Friday, 22nd November 2024

ನಷ್ಟ ಸರಿದೂಗಿಸಲು ಎರಡು ಹೆಚ್ಚುವರಿ ಟಿ-20 ಪಂದ್ಯ: ಬಿಸಿಸಿಐ

ನವದೆಹಲಿ: ಅಂತಿಮ ಟೆಸ್ಟ್ ಪಂದ್ಯ ರದ್ದುಗೊಂಡ ಬಳಿಕ ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಉಂಟಾದ ನಷ್ಟವನ್ನು ಸರಿದೂಗಿಸಲು ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಎರಡು ಹೆಚ್ಚುವರಿ ಪಂದ್ಯ ಗಳನ್ನು ಆಡಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ‘ಐದನೇ ಟೆಸ್ಟ್‌ ಪಂದ್ಯ ರದ್ದತಿಯಿಂದಾಗಿ ಉಂಟಾಗಿರುವ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಇಸಿಬಿ ಒಪ್ಪಿಕೊಂಡರೆ ಮುಂದಿನ ವರ್ಷ ಟೀಂ ಇಂಡಿಯಾ ಎರಡು ಹೆಚ್ಚುವರಿ ಟಿ-20 ಪಂದ್ಯಗಳನ್ನು ಆಡಲಿದೆ’ ಎಂದು ಹೇಳಿದ್ದಾರೆ.

‘ಭಾರತ ತಂಡ 2022ರ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಆಗ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಬದಲಾವಣೆ ಮಾಡಿ ಐದು ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಾಗಿದ್ದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಕೋವಿಡ್ ಆತಂಕದಿಂದಾಗಿ ರದ್ದು ಗೊಳಿಸಲಾಗಿತ್ತು. ಇದರಿಂದ ಸುಮಾರು 40 ಮಿಲಿಯನ್ ಪೌಂಡ್‌ಗಳಷ್ಟು ನಷ್ಟ ಉಂಟಾಗಿದ್ದು, ಪರಿಹಾರ ಸೂಚಿಸುವಂತೆ ಇಸಿಬಿ, ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಮೊರೆ ಹೋಗಿತ್ತು.

ಭಾರತದ ಪಾಳಯದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಪರಿಣಾಮ ಅಂತಿಮ ಟೆಸ್ಟ್ ಆರಂಭಕ್ಕೂ ಕೇವಲ ಎರಡು ತಾಸಿಗೂ ಮುನ್ನ ಪಂದ್ಯ ರದ್ದು ಗೊಳಿಸಲು ತೀರ್ಮಾನಿಸಲಾಗಿತ್ತು. ಭಾರತೀಯ ಆಟಗಾರರ ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್ ಬಂದರೂ ಕೋವಿಡ್ ಆತಂಕದಿಂದಾಗಿ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಅಂತಿಮ ಪಂದ್ಯವನ್ನು ಭಾರತ ಬಿಟ್ಟುಕೊಟ್ಟಿದೆ ಎಂದು ಐಸಿಸಿ ತೀರ್ಪು ಕಲ್ಪಿಸಿದ್ದಲ್ಲಿ ಸರಣಿ 2-2ರಲ್ಲಿ ಸಮಬಲವಾಗಲಿದೆ.