Sunday, 15th December 2024

ಸಂಪತ್ತು ಸದುಪಯೋಗವಾಗಲಿ..

ಅಭಿಮತ

ಸಂದೀಪ್ ಶರ್ಮಾ

mooteri.sandeepsharma@gmail.com

ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಪೂಜ್ಯನೀಯ ಎನ್ನುವುದು ಅತ್ಯಂತ ಬೆಲೆಬಾಳುವ ಸಂಪತ್ತಾಗಿ ಪರಿಣಮಿಸಿದೆ. ದೇವ ಮಾನವರ ಪ್ರಾಪಂಚಿಕ ಸಂಪತ್ತು ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಹೊರ ಜಗತ್ತಿಗೆ ಪರಿಚಯವಾಗುತ್ತಿರುವುದು ಇಂದಿನ ಬೆಳವಣಿಗೆಯಾಗಿದೆ. ತಿರುವನಂತಪುರದ ಶೇಷ ಶಯನ ಅನಂತ ಪದ್ಮನಾಭ ಸ್ವಾಮಿಯ ಭಂಡಾರದಲ್ಲಿ ಅಡಗಿದ್ದ ಗುಪ್ತ ನಿಧಿಯ ಕುರಿತು ದೇಶಾದ್ಯಂತ ಕುತೂಹಲ ಕೆರಳಿಸಿದ್ದು, ಆ ವಿಚಾರ ಎಲ್ಲರಿಗೂ ತಿಳಿದ ವಿಚಾರವೇ. ಇದರ ಬೆನ್ನ ಹೈದರಾಬಾದ್‌ನಲ್ಲೂ ಅನಂತನ ಸಂಪತ್ತು ಪತ್ತೆಯಾಗಿರುವುದು ಜಗಜ್ಜಾಹೀರವಾಗಿದೆ.

ಹೈದರಾಬಾದಿನಲ್ಲಿರುವ ಸುಮಾರು 20 ಸಾವಿರ ಕೋಟಿ ಮೌಲ್ಯದ ಸಂಪತ್ತು ಎಂದು ಅಂದಾಜಿಸಲಾಗಿದ್ದು, ಕೇರಳದ ಸಂಪತ್ತಿಗೆ ಕೂಡಿಸಿದರೆ ಸಿಗುವ ಮೊತ್ತ ಸುಮಾರು 1.70 ಲಕ್ಷ ಕೋಟಿ ರುಪಾಯಿ ಸಂಪತ್ತನ್ನು ನಿಜಕ್ಕೂ ಅತಂತ್ರ ಸ್ಥಿತಿಯಲ್ಲಿರುವುದು ವಿಪರ್ಯಾಸವೇ ಸರಿ. ಪುಟ್ಟಪರ್ತಿಯ ಭಗವಾನ್ ಸತ್ಯಸಾಯಿ ಬಾಬಾ 40 ಸಾವಿರ ಕೋಟಿ ರುಪಾಯಿಗಳಿಗೂ ಅಧಿಕ ಸಂಪತ್ತಿನ ಒಡೆಯರಾಗಿದ್ದರು.

ಕರ್ನಾಟಕದಲ್ಲಿಯೂ ಹಲವಾರು ಮುಜರಾಯಿ ದೇವಸ್ಥಾನಗಳನ್ನು ಹೊಂದಿದೆ, ಇಲ್ಲಿಯೂ ಭಕ್ತರ ಕಾಣಿಕೆಯೇ ಹೆಚ್ಚು. ಮೊದಲಿದ್ದ ಕಾಂಗ್ರೆಸ್ ಸರಕಾರಕ್ಕಿಂತ ಮುಂಚೆ ಬಿಜೆಪಿಯು ಆಡಳಿತದಲ್ಲಿದ್ದಾಗ ದೇವಸ್ಥಾನಗಳಿಗೆ ಸರಕಾರದಿಂದ ಅನುದಾನಗಳನ್ನು ಬಿಡುಗಡೆ ಮಾಡುವ ಕೆಲಸವನ್ನು ಮಾಡುತ್ತಿತ್ತು. ಪುನಃ ಗೆದ್ದು ಬಂದ ಬಿಜೆಪಿ ಸರಕಾರವು ಮತ್ತೊಮ್ಮೆ ಅನುದಾನವನ್ನು ನೀಡಲು ತಯಾರಿ ನಡೆಸುವಾಗಲೇ ಕರೋನಾ ಮಹಾಮಾರಿಯ ಅಟ್ಟಹಾಸ ತಡೆ ಗೋಡೆಯಾಗಿ ನಿರ್ಮಿತವಾಗಿದೆ.

ಖಜಾನೆಯು ಖಾಲಿಯಾದ್ದರಿಂದ ಅನುದಾನವು ಪ್ರಕಟಗೊಳ್ಳುತ್ತಿಲ್ಲ, ಸದ್ಯಕ್ಕೆ ಅದರ ಕಾರ್ಯವು ತಾತ್ಕಾಲಿಕ ವಾಗಿ ನಿಂತಿದೆ. ತಿರುವನಂತಪುರ ಹಾಗೂ ಹೈದರಾಬಾದ್‌ನ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿರುವ ದೇವರು ಪ್ರಪಂಚದ ಅತ್ಯಂತ ಶ್ರೀಮಂತ ದೇವರು ಎಂಬುದು ಈಗ ಸಾಬೀತಾಗಿದೆ. ಲಕ್ಷಗಟ್ಟಲೇ ಕೋಟಿ ರುಪಾಯಿ ಮೊತ್ತದ ಸಂಪತ್ತನ್ನು ಕಳೆದ ಹಲವು ಶತಮಾನಗಳಿಂದ ಅಲ್ಲಿ ಕೂಡಿಡಲಾಗಿತ್ತು. ಈ ಸಂಪತ್ತಿಗೆ ಹಲವು ಮೂಲಗಳಿವೆ. ಒಂದು ಭಾಗ ಭಕ್ತರ ಕಾಣಿಕೆಯ ಮೂಲಕ ಬಂದರೆ, ಹೆಚ್ಚಿನ ಭಾಗ ರಾಜಾ ಮಾರ್ತಾಂಡ ವರ್ಮನ ತಿಜೋರಿಯಿಂದ ಬಂದಿದೆ.

ಮಾರ್ತಾಂಡವರ್ಮನ ಈ ಸಂಪತ್ತು ಬಡ ರೈತರ ಮೇಲಿನ ತೆರಿಗೆ, ಗುಲಾಮ ವ್ಯಾಪಾರದಿಂದ ಬಂದ ಆದಾಯ ಹಾಗೂ ಇತರ ರಾಜರಿಂದ ವಶಪಡಿಸಿಕೊಂಡ ಸಂಪತ್ತಿನಿಂದ ಬಂದಿರುವುದಾಗಿ ಇತಿಹಾಸವೇ ದೃಢೀಕರಿಸಿದೆ. ಸಂಪತ್ತಿನ ಮೂಲವೇನೋ ಗೊತ್ತಾಗಿದೆ. ಸತತ 18 ತಿಂಗಳುಗಳಿಂದ ಕರೋನಾ ಮಹಾ ಮಾರಿಯು ಇಡೀ ದೇಶವನ್ನು ಆತಂಕದ ಸ್ಥಿತಿಗೆ ತಂದೊಡ್ಡಿರುವುದು ಖೇದದ ಸಂಗತಿ. ಬಡವರ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ತಿರುವನಂತಪುರದ ಅನಂತ ಪದ್ಮನಾಭ ದೇವಾಲಯದಲ್ಲಿ ಪತ್ತೆಯಾದ ಸಂಪತ್ತು ಯಾರಿಗೆ ಸೇರಬೇಕು ಎನ್ನುವುದರ ಕುರಿತಂತೆ ಚರ್ಚೆ ಹಿಂದೆ ನಡೆದಿತ್ತು, ವಿಚಾರ ವಿವರಣೆಗಳಿಲ್ಲದೇ ಚರ್ಚೆಯು ಕೂಡ ನಿಂತೇಹೋಯಿತು.

ಈಗ ಮಗದೊಮ್ಮೆ ಚರ್ಚೆ ಎತ್ತಿದರೆ ಯಾರಿಗೆ ಹಣದ ಅಗತ್ಯವಿದೆಯೋ ಅವರಿಗೆ ಅದು ಸಲ್ಲಬೇಕು. ಕಳೆದ ಎರಡು ಶತಮಾನಗಳಿಂದ ಈ ಹಣ ನೆಲಮಾಳಿಗೆಯಲ್ಲಿ
ಕೊಳೆಯುತ್ತಿತ್ತು. ಯಾವಾಗ ದೇವರ ಹಣ ಆದ್ಯತೆಯಲ್ಲಿ ಬಡವರಿಗೆ, ಬ್ರಾಹ್ಮಣ ದುರ್ಬಲರಿಗಾಗಿ ಬಳಕೆಯಾಗುತ್ತದೆಯೋ ಆಗ ಅದು ದೇವರಿಗೆ ಸಂದಂತಾ ಗುತ್ತದೆ. ಇಲ್ಲವಾದರೆ ನೆಲಮಾಳಿಗೆಯಲ್ಲಿ ಕಲ್ಲು, ಮಣ್ಣು, ಹಾವು, ಚೇಳುಗಳ ನಡುವೆ ಕರ್ತವ್ಯವಾಗಿದೆ. ದೇವಸ್ಥಾನದ ಸಂಪತ್ತು ಕೊಳೆಯದಿರಲಿ, ರಾಜಕಾರಣಿಗಳ ಕಪ್ಪುಹಣ ಸ್ವಾರ್ಥಕ್ಕೆ ಕಲ್ಲುಮಣ್ಣಾಗದಿರಲಿ, ದೀನರಿಗೆ ಸದ್ಬಳಕೆಯಾಗಲಿ, ಕರೋನಾ ಮಾರಿಯು ದೂರವಾಗಲಿ ಎಂದು ನಾವೆಲ್ಲರೂ ಈ ಸವಾಲಿನ ಸಮಯದಲ್ಲಿ ಆಶಿಸಬೇಕಿದೆ.