Thursday, 12th December 2024

ಆತ್ಮಹತ್ಯೆ ಎಂದೂ ಒಂದು ಪರಿಹಾರವಲ್ಲ

ಅಭಿಪ್ರಾಯ

ಡಾ.ಕೆ.ಪಿ.ಪುತ್ತೂರಾಯ

drputhuraya@gmail.com

ತಮ್ಮ ಅಚ್ಚುಮೆಚ್ಚಿನ ಸಿನಿಮಾ ತಾರೆಯರಿಗೆ, ಕ್ರೀಡಾಪಟುಗಳಿಗೆ, ರಾಜಕೀಯ ನಾಯಕರುಗಳಿಗೆ, ಅಪಘಾತವಾದಾಗ, ಅಪಚಾರವಾದಾಗ, ಇಲ್ಲವೇ ಮರಣ ಬಂದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಹುಚ್ಚು ಅಭಿಮಾನಿಗಳಿಗೂ ನಮ್ಮಲ್ಲಿ ಕೊರತೆಯಿಲ್ಲ. ಜೀವನದ ಸಂಧ್ಯಾಕಾಲದಲ್ಲಿರುವ ಕೆಲವು ವೃದ್ಧರು, ಒಂಟಿತನ, ಬಡತನ, ಜೀವನದಲ್ಲಿ ವೈರಾಗ್ಯ ಮುಂತಾದ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಮಾನವನ ಇತಿಹಾಸದಷ್ಟೇ ಪುರಾತನವಾದುದು ಆತ್ಮಹತ್ಯೆಯ ಪ್ರಕರಣಗಳು. ಆದರೆ ಹಿಂದಿನ ಕಾಲದಲ್ಲಿ ಆತ್ಮಹತ್ಯೆಯ ಪ್ರಕರಣಗಳು ತೀರಾ ವಿರಳವಾಗಿದ್ದವು. ಆದರೆ ಈ ನಡುವೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದು ಜಾಗತಿಕ ಸಮಸ್ಯೆ ಎಂದೆನಿಸಿಬಿಟ್ಟಿದೆ. ಶಾಲಾ ಮಕ್ಕಳಿಂದ ಹಿಡಿದು
ವೃದ್ಧರವರೆಗೆ, ರೈತರಿಂದ ಹಿಡಿದು ಸುಶಿಕ್ಷಿತ ಉದ್ಯೋಗಿಗಳವರೆಗೆ, ಪೇಟೆ ಪಟ್ಟಣಗಳಿಂದ ಹಿಡಿದು, ಹಳ್ಳಿಗಳ ವರೆಗೆ… ನಾನಾ ಕಾರಣಗಳಿಂದ ಎಲ್ಲಾ ಕಡೆ ಹರಡಿ ಹಬ್ಬಿರುವ ಈ ಆತ್ಮಹತ್ಯೆಗಳು ನಿಜಕ್ಕೂ ಒಂದು ದುರಂತವೇ ಸರಿ. ಇತ್ತೀಚೆಗಂತೂ, ಸಾಮೂಹಿಕ ಆತ್ಮಹತ್ಯೆ ಕೂಡಾ ನಡೆಯುತ್ತಿರುತ್ತವೆ.

ಆತ್ಮಹತ್ಯೆಗೆ ಕಾರಣಗಳು: ಮಹಿಳೆಯರಲ್ಲಿ ವರದಕ್ಷಿಣೆಯ, ಅತ್ತೆ ಮಾವನ ಕಿರುಕುಳ, ಬಂಜೆತನ, ಪತಿಯ ಪರಸೀ ಸಂಬಂಧ, ಲೈಂಗಿಕ ಕಿರುಕುಳ; ಪುರುಷರಲ್ಲಿ ಎದುರಿಸಲಾರದ ಅವಮಾನ, ತೀರಿಸಲಾರದ ಸಾಲ, ಒಪ್ಪಿಕೊಳ್ಳಲಾಗದ ಸೋಲು, ಮದ್ಯಪಾನ ವ್ಯಸನ, ಸರಿಹೋಗದ ಸಂಸಾರ, ದೊರಕದ ಸಹಕಾರ, ಸಾಲಬಾಧೆ ಇತ್ಯಾದಿಗಳು ಆತ್ಮಹತ್ಯೆಗೆ ಕಾರಣ. ಪರೀಕ್ಷೆಗಳಲ್ಲಿ ಫೇಲಾದ ವಿದ್ಯಾರ್ಥಿಗಳಲ್ಲಿ ಪ್ರತಿ ವರ್ಷ ಕೆಲವರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೆತ್ತವರು-ಶಿಕ್ಷಕರು-ಗೆಳೆಯರ ಎದುರು ಹೇಗೆ ಮುಖ ತೋರಿಸಲಿ ಎಂಬ ಅವಮಾನದ ಭಯದಿಂದಲೂ, ಹೆತ್ತವರ ಆಶಯಗಳನ್ನು ಈಡೇರಿಸಲಾಗದ ಅಪರಾಧಿ ಪ್ರeಯಿಂದಲೂ, ನಿರೀಕ್ಷಿಸಿದಷ್ಟು ಅಂಕಗಳು ಬರದಾಗಲೂ, ಅಪಕ್ವ ದುರ್ಬಲ ಮನಸ್ಥಿತಿಯಿಂದಲೂ ಆತ್ಮಹತ್ಯೆ ಮಾಡಿಕೊಳ್ಳು ತ್ತಾರೆ.

ಯುವ ಜನಾಂಗದಲ್ಲಿ ಭಗ್ನಪ್ರೇಮ, ವಿರಸ, ಬೇರ್ಪಡೆ, ಮಾದಕ ವಸ್ತುಗಳ ಚಟ, ಜೀವನದಲ್ಲಿ ಜಿಗುಪ್ಸೆ, ಸಹಿಸಿಕೊಳ್ಳಲಾಗದ ಸೂಕ್ಷ್ಮ ಮನಸ್ಥಿತಿ, ಲೈಂಗಿಕ ಅಪರಾಧಗಳು, ಈಡೇರದ ಕನಸು, ನಕಾರಾತ್ಮಕ ಮನೋಭಾವ ಇತ್ಯಾದಿ. ‘I am not successful in life, I hate myself, no point in living’ ಹೀಗೆ ಯುವಕನೊಬ್ಬ ಆತ್ಮಹತ್ಯೆಗೆ ಮುನ್ನ ಬರೆದಿದ್ದ. ಅಂತೆಯೇ ತಮ್ಮ ಅಚ್ಚುಮೆಚ್ಚಿನ ಸಿನಿಮಾ ತಾರೆಯರಿಗೆ, ಕ್ರೀಡಾಪಟುಗಳಿಗೆ, ರಾಜಕೀಯ ನಾಯಕರುಗಳಿಗೆ, ಅಪಘಾತವಾದಾಗ, ಅಪಚಾರವಾದಾಗ, ಇಲ್ಲವೇ ಮರಣ ಬಂದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಹುಚ್ಚು ಅಭಿಮಾನಿಗಳಿಗೂ ನಮ್ಮಲ್ಲಿ ಕೊರತೆಯಿಲ್ಲ. ಜೀವನದ ಸಂಧ್ಯಾಕಾಲದಲ್ಲಿರುವ ಕೆಲವು ವೃದ್ಧರು, ಒಂಟಿತನ, ಬಡತನ, ಸರಿಹೋಗದ ಅನಾರೋಗ್ಯ, ಪ್ರೀತಿಯ ಕೊರತೆ, ಜೀವನದಲ್ಲಿ ವೈರಾಗ್ಯ ಮುಂತಾದ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಬದುಕು ಸಾಕಾಗಿದೆ ಎಂಬುದು ಹಿರಿಯರು ನೀಡುವ ಕಾರಣವಾದರೆ ಬದುಕು ಬೋರ್ ಆಗಿದೆ ಎಂಬುದು ಕಿರಿಯರು ನೀಡುವ ಕಾರಣ. ಸಮಸ್ಯೆಗಳನ್ನು ಎದುರಿಸ ಲಾರದೆ ದುರ್ಬಲ ಮನಸ್ಸು, ಇಂದಿನ ಸ್ಪರ್ಧಾತ್ಮಕ ಯುಗದ ಕೊಡುಗೆಯಾದ ಒತ್ತಡ, ಹತಾಶೆ, ನಿರಾಶೆ, ಮೋಸ, ವಂಚನೆಗಳೂ ಆತ್ಮಹತ್ಯೆಗೆ ಕಾರಣವಾಗ ಬಹುದು. ಬುದ್ಧಿ ಭ್ರಮಣೆ, ಸ್ಕಿಜೋಫ್ರೇನಿಯಾ, ಮಿಕ್ಸಿಡಿಮಾ, ತರತರದ ಭ್ರಮೆಗಳು, ವಿಕಲ್ಪಗಳು, ಖಿನ್ನತೆ, ಉನ್ಮಾದ, ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನೋ ಸ್ಥಿತಿ ಮುಂತಾದ ಮಾನಸಿಕ ಕಾಯಲೆಗಳು, ವ್ಯಕ್ತಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವತ್ತ ಕೊಂಡೊಯ್ಯಬಹುದು.

ಆಧ್ಯಾತ್ಮದ ದೃಷ್ಟಿಯಿಂದ ನೋಡಿದರೆ ಆತ್ಮಹತ್ಯೆ ಎಂಬುದು ಭ್ರೂಣ ಹತ್ಯೆಗಿಂತಲೂ ಘೋರ ಪಾಪ. ಧಾರ್ಮಿಕ ದೃಷ್ಟಿಯಲ್ಲಿ ಜೀವ ನೀಡುವ ಹಕ್ಕು ನಮಗಿಲ್ಲ ದಿರುವಾಗ, ಜೀವ ತೆಗೆದುಕೊಳ್ಳುವ ಹಕ್ಕೂ ನಮಗಿರೋದಿಲ್ಲ. ನಮ್ಮನ್ನು ನಾವೇ ಸಾಯಿಸಿಕೊಳ್ಳೋದು ಧರ್ಮಬಾಹಿರ, ಹೀಗೆ ಹೋದ ಜೀವಕ್ಕೆ ಸದ್ಗತಿಯೂ
ಇಲ್ಲವಂತೆ. ಕಾನೂನಿನ ದೃಷ್ಟಿಯಿಂದ ನೋಡಿದರೆ ನಮ್ಮ ಸಂವಿಧಾನದಲ್ಲಿ right to live ಅಂದರೆ ಬದುಕುವ ಹಕ್ಕು ಎಲ್ಲರಿಗೂ ಇದೆ.

ಆದರೆ, right to die ಅಂದರೆ ಸಾಯುವ ಹಕ್ಕು ಇಲ್ಲ. ಈ ಕಾರಣದಿಂದ ಆತ್ಮಹತ್ಯೆಗೆ ಪ್ರಯತ್ನಿಸಿದವರಿಗೂ, ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ವರಿಗೂ ಶಿಕ್ಷೆ ಇದ್ದೇ ಇದೆ. ಸಾಂಸಾರಿಕವಾಗಿ ಆತ್ಮಹತ್ಯೆಯ ಪ್ರಕರಣ ಸಂಸಾರದ ಸುಖ ಶಾಂತಿಯನ್ನೇ ಬಲಿತೆಗೆದುಕೊಳ್ಳುತ್ತದೆ. 9 ತಿಂಗಳು ಹೊತ್ತು ಹೆತ್ತು ಕಷ್ಟಪಟ್ಟು ಸಾಕಿ ಸಲಹಿ ಬೆಳೆಸಿದ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆ, ಅದು ಅವರು ತಮ್ಮ ಹೆತ್ತವರಿಗೆ ವಿಧಿಸಿದ ಕಠಿಣ ಜೀವಾವಧಿ ಶಿಕ್ಷೆ ಎಂದೆನಿಸಿಕೊಳ್ಳು ತ್ತದೆ. ಹೆತ್ತವರ ಕನಸುಗಳನ್ನು ಪುಡಿ ಪುಡಿ ಮಾಡಿದ, ಈ ಅಕ್ಷಮ್ಯ ಅಪರಾಧಕ್ಕೆ ಪ್ರಾಯಶ್ಚಿತ್ತವೇ ಇಲ್ಲವೆನ್ನಬಹುದು. ವಿದ್ಯಾರ್ಥಿಗಳೇ ‘ಪರೀಕ್ಷೆಗಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನಿವಾರ್ಯ.

ಆದುದರಿಂದ ಅದನ್ನೊಂದು ಒತ್ತಡವೆಂದು ಭಾವಿಸದಿರಿ, ಸಂತೋಷದಿಂದ ಎದುರಿಸಿ’. ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳೇ ನಿಮ್ಮ ಜೀವನವನ್ನು ರೂಪಿಸುವ ಮಾನದಂಡಗಳಲ್ಲ. ಜಗತ್ತು ವಿಶಾಲವಾಗಿದೆ; ಬದುಕನ್ನು ಪ್ರೀತಿಸುವವನಿಗೆ ಬದುಕುವ ದಾರಿಗಳು ಅನೇಕವಾಗಿದೆ. ಪರೀಕ್ಷೆಗಳಲ್ಲಿ ಫೇಲಾದರೆ ಇಲ್ಲವೆ ನಿರೀಕ್ಷಿತ ಅಂಕಗಳು ಬರದಿದ್ದರೆ ಇದೊಂದು ಅವಮಾನವೆಂದು ತಿಳಿಯದಿರಿ. ವಿಧಿಯನ್ನು ಹಳಿಯದಿರಿ. ಕುಂಟು ನೆಪವನ್ನು ಹೇಳದಿರಿ. ಹೆಚ್ಚಿನ ತಯಾರಿಯೊಂದಿಗೆ ಮತ್ತೆ ಪ್ರಯತ್ನಿಸಿ. ಯಶಸ್ವಿ ವ್ಯಕ್ತಿಗಳೆಲ್ಲ ಸೋತೇ ಗೆದ್ದವರು. ನಾನಾ ಕಾರಣಗಳಿಂದ ಗಂಡ ಹೆಂಡಿರಲ್ಲೊಬ್ಬರು, ಇಲ್ಲವೇ ವೃದ್ಧರು ಆತ್ಮಹತ್ಯೆ ಮಾಡಿಕೊಂಡಾಗ
ಕುಟುಂಬದಲ್ಲಿ ಉಳಿದವರ ಶಾಂತಿ, ನೆಮ್ಮದಿಗೆ ಧಕ್ಕೆಯುಂಟಾಗಿ ನಿರಂತರ ದುಃಖವೆನಿಸುತ್ತದೆ.

ಸಾಮಾಜಿಕವಾಗಿ ಆತ್ಮಹತ್ಯೆಯ ಪ್ರಕರಣಗಳು, ಸಮಾಜಕ್ಕೆ ಮುಖ್ಯವಾಗಿ ಯುವ ಜನಾಂಗದವರಿಗೆ, ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಇದು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವುದರಲ್ಲಿ ಸಂಶಯವಿಲ್ಲ, ವೈಚಾರಿಕವಾಗಿ ನೋಡಿದರೆ, ಯಾವ ಸಮಸ್ಯೆಗೂ ಆತ್ಮಹತ್ಯೆ ಪರಿಹಾರ ಅಲ್ಲವೇ ಅಲ್ಲ. ಪರಿಹಾರವಿಲ್ಲದ ಸಮಸ್ಯೆ ಗಳೇ ಇಲ್ಲವೆಂದ ಮೇಲೆ, ಅವುಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೇ ಹೊರತು, ಜೀವನಕ್ಕೆ ಅಂತ್ಯ ಹಾಡೋದಲ್ಲ. ಪ್ರಾಣಿಗಳಂತೂ ಆತ್ಮಹತ್ಯೆ ಮಾಡೋದೇ ಇಲ್ಲ. ಆತ್ಮಹತ್ಯೆ ಬೇಜವಾಬ್ದಾರಿತನದ, ಹೇಡಿತನದ ಲಕ್ಷಣ, ಒಂದು ಹೇಯ ಕೃತ್ಯ. ಆದುದರಿಂದ ಬೇಡವೇ ಬೇಡ ಆತ್ಮಹತ್ಯೆ!

ಬನ್ನಿ ಆಶಾವಾದವಿರಲಿ. ಬದುಕನ್ನು ಪ್ರೀತಿಸೋಣ. ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಹಾರವಾಗುತ್ತಿದ್ದರೆ, ಇಷ್ಟರೊಳಗೆ ಹೆಚ್ಚಿನವರು ಸತ್ತೇ ಹೋಗ ಬೇಕಾಗಿತ್ತು. ಕಾರಣ ಸಮಸ್ಯೆಗಳಿಲ್ಲದವರೇ ಇಲ್ಲ! ಜೀವನದಲ್ಲಿ ನಿರಾಶಾವಾದ ಬೇಡ. ಎಲ್ಲಾ ದಾರಿಗಳು ಮುಚ್ಚಿದರೂ, ಎಲ್ಲೋ ಒಂದು ದಾರಿ ತೆರೆದಿರುತ್ತೆ. ಸಾಯಲು ಕೆಲವೇ ಕಾರಣಗಳಿದ್ದರೂ, ಬದುಕಲು ಹಲವಾರು ಅವಕಾಶಗಳಿವೆ. ‘ಈಸಬೇಕು; ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ, ಬದುಕು ಇರೋದು ಆರಂಭಿಸಲು; ಅಂತ್ಯಗೊಳಿಸಲು ಅಲ್ಲ!