ಕೋಲ್ಕತ್ತಾ: ತಾವು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಪ್ರತಿಯೊಬ್ಬರೂ ತಮಗೆ ಮತ ನೀಡಬೇಕು ಎಂದು ಭವಾನಿಪುರ ಉಪಚುನಾವಣೆಯ ಪ್ರಚಾರ ಆರಂಭಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
ನನಗೆ ಪ್ರತಿಯೊಂದು ಮತವೂ ಬಹಳ ಮುಖ್ಯ. ಚುನಾವಣೆಯಲ್ಲಿ ದೀದಿ ಖಂಡಿತವಾಗಿಯೂ ಗೆಲ್ಲುತ್ತಾರೆ ಎಂದು ಭಾವಿಸಿ ನೀವು ನಿಮ್ಮ ಮತವನ್ನು ಚಲಾಯಿಸ ದಿದ್ದರೆ ಅದು ದೊಡ್ಡ ತಪ್ಪು. ಮಳೆ, ಬಿರುಗಾಳಿ ಇದ್ದರೂ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬೇಡಿ. ನಿಮ್ಮ ಮತವನ್ನು ಚಲಾಯಿಸಿ. ಇಲ್ಲದಿದ್ದರೆ ನಾನು ಮುಖ್ಯಮಂತ್ರಿಯಾಗಿ ಮುಂದು ವರಿಯಲು ಸಾಧ್ಯವಿಲ್ಲ ಎಂದಿದ್ದಾರೆ.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 292 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಪಡೆಯುವ ಮೂಲಕ ಭರ್ಜರಿ ಬಹುಮತ ದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಆದರೆ ನಂದಿ ಗ್ರಾಮದಲ್ಲಿ ಸೋಲು ಅನುಭವಿಸಿದ ಮಮತಾ ಬ್ಯಾನರ್ಜಿ ಅವರು ಈಗ ಭವಾನಿಪುರದಲ್ಲಿ ಪ್ರತಿ ಮತವನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ.
ತಮ್ಮ ವಿರುದ್ಧ ಪಿತೂರಿ ನಡೆಸಲಾಗಿತ್ತು. ಈ ಘಟನೆಯು ನನ್ನನ್ನು ಕೊಲ್ಲುವ ಗುರಿ ಹೊಂದಿತ್ತು. ಕಾಲಿಗೆ ಗಾಯ ವಾಗಿ ಜೀವ ಉಳಿಯಿತು. ನಾನು ಇನ್ನೂ ನೋವು ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಅವರು ಸೋಲುವ ಆತಂಕ ಎದುರಿಸುತ್ತಿದ್ದಾರೆ ಎಂದು ತೋರುತ್ತಿದೆ. ಹೀಗಾಗಿ ರಾಜಕೀಯ ಲಾಭಕ್ಕಾಗಿ “ಒಂದು ಮತಕ್ಕಾಗಿ ಮನವಿ” ಮಾಡಿದ್ದಾರೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಮಾಳವೀಯ ಟ್ವೀಟ್ ಮಾಡಿದ್ದಾರೆ.