Wednesday, 4th December 2024

ದೇಶ ವಿರೋಧಿ ಎಂದು ಪೊಲೀಸ್ ಕಾನ್ಸ್ ಟೇಬಲ್’ನನ್ನೇ ಗುಂಡಿಕ್ಕಿದರು !

ಕಾಶ್ಮೀರ: ಕಾಶ್ಮೀರದ ದೇವಸ್ಥಾನದಲ್ಲಿ ದೇಶ ವಿರೋಧಿ ಆಗಂತುಕ ಎಂದು ತಪ್ಪಾಗಿ ಭಾವಿಸಿ ದೇವಸ್ಥಾನದ ಒಳಗೆ ಪ್ರವೇಶಿಸಲು ಯತ್ನಿಸಿದ್ದ ಭದ್ರತಾ ಸಿಬಂದಿ ನಡೆಸಿದ ಗುಂಡಿನ ದಾಳಿಗೆ ಪೊಲೀಸ್ ಕಾನ್ಸ್ ಟೇಬಲ್ ಮೃತಪಟ್ಟಿದ್ದಾನೆ. ಮೃತ ಕಾನ್ಸ್ ಟೇಬಲ್ ಅನ್ನು ಅಜಯ್ ಧಾರ್ ಎಂದು ಗುರುತಿಸಲಾಗಿದ್ದು, ಇವರು ಹಂದ್ವಾರಾ ಲಂಗೇಟ್ ನಿವಾಸಿ.

ಮಂಗಳವಾರ ರಾತ್ರಿ ಕಾನ್ಸ್ ಟೇಬಲ್ ಧಾರ್ ಅವರು ದೇವಸ್ಥಾನದ ಬಾಗಿಲನ್ನು ಬಡಿದು, ಒಳ ಹೋಗಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಸಿಬಂದಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿದ ನಂತರವೂ ಕಾನ್ಸ್ ಟೇಬಲ್ ಧಾರ್ ಅವರು ತಮ್ಮ ಗುರುತನ್ನು ಬಹಿರಂಗಪಡಿಸದೇ ಬಾಗಿಲು ಬಡಿಯುವುದನ್ನು ಮುಂದುವರಿಸಿ ದ್ದರು. ಈ ಸಂದರ್ಭದಲ್ಲಿ ಇದೊಂದು ದಾಳಿ ಯತ್ನ ಎಂದು ಭಾವಿಸಿದ ಭದ್ರತಾ ಸಿಬಂದಿ ಗುಂಡಿನ ದಾಳಿ ನಡೆಸಿದ್ದರು. ನಿಜಕ್ಕೂ ಇದೊಂದು ಗುರುತನ್ನು ತಪ್ಪಾಗಿ ಪರಿಗಣಿಸಿದ ಘಟನೆಯಾಗಿದೆ ಎಂದು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕಾಶ್ಮೀರದಲ್ಲಿನ ಬಹುತೇಕ ದೇವಸ್ಥಾನಗಳಿಗೆ ಪೊಲೀಸರ ಕಾವಲು ಇದ್ದು, ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಶಯದ ಭದ್ರತಾ ಘಟನೆಗೆ ಇದು ಮತ್ತೊಂದು ಸೇರ್ಪಡೆಯಾಗಿದೆ ಎಂದು ವರದಿ ಹೇಳಿದೆ.