ಅಹಮದಾಬಾದ್ : ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜೀನಾಮೆ ಬೆನ್ನಲ್ಲೇ ಭಾನುವಾರ ರಾಜಧಾನಿ ಗಾಂಧಿನಗರದಲ್ಲಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಿಎಂ ಆಯ್ಕೆ ಫೈನಲ್ ಆಗಲಿದೆ.
ಮುಂಬರುವ ವರ್ಷದ ಕೊನೆಯಲ್ಲಿ ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದೇ ನಿಟ್ಟಿನಲ್ಲಿ ಅವಧಿಗೂ ಮೊದಲೇ ವಿಜಯ್ ರೂಪಾನಿ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎನ್ನ ಲಾಗಿದೆ.
ಕೇಂದ್ರದ ಆರೋಗ್ಯ ಸಚಿವ ಮನಸುಖ್ ಮಾಂಡವೀಯ, ನಿತಿನ್ ಪಾಟೀಲ್, ಸಿ.ಆರ್.ಪಾಟೀಲ್ ಸೇರಿದಂತೆ ಹಲವರ ಹೆಸರು ಸಿಎಂ ರೇಸ್ ನಲ್ಲಿದ್ದು, ಸದ್ಯದ ರಾಜಕೀಯ ಚಟುವಟಿಕೆಗಳು ಸಂಚಲನ ಮೂಡಿಸಿವೆ.
ಸದ್ಯ ಗುಜರಾತ್ ನಲ್ಲಿ ಬಿಜೆಪಿ ನಾಯಕರಾದ ಬಿ.ಎಲ್.ಸಂತೋಷ್ ಹಾಗೂ ಭೂಪೇಂದ್ರ ಯಾದವ್ ಉಸ್ತುವಾರಿ ವಹಿಸಿದ್ದಾರೆ. ನೂತನ ಸಂಪುಟದಲ್ಲಿ ಕರ್ನಾಟಕದ ಮಾದರಿಯಲ್ಲೇ ಮೇಜರ್ ಸರ್ಜರಿ ಮಾಡುವ ಸಾಧ್ಯತೆ ಇದೆ. ಹೊಸ ಮುಖಗಳಿಗೆ ಮಣೆ ಹಾಕಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮತ್ತೊಂದೆಡೆ, ಗುಜರಾತ್ ನಲ್ಲಿ ಪಾಟಿದಾರ್ ಸಮುದಾಯ ಹೆಚ್ಚಿನ ಸಂಖ್ಯೆಯ ಮತದಾರರಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಸಮುದಾಯದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ, ಪಾಟಿದಾರ್ ಸಮುದಾಯದ ನಾಯಕರಿಗೆ ಸಿಎಂ ಆಗಿ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದು ಬಂದಿದೆ.