ಮೂರ್ತಿ ಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಯಡಿಯೂರಪ್ಪ ಆಗಿನ್ನೂ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲೊಮ್ಮೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆಡಿದ ಒಂದು ಮಾತು ರಾಜಕೀಯ
ವಲಯಗಳ ಅಚ್ಚರಿಗೆ ಕಾರಣವಾಯಿತು.
ಹಿಂದೆ ಬಿಜೆಪಿ ಜತೆ ಕೈ ಜೋಡಿಸಿ ಅಧಿಕಾರ ಹಿಡಿದ ಕಾಲದಲ್ಲಿ ನನಗೆ ನೋವಾಗಿರಲಿಲ್ಲ. ಆದರೆ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಕ್ಕಾಗಿ ಹಿಂಸೆ ಅನುಭವಿಸಿದೆ ಎಂಬುದು ಕುಮಾರಸ್ವಾಮಿ ಅವರ ಮಾತಾಗಿತ್ತು. ಅಂದ ಹಾಗೆ ಕುಮಾರಸ್ವಾಮಿ ಅವರು ಈ ಮಾತುಗಳನ್ನಾಡಲು ತೆರೆಯ ಹಿಂದೆ ನಡೆದ ಒಂದು ಬೆಳವಣಿಗೆ ಕಾರಣವಾಗಿತ್ತು. ಅದೆಂದರೆ, ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ, ಮುಂದಿನ ದಿನಗಳಲ್ಲಿ ಪಕ್ಷ ನಿಮಗೆ ದೊಡ್ಡ ಗೌರವ ನೀಡುತ್ತದೆ ಎಂದು
ಬಿಜೆಪಿಯ ಕೆಲ ರಾಷ್ಟ್ರೀಯ ನಾಯಕರು ಅವರಿಗೆ ಹೇಳಿದ್ದರು.
ಇದರಿಂದ ಉತ್ತೇಜಿತರಾದ ಕುಮಾರಸ್ವಾಮಿ ಅವರು: ಮೈತ್ರಿಯ ವಿಷಯದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಉತ್ತಮ ಎಂಬ ಸಂದೇಶ ರವಾನಿಸಿದರು. ಆದರೆ ಅವರಾಡಿದ ಮಾತು ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಕನಲಿದರು. ಅದರ ಬೆನ್ನಲ್ಲೇ ರಾಜ್ಯ ಬಿಜೆಪಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರುಣ್ ಸಿಂಗ್ ಅವರು: ಜೆಡಿಎಸ್ ಮುಳುಗುತ್ತಿರುವ ಹಡಗು. ಅದರೊಂದಿಗೆ ಮೈತ್ರಿಯ ಅಗತ್ಯವೇ ಇಲ್ಲ ಎಂದರು. ಅಂದ ಹಾಗೆ ಅವತ್ತು ಹೊರಬಿದ್ದ ಧ್ವನಿ ಅರುಣ್‌ಸಿಂಗ್ ಅವರದಾದರೂ ಭಾವ ಮಾತ್ರ ಯಡಿಯೂರಪ್ಪ ಅವರದಾ ಗಿತ್ತು.
ಯಾವಾಗ ಇಂತಹ ಮಾತುಗಳು ಹೊರಬಿದ್ದವೋ? ಇದಾದ ನಂತರ ಕುಮಾರಸ್ವಾಮಿ ಕೂಡಾ ಉಲ್ಟಾ ಹೊಡೆ ದರು. ನಮಗೂ ಬಿಜೆಪಿಯ ಜತೆ ಮೈತ್ರಿಯ ಅಗತ್ಯವಿಲ್ಲ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಏನು ಮಾಡ ಬೇಕೋ? ಅದನ್ನು ಮಾಡುತ್ತೇವೆ ಎಂದರು. ಅಲ್ಲಿಗೆ ಆ ಎಪಿಸೋಡು ಮುಕ್ತಾಯವಾಯಿತು. ಇದಾದ ನಂತರ ಕರ್ನಾಟಕದ ರಾಜಕಾರಣದಲ್ಲಿ ಮಹತ್ವದ ಪಲ್ಲಟವಾಯಿತು. ಬಹುಮುಖ್ಯವಾಗಿ ಮುಖ್ಯಮಂತ್ರಿ ಯಾಗಿದ್ದ ಯಡಿಯೂರಪ್ಪ ಅವರು ಕೆಳಗಿಳಿದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದರು. ಆದರೆ ಈಗ ಇಡೀ ದೃಶ್ಯವೇ ಬದಲಾಗಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಜತೆಗಿನ ಸಂಬಂಧವನ್ನು ಕಡಿದುಕೊಂಡು ಜೆಡಿಎಸ್ ಪ್ರತ್ಯೇಕವಾಗಿ ನಿಂತ ಪರಿಣಾಮವಾಗಿ ಬಿಜೆಪಿ ಅಧಿಕಾರ ಹಿಡಿದು ಹಲ ದಿನಗಳಾಗಿವೆ.
ಇದು ತೆರೆಯ ಹಿಂದೆ ಬಿಜೆಪಿ ಹಾಗೂ ಜೆಡಿಎಸ್‌ನ ಮೈತ್ರಿ ಮಾತುಕತೆ ಬಹುಮುಂದೆ ಹೋಗಿದೆ ಎಂಬುದರ ನಿದರ್ಶನ. ಅಷ್ಟೇ ಅಲ್ಲ, ಈಗ ಮೂರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ನಂತರ ಅದು ಮತ್ತಷ್ಟು ದೂರ ಹೋಗಿದೆ. ಗುಲ್ಬರ್ಗ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯುವ ವಿಷಯದಲ್ಲಂತೂ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ನಡೆಯುತ್ತಿರುವ ಮಾತುಕತೆಯನ್ನು ನೋಡಿದರೆ ಮತ್ತೊಮ್ಮೆ ಕರ್ನಾಟಕದಲ್ಲಿ ಮೈತ್ರಿಯುಗ ಶುರುವಾಗುತ್ತದೆ ಎಂಬ ಭಾವನೆ ಮತ್ತಷ್ಟು ದಟ್ಟವಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಇತ್ತೀಚೆಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ರೀತಿಯನ್ನು ನೋಡಿದವರಿಗೆ ಆ ವಿಷಯದಲ್ಲಿ ಈಗ ಯಾವ ಅನುಮಾನವೂ ಉಳಿದಿರಲಾರದು.
ಅಂದ ಹಾಗೆ ಒಂದು ಎಪಿಸೋಡು ಕೆಲವೇ ಕಾಲದಲ್ಲಿ ಹೇಗೆ ರೂಪ ಬದಲಿಸಿ ಕಣ್ಣ ಮುಂದೆ ಉದ್ಭವವಾಗಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅರ್ಥಾತ್, ಯಡಿಯೂರಪ್ಪ ಅವರಿದ್ದ ಕಾಲದಲ್ಲಿ ಬಿಜೆಪಿ ಜತೆಗಿನ ಮೈತ್ರಿಯ ಬಗ್ಗೆ ಜೆಡಿಎಸ್ ಪಕ್ಷವೇ ಒಲವು ತೋರಿಸಿತ್ತು. ಆದರೆ ಈಗ ಬಿಜೆಪಿಯೇ ಕಲ್ ಕಲರ್ ಡ್ರೆಸ್ಸು ಹಾಕಿಕೊಂಡು ಮೈತ್ರಿಗಾಗಿ ಕಾತರಿಸುತ್ತಿದೆ. ಒಬ್ಬ ಜನನಾಯಕನ ಹಿಡಿತದಿಂದ ಕಳಚಿಕೊಂಡರೆ ಒಂದು ಪಕ್ಷಕ್ಕೆ ಏನಾಗುತ್ತದೆ? ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಹದಿಮೂರು ವರ್ಷಗಳ ಹಿಂದೆ ಸ್ವಾವಲಂಬಿಯಾಗಲು ಹೊರಟ ಪಕ್ಷ, ಈಗ ಪರಾವಲಂಬಿ ಯಾಗಲು ಹವಣಿಸುತ್ತಿದೆ ಎನ್ನದೆ ವಿಧಿ ಯಿಲ್ಲ. ಒಂದು ದೃಷ್ಟಿಯಿಂದ ಇದು ರಾಮಕೃಷ್ಣ ಹೆಗಡೆ ಅವರ ಟೆಕ್ನಿಕ್ ಆಗಿತ್ತು.
1983 ರಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರಕಾರದ ಮುಖ್ಯಮಂತ್ರಿಯಾದ ಹೆಗಡೆ ಅವರು ಶುರುವಿನಿಂದಲೇ ಹಲವು ಕಿರಿಕಿರಿ ಅನುಭವಿಸಿದರು.
ಮೊದಲನೆಯದಾಗಿ ಜನತಾ ಪಕ್ಷದ ಸರಕಾರಕ್ಕೆ ಬೆಂಬಲ ನೀಡಿದ್ದ ಬಿಜೆಪಿ ಹಲವು ಷರತ್ತುಗಳನ್ನು ಹಾಕುತ್ತಾ, ಆಡಳಿತದ ಮೇಲೆ ಬಿಗಿ ಹಿಡಿತ ಸಾಧಿಸಲು ಯತ್ನಿಸು ತ್ತಲೇ ಇತ್ತು. ಅದೇ ರೀತಿ ಅವರು ಮುಖ್ಯಮಂತ್ರಿ ಹುದ್ದೆಗೇರಿದ ಪರಿಯೇ ಹಲವರ ಟೀಕೆಗಳಿಗೆ ಗುರಿಯಾಗಿತ್ತು.ಹೀಗಾಗಿ ವ್ಯಾಕುಲರಾಗಿದ್ದ ರಾಮಕೃಷ್ಣ ಹೆಗಡೆ ಅವರಿಗೆ ೧೯೮೪ ರ ಲೋಕಸಭಾ ಚುನಾವಣೆ ವರದಾಯಕವಾಗಿ ಕಂಡಿತು. ಅಷ್ಟೊತ್ತಿಗಾಗಲೇ ಪ್ರಧಾನಿ ಇಂದಿರಾಗಾಂಧಿ ಹತ್ಯೆಯಾಗಿತ್ತು.
ಇಂತಹ ಹತ್ಯೆಯ ಹಿನ್ನೆಲೆಯಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷಕ್ಕೆ ದೇಶಾದ್ಯಂತ ಅನುಕಂಪದ ಅಲೆ ನೆರವಾಯಿತು. ಅದೇ ರೀತಿ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ಅದ್ಧೂರಿ ಗೆಲುವು ಗಳಿಸಿತು. ಅವತ್ತು ಪಕ್ಷಕ್ಕಾದ ಸೋಲೇ ಹೆಗಡೆ ಅವರಿಗೆ ನೆಪವಾಗಿದ್ದು ನಿಜ. ಹೀಗಾಗಿ ಅವರು, ಚುನಾವಣೆಯಲ್ಲಿ ಸೋತಿದ್ದೇವೆ. ಹೀಗಾಗಿ ನೈತಿಕವಾಗಿ ನಾವು ಮುಂದುವರಿಯುವುದು ಕಷ್ಟ ಎಂದರು. ವಿಧಾನಸಭೆ ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋದರು. ಚುನಾವಣೆಯಲ್ಲಿ ಜನತಾ ಪಕ್ಷ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯಿತು. ಆ ಮೂಲಕ ರಾಮಕೃಷ್ಣ ಹಗಡೆ ಕೂಡಾ ಹಲವು ಕಿರಿಕಿರಿಗಳಿಂದ ಮುಕ್ತರಾದರು. ಮೊದಲನೆಯದಾಗಿ
ಸರಕಾರ ಮಾಡಲು ಬೇರೆಯವರ ಬೆಂಬಲ ಬೇಕು ಎಂಬ ಅಸಹಾಯಕತೆಯಿಂದ ದೂರವಾದರು. ಅದೇ ರೀತಿ ತಾವೊಬ್ಬ ಜನ ಮೆಚ್ಚಿದ ನಾಯಕ ಎಂಬುದನ್ನು ಸಾಬೀತುಪಡಿಸಿದರು.
2008 ರಲ್ಲಿ ಯಡಿಯೂರಪ್ಪ ಕೂಡಾ ಇದೇ ಮಾರ್ಗ ಹಿಡಿದರು. ಯಶಸ್ವಿಯೂ ಆದರು. ಅವತ್ತು ಸರಕಾರ ರಚಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ ಸಿಗದೇ ಇದ್ದರೂ ಪಕ್ಷೇತರರ ಬೆಂಬಲ ಕ್ರೋಡೀಕರಿಸಿಕೊಂಡು ಅಧಿಕಾರ ಹಿಡಿದರು. ಆ ಮೂಲಕ ಸರಕಾರ ರಚನೆಗೆ ಮತ್ತೊಂದು ಪಕ್ಷದ ಸಹಕಾರ ನಮಗೆ ಬೇಕಿಲ್ಲ ಎಂಬ ಸಂದೇಶ ರವಾನಿಸಿದರು. ಅಂದಿನಿಂದ 2018 ರವರೆಗೂ ಯಡಿಯೂರಪ್ಪ ಅವರ ಉದ್ದೇಶವೇ ಪಕ್ಷ ಸ್ವಾವಲಂಬಿಯಾಗಬೇಕು ಎಂಬುದಾಗಿತ್ತು. ಆದರೆ ಯಾವಾಗ ರಾಜಕೀಯ ಪಲ್ಲಟಗಳ ನಡುವೆ ಯಡಿಯೂರಪ್ಪ ಅವರು ಕೆಳಗಿಳಿದರೋ? ಇದಾದ ನಂತರ ರಾಜ್ಯ ಬಿಜೆಪಿಗೆ ಸ್ವಾವಲಂಬಿ ನಡೆಗಿಂತ ಪರಾವಲಂಬಿ ನಡೆ ಆಪ್ಯಾಯಮಾನವಾಗಿ ಕಾಣತೊಡಗಿದೆ.
ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜತೆಗೂಡಿ ಅಧಿಕಾರ ಹಿಡಿಯಲು ಒಲವು ತೋರಿಸು ತ್ತಾರೆ. ಅದರ ಬೆನ್ನಲ್ಲೇ ಕಂದಾಯ ಮಂತ್ರಿ ಆರ್.ಅಶೋಕ್ ಅವರು ಕುಮಾರಸ್ವಾಮಿ ಅವರಿದ್ದಲ್ಲಿಗೆ ಹೋಗಿ ಸಂಧಾನದ ಮಾತುಕತೆ ನಡೆಸುತ್ತಾರೆ. ಅಲ್ಲಿಗೆ ಭವಿಷ್ಯದ ಬಿಜೆಪಿ ಯಾವ ಎತ್ತರಕ್ಕೆ ತಲುಪಬಹುದು? ಎಂಬುದು ನಿಚ್ಚಳವಾಗಿದೆ. ಅಷ್ಟೇ ಅಲ್ಲ, ಅದರ ಹೆಜ್ಜೆ ಹಲವು ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ. ಮೊದಲನೆಯ ದಾಗಿ, ಭವಿಷ್ಯದಲ್ಲಿ ಜೆಡಿಎಸ್ ನೆರವಿಲ್ಲದೆ ತಾವು ಅಧಿಕಾರ ಹಿಡಿಯುವುದು ಕಷ್ಟ ಎಂಬ ನಿಲುವಿಗೆ ಬಿಜೆಪಿ ಬಂದಿದೆ. ಅಂದರೆ? ಯಡಿಯೂರಪ್ಪ ಅವರ ನಂತರ ರಾಜ್ಯ ಬಿಜೆಪಿ ಜನನಾಯಕರ ಕೊರತೆ ಎದುರಿಸುತ್ತಿದೆ.
ಅಂದ ಹಾಗೆ ಕರ್ನಾಟಕದಲ್ಲಿ ಜನನಾಯಕರಾಗಿ ಹೊರಹೊಮ್ಮಿರುವ ಸದ್ಯದ ನಾಯಕರೆಂದರೆ ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ. ಅರ್ಥಾತ್, ಇವರು ತಮ್ಮ ಸಮುದಾಯದ ಗಣನೀಯ ಪ್ರಮಾಣದ ಮತಗಳನ್ನು ತಾವು ಬಯಸಿದವರಿಗೆ ವರ್ಗಾಯಿಸಬಲ್ಲರು. ಆದರೆ ಬಿಜೆಪಿಯ ರಾಷ್ಟ್ರೀಯ ನಾಯಕರಿಗೀಗ ಯಡಿಯೂರಪ್ಪ ಬೇಕಿಲ್ಲ. ತಮಗೆ ಸವಾಲು ಹಾಕಬಲ್ಲಂತಹ ಯಡಿಯೂರಪ್ಪ ಅವರ ನಡೆ ಅವರಿಗೆ ಇಷ್ಟವಿಲ್ಲ. ಒಂದು ವೇಳೆ ಅವರಿಗೆ ಯಡಿಯೂರಪ್ಪ ಅವರ ವಿಷಯದಲ್ಲಿ ಇನ್ನೂ ವಿಶ್ವಾಸ ಇದ್ದಿದ್ದರೆ ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಎದುರಿಸುತ್ತೇವೆ ಎಂದು ಹೇಳುತ್ತಿರಲಿಲ್ಲ.
ಬದಲಿಗೆ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎನ್ನುತ್ತಿದ್ದರು. ಸಾಮಾನ್ಯ ಸಂದರ್ಭಗಳಲ್ಲಿ ಆಡಳಿತ ಪಕ್ಷವನ್ನು ಚುನಾವಣೆಯಲ್ಲಿ ಮುಖ್ಯ ಮಂತ್ರಿಗಳೇ ಮುನ್ನಡೆಸುವುದು ಸಂಪ್ರದಾಯ. ಆದರೆ ಬಸವರಾಜ ಬೊಮ್ಮಾಯಿ ಅವರು ತಮ್ಮ ನಾಯಕತ್ವದ ವರ್ಚಸ್ಸಿನಿಂದ ಬಿಜೆಪಿ ಈ ಮಟ್ಟಕ್ಕೇರು ವಂತೆ ಮಾಡಿಲ್ಲ, ಅದೇ ರೀತಿ ಅವರು ಮೂಲ ಬಿಜೆಪಿಯವರೂ ಅಲ್ಲ,ಅವರನ್ನು ಈ ಜಾಗಕ್ಕೆ ತಂದ ವಿಷಯದಲ್ಲಿ ಪಕ್ಷದ ಬಹುತೇಕ ನಾಯಕರಿಗೆ ಇನ್ನೂ ಅಸಮಾಧಾನ ಹೋಗಿಲ್ಲ. ಹೀಗಿರುವಾಗ ಬೊಮ್ಮಾಯಿ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಪಕ್ಷದ ನಾಯಕ ಅಮಿತ್ ಷಾ ನೀಡಿದ ಹೇಳಿಕೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗ ಬಿಜೆಪಿಯ ಒಂದು ಬಣ ಜೆಡಿಎಸ್ ಜತೆಗಿನ ಮೈತ್ರಿಗೆ ಹಾತೊರೆಯುತ್ತಿರುವುದನ್ನು ನೋಡಿದರೆ ಅನುಮಾನವೇ ಬೇಡ, ಬೊಮ್ಮಾಯಿ ನೇತೃತ್ವದಲ್ಲಿ ದಡ ಸೇರುವ ನಂಬಿಕೆ ಯಾರಿಗೂ ಇಲ್ಲ. ಅಂದ ಹಾಗೆ ಈ ನಡುವೆ ಬಸವರಾಜ ಬೊಮ್ಮಾಯಿ ಅವರು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಸತತ ಪ್ರಯತ್ನ
ನಡೆಸುತ್ತಿರುವುದೇನೋ ನಿಜ.ಆದರೆ ಅವರ ಇಂತಹ ಎಲ್ಲ ಪ್ರಯತ್ನಗಳೂ ಕರ್ನಾಟಕದ ವಿವಿಧ ನಾಯಕರ ಕಾಮನ್ ನಡೆ. ಉದಾಹರಣೆಗೆ ಮೊನ್ನೆ ಶಿಗ್ಗಾಂವಿ ಯಲ್ಲಿ ನಡೆದ ಘಟನೆಯನ್ನೇ ಗಮನಿಸಿ,ನೀರಿನ ಕೊರತೆಯ ಹಿನ್ನೆಲೆಯಲ್ಲಿ ಬಂದ ದೂರನ್ನು ಪರಿಗಣಿಸಿ ಅವರು ಅಧಿಕಾರಿಗಳಿಗೆ ಕರೆ ಮಾಡಿದ ಕೂಡಲೇ
ಸಮಸ್ಯೆ ಬಗೆಹರಿಯಿತಂತೆ.ಇದನ್ನೇ ಮುಖ್ಯವಾಗಿಟ್ಟುಕೊಂಡು ಬೊಮ್ಮಾಯಿ ಹೇಗೆ ಜನರಿಗೆ ಹತ್ತಿರವಾಗುತ್ತಿದ್ದಾರೆ ನೋಡಿ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ವಸತಿ ಸಚಿವರಾಗಿರುವ ವಿ.ಸೋಮಣ್ಣ ಅವರ ಕ್ಷೇತ್ರದಲ್ಲಿ ಇಂತಹ ಎಪಿಸೋಡುಗಳು ದಿನಕ್ಕೊಂದು ಎರಡರಂತೆ ನಡೆಯುತ್ತಲೇ ಇರುತ್ತವೆ.
ಸೋಮಣ್ಣ ಅವರು ಕ್ಷೇತ್ರದಲ್ಲಿ ಪರಿಶೀಲನೆ ನಡೆಸಲು ಹೋಗುತ್ತಾರೆ. ಹೀಗೆ ಹೋದಾಗ ತಮಗೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ಜನ ದೂರು ತ್ತಾರೆ. ಇದನ್ನು ಕೇಳಿ ಕೆರಳುವ ಸೋಮಣ್ಣ ಅವರು ಅಲ್ಲಿಂದಲೇ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಾರಾಮಾರಾ ಬೈಯ್ಯುತ್ತಾರೆ. ಇಂತಿಷ್ಟು ಹೊತ್ತಿನಲ್ಲಿ ಈ ಜನರ ಸಮಸ್ಯೆ ಬಗೆಹರಿಯದಿದ್ದರೆ ನೀನು ನೆಮ್ಮದಿಯಾಗಿರಲು ನಾನು ಬಿಡುವುದಿಲ್ಲ ಎಂದು ಕೂಗಾಡುತ್ತಾರೆ.ಅಲ್ಲಿಗೆ ಸಮಸ್ಯೆ ಬಗೆಹರಿಯುತ್ತದೆ. ಸೋಮಣ್ಣ ಅವರ ಕ್ಷೇತ್ರದಲ್ಲಿ ಪ್ರತಿದಿನವೂ ನಡೆಯುವ ಇಂತಹ ಎಪಿಸೋಡುಗಳು ಶಿಗ್ಗಾಂವಿಯಲ್ಲಿ ಪುನ ರಾವರ್ತನೆಯಾದ ಕೂಡಲೇ ಬಸವರಾಜ ಬೊಮ್ಮಾಯಿ ಅವರನ್ನು ರಾಬಿನ್ ಹುಡ್ ಎಂಬಂತೆ ಪ್ರತಿಬಿಂಬಿಸುವ ಯತ್ನವಾಗುತ್ತದೆ.
ಅಧಿಕಾರಕ್ಕೆ ಬರಬರುತ್ತಲೇ ಅವರು ಎಷ್ಟು ಜನಪರ ಘೋಷಣೆಗಳನ್ನು ಮಾಡಿದರು ನೋಡಿ ಎಂದು ತಾರೀಖು ಮಾಡುವ ಕೆಲಸವಾಗುತ್ತದೆ. ಆದರೆ ರಾಜ್ಯ ಸರಕಾರದ ಬಜೆಟ್ ಗೆ ಲಭ್ಯವಾಗುವ ಹಣವನ್ನು ಹೇಗೆ ಹಂಚಲಾಗಿದೆ? ಎಂಬ ವಿವರ ಬಲ್ಲವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತಿರುತ್ತದೆ. ಅದೆಂದರೆ, ಈಗಾಗಲೇ ಯಡಿಯೂರಪ್ಪ ಅವರು ಘೋಷಿಸಿರುವ ಕಾರ್ಯಕ್ರಮಗಳಿಗೆ ನಿಗದಿಯಾದ ಹಣಕ್ಕೆ ಕತ್ತರಿ ಹಾಕದೆ ಬೊಮ್ಮಾಯಿ ಅವರು ಯಾವ ಹೊಸ
ಯೋಜನೆಗಳನ್ನೂ ಘೋಷಿಸಲು ಸಾಧ್ಯವೇ ಇಲ್ಲ. ಹಾಗೆ ಕತ್ತರಿ ಹಾಕಿ ಘೋಷಿಸಿದರೆ ಈಗಾಗಲೇ ಘೋಷಣೆಯಾದ ಇನ್ಯಾವುದೋ ಯೋಜನೆಯನ್ನು ಮುಳುಗಿಸಿದಂತಾಗುತ್ತದೆ.
ಹೀಗಾಗಿ ಅವರ ವೈಯಕ್ತಿಕ ಇಮೇಜ್ ಹೆಚ್ಚಿಸಲು ನಡೆಯುತ್ತಿರುವ ಗಿಮಿಕ್‌ಗಳೇನಿವೆ? ಇದರಿಂದ ರಾಜ್ಯದ ಹಿತ ಸಾಧನೆಯಾಗುವುದಿಲ್ಲ. ಹೆಚ್ಚೆಂದರೆ ಮುಖ್ಯ ಮಂತ್ರಿಯಾದವರು ಎಷ್ಟು ಸಿಂಪಲ್ ಅಲ್ವಾ? ಎಂದು ಸಾರ್ವಜನಿಕರು ಖುಷಿಪಟ್ಟುಕೊಳ್ಳಬಹುದು ಅಷ್ಟೇ. ಆದರೆ ನಿತ್ಯದ ಬದುಕಿನಲ್ಲಿ ತಮ್ಮ ಕೆಲಸಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವ ಜನ ಕೊಡಬೇಕಾದ ಹಫ್ತಾ ಕೊಡಲೇಬೇಕು. ಅಂತಹ ಸಂಕಟದಿಂದ ಅವರು ಪಾರಾಗುವಂತೆ ಮಾಡಿದರೆ ಬೊಮ್ಮಾಯಿ ಅವರ ಆಡಳಿತ ಜನರಿಗೆ ತಲುಪುತ್ತದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಅವರ ಆಡಳಿತದಿಂದ ಜನರಿಗೂ ಲಾಭವಾಗಿಲ್ಲ. ಬಿಜೆಪಿಗೂ ಲಾಭವಾಗಿಲ್ಲ.