ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಮೂತ್ರ ಎಂದಕೂಡಲೇ ನಮ್ಮ ಮಾಜಿ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿಯವರ ಸ್ವಯಂ ಮೂತ್ರಪಾನವು ನೆನಪಾಗುತ್ತದೆ. ಬ್ರಿಟಿಷ್ ಪ್ರಕೃತಿ ಚಿಕಿತ್ಸಕ
ಜಾನ್ ಡಬ್ಲ್ಯು ಆರ್ಮ್‌ಸ್ಟ್ರಾಂಗ್, ಬೈಬಲ್ಲಿನ ಗಾದೆಯನ್ನು (Drink waters out of thine own cistern, and running waters out of thine own
well) ಉದ್ಧರಿಸಿ ಸ್ವಯಂಮೂತ್ರಪಾನವು ಗುಣಕಾರಿ ಎಂದು ಸಾರಿ 1944ರಲ್ಲಿ ‘ದಿ ವಾಟರ್ ಆಫ್ ಲೈಫ್: ಎ ಟ್ರೀಟೀಸ್ ಆನ್ ಯೂರಿನ್ ಥೆರಪಿ’ ಎನ್ನುವ ಪುಸ್ತಕವನ್ನು ಪ್ರಕಟಿಸಿದ ಮೇಲೆ ಸ್ವಯಂಚಿಕಿತ್ಸೆಯಾಗಿ ಸ್ವಯಂಮೂತ್ರಪಾನವು ಜಾಗತಿಕ ಗಮನವನ್ನು ಸೆಳೆಯಿತು.
ತ್ಯಾಜ್ಯ:ಮೂತ್ರವು ನಮ್ಮ ಶರೀರದ ತ್ಯಾಜ್ಯ ಪದಾರ್ಥ. ಕ್ರಿ.ಪೂ.4000 ವರ್ಷಗಳಷ್ಟು ಹಿಂದೆ ಇದ್ದ ಸುಮೇರಿ ಯನ್ ಮತ್ತು ಬ್ಯಾಬಿಲೋನಿಯನ್ ವೈದ್ಯರು, ಒಬ್ಬ ವ್ಯಕ್ತಿಯ ಮೂತ್ರವು ಹಲವು ಅನಾರೋಗ್ಯಗಳನ್ನು ಸೂಚಿಸ ಬಲ್ಲದು ಎಂದು ಜೇಡಿಮಣ್ಣಿನ ಹಲಗೆಗಳ ಮೇಲೆ ಬರೆದಿರುವುದನ್ನು ಇಂದಿಗೂ ನೋಡಬಹುದು. ಭಾರತದ ಆಯು ರ್ವೇದವು (ಕ್ರಿ.ಪೂ.100)20 ನಮೂನೆಯ ಮೂತ್ರಗಳನ್ನು ವಿವರಿಸಿದೆ.
ಮೂತ್ರಕ್ಕೆ ಕಪ್ಪು ಇರುವೆಗಳು ಮುತ್ತಿದರೆ, ಅದು ಮೂತ್ರದಲ್ಲಿ ಸಕ್ಕರೆ ಸೋರುವುದರ ಲಕ್ಷಣ ಎಂದಿದೆ. ಅದುವೇ ಈಗ ‘ಮಧುಮೇಹ’ (ಡಯಾಬಿಟಿಸ್ ಮೆಲಿಟಸ್) ಎಂದು ಹೆಸರಾಗಿದೆ. ಪಾಶ್ಚಾತ್ಯ ಜಗತ್ತಿನಲ್ಲಿ ‘ಮೂತ್ರವೀಕ್ಷಣೆ’ಯ (ಯೂರೋಸ್ಕೋಪ್) ಮೂಲಕ ರೋಗ ನಿದಾನವನ್ನು (ಡಯಾಗ್ನೋಸಿಸ್) ಮಾಡಬಹುದು ಎಂದು ಪ್ರೋಕ್ರೇಟ್ಸ್ (460-355) ತೋರಿಸಿದ. ನಮ್ಮ ಶರೀರದಲ್ಲಿ ಹರಿಯುವ ‘ನಾಲ್ಕುರಸ’ಗಳನ್ನು (ಹ್ಯೂಮರ್ಸ್) ಮೂತ್ರಪಿಂಡವು ಶೋಧಿಸಿ ಮೂತ್ರವನ್ನು ಉತ್ಪಾದಿಸುತ್ತದೆ ಎಂದ. ಇದು ಭಾಗಶಃ ಸರಿಯಾಗಿದೆ.
‘ಮೂತ್ರ ಸಂಗ್ರಹದ ಮೇಲೆ ಗುಳ್ಳೆಗಳು ಕಂಡುಬಂದರೆ, ಅದು ದೀರ್ಘಕಾಲದ ಮೂತ್ರಪಿಂಡಕಾಯಿಲೆಯನ್ನು ಸೂಚಿಸುತ್ತದೆ’ ಎನ್ನುವುದು ಆತನ ಒಂದು ಸೂಕ್ತಿ(ಅಪೋರಿಸಂ). ಇದು ಸರಿಯಾಗಿದೆ. ಮೂತ್ರಪಿಂಡ ರೋಗಗಳು ಅಥವಾ ಸೋಂಕುಗಳಲ್ಲಿ ಪ್ರೋಟೀನ್ ಅಂಶವು ಮೂತ್ರದ ಮೂಲಕ ನಷ್ಟವಾಗುತ್ತದೆ. ಹಾಗಾಗಿ, ಸಂಗ್ರಹಿಸಿದ ಮೂತ್ರದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಮತ್ತೊಂದು ಸೂಕ್ತಿಯ ಅನ್ವಯ, ‘ಸಂಗ್ರಹಿಸಿದ ಮೂತ್ರ ತಳದಲ್ಲಿಗಸಿ ಕಂಡರೆ ಅದು ಜ್ವರವನ್ನು ಸೂಚಿಸುತ್ತದೆ’. ಜ್ವರಕ್ಕೆ ಕಾರಣ ಬ್ಯಾಕ್ಟೀರಿಯ. ಬ್ಯಾಕ್ಟೀರಿಯ ನಿಗ್ರಹದಲ್ಲಿ ಸತ್ತ ಬಿಳಿಯ ರಕ್ತಕಣಗಳು ಹಾಗೂ ಅಳಿದುಳಿದ ಬ್ಯಾಕ್ಟೀರಿಯ ಗಸಿಯ ರೂಪದಲ್ಲಿ ಸಂಗ್ರಹವಾಗುತ್ತದೆ.ರೋಮ್ ನಗರದಲ್ಲಿ ವಾಸವಾಗಿದ್ದ ಗ್ಯಾಲನ್ (139-200) ಮೂತ್ರಪಿಂಡಗಳು ‘ನಾಲ್ಕು ರಸಗಳನ್ನು ಶೋಧಿಸುವುದಿಲ್ಲ’ (ಅಂತಹ ರಸಗಳು ಇಲ್ಲವೇ ಇಲ್ಲ) ಬದಲಿಗೆ, ರಕ್ತವನ್ನು ಶೋಧಿಸಿ ಮೂತ್ರವನ್ನು ಉತ್ಪಾದಿಸುತ್ತದೆ ಎಂದು ನಿಖರವಾಗಿ ಸಾರಿದ.
ಅತಿಮೂತ್ರ ವಿಸರ್ಜನೆಯನ್ನು ‘ಮೂತ್ರದ ಅತಿಸಾರ’ (ಡಯಾರಿಯ ಆಫ್ ಯೂರಿನ್) ಎಂದು ಕರೆದ. ಬಹು ಮೂತ್ರಸರ್ಜನೆಯು ಮಧುಮೇಹ ಮತ್ತು ಇತರ ರೋಗಗಳ ಸೂಚಕ. ಹಾಗೆಯೇ ಗ್ಯಾಲನ್, ಆರೋಗ್ಯವಂತ ವ್ಯಕ್ತಿಯು ಎಷ್ಟು ದ್ರವ ಪದಾರ್ಥವನ್ನು ಸೇವಿಸುತ್ತಾನೆಯೋ ಅಷ್ಟೇ ಪ್ರಮಾಣದ ಮೂತ್ರವನ್ನು ವಿಸರ್ಜಿಸುತ್ತಾನೆ ಎಂದ. ಯೂರೋಪಿನ ಮಧ್ಯಯುಗದ (500-1500) ವೈದ್ಯರು, ಪ್ರತಿಯೊಂದು ರೋಗನಿದಾನವನ್ನು ಮೂತ್ರವೀಕ್ಷಣೆಯಿಂದಲೇ ಮಾಡಬಹುದು ಎಂದು ನಂಬಿದರು.
7ನೆಯ ಶತಮಾನದಲ್ಲಿದ್ದ ಥಿಯೋಫಿಲಸ್ ಪ್ರೋಟೋಸ್ಪ್ಯಾಥೇರಿಯಸ್ ಸಮಕಾಲೀನ ಮೂತ್ರ ವೀಕ್ಷಣಾ ಅರಿವನ್ನು ಸಂಗ್ರಸಿ ‘ಡಿ ಯೂರಿನಸ್’ (ದಿ ಯೂರಿನ್) ಎಂಬ ಗ್ರಂಥವನ್ನು ರಚಿಸಿದ. ಐಸಾಕ್ (ಜೂಡಿಯಸ್) ಇಸ್ರೇಲಿ ಬೆನ್ ಸೋಲೊಮನ್ (832-932) ಥಿಯೋಫಿಲಸ್ ಬರೆದ ಪುಸ್ತಕವನ್ನು ಪರಿಷ್ಕರಿಸಿ ‘ಕಿತಾಬ್ ಅಲ್-ಬೌಲ್’ ಎಂಬ ಪುಸ್ತಕವನ್ನು ರಚಿಸಿದ. ಇದು ಇಡೀ ಯೂರೋಪಿನಲ್ಲಿ ಪ್ರಖ್ಯಾತವಾಯಿತು. 16ನೆಯ ಶತಮಾನದಲ್ಲಿ ಪ್ಯಾರಾಸೆಲ್ಸಸ್ (1493-1541) ಮೂತ್ರಕ್ಕೆ ವಿನಿಗರ್ ಬೆರೆಸಿದ. ಮೂತ್ರವು ಮೋಡಗಟ್ಟಿದರೆ ಅದು ಮೂತ್ರ ಪ್ರೊಟೀನ್ ಸೋರಿಕೆ ಎಂದ. ಮುಂದೆ ಫ್ರೆಡ್ರಿಕ್ ಡೆಕರ್ಸ್ (1466-1720)ಮೂತ್ರ ಪ್ರೋಟೀನ್ ಪ್ರಯೋಗವನ್ನು ಪರಿಷ್ಕರಿಸಿದ. ಅದೇ ವಿಧಾನವನ್ನು ಇಂದಿಗೂ ಬಳಸುತ್ತಿದ್ದೇವೆ.
ಪರ್ಷಿಯ ದೇಶದ ‘ಅಲ್-ಜುರ್ಜಾನಿ’ ಎಂದು ಖ್ಯಾತನಾಗಿದ್ದ ಜ್ಹಾನ್ ಅಲ್ ದಿನ್ ಸಯ್ಯದ್ ಇಸ್ಮೈಲ್ ಇಬ್ನ್ ಹುಸೇನ್ ಗೋರ್ಗಾನಿ (1040-1136) ‘ಜ಼ಕಾರೆ ಐ ಖರ್ಜಮ್‌ಷಾ’ಎನ್ನುವ ಆರೋಗ್ಯ ವಿಜ್ಞಾನ ವಿಶ್ವಕೋಶವನ್ನು ಬರೆದ. ಅದರಲ್ಲಿ ನಿಖರ ಮೂತ್ರವಿಶ್ಲೇಷಣೆಗೆ ಮೂತ್ರಸಂಗ್ರಹ ವಿಧಾನವು ಮುಖ್ಯವೆಂದ. ಮೂತ್ರ ಕೋಶದ ಆಕಾರದಲ್ಲಿರುವ ಗಾಜಿನ ಪಾತ್ರೆಯಲ್ಲಿ ಮೂತ್ರವನ್ನು ಸಂಗ್ರಹಿಸಿ, ಬಿಸಿಲು ಬೀಳದ ಸ್ಥಳದಲ್ಲಿ 24 ಗಂಟೆಗಳ ಕಾಲ ಇಟ್ಟು, ಆನಂತರ ಮೂತ್ರವೀಕ್ಷಣೆ ಯನ್ನು ಮಾಡಬೇಕೆಂದ. ಒಬ್ಬ ವ್ಯಕ್ತಿಯು ಸೇವಿಸುವ ಆಹಾರ ಹಾಗೂ ಅವನ ವಯಸ್ಸಿನ ಹಿನ್ನೆಲೆಯಲ್ಲಿ ಮೂತ್ರದ ಗುಣಲಕ್ಷಣಗಳು ಬದಲಾವಣೆಯಾಗುತ್ತವೆ ಯೆಂದ.
ಇಂತಹ ಅಮೂಲ್ಯ ಒಳನೋಟರುವ ಈತನ ಪುಸ್ತಕವು ಯೂರೋಪಿನಲ್ಲಿ ಹೆಚ್ಚು ಪ್ರಚಲಿತವಾಯಿತು. ಗಿಲ್ಲೆಸ್ ಡಿ ಕಾರ್ಬೀಲ್ (1140-1224) ಫ್ರಾನ್ಸ್ ದೇಶ ದವನು. ಈತನು ಪ್ರೋಟೋಸ್ಪ್ಯಾಥೇರಿಯಸ್ ಮತ್ತು ಐಸಾಕ್ ಜೂಡಿಯಸ್ ಬರೆದ ಗ್ರಂಥಗಳನ್ನು ಸಂಪಾದಿಸಿ ಪರಿಷ್ಕರಿಸಿದ. 20 ಶಾರೀರಿಕ ಅನಾರೋಗ್ಯ ಗಳಲ್ಲಿ ಮೂತ್ರದ ಗುಣಲಕ್ಷಣಗಳ ಬಗ್ಗೆ ಬರೆದ. ಮೂತ್ರವೀಕ್ಷಣೆಗೆ ಸೂಕ್ತವಾದ ‘ಮ್ಯಾಚ್ಯುಲ’ ಎನ್ನುವ ಗಾಜಿನ ಫ್ಲಾಸ್ಕನ್ನು ರೂಪಿಸಿದ. ಅತ್ಯಂತ ತೆಳುವಾದ ಹಾಗೂ ಪಾರದರ್ಶಕ ಗಾಜಿನಿಂದ ಮಾಡಿರುವ, ಮೂತ್ರಕೋಶದ ಅಕಾರದಲ್ಲಿರುವ ಮ್ಯಾಚ್ಯುಲದಲ್ಲಿ ಮೂತ್ರವನ್ನು ತುಂಬಿಸಿ, ಬಲಗೈಯಲ್ಲಿ ಬೆಳಕಿಗೆ ಅಡ್ಡ ಹಿಡಿದು ಮೂತ್ರ ವೀಕ್ಷಣೆಯನ್ನು ಮಾಡಬೇಕೆಂದ.
ಹಾಗೆಯೇ ವೈದ್ಯರಿಗೆ ರೋಗನಿದಾನ ಸುಲುಭವಾಗಲೆಂದು ಒಂದು ಪಟವನ್ನು (ಚಾರ್ಟ್) ತಯಾರಿಸಿದ. ಡಿ ಕಾರ್ಬೀಲ್ ಫ್ರಾನ್ಸಿನ ಸಲೇರ್ನೊ ವೈದ್ಯ ವಿದ್ಯಾ ಲಯದಲ್ಲಿ ಪ್ರಾಧ್ಯಾಪಕನಾಗಿದ್ದ ಕಾರಣ, ಪಟದಲ್ಲಿದ್ದ ಮಾತಿಯನ್ನು ಬಳಸಿಕೊಂಡು ಒಂದು ಪದ್ಯವನ್ನು ಬರೆದ. ಹಾಡಲು ಬರುತ್ತಿದ್ದ ಆ ಪದ್ಯವು ವೈದ್ಯ ವಿದ್ಯಾರ್ಥಿಗಳಲ್ಲಿ ಜನಪ್ರಿಯವಾತು. ನೆನಪಿನಲ್ಲಿಟ್ಟುಕೊಳ್ಳುವುದು ಸುಲುಭವಾಯಿತು. ಮೂತ್ರವೀಕ್ಷಣೆಯ ಮೂಲಕ ರೋಗ ನಿದಾನವನ್ನು ಮಾಡುವಿಕೆಯು ಎಷ್ಟು ಜನಪ್ರಿಯವಾಯಿತು ಎಂದರೆ, ನಾಡಿಯ ಮಹತ್ವವೂ ಕಡಿಮೆಯಾಯಿತು.
ಕೆಲವು ವೈದ್ಯರಂತು ರೋಗಿಯನ್ನು ನೋಡದೆಯೇ, ಕೇವಲ ಅವರ ಮೂತ್ರವನ್ನು ವೀಕ್ಷಿಸಿ, ರೋಗನಿದಾನ ಮಾಡಲಾರಂಭಿಸಿದರು. ಕಾನ್ ಸ್ಟಾಂಟಿನೋಪಲ್ ನಗರದ ಜೋಆನಸ್ ಆಕ್ಚೂರಿಯಸ್ (1275-1328) ಕೇವಲ ಮೂತ್ರವೀಕ್ಷಣೆಯ ರೋಗನಿದಾನ ಅವೈಜ್ಞಾನಿಕ ಹಾಗೂ ಅಪಾಯಕಾರಿಯೆಂದ. ಇವನು ಕೇವಲ ಮೂತ್ರವನ್ನು ಮಾತ್ರವಲ್ಲ, ರೋಗನಿದಾನವನ್ನು ಮಾಡಲು ದೇಹದ ಉಳಿದ ತ್ಯಾಜ್ಯಗಳ ಅಧ್ಯಯನದ ಮಹತ್ವವನ್ನು ಸಾರಿದ. ಅದುವರೆಗಿನ
ಮೂತ್ರ ವೀಕ್ಷಣೆಯ ಜ್ಞಾನವನ್ನೆಲ್ಲ ಸಂಗ್ರಸಿ, ಪರಿಷ್ಕರಿಸಿ ‘ಆನ್ ಯೂರಿನ್’ ಎನ್ನುವ 7 ಸಂಪುಟಗಳನ್ನು ಬರೆದ. ಯೂರೋಪಿನಲ್ಲಿ ನಡೆದ ಪುನರುತ್ಥಾನವು (ರಿನೇಸಾನ್ಸ್) ವೈದ್ಯಕೀಯದ ಮೇಲೂ ಪರಿಣಾಮವನ್ನು ಬೀರಿತು.
1491ರಲ್ಲಿ ಜರ್ಮನಿಯ ಜೊಹಾನೆಸ್ ಡಿ ಕೀತಮ್ ಎಂಬ ಜರ್ಮನ್ ವೈದ್ಯನು ‘ಫ್ಯಾಸಿಕ್ಯುಲಸ್ ಮೆಡಿಸಿನೆ’ ಎನ್ನುವ ಪುಸ್ತಕವನ್ನು ಬರೆಯುವುದರ ಜೊತೆಯಲ್ಲಿ,
ಜನಸಾಮಾನ್ಯರಿಗಾಗಿ ಮೂತ್ರವಿಶ್ಲೇಷಣೆಯನ್ನು ಮಾಡುವ ಬಗ್ಗೆ ಬಣ್ಣ ಬಣ್ಣದ ಪಟಗಳನ್ನು ಬರೆದ. ಜನರು ಈ ಪಟಗಳನ್ನು ನೋಡಿ, ಸ್ವಯಂ ರೋಗನಿದಾನವನ್ನು
ಮಾಡಿಕೊಳ್ಳಲಾರಂಭಿಸಿದರು. ಇದೇ ವೇಳೆಗೆ ಕೇವಲ ಲ್ಯಾಟಿನ್ ಭಾಷೆಯಲ್ಲಿ ಲಭ್ಯವಿದ್ದ ವೈದ್ಯಕೀಯ ಕೃತಿಗಳೆಲ್ಲ ಆಡುಭಾಷೆಗಳಿಗೆ ಅನುವಾದವಾದವು. ಕೂಡಲೇ ಯೂರೋಪಿನಾದ್ಯಂತ ನಕಲಿ ವೈದ್ಯರು (ಲೆಚೆಸ್) ಹುಟ್ಟಿಕೊಂಡರು. ಅಸಲಿ ವೈದ್ಯರಿಗಿಂತ ನಕಲಿ ವೈದ್ಯರು ಜನಪ್ರಿಯರಾದರು. ಅಸಲಿ ವೈದ್ಯರ ಸೈದ್ಧಾಂತಿಕ ಜ್ಞಾನವು ನೈತಿಕತೆಯನ್ನು ಬಿತ್ತಿದ್ದ ಕಾರಣ, ರೋಗಿಯನ್ನು ಗುಣಪಡಿಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸಿ, ಬಹಳ ಎಚ್ಚರಿಕೆಯಿಂದ ಚಿಕಿತ್ಸೆಯನ್ನು ನೀಡುತ್ತಿದ್ದರು. ನಕಲಿ ವೈದ್ಯರಿಗೆ ಪ್ರಪಂಚಜ್ಞಾನವಿತ್ತು. ಪ್ರಾಯೋಗಿಕ ತಿಳಿವು ಇತ್ತು. ಆಕರ್ಷಕ ಭಾಷಾ ಪ್ರಯೋಗವು ಕರಗತವಾಗಿತ್ತು. ನೈತಿಕೆ ಹಿನ್ನೆಲೆಯಿಲ್ಲದ ಇವರು, ತಕ್ಷಣ ಉಪಶಮನವನ್ನು ನೀಡಬಲ್ಲ ಶಾರ್ಟ್ ಕಟ್ ವಿಧಾನಗಳನ್ನು ಪ್ರಯೋಗಿಸಿ ‘ಯಶಸ್ವಿಯಾದರು’.
ಮೂತ್ರ ಭವಿಷ್ಯ: 17ನೆಯ ಶತಮಾನದ ಹೊತ್ತಿಗೆ ಮೂತ್ರವೀಕ್ಷಣೆಯು ಅವೈಜ್ಞಾನಿಕ ಹಾದಿಯನ್ನು ಹಿಡಿಯಿತು. ನಕಲಿ ವೈದ್ಯರು ಮೂತ್ರವೀಕ್ಷಣೆಯ ಮಾಡಿ
ಭವಿಷ್ಯವನ್ನು ನುಡಿಯಲಾರಂಭಿಸಿದರು. ಈ ಅವೈಜ್ಞಾನಿಕ ವಿಧಾನವನ್ನು ವೈದ್ಯರೂ ಅನುಸರಿಸಬೇಕಾದ ಅನಿವಾರ್ಯತೆಯು ಉಂಟಾಯಿತು. ಮೂತ್ರಕಣಿಯು
(ಯೂರೋಮ್ಯಾನ್ಸಿ) ಪಾಪಾಸ್ ಕಳ್ಳಿಯಂತೆ ಹರಡಿತು. ಮಾಟಗಾತಿಯರು ರೋಗಿಯ ಉಗುರನ್ನು ಮೂತ್ರದಲ್ಲಿ ಸೇರಿಸಿ, ಮೂತ್ರಕಣಿಗೆ ಹೊಸ ಆಯಾಮವನ್ನು ನೀಡಿದರು. ಇದೆಲ್ಲವನ್ನು ಕಂಡ ಸಮಕಾಲೀನ ಸಮಾಜದ ವಿಚಾರವಾದಿಗಳು ತಿರುಗಿಬಿದ್ದರು.
ಥಾಮಸ್ ಬ್ರಿಯಾನ್ ಎಂಬ ಲೇಖಕ ಮತ್ತು ವಿಚಾರವಾದಿ ಮೂತ್ರಕಣಿಯನ್ನು ರೋಧಿಸಿ ಆಂದೋಲನವನ್ನೇ ಆರಂಭಿಸಿದ. 1437ರಲ್ಲಿ ‘ಪಿಸ್ಸೆ ಪ್ರಾಫೆಟ್’ ಎನ್ನುವ ಪುಸ್ತಕವನ್ನು ಬರೆದ. ಈ ಪುಸ್ತಕವು ಮೂತ್ರಕಣಿಯ ಪರಿಕಲ್ಪನೆಯನ್ನೇ ಧ್ವಂಸ ಮಾಡಿತು. ಜತೆಗೆ ಮೂತ್ರವೀಕ್ಷಣೆಯೊಂದರಿಂದಲೇ ರೋಗನಿದಾನ ಮಾಡುವ ಪ್ರವೃತ್ತಿಯು ಹಠಾತ್ತನೇ ನಿಂತಿತು. ಮೂತ್ರವೀಕ್ಷಣೆಯೊಂದನ್ನೇ ಅವಲಂಬಿಸಿದ ವೈದ್ಯರನ್ನು ‘ಪಿಸ್ ಪ್ರಾಫೆಟ್ಸ್, ಪಿಸ್ ಮಾಂಗರ್ಸ್, ವಾಟರ್ ಕೇಟರ್ಸ್,
ಪಿಸ್ -ಪ್ರೋ ಕ್ಯಾಸ್ಟಿನೇಟರ್ಸ್, ಯೂರಿನೇರಿಯನ್ಸ್ ಎಂದೆಲ್ಲ ಹಂಗಿಸಿದರು.
ಮಾನವನ ಇತಿಹಾಸದಲ್ಲಿ ಮೂತ್ರವೀಕ್ಷಣೆಯ ಪ್ರಾಮುಖ್ಯತೆಯು ಅಸದೃಶವಾದದ್ದು. ಮೂತ್ರವು ಮಾನವ ಅಂಗಕ್ರಿಯೆಗಳನ್ನು ವೀಕ್ಷಿಸಲು ನೆರವಾಗುವ ಒಂದು
ಗವಾಕ್ಷಿ. ಇದು ‘ಲ್ಯಾಬೋರೇಟರಿ ಮೆಡಿಸಿನ್’ ಎಂಬ ವೈದ್ಯವಿಜ್ಞಾನ ಶಾಖೆಯು ಹುಟ್ಟುವುದಕ್ಕೆ ಕಾರಣವಾಯಿತು. ಮೂತ್ರವು ಶರೀರದ ಆರೋಗ್ಯದ ಬಗ್ಗೆ ಮೂಲಭೂತ ಮಾಹಿತಿಗಳನ್ನು ಕ್ರಮವಾಗಿ ತಿಳಿಸುತ್ತ, ನಂತರ ಗಂಭೀರ ಸ್ವರೂಪದ ಕಾಯಿಲೆಗಳನ್ನು ಪತ್ತೆಹಚ್ಚಲು ನೆರವಾಗಿ, ಇನ್ನೇನು ಪರಿಪೂರ್ಣತೆಯನ್ನು ತಲುಪುತ್ತದೆ ಎನ್ನುವ ಹೊತ್ತಿಗೆ ಹುಸಿಜ್ಞಾನವು ನಡುವೆ ನುಸುಳಿ, ನಕಲಿವೈದ್ಯರಿಗೆ ಹಬ್ಬವನ್ನು ಉಂಟು ಮಾಡಿ, ಅದರ ವಿರುದ್ಧ ಸಮಾಜವು ತಿರುಗಿ ಬೀಳುವಂತೆ ರೊಚ್ಚಿಗೆಬ್ಬಿಸಿ, ಕೊನೆಗೆ ಒಂದು ಕ್ರಮಬದ್ಧ ರೋಗನಿದಾನ ಮಾಧ್ಯಮವಾಗಿ, ಮೂತ್ರವಿಶ್ಲೇಷಣೆಯು ವೈಜ್ಞಾನಿಕವಾಗಿ ಸುಧಾರಣೆಯಾದ ಪರಿ ಅದ್ಭುತವಾದದ್ದು.
ಇಷ್ಟೆಲ್ಲ ಆದಮೇಲೂ ಸ್ವಯಂ ಮೂತ್ರಪಾನವು ಚಿಕಿತ್ಸೆಯಾಗಿ ತಲೆಯೆತ್ತುತ್ತಿದೆ. ಮಾನವ ಇತಿಹಾಸದಲ್ಲಿ ಮೂತ್ರವಿಶ್ಲೇಷಣೆಯು ಕಥೆಯಂತಹ ಮತ್ತೊಂದು ಕಥೆಯಿಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು.