ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 87
3500 ಕಿ.ಮೀ ನರ್ಮದಾ ನದಿ ದಡದಲ್ಲಿ ನಡೆದಾಡಿದ ಯೋಗಿಯ ಅನುಭವದ ಮಾತು
ತಪಸ್ವಿ, ಸಾಧಕ ಯೋಗಿ ಶ್ರೀಕೃಷ್ಣ ಸಂಪಗಾಂವಕರ ಮನದಾ
ಬೆಂಗಳೂರು: ನರ್ಮ ದದಾತಿ ಇತಿ ನರ್ಮದಾಃ. ನರ್ಮ ಅಂದರೆ ಆನಂದ, ಸುಖ ಕೊಡುವವಳೇ ನರ್ಮದಾ. ನರ್ಮದಾ ಪರಿಕ್ರಮದಿಂದ ನಮ್ಮೊಳಗಿರುವ ಆನಂದದ ಅನುಭವವಾಗುತ್ತದೆ. ಈ ಪರಿಕ್ರಮದಿಂದ ಎಲ್ಲಾ ಅನುಭವ ಆಗುತ್ತದೆ. ನರ್ಮದೆಯ ಮೇಲೆ ನಂಬಿಕೆ ಇಟ್ಟು, ನೀನೇ ಎಲ್ಲಾ, ನಿನ್ನಿಂದಲೇ ಎಲ್ಲಾ ಎಂದು ಶರಣಾಗತಿಯಾದರೆ ಆನಂದ ದೊರಕುತ್ತದೆ ಎಂದು ತಪಸ್ವಿ ಸಾಧಕ ಯೋಗಿ ಶ್ರೀಕೃಷ್ಣ ಸಂಪಗಾಂವಕರ ಹೇಳಿದರು.
ವಿಶ್ವವಾಣಿ ಕ್ಲಬ್ ಹೌಸ್ ವತಿಯಿಂದ ಆಯೋಜಿಸಲಾದ ನರ್ಮದಾ ತೀರವನ್ನು ಬರಿಗಾಲಿನಲ್ಲಿ 3500 ಕಿ.ಮೀ ನಡೆದವರೊಬ್ಬರ ಅನುಭವ ಕಥನ ಸಂವಾದದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯು ಅವಿಚ್ಛಿನ ಪ್ರವಾಹವಾಗಿದೆ. ಇಲ್ಲಿ ನದಿಗಳ ಬಗ್ಗೆ ಪೂಜ್ಯ ಭಾವ, ಆದರ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸುವ ಹಿನ್ನೆಲೆಯೇ ನದಿಯ ಪರಿಕ್ರಮವಾಗಿದೆ. ಬೇರೆ ಯಾವ ನದಿಯ ಪರಿಕ್ರಮವನ್ನು ಹೇಳಲಾಗಿಲ್ಲ. ಕೇವಲ ನರ್ಮದಾ ನದಿಯ ಪರಿಕ್ರಮದ ಉಲ್ಲೇಖವಿದೆ. ಇದಕ್ಕೆ ಕಾರಣ ನರ್ಮದೆಯ ಪುಣ್ಯತ್ವ ಹಾಗೂ ಶ್ರೇಷ್ಠತೆಯೇ ಆಗಿದೆ. ನರ್ಮದಾ ನದಿಯ ದರ್ಶನದಿಂದ ಪುಣ್ಯ ದೊರೆಯುತ್ತದೆ. ನಿಜ ಆನಂದ ನಮ್ಮೊಳಗೆ ಇದೆ. ಆನಂದ ದಿಂದಾಗಿ ನಮ್ಮ ಜನ್ಮ ಆಗಿದೆ. ಆನಂದದ ಸಲುವಾಗಿ ನಮ್ಮ ಜನ್ಮವಾಗಿದೆ. ಆದರೆ ಅದನ್ನು ಗಮನಿಸುವ ಅಗತ್ಯತೆಯಿದೆ.
2016ಕ್ಕೆ ನರ್ಮದಾ ಪರಿಕ್ರಮವನ್ನು ಪ್ರಾರಂಭಿಸಿದೆ. ಸಂಕಲ್ಪ ತೆಗೆದುಕೊಂಡು ಸಣ್ಣ ಬಾಟಲಿಯಲ್ಲಿ ನರ್ಮದೆ ಯ ನೀರನ್ನು ತುಂಬಿಸಿಕೊಂಡು ಹೊರಡಬೇಕು. ಈ ನದಿಯು 1712 ಕಿ.ಮೀ ಉದ್ದವಿದೆ. ನೇರವಾಗಿ ನರ್ಮದೆಯ ತಟದಲ್ಲೇ ನಡೆಯುತ್ತಾ ಹೋಗುವಾಗ ಡ್ಯಾಮ್ಗಳಿದ್ದಲ್ಲಿ ಸುತ್ತಿ ಸುತ್ತಿ ಹೋಗ ಬೇಕಾಗುತ್ತದೆ. ಆಗ 3500 ಕಿ.ಮೀ ಆಗುತ್ತದೆ. ಈ ಪರಿಕ್ರಮದ ಸಂದರ್ಭದಲ್ಲಿ ಮುಂದೆ ಏನು ಎತ್ತ ಎಂದು ತಿಳಿದಿರುವುದಿಲ್ಲ. ನಿರಭಿಮಾನಿಯಾಗಿ ಹೋಗುತ್ತಾ ಇರಬೇಕು. ಮನಸಿನಲ್ಲಿ ಯಾವುದೇ ಆಸೆಗಳು ಇರಬಾರದು. ಏನೇ ತೊಂದರೆ ಎದುರಾದರೂ ಒಳಗಿನ ಆನಂದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.
ಆನಂದ ಪಡೆಯುವ ಸಲುವಾಗಿ ಏನೂ ಮಾಡಬೇಕಾಗಿಲ್ಲ. ನಮ್ಮೊಳಗೇ ಆನಂದವಿದೆ. ಮನುಷ್ಯ ಆನಂದದ ಸ್ವರೂಪವೇ ಆಗಿದ್ದಾನೆ. ಅನೇಕ ಪ್ರಕಾರದ ಬೇಧ ತಮ್ಮಷ್ಟಕ್ಕೇ ನಮ್ಮೊಳಗೆ ಬೆಳೆಯುತ್ತದೆ. ಇದರಿಂದಾಗಿ ನಾವು ಆನಂದದಿಂದ ದೂರಾಗುತ್ತೇವೆ. ಯಾವುದಕ್ಕೂ ಅಭಿಮಾನ ಪಡಬಾರದು. ಪಂಚಭೂತಗಳಿಂದಾದ
ಶರೀರವಿದು. ಇದರ ಕುರಿತು ಅಭಿಮಾನ ಸಲ್ಲದು. ಸಾಧಕನಾದವನು ನಿರಭಿಮಾನಿಯಾಗಿರಬೇಕು. ಮನಸಿಗೆ ಯಾವ ಹಂಗೂ ಇರಬಾರದು ಎಂದರು.
ಅಸಾಧ್ಯವಾದುದು ಏನೂ ಇಲ್ಲ: ಯಾರಿಗೆ ಏನೂ ಬೇಡವೋ ಅವರೇ ನಿಜವಾದ ರಾಜರು. ಒಳಗಿನಿಂದ ಯಾರಿಗೆ ಏನೂ ಬೇಡ ಅವರು ಪ್ರಕೃತಿಯಲ್ಲಿ ಜಯಿಸು ತ್ತಾರೆ. ಎಲ್ಲವನ್ನೂ ಬಿಟ್ಟು ಸದ್ಯ ಸ್ಥಿತಿಯಲ್ಲಿರುವುದನ್ನು ನರ್ಮದೆಯು ಕಲಿಸಿಕೊಡುತ್ತಾಳೆ.
ಆನಂದ ದೊರೆಯಬೇಕು
ಆನಂದ ಎಂದರೆ ಕುಡಿಯದೇ ಮತ್ತೇರಿದಂತೆ. ಪರಿಕ್ರಮ ಅಂದರೆ ಎಲ್ಲವರೂ ನಮ್ಮವರೇ. ನಿಸ್ವಾರ್ಥ, ನಿರ್ವಾಜ್ಯ ಪ್ರೇಮವೂ ದೊರಕುತ್ತದೆ. ಪರಿಕ್ರಮ ಮುಗಿ ಯುವ ವೇಳೆಗೆ ಯಾವ ಕಾರಣಕ್ಕಾಗಿ ಕೂಡಿಡಬೇಕು ಅನಿಸುತ್ತದೆ. 108 ಗದ್ದಲವನ್ನಿಟ್ಟುಕೊಂಡು ಜೀವಿಸುವ ಅಗತ್ಯತೆಯಿದೆಯೇ ಅನಿಸುತ್ತದೆ. ನಮ್ಮೊಳಗೇ ಆನಂದ ಸ್ವರೂಪವಿದ್ದರೂ ಹೊರಗಡೆಯಿಂದ ಆನಂದ ದೊರೆಯಬೇಕು ಎಂದು ಹುಡುಕುತ್ತೇವೆ. ನಿರ್ಭಯವಾಗಿ, ನಿಷ್ಠೆಯಿಂದ ಇರುತ್ತೇವೆಯೋ ಅಲ್ಲಿ ಮಾತೆ ನಮ್ಮನ್ನು ಕಾಯುತ್ತಾಳೆ.
ನರ್ಮದೆಯ ಮೇಲೆ ಭರವಸೆಯಿಟ್ಟು ಶರಣಾಗತಿಯಾಗಬೇಕು. ನರ್ಮದಾ ಶಾಂತಿ ಸಮಾಧಾನ ನೀಡುತ್ತಾಳೆ. ಸಿಕ್ಕಿದ್ದರಲ್ಲೇ ತೃಪ್ತಿಪಟ್ಟುಕೊಳ್ಳಬೇಕು. ಸಂಸಾರ ದಲ್ಲಿ ಏನಾದರು ಪಡೆದುಕೊಂಡರೆ ಆನಂದ. ಆಧ್ಯಾತ್ಮದಲ್ಲಿ ಏನಾದರೂ ಕಳೆದುಕೊಂಡರೆ ಆನಂದ. ಆಧ್ಯಾತ್ಮದಲ್ಲಿ ಕಳೆದುಕೊಂಡ ಬಳಿಕ ನಿರಾಳರಾಗುತ್ತೇವೆ.
ಭಗವಂತ ಹೇಗಿಟ್ಟಿರುವನೋ ಹಾಗೆ ಎಂದುಕೊಳ್ಳುತ್ತಾ ಪರಿಕ್ರಮ ಮಾಡಬೇಕು. ಆಗ ಸತ್ಯವೋ ಸ್ವಪ್ನವೋ ಎನ್ನುವಂತೆ ಎಲ್ಲಾ ನಡೆಯುತ್ತದೆ. ಊಹೆ ಮೀರಿ ಎಲ್ಲಾ ದೊರೆಯುತ್ತದೆ. ನರ್ಮದಾ ಪರಿಕ್ರಮದಲ್ಲಿ ನರ್ಮದೆಯ ಇರುವಿಕೆಯು ಅರಿವಾಗುತ್ತದೆ. ನರ್ಮದಾ ಪರಿಕ್ರಮ ಮುಗಿಯುವಾಗ ನರ್ಮದೆಯ ಅಸ್ತಿತ್ವದ ಅನುಭೂತಿಯಾಗುತ್ತದೆ.
***
ನಿಜ ಆನಂದ ನಮ್ಮೊಳಗಿದೆ.
ನರ್ಮದಾ ಪರಿಕ್ರಮದಿಂದ ನಮ್ಮೊಳಗಿನ ಆನಂದವನ್ನು ಹುಡುಕಿಕೊಳ್ಳಬಹುದು.
ಪರಿಕ್ರಮ ಅಂದರೆ ಸಾಗುತ್ತಾ ಇರುವುದು.
ಅಂತರ ಜಗತ್ತು ಬಾಹ್ಯ ಜಗತ್ತು ಎಂಬುದಿದೆ.
ಅಂತರ ಜಗತ್ತಿನ ಆನಂದವನ್ನು ಅನುಭವಿಸಬೇಕು.
ಒಂದು ಹತ್ತಿರವಾಗಬೇಕಾದರೆ ಇನ್ನೊಂದು ದೂರಾಗಲೇಬೇಕು.
ನಿರಭಿಮಾನಿಯಾಗಿ ನರ್ಮದಾ ಪರಿಕ್ರಮ ಮಾಡಬೇಕು.
ಮನುಷ್ಯ ಆನಂದ ಸ್ವರೂಪಿ.
ಸಾಧಕನಾದವನು ನಿರಭಿಮಾನಿಯಾಗಿರಬೇಕು.
ನರ್ಮದಾ ಸ್ವಾಭಿಮಾನದ ಸಂಕೇತ
ನಂದವೆಂದರೆ ಏನೂ ಕುಡಿಯದೇ ಮತ್ತೇರುವುದು
ಎಷ್ಟು ಆಳಕ್ಕಿಳಿಯುತ್ತೇವೋ ಅಷ್ಟು ಎತ್ತರಕ್ಕೇರುತ್ತೇವೆ.