ವಿದೇಶ ವಾಸಿ
ಕಿರಣ್ ಉಪಾಧ್ಯಾಯ, ಬಹ್ರೇನ್
dhyapaa@gmail.com
ಕಳೆದ ವಾರದ ಅಂಕಣ ರಕ್ಷಣಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಭಾರತದಲ್ಲಿ ದೇಶದ ರಕ್ಷಣಾ ವಿಭಾಗದ ಕುರಿತು ಬರೆದಿದ್ದೆ. ಅದರಲ್ಲಿ ಭಾರತದ ಕೆಲವು ಸಂಸ್ಥೆಗಳು ರಕ್ಷಣಾ ವಿಭಾಗಕ್ಕೆ ಕೊಡುಗೆ ನೀಡಲು ಸಿದ್ಧವಾಗಿವೆ ಎಂಬುದನ್ನೂ ಪ್ರಸ್ತಾಪಿಸಿದ್ದೆ. ಅಂಕಣ ಓದಿದ ಅನೇಕರು ಆ ಸಂಸ್ಥೆಯ ವಿಷಯದ ಕುರಿತು ಇನ್ನಷ್ಟು
ವಿವರವಾಗಿ ಬರೆಯುವಂತೆ ಹೇಳಿದ್ದರು. ಇದು ನಿಜಕ್ಕೂ ಸಂತೋಷದ ಜತೆಗೆ ಹೆಮ್ಮೆಯ ವಿಷಯ.
ಆದರೆ ದೇಶದ ರಕ್ಷಣೆಗೆ ಸಂಬಂಧ ಪಟ್ಟ ವಿಷಯವಾದದ್ದರಿಂದ ಸಂಪೂರ್ಣ ವಿವರಗಳು ಲಭ್ಯವಾಗುವುದಿಲ್ಲ. ಕೆಲವೊಮ್ಮೆ ತಿಳಿದದ್ದೆಲ್ಲವನ್ನೂ ಹೇಳುವಂತೆಯೂ ಇರುವುದಿಲ್ಲ. ಆದರೂ ಕೆಲವು ವಿಷಯಗಳನ್ನು ಸೋಸಿ, ಹಿಡಿದಿಟ್ಟುಕೊಳ್ಳಬೇಕಾದದ್ದನ್ನು ಹಿಡಿದಿಟ್ಟುಕೊಂಡು ಒಂದಷ್ಟು ಮಾಹಿತಿ ಯನ್ನು ಹಂಚಿಕೊಳ್ಳುತ್ತಿದ್ದೇನೆ. ಚೆನ್ನೈ ಮೂಲದ Big Bang Boom Solutions (ಬಿಬಿಬಿಎಸ್) ಹೆಸರಿನ ಒಂದು ಸಂಸ್ಥೆಯಿದೆ. 2018ರಲ್ಲಿ ಆರಂಭವಾದರೂ ರಕ್ಷಣಾ ವಿಭಾಗಕ್ಕೆ ಸಂಬಂಧಿ ಸಿದ ಉತ್ಪನ್ನಗಳನ್ನು ತ್ವರಿತವಾಗಿ ಒದಗಿಸಿಕೊಡುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿರುವ ಸಂಸ್ಥೆ ಇದು.
ತನ್ನ ಹೊಸ ತನದ ಅನ್ವೇಷಣೆ ಮತ್ತು ತಂತ್ರಜ್ಞಾನದಿಂದ ಈ ಸಂಸ್ಥೆ ಈಗಾಗಲೇ ಎರಡು ಬಾರಿ iDEX (innovation for defenceexellence) ಪ್ರಶಸ್ತಿ ಗೆದ್ದುಕೊಂಡಿದೆ. ಐಡೆಕ್ಸ್ ಪ್ರಶಸ್ತಿ ಭಾರತದ ರಕ್ಷಣೆ ಮತ್ತು ಅಂತರೀಕ್ಷ ವಿಭಾಗದಲ್ಲಿ ಹೊಸ ಅನ್ವೇಷಣೆ ಮಾಡುವ ವ್ಯಕ್ತಿ ಅಥವಾ ಸಂಸ್ಥೆಗೆ ನೀಡುವ ಪ್ರತಿಷ್ಠಿತ ಸರಕಾರಿ ಪ್ರಶಸ್ತಿ. ಈ ಪ್ರಶಸ್ತಿಯ ವಿಜೇತರಿಗೆ ಒಂದೂವರೆ ಕೋಟಿ ರು. ಬಹುಮಾನ ನೀಡಲಾಗುತ್ತದೆ. ಜತೆಗೆ, ರಕ್ಷಣಾ ಮಂತ್ರಾಲಯದಿಂದ MOQ (minimum order quantity) ಅಂದರೆ, ಒಂದಷ್ಟು ಸರಕು ಅಥವಾ ತಂತ್ರಜ್ಞಾನವನ್ನು ಕನಿಷ್ಟ ಪ್ರಮಾಣದಲ್ಲಾದರೂ ಆ ಸಂಸ್ಥೆಯಿಂದ ಸರಕಾರ ಖರೀದಿ ಸುತ್ತದೆ.
ಅದರೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದಕ್ಕೆ, ತಾವು ತಯಾರಿಸಿದ ಉತ್ಪನ್ನ ಗಳನ್ನು ರಫ್ತು ಮಾಡುವುದಕ್ಕೆ ಸರಕಾರ ಪರವಾನಿಗೆ ನೀಡುತ್ತದೆ. ಇರಲಿ, ಬಿಬಿಬಿಎಸ್ ಸಂಸ್ಥೆ ರಕ್ಷಣಾ ವಿಭಾಗ ದಲ್ಲಿ ಈಗಾಗಲೇ ಕೆಲವು ವಿಭಾಗದಲ್ಲಿ ತನ್ನ ಕಾರ್ಯಕ್ಷಮತೆ ಮೆರೆಯುತ್ತಿದೆ. ನಿಮಗೆಲ್ಲ ಯುದ್ಧದ ಆರ್ಮರ್ ಟ್ಯಾಂಕ್ ಗೊತ್ತೇ ಇದೆ. ಇದುವರೆಗಿನ ಟ್ಯಾಂಕ್‌ಗಳೆಲ್ಲ ಮಾನವ ಚಾಲಿತವಾಗಿರುತ್ತಿದ್ದವು. ಸೈನಿಕ ಅದರೊಳಗೆ ಕುಳಿತು ಅದನ್ನು ನಡೆಸ ಬೇಕಿತ್ತು, ಅದೂ ಅವನಕಣ್ಣಿಗೆ ಗೋಚರಿಸುವ ಮಿತಿಯಲ್ಲಿ. ಲೋಹದ ಟ್ಯಾಕ್ ಒಳಗೆ ಆತ ಕುಳಿತಿರುವುದರಿಂದ ಅಕ್ಕಪಕ್ಕದಲ್ಲಿ ಅಥವಾ ಹಿಂದೆ ಏನಾಗುತ್ತಿದೆ ಎಂದು ತಿಳಿಯುವುದು ಕಷ್ಟವಾಗುತ್ತಿತ್ತು.
ಮುಂಬರುವ ದಿನಗಳಲ್ಲಿ ಸೈನಿಕರು ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನೂ ಗ್ರಹಿಸಬಹುದಾಗಿದೆ. ಬಿಬಿಬಿಎಸ್ ಸಂಸ್ಥೆ ಭಾರತದ ಟಿ-ಶ್ರೇಣಿಯ ಟ್ಯಾಂಕ್‌ಗಳಿಗೆ 360 ಡಿಗ್ರಿ ಕ್ಯಾಮರಾ ಅಳವಡಿಸುತ್ತಿದೆ. ಇದು ಒಳಗೆ ಕುಳಿತು ಟ್ಯಾಂಕ್ ಮುನ್ನಡೆಸುವ ಸೈನಿಕನಿಗೆ ಬಹಳ ಉಪಯುಕ್ತಕರವಾಗಿದೆ. ತನ್ನ ಹತ್ತಿರ ಇರುವ, ಬರುವ, ತನ್ನ ದೇಶದ, ಮಿತ್ರ ದೇಶದ ಅಥವಾ ವೈರಿಯ ಟ್ಯಾಂಕ್‌ಗಳನ್ನು ಸೈನಿಕ ಒಳಗೆ ಕುಳಿತೇ ಅರಿಯಬಹುದಾಗಿದೆ. ತನ್ನ ಟ್ಯಾಂಕ್‌ನಿಂದ
ಇನ್ನೊಂದು ಟ್ಯಾಂಕ್ ಎಷ್ಟು ದೂರವಿದೆ ಎಂಬುದನ್ನೂ ತಿಳಿಯ ಬಹುದಾಗಿದೆ. ಭಾರತದ ಸೇನೆಯಲ್ಲಿರುವ ಒಂದು ಸಾವಿರದ ಎಂಟು ನೂರು ಟಿ-90 ಭೀಷ್ಮ ಟ್ಯಾಂಕ್ ಮತ್ತು ಎರಡು ಸಾವಿರ ಟಿ-72 ಅಜೇಯ ಟ್ಯಾಂಕ್‌ಗಳಿಗೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಮುಂದೊಂದು ದಿನ ಈ ಟ್ಯಾಂಕ್‌ಗಳು ಕೃತಕ ಬುದ್ಧಿವಂತಿಕೆ ಉಪಯೋಗಿಸಿಕೊಂಡು ಸ್ವಯಂಚಾಲಿತವಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಸಂಸ್ಥೆ ಈ ದಿಕ್ಕಿ ನಲ್ಲಿಯೂ ಸಂಶೋಧನೆ ನಡೆಸಿದ್ದು, ಅದರಿಂದ ಸಾಕಷ್ಟು ಸೈನಿಕರ ಪ್ರಾಣ ಉಳಿಯಲಿದೆ. ಇದೇ ಸಂಸ್ಥೆಯ ಇನ್ನೊಂದು ಸಂಶೋಧನೆ, Anti-drone Defence System. ಇದು ವಾಣಿಜ್ಯ ಡ್ರೋನ್‌ನಿಂದ ಹಿಡಿದು ಮಾನವ ರಹಿತ ವಿಮಾನಗಳವರೆಗೆ ಎಲ್ಲಾ ಹಾರುವ ಯಂತ್ರಗಳನ್ನೂ ಪತ್ತೆಮಾಡುತ್ತದೆ. ಐದು ಕಿಲೋ ಮೀಟರ್ ಎತ್ತರದಲ್ಲಿ ಹಾರುತ್ತಿರುವ, ಬರಿ ಕಣ್ಣಿಗೆ ಕಾಣದ ವಸ್ತುಗಳನ್ನು ಪತ್ತೆ ಹಚ್ಚಿ ಅದರ ಕಾರ್ಯಕ್ಷಮತೆ ಏನು, ಅದು ಎಷ್ಟು ಭಾರ ಹೊತ್ತಿದೆ ಎನ್ನುವುದನ್ನೂ
ವಿಶ್ಲೇಷಿಸುತ್ತದೆ.
ಅನುಮಾನಾಸ್ಪದ ಸಂದರ್ಭದಲ್ಲಿ, ಐದು ಕಿ.ಮೀ. ಸುತ್ತಳತೆಯಲ್ಲಿ ಸಂಕೇತ ಸಂವಹನೆಯನ್ನು ಸ್ಥಗಿತಗೊಳಿಸುತ್ತದೆ. ಜತೆಗೆ, ಸಂಬಂಧ ಪಟ್ಟ ಇಲಾಖೆ ಯೊಂದಿಗೆ ಸಂಪರ್ಕ ಸಾಧಿಸಿ ಎಲ್ಲಾ ವಿವರಗಳೊಂದಿಗೆ ಮುಂದಿನ ಪ್ರತಿಕ್ರಿಯೆಗೆ ಸೂಚನೆ ನೀಡುತ್ತದೆ. ’Flying Warden’ ಹೆಸರಿನ ಡ್ರೋನ್ ಸಂಸ್ಥೆಯ ಇನ್ನೊಂದು ಉತ್ಕೃಷ್ಟ ಸಾಧನ. ಇದು ಹದಿನೈದು ಕಿಲೋ ಹೊತ್ತೊಯ್ಯಬಲ್ಲ ಶಕ್ತಿ ಪಡೆದಿದೆ. ತಾನು ಹೊತ್ತ ದ್ರವವನ್ನು ಕೆಲವು ಎಕರೆಗಳ ವಿಸ್ತೀರ್ಣದಲ್ಲಿ, ಇಪ್ಪತ್ತು ನಿಮಿಷ ಗಳವರೆಗೆ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ. ಬೆಂಕಿ ಆರಿಸುವ, ಜನರನ್ನು ಚದುರಿಸುವ ಕಾರ್ಯಗಳಲ್ಲಿ ಇದು ಬಹಳ ಪ್ರಯೋಜನಕಾರಿ. ಫ್ಲೈಯಿಂಗ್
ವಾರ್ಡನ್ ಡ್ರೋನ್ ಗಲಭೆ ನಡೆಯುತ್ತಿರುವ ಪ್ರದೇಶಗಳ ಸ್ಪಷ್ಟ ಭಾವ ಚಿತ್ರ ತೆಗೆದು ಗಲಭೆಯಲ್ಲಿ ಭಾಗಿಯಾದವರ ಮುಖವನ್ನು ಸಾಮಾಜಿಕ ಜಾಲತಾಣಗಳ ಅವರ ಭಾವಚಿತ್ರದೊಂದಿಗೆ ಹೋಲಿಸಿ, ಅವರನ್ನು ಪತ್ತೆಹಚ್ಚುವಲ್ಲಿ ಸಹಕರಿಸುತ್ತದೆ.
ಅದಲ್ಲದೆ, ಮಾದಕ ದ್ರವ್ಯ ಸಾಗಿಸುವಿಕೆ, ಬೆಂಕಿ ಹಚ್ಚುವುದು, ಗೋಡೆಗಳ ಮೇಲೆ ಪ್ರಚೋದನಕಾರಿ ಬರಹ ಬರೆಯುವುದು, ಕಳ್ಳತನ ಇತ್ಯಾದಿಗಳನ್ನು ಪತ್ತೆ ಹಚ್ಚುವಲ್ಲಿ ಆರಕ್ಷಕ ದಳಕ್ಕೆ ಸಹಕರಿಸುತ್ತದೆ. ಇದೇ ಸಂಸ್ಥೆ ಹೊಸ ಮಾದರಿಯ, ಸೈನಿಕರಿಗೆ ತೊಡಲು ಕಡಿಮೆ ತೂಕದ ವಿಶೇಷವಾದ ಬುಲೆಟ್ ಪ್ರೂಫ್ ಜ್ಯಾಕೆಟ್ ತಯಾರಿಸುವ ತಂತ್ರಜ್ಞಾನವನ್ನು ಕಂಡು ಹಿಡಿದಿದೆ. ಇದುವರೆಗೆ ಬರುತ್ತಿದ್ದ ಗುಂಡು ನಿರೋಧಕ ಕವಚಗಳು ಸಂಪೂರ್ಣ ಲೋಹದ್ದಾಗಿರುತ್ತಿದ್ದವು. ಅದರ ಬದಲಾಗಿ, ಗುಂಡು ಒಳಗೆ ನುಗ್ಗದಂತೆ ಸಣ್ಣ ರಂಧ್ರದ ಜಾಲಿ ಮತ್ತು ಎಪಾಕ್ಸಿರಾಳದಿಂದ ತಯಾರಿಸಲ್ಪಡುವ ಈ ಜ್ಯಾಕೆಟ್ ಸೈನಿಕರಿಗೆ ಹೆಚ್ಚು ಭಾರಹೊರದೆ, ಹೆಚ್ಚು ಸುರಕ್ಷತೆ ಒದಗಿಸಿ ಕೊಡಲಿದೆ.
ಅದರೊಂದಿಗೆ ಸಂಸ್ಥೆ ಆಧುನಿಕ ಹೆಲ್ಮೆಟ್, ಸ್ಮಾರ್ಟ್ ಫಿನ್ಸಿಂಗ್ ಸಿಸ್ಟೆಮ್ ಮತ್ತು ಹದಿನೈದು ನಿಮಿಷಗಳವರೆಗೆ ಹೊತ್ತಿ ಉರಿಯುವ ಮದ್ದುಗುಂಡುಗಳನ್ನು ತಯಾರಿಸುವ ನಿಟ್ಟಿನಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ. ಚೆನ್ನೈನ ಇನ್ನೊಂದು ಸಂಸ್ಥ್ಖೆVINVELi unmanned System ಕೂಡ ಡ್ರೋನ್‌ಗಳನ್ನು
ತಯಾರಿಸುತ್ತಿದ್ದು, ಸಣ್ಣ ಡ್ರೋನ್ ಸುಮಾರು ಮೂರೂವರೆ ಸೆಂಟಿ ಮೀಟರ್ ಗಾತ್ರದ ಗ್ರೆನೇಡ್ ಹೊರುವ ಸಾಮರ್ಥ್ಯ ಹೊಂದಿದ್ದರೆ, ದೊಡ್ಡ ಡ್ರೋನ್ ಸುಮಾರು ನಾಲ್ಕು ಸೆಂಟಿ ಮೀಟರ್‌ನ ಗ್ರೆನೇಡ್ ಹೊತ್ತು ನಲವತ್ತು ನಿಮಿಷ ಹಾರಬಲ್ಲ ಶಕ್ತಿ ಹೊಂದಿದೆ. ಭಾರತದ ರಕ್ಷಣಾ ಇಲಾಖೆ ಮತ್ತು ಗೃಹ ಇಲಾಖೆಗಳು ಈಗಾಗಲೇ ಇದನ್ನು ಬಳಸುತ್ತಿವೆ.
ಮುಂಬೈನ IdeaForge Technology, ಡ್ರೋನ್ ತಯಾರಿಸುವ ಇನ್ನೊಂದು ಕಂಪನಿ. ಬಾನಿನಲ್ಲಿ ಎರಡು ಗಂಟೆಗಳ ಕಾಲ, ನಾಲ್ಕುವರೆ ಕಿ. ಮೀ. ಎತ್ತರದಲ್ಲಿ ಹಾರಾಡುತ್ತ, ರಾತ್ರಿಯಲ್ಲೂ ಭಾವಚಿತ್ರ ತೆಗೆಯುವ ಡ್ರೋನ್ ಇದಾಗಿದೆ. ನೇಪಾಳದ ಭೂಕಂಪದ ನಂತರ ಮತ್ತು ಉತ್ತರಾಖಂಡದ ನೆರೆಹಾವಳಿಯ ನಂತರದ ಪರಿಹಾರ ಕಾರ್ಯದಲ್ಲಿ ಈ ಸಂಸ್ಥೆಯ ಡ್ರೋನ್ ಬಳಸಲಾಗಿದ್ದು, ಭಾರತೀಯ ಭೂ ಸೇನೆ ಇತ್ತೀಚೆಗೆ ಸುಮಾರು ನೂರ ಐವತ್ತು ಕೋಟಿ ರು. ಮೌಲ್ಯದ ಈ ಸಂಸ್ಥೆಯ ಸ್ವಿಚ್ ಡ್ರೋನ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಡ್ರೋನ್ ಸುಮಾರು ಏಳು ಕಿಲೋ ತೂಕ ಹೊತ್ತು, ಒಂದೂವರೆ ಗಂಟೆಗಳ ಕಾಲ, ನಾಲ್ಕೂವರೆ ಕಿ.ಮಿ. ಎತ್ತರದಲ್ಲಿ, ಹದಿನೈದು ಕಿ.ಮಿ.ವ್ಯಾಪ್ತಿಯಲ್ಲಿ ಹಾರಾಡ
ಬಲ್ಲದ್ದಾಗಿದೆ. 2016ರಲ್ಲಿ ಸ್ಥಾಪಿತವಾದ ಸಾಗರ್ ಡಿಫೆನ್ಸ್ ಎಂಜನಿಯರಿಂಗ್ ಸಂಸ್ಥೆ, ಜೆನೆಸಿಸ್ ಹೆಸರಿನ ಹೊಸ ಬಗೆಯ ಯಂತ್ರ ಚಾಲಿತ ದೋಣಿ ತಯಾರಿ ಸಿದೆ. ಇದು ಮಾನವ ಚಾಲಿತ ಮತ್ತು ಸ್ವಯಂಚಾಲಿತ, ಎರಡೂ ವಿಧದಲ್ಲಿ ಕೆಲಸ ಮಾಡಬಹುದಾಗಿದ್ದು, ಕಡಲಿನಲ್ಲಿ ಮತ್ತು ತೀರದಲ್ಲಿ ನಡೆಯುವ ಎಲ್ಲ ಚಟುವಟಿಕೆ ಗಳ ಮೇಲೆ ನಿಗಾ ಇಡಲು ಸಹಕರಿಸುತ್ತದೆ. ಸೋರಿ ಹೋದ ತೈಲ ಸ್ವಚ್ಛಗೊಳಿಸಲು, ಸಮುದ್ರದ ಗಡಿ ಸಮೀಕ್ಷೆ ಮಾಡಲು, ನೈಸರ್ಗಿಕ ವಿಕೋಪದ ಸಮಯದಲ್ಲಿ ಪರಿಹಾರ ಕಾರ್ಯಗಳಿಗೆ ಇದು ಉಪಯುಕ್ತವಾಗಿದೆ. ಅದರೊಂದಿಗೆ ಸಂಸ್ಥೆ ಡ್ರೋನ್ ಗಳನ್ನೂ ತಯಾರಿಸುತ್ತಿದ್ದು, ಕಳೆದ ಜನೆವರಿ ತಿಂಗಳಿನಲ್ಲಿ ಡಿಆರ್‌ಡಿಒ ಜತೆಯಾಗಿ ಸ್ಕೈಡಾಕ್ ಹೆಸರಿನ ಡ್ರೋನ್ ತಯಾರಿಸಿದೆ.
ಇತ್ತೀಚೆಗೆ ಭಾರತದ ಭೂ ಮತ್ತು ಜಲಸೇನೆಯೊಂದಿಗೂ ಕೆಲಸ ಮಾಡುವ ಒಪ್ಪಂದ ಮಾಡಿಕೊಂಡಿದೆ. ಒಮ್ಮೆ ಚಾರ್ಜ್ ಮಾಡಿದರೆ ಐವತ್ತು ನಿಮಿಷದವರೆಗೆ ಗಾಳಿಯಲ್ಲಿ ಹಾರಬಲ್ಲ ಸ್ಕೈಡಾಕ್, ಅನಿಲ ಸೋರಿಕೆ, ಬೆಂಕಿ, ಹೊಗೆ ಪತ್ತೆ ಹಚ್ಚುವುದು, ಗಲಭೆ ಪ್ರದೇಶಗಳನ್ನು ಪತ್ತೆ ಹಚ್ಚುವುದಕ್ಕೆ ಸಹಕರಿಸುತ್ತದೆ. ಅಹ್ಮದಾ ಬಾದ್‌ನ ’Optimised Electrotech’ ಸಂಸ್ಥೆ ಹೈ ರೆಸೆಲ್ಯೂಷನ್ ಸೆನ್ಸಾರ್ ಮತ್ತು ಕ್ಯಾಮರಾ ತಯಾರಿಸುತ್ತಿದೆ. ಈ ಕ್ಯಾಮರಾ ತೀರಾ ಮಂದ ಬೆಳಕಿನಲ್ಲೂ ಸ್ಪಷ್ಟ ಭಾವಚಿತ್ರ ತೆಗೆಯುವ ಸಾಮರ್ಥ್ಯ ಹೊಂದಿದೆ. ಗಡಿ ಪ್ರದೇಶದಲ್ಲಿ ನುಸುಳು ಕೋರರ ಸುಳಿವು ಪಡೆಯಲು ಇದು ಅನುಕೂಲಕರವಾಗಿದ್ದು, ಅವರು ವಾಹನ ಬಳಸುತ್ತಿದ್ದರೆ ಅದರ ನಂಬರ್ ಪ್ಲೇಟ್ ವಿವರ, ಅವರ ಬಳಿ ಆಯುಧಗಳಿದ್ದರೆ ಅದರ ವಿವರಗಳನ್ನು ತಿಳಿಸುತ್ತದೆ. ಅವರ ಮುಖವನ್ನು ಕಂಡು ಹಿಡಿಯಲು ಪ್ರಯತ್ನಿಸಿ, ಶಂಕಿತ ವ್ಯಕ್ತಿಗಳ ಮುಖದೊಂದಿಗೆ ಹೋಲಿಸಿ, ಸಂಬಂಧ ಪಟ್ಟ ಸೇನೆಯ ವಿಭಾಗಕ್ಕೆ ರವಾನಿಸುತ್ತದೆ.
ಇವೆಲ್ಲವೂ ಮಾನವ ರಹಿತವಾಗಿ ನಡೆಯುತ್ತವೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಮೀಸಲು ಪೊಲೀಸ್ ಪಡೆ, ಕರಾವಳಿ ಕಾವಲು ಪಡೆ, ಭೂ ಸೇನೆ ಮೊದಲಾದವು ಇದನ್ನು ಬಳಸುತ್ತಿವೆ. ಇದು ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಸುಮಾರು ಮೂವತ್ತು ಕಿ.ಮಿ. ದೂರದವರೆಗಿನ ಚಲನೆಯನ್ನು ಗಮನಿಸುವ ಸಾಮರ್ಥ್ಯವುಳ್ಳದ್ದಾಗಿದ್ದು, 2019ರ ಐಡೆಕ್ಸ್ ಪ್ರಶಸ್ತಿ ಪಡೆದಿದೆ. ಕೇರಳದ ಕೊಚ್ಚಿಯ EyeROV Technilogis Pvt. Ltd. ಸಂಸ್ಥೆ ನೀರಿನ ಅಡಿಯಲ್ಲಿ ಚಲಿಸುವ ಡ್ರೋನ್ ತಯಾರಿಸುತ್ತಿದೆ. ಈ ಡ್ರೋನ್ ನೀರಿನಲ್ಲಿ ನೂರುಮೀಟರ್ ಒಳದ ವರೆಗೆ ಇಳಿದು ಚಲಿಸುತ್ತದೆ. ನೀರಿನಲ್ಲಿ ಕೇವಲ ಫೋಟೊ ಅಷ್ಟೇ ಅಲ್ಲದೆ, ವಿಡಿಯೋ ಕೂಡ ಮಾಡಿ ರವಾನಿಸುತ್ತದೆ. ಅದೂ ಎಚ್‌ಡಿ! ಇದು ಸುಮಾರು ಮೂರು ಗಂಟೆಗಳ ಕಾಲ ನೀರಿನಡಿಯಲ್ಲಿ ಈಜುತ್ತದೆ. ಈ ಸಂಸ್ಥೆ ಕೂಡ ಐಡೆಕ್ಸ್ ಪ್ರಶಸ್ತಿ ಪಡೆದಿದ್ದು, ಈಗಾಗಲೇ ಡಿಆರ್‌ಡಿಒ ಜತೆ ಸುಮಾರು ಹದಿನೈದು ಪ್ರಾಯೋಗಿಕ ಯೋಜನೆಯನ್ನು ಪೂರ್ಣಗೊಳಿಸಿದೆ.
ಇದರ ಜತೆಗೆ ಇನ್ನೂ ಅನೇಕ ಸಂಸ್ಥೆಗಳು ಇಂದು ಭಾರತದಲ್ಲೇ ರಕ್ಷಣಾ ಸಂಬಂಧಿ ಉಪಕರಣಗಳನ್ನು ತಯಾರಿಸುತ್ತಿವೆ. ಇಲ್ಲಿ ಬಹುಕಾಲದಿಂದ ಸೇನೆಗೆ
ಸಾಮಗ್ರಿ, ವಾಹನ ಅಥವಾ ಸಲಕರಣೆ ಒದಗಿಸುತ್ತಿರುವ ಹಳೆಯ ಸಂಸ್ಥೆಗಳಾದ ಎಚ್‌ಎಲ್, ಟಾಟಾ ಅಥವಾ ಮಹೇಂದ್ರಾ ಎಂಡ್ ಮಹೇಂದ್ರಾದಂತಹ ಕಂಪನಿಗಳ ಹೆಸರನ್ನು ನಾನು ಸೇರಿಸಿಲ್ಲ. ಕೇವಲ ಹೊಸದಾಗಿ ಕಾರ್ಯ ಆರಂಭಿಸಿದ ಕೆಲವೇ ಕಂಪನಿಗಳ ಕುರಿತು ಮಾತ್ರ ಹೇಳಿದ್ದೇನೆ. ಮೇಕ್ ಇನ್ ಇಂಡಿಯಾ
ಯಶಸ್ವಿಯಾಗಿದೆಯೋ ಇಲ್ಲವೋ ಎಂಬ ವಿಷಯದಲ್ಲಿ ಇಂದಿಗೂ ವಾದ, ಪ್ರತಿವಾದಗಳು ನಡೆಯುತ್ತಲೇ ಇವೆ.
ಅದರಲ್ಲೂ ರಕ್ಷಣಾ ಕ್ಷೇತ್ರದಲ್ಲಿ ಭಾರತದ್ದೇ ಸಂಸ್ಥೆಗಳ ಕೊಡುಗೆ ಎಂದಾಗ ತಲೆಕೊಡಹುವುದೇ ಆಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ದೇಶದ ರಕ್ಷಣಾ ವಿಭಾಗದಲ್ಲಿ ಸೇವೆ ಸಲ್ಲಿಸಲು ಭಾರತೀಯ ಮೂಲದ ಯುವಕರು ಹುಟ್ಟು ಹಾಕಿದ ಹೊಸ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸುತ್ತಿವೆ ಎನ್ನುವುದು ಸಂತೋಷದ ಸಂಗತಿ. ಯಾವುದೇ ಮಗು ಹುಟ್ಟಿದಾಕ್ಷಣ ಎದ್ದು ಓಡಲು ಸಾಧ್ಯವಿಲ್ಲ. ಸದ್ಯ ಮಗು ಹುಟ್ಟಿದ ಸಂತೋಷವಂತೂ ಇದೆ, ಕಾಲ ಕ್ರಮೇಣ ಬೆಳವಣಿಗೆಯನ್ನೂ ಕಂಡು ಸಂಭ್ರಮಿ ಸೋಣ.