ ಅರ್ಹವಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು ಜೋಶಿ ಪುತ್ರಿಯ ಎಲ್ಲಾ ಆರತಕ್ಷತೆಗಳಲ್ಲೂ ಭಾಗವಹಿಸುತ್ತಿರುವುದು ಮಾತ್ರ ಪ್ರಶ್ನೆಗೆ ಅರ್ಹವಾಗಿದೆ.
ಏಕೆಂದರೆ, ಮಂಗಳವಾರ ದೆಹಲಿಯ ನಡೆಯುತ್ತಿರುವ ಜೋಶಿ ಪುತ್ರಿಯ ಮೂರನೇ ಆರತಕ್ಷತೆಯಲ್ಲಿ ಭಾಗವಹಿಸುತ್ತಿರುವ ಮುಖ್ಯಮಂತ್ರಿ ಹಾಗೂ ಸಚಿವರು ಹಾಗೂ ನಿಗಮ, ಮಂಡಳಿ ಅಧ್ಯಕ್ಷರು ಅಧಿಕೃತ ಕಾರ್ಯಕ್ರಮದ ಕಾರಣ ನೀಡಿದ್ದಾರೆ ಎನ್ನಲಾಗಿದೆ. ಅಂದರೆ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಅಧಿಕೃತ ಕೆಲಸಗಳ ನಿಮಿತ್ತ ದಿಲ್ಲಿಗೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ದಿಲ್ಲಿಗೆ ಹೋಗುತ್ತಿರುವ ಬಹುತೇಕರ ಉದ್ದೇಶ ಜೋಶಿ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸುವು ದಾಗಿದೆ ಎಂದು ಮೂಲಗಳು ಹೇಳಿವೆ.
ಒಂದು ಬಾರಿ ಆಗಿದೆ: ಪ್ರಹ್ಲಾದ್ ಜೋಶಿ ಪುತ್ರಿ ಅರ್ಪಿತಾ ಅವರ ಆರತಕ್ಷತೆ ಈಗಾಗಲೇ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಡೆದಿದೆ. ಇದರಲ್ಲಿ ಬಹುತೇಕ ಸಚಿವರು, ಶಾಸಕರು ಹಾಗೂ ಬಿಜೆಪಿ ಮುಖಂಡರನ್ನು ಭಾಗವಹಿಸಿದ್ದಾರೆ. ಇದೇ ಸಚಿವರು, ಮಾಜಿ ಸಚಿವರು, ಶಾಸಕರು ಈಗ ಮತ್ತೆ ದಿಲ್ಲಿಯಲ್ಲಿ ನಡೆಯುವ ಆರತಕ್ಷತೆಯಲ್ಲೂ ಭಾಗವಹಿಸುತ್ತಿದ್ದಾರೆ. ಅದರಲ್ಲೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೋಶಿ ಪುತ್ರಿಯ ಹುಬ್ಬಳ್ಳಿಯ ವಿವಾಹ, ಆರತಕ್ಷತೆ, ಬೆಂಗಳೂರಿನ ಆರಕ್ಷತೆಯಲ್ಲಿ ಭಾಗವಹಿಸಿದ್ದು, ಇದೀಗ ದಿಲ್ಲಿಯಲ್ಲಿ ನಡೆಯುವ ಆರತಕ್ಷತೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರುವುದು ಅಚ್ಚರಿ ಉಂಟು ಮಾಡಿದೆ. ಏಕೆಂದರೆ ಜೋಶಿ ಅವರ ಅನೇಕ ಸಂಬಂಽಕರೇ ಮೂರೂ ಆರತಕ್ಷತೆಗಳಲ್ಲಿ ಭಾಗವಹಿಸುತ್ತಿಲ್ಲ. ಹೀಗಿರುವಾಗ ಒಬ್ಬ ಮುಖ್ಯಮಂತ್ರಿ ಅವರು ಬೇರೆ ಸ್ಥಳಗಳಲ್ಲಿ ನಡೆಯುವ ಒಂದೇ ಕಾರ್ಯಕ್ರಮದಲ್ಲಿ ಮೂರು ಬಾರಿ ಭಾಗವಹಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಸರಕಾರ ಮಟ್ಟದ ಮೂಡಿದೆ.
ಆರತಕ್ಷತೆಗೆ ಪುನರ್ ಭೇಟಿ ಏಕೆ?: ಈ ಮಧ್ಯೆ, ಪ್ರಹ್ಲಾದ್ ಜೋಶಿ ಪುತ್ರಿ ಆರತಕ್ಷತೆಗೆ ಮುಖ್ಯಮಂತ್ರಿ ಅವರು ಮೂರು ಭಾರಿ ಭಾಗವಹಿಸಿರುವಾಗ ನಾವೇಕೆ ಸುಮ್ಮನಿರಬೇಕೆನ್ನುವ ನಿಟ್ಟಿನಲ್ಲಿ ಸಚಿವರಾದ ಶ್ರೀರಾಮಲು, ಈಶ್ವರಪ್ಪ, ವಿ. ಸೋಮಣ್ಣ, ಆರ್. ಅಶೋಕ್, ಸಿ.ಸಿ. ಪಾಟೀಲ, ಮುರುಗೇಶ್ ನಿರಾಣಿ, ಶಶಿಕಲಾ ಜೋ, ಗೋವಿಂದ ಕಾರಜೋಳ ಸೇರಿದಂತೆ 17ಕ್ಕೂ ಹೆಚ್ಚು ಸಚಿವರು ದಿಲ್ಲಿಯ ಅಕ್ಬರ್ ರಸ್ತೆಯಲ್ಲಿರುವ ಪ್ರಹ್ಲಾದ್ ಜೋಶಿ ಅವರು ಅಧಿಕೃತ ನಿವಾಸದಲ್ಲಿ ಮಂಗಳವಾರ ಸಂಜೆ 7 ಗಂಟೆ ನಡೆಯುವ ಆರತಕ್ಷತೆಯಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲಿ ಒಂದಿಬ್ಬರನ್ನು ಬಿಟ್ಟರೆ ಬಹುತೇಕರು ಈಗಾಗಲೇ ವಿವಾಹ ಕಾರ್ಯ ಕ್ರಮದಲ್ಲಿ ಭಾಗವಹಿಸಿರುವವರು. ಆದರೂ ಮತ್ತೆ ಭಾಗವಹಿಸುತ್ತಿದ್ದಾರೆ.
ಇದೇ ವೇಳೆ ಈ ಹಿಂದೆ ಭಿನ್ನರ ಬಣದಲ್ಲಿ ಗುರುತಿಸಿಕೊಂಡಿದ್ದ ಸಿ.ಪಿ. ಯೋಗೇಶ್ವರ್, ಬಸವಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕ ಮಾಜಿ ಸಚಿವರು, ಶಾಸಕರೂ ಆರತಕ್ಷತೆಗೆ ತೆರಳುತ್ತಿzರೆ. ಇದಲ್ಲದೆ ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಸಚಿವಕಾಂಕ್ಷಿಗಳಾಗಿರುವ ಜಾರಕಿಹೊಳಿ ಸಹೋದರರು, ಖಾತೆ ಬದಲಾವಣೆಗೆ ಕೂಗು ಹಾಕಿರುವ ಸಚಿವ ಆನಂದ್ ಸಿಂಗ್, ಎಂ.ಟಿ.ಬಿ ಕೂಡ ದಿಲ್ಲಿಗೆ ಹೋಗುವ ಸಾಧ್ಯತೆ ಕಾಣುತ್ತಿದೆ.
ಅಚ್ಚರಿ ಎಂದರೆ ಆರತಕ್ಷತೆಯಲ್ಲಿ ಈಗಾಗಲೇ ಭಾಗವಹಿಸಿರುವ ಸುಮಾರು 80ಕ್ಕೂ ಹೆಚ್ಚಿನ ನಿಗಮ, ಮಂಡಳಿಗಳ ಅಧ್ಯಕ್ಷರ ಪೈಕಿ ಸುಮಾರು 20ಕ್ಕೂ ಹೆಚ್ಚು ನಿಗಮ, ಮಂಡಳಿಗಳ ಅಧ್ಯಕ್ಷರು ಕೂಡ ಮತ್ತೆ ದಿಲ್ಲಿಗೆ ಹೊರಟು ನಿಂತಿದ್ದಾರೆ. ರಾಜ್ಯದಲ್ಲಿ ಇನ್ನೂ 4 ಸಚಿವ ಸ್ಥಾನಗಳು ಖಾಲಿ ಉಳಿದಿವೆ. ನಿಗಮ, ಮಂಡಳಿಗಳ ಅಧ್ಯಕ್ಷರ ಬದಲಾವಣೆ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಈ ಸಂದರ್ಭವನ್ನು ಹೇಗಾದರೂ ಲಾಭ ಮಾಡಿಕೊಳ್ಳಬಹುದೇ ಎನ್ನುವ ಲೆಕ್ಕಾಚಾರ ಅನೇಕ ಶಾಸಕರು, ಮುಖಂಡರದಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ದಿಲ್ಲಿಯಲ್ಲಿ ಏನೆ ನಡೆಯಬಹುದು?
ರಾಜ್ಯ ಪ್ರವಾಸದ ಹುರುಪಿನಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವೇಗಕ್ಕೆ ಬ್ರೇಕ್ ಹೈಕಮಾಂಡ್ ಹಾಕಿದ್ದು, ಇದರಿಂದ ಸಹಜವಾಗಿಯೇ ಅವರಲ್ಲಿ ಮೌನ ಸಿಟ್ಟು ಆವರಿಸಿದೆ. ಇಂಥ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುವುದಾಗಿ ಹೇಳಿಕೆ ನೀಡಿರುವುದು ರಾಜ್ಯ ಬಿಜೆಪಿಯಲ್ಲಿ ಸದ್ದಿಲ್ಲದೆ ಅಲ ಕಲ ಉಂಟು ಮಾಡಿದೆ. ಇದರಿಂದ ಅನೇಕ ರಾಜ್ಯ ಮುಖಂಡರು ಕೂಡ ಗಲಿಬಿಲಿಯಾಗಿ ಆರತಕ್ಷತೆ ನೆಪದಲ್ಲಿ ದಿಲ್ಲಿಗೆ ಪ್ರಯಾಣ ಬೆಳಿಸಿದ್ದಾರೆ.
ಏಕೆಂದರೆ, ಇತ್ತ ಅಮಿತ್ ಅವರು ರಾಜ್ಯಕ್ಕೆ ಭೇಟಿ ನೀಡಿ ಮುಂದಿನ ಚುನಾವಣೆ ನೇತೃತ್ವ ಸಿಎಂ ಬೊಮ್ಮಾಯಿ ಅವರದೇ ಎಂದಿದ್ದಾರೆ. ಅತ್ತ ಸಿಎಂ ಬೊಮ್ಮಾಯಿ ಅವರು ಎಲ್ಲದಕ್ಕೂ ಜೋಶಿ ಅವರನ್ನೇ ಅವಂಬಿಸಿದಂತೆ ಕಾಣುತ್ತಿದ್ದು, ಇದರಿಂದ ದಿಗಿಲಾಗಿರುವ ಸಚಿವರು, ಮಾಜಿ ಸಚಿವರು, ಶಾಸಕರು ದಿಲ್ಲಿಗೆ ದೌಡಾಯಿಸಿ ದ್ದಾರೆ. ಏಕೆಂದರೆ, ಜೋಶಿ ಪುತ್ರಿ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಅನೇಕ ಕೇಂದ್ರ ಸಚಿವರು, ಸಂಸದರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಏನಾದರೂ ಲಾಬಿ ಮಾಡುವ ನಿಟ್ಟಿನಲ್ಲಿ ಅನೇಕ ಮುಖಂಡರು ಯತ್ನಿಸಿದ್ದಾರೆ ಎಂದು ಹೇಳ ಲಾಗಿದೆ.