Saturday, 21st September 2024

ಯಡಿಯೂರಪ್ಪನವರ ಏಕ್ ಮಾರ್‌ಗೆ ದೋ ತುಕಡಾ ಆಗಲಿದೆಯೇ ಬಿಜೆಪಿ ?

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರಮೇಣ ಸಂಘಪರಿವಾರದ ಮುಷ್ಠಿಯೊಳಗೆ ಕರಗಿ ಹೋಗುತ್ತಿರುವಂತೆಯೇ ಹಿರಿಯ ನಾಯಕ ಯಡಿಯೂರಪ್ಪ ಅವರಾಡಿದ ಮಾತುಗಳು ರಾಜ್ಯ ರಾಜಕಾರಣದ ದಿಕ್ಸೂಚಿಯಂತೆ ಕಾಣತೊಡಗಿದೆ.

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರ ಈ ಮಾತುಗಳನ್ನು ಬಿಜೆಪಿ ಸರಳವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ, ಯಾಕೆಂದರೆ ಹಿಂದೆ ಅವರು ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ ಬಂದಾಗ ಸಿಎಂ ಹುದ್ದೆ ತೊರೆದರಲ್ಲ? ಇದಾದ ನಂತರ ತಮಗೆ ಆಪ್ತ ಎಂಬ ಕಾರಣಕ್ಕಾಗಿ ಅವರು ತಂದು ಕೂರಿಸಿದ ಡಿ.ವಿ.ಸದಾನಂದ ಗೌಡರು ಕೆಲವೇ ದಿನಗಳಲ್ಲಿ ರೂಪ ಬದಲಿಸಿದ್ದರು.

ಸದಾನಂದಗೌಡರು ಕ್ರಮೇಣ ತಮ್ಮನ್ನು ನಿರ್ಲಕ್ಷಿಸಿ ಸಂಘ ಪರಿವಾರದ ನಾಯಕರ ಮುಷ್ಠಿಗೆ ಸೇರಿಕೊಂಡಿದ್ದಾರೆ, ಅವರ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನ ಇದಕ್ಕೆ ಕಾರಣವಾಗಿತ್ತು. ಅಂದ ಹಾಗೆ ಅವತ್ತು ಸದಾನಂದಗೌಡರ ವಿರುದ್ಧ ಯಡಿಯೂರಪ್ಪ ಅವರ ಬಳಿ ದೂರು ಕೊಂಡೊಯ್ದವರು ರೇಣುಕಾಚಾರ್ಯ ಅವರಂತಹ ಕಟ್ಟಾ ಬೆಂಬಲಿಗರು.

ಗೌಡರ ಬಳಿ ನಾವು ಯಾವುದೇ ಕೆಲಸ ತೆಗೆದುಕೊಂಡು ಹೋದರೂ ಅವರು ನಿಮ್ಮ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಯಡಿಯೂರಪ್ಪ ಅವರು ಮಾಡಿಟ್ಟ ಕೊಳೆಯನ್ನು ತೊಳೆ ಯಲು ನನಗೆ ಬಹಳ ಸಮಯ ಬೇಕು ಎನ್ನುತ್ತಿದ್ದಾರೆ ಅಂತ ಈ ಬೆಂಬಲಿಗರು ತಮ್ಮ ಬಳಿ ತೆಗೆದುಕೊಂಡು ಬಂದ ಕಂಪ್ಲೇಂಟ್ ರಿಜಿಸ್ಟರ್ ನೋಡಿ ಯಡಿಯೂರಪ್ಪ ಕೆಂಡಾ ಮಂಡಲರಾಗಿದ್ದರು. ಅಷ್ಟೇ ಅಲ್ಲ, ಈ ಹಿಂದೆ ಯಾವ ಜಗದೀಶ್ ಶೆಟ್ಟರ್ ಅವರನ್ನು ಸೈಡ್ ಲೈನ್ ಮಾಡಲು ಅವಿರತವಾಗಿ ಪ್ರಯತ್ನಿಸಿ ದ್ದರೋ? ಅದೇ ಶೆಟ್ಟರ್ ಅವರ ಕೈ ಹಿಡಿದು ಮುಖ್ಯಮಂತ್ರಿ ಗದ್ದುಗೆಯ ತನಕ ಕರೆದುಕೊಂಡು ಹೋಗಿದ್ದರು.

ಈಗ ಇತಿಹಾಸ ಪುನರಾವರ್ತನೆಯಾಗತೊಡಗಿದೆ. ಈ ಬಾರಿ ತಾವು ಅಧಿಕಾರದಿಂದ ಕೆಳಗಿಳಿದ ಕೂಡಲೇ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಗದ್ದುಗೆಗೆ ಕರೆದುಕೊಂಡು ಬಂದರಲ್ಲ? ಇದಾದ ನಂತರ ಅವರು ಕ್ರಮೇಣ ಸಂಘ ಪರಿವಾರದ ನಾಯಕ ಸಂತೋಷ್‌ರ ಮುಷ್ಠಿಯೊಳಗೆ ಕರಗತೊಡಗಿದ್ದಾರೆ ಎಂಬ ಅಸಮಾಧಾನ ಅವರಲ್ಲಿ ಶುರುವಾಗಿದೆ. ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿ ದರೂ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ನೋಡಲು ಅವರು ಬಯಸಿದ್ದರು.

ಅಧಿಕಾರದಿಂದ ಕೆಳಗಿಳಿದ ನಂತರ ಹಲ ಬಾರಿ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಪದೇ ಪದೇ ನೀಡಿದ ಸೂಚನೆ ಎಂದರೆ, ಸರಕಾರ ಗಟ್ಟಿಯಾಗಬೇಕೆಂದರೆ, ಭವಿಷ್ಯದಲ್ಲಿ ಪುನಃ ಅಧಿಕಾರಕ್ಕೆ ಬರಬೇಕೆಂದರೆ ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದು ಕೊಳ್ಳುವುದು ಅನಿವಾರ್ಯ ಅಂತ ವರಿಷ್ಠರ ಮೇಲೆ ಒತ್ತಡ ಹೇರಿ ಎಂಬುದು. ಹೀಗೆ ತಮ್ಮ ಸಂಪುಟಕ್ಕೆ ವಿಜಯೇಂದ್ರ ಇದ್ದರೆ ಒಳ್ಳೆಯದು
ಎಂದು ಬಸವರಾಜ ಬೊಮ್ಮಾಯಿ ಅವರು ವರಿಷ್ಠರ ಬಳಿ ಹೇಳಿಲ್ಲವೆಂದಲ್ಲ, ದಿಲ್ಲಿ ಮೂಲಗಳ ಪ್ರಕಾರ, ಇಂತಹ ಅಗತ್ಯತೆಯ ಬಗ್ಗೆ ಅವರು ಹಲವು ಬಾರಿ ವರಿಷ್ಠರ ಬಳಿ ಹೇಳಿದ್ದಾರೆ.

ಆದರೆ ವರಿಷ್ಠರು ಈ ಬಗ್ಗೆ ಹೆಚ್ಚು ಮಾತನಾಡುವ ಆಸಕ್ತಿ ತೋರದೆ ಹೋದಾಗ ಕೆದಕಿ ಹೇಳುವ ಉಸಾಬರಿಗೂ ಅವರು ಹೋಗುತ್ತಿಲ್ಲ. ವಸ್ತುಸ್ಥಿತಿ ಎಂದರೆ ಈ ಅಂಶವೇ ಯಡಿಯೂರಪ್ಪ ಅವರಲ್ಲಿ ಬಸವರಾಜ ಬೊಮ್ಮಾಯಿ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ.
ಅಂದರೆ? ಮೊದಲನೆಯದಾಗಿ ಬಸವರಾಜ ಬೊಮ್ಮಾಯಿ ಕ್ರಮೇಣ ಸಂಘಪರಿವಾರದ ನಾಯಕ ಸಂತೋಷ್ ಅವರ ಮುಷ್ಠಿಯಲ್ಲಿ ಕರಗಿ ಹೋಗುತ್ತಿದ್ದಾರೆ. ಮತ್ತು ತಮ್ಮ ಪುತ್ರ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ವಿಷಯದಲ್ಲಿ ಹೆಚ್ಚು ಉತ್ಸುಕತೆ ತೋರುತ್ತಿಲ್ಲ ಎಂಬ ಸಿಟ್ಟು ಯಡಿಯೂರಪ್ಪ ಅವರ ಮಿದುಳನ್ನು ಕಲಕಿದೆ.

ಅಧಿಕಾರಕ್ಕೆ ಬಂದ ನಂತರ ಪರಿವರ್ತನೆಯಾಗಲು ಸದಾನಂದಗೌಡರು ಎಷ್ಟು ಸಮಯ ತೆಗೆದುಕೊಂಡರೋ? ಅದಕ್ಕಿಂತ ಕಡಿಮೆ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಪರಿವರ್ತಿತರಾಗಿದ್ದಾರೆ ಎಂಬುದು ಅವರ ಸಧ್ಯದ ತೀರ್ಮಾನ. ಹಾಗಂತ ಏಕಾಏಕಿಯಾಗಿ ಸರಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲವಲ್ಲ? ಯಾಕೆಂದರೆ, ಅಂತಹ ಯಾವುದೇ ಪ್ರಯತ್ನಕ್ಕೆ ಕೈ ಹಾಕಿದರೆ ದೇವೇಗೌಡರ ನೇತೃತ್ವದ ಜೆಡಿಎಸ್ ರಂಗಪ್ರವೇಶ ಮಾಡಲು ತುಂಬ ಸಮಯ ಬೇಕಾಗುವುದಿಲ್ಲ. ಈಗಾಗಲೇ ದೇವೇಗೌಡರೇ ಒಂದು ವಿಷಯವನ್ನು
ಸ್ಪಷ್ಟಗೊಳಿಸಿದ್ದಾರೆ, ಬಸವರಾಜ ಬೊಮ್ಮಾಯಿ ಅವರ ಸರಕಾರಕ್ಕೆ ಅಪಾಯ ಎದುರಾದರೆ ಅದರ ಜತೆ ನಿಲ್ಲುತ್ತೇವೆ ಎಂದು ಭರವಸೆಯ ಮಾತನಾಡಿದ್ದಾರೆ.

ಇಂತಹ ಮಾತನಾಡುವ ಮೂಲಕ ದೇವೇಗೌಡರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ ಎಂಬುದು ನಿಜ. ಮೊದಲನೆಯ ದಾಗಿ, ಮೂವತ್ತೆರಡು ವರ್ಷಗಳ ಹಿಂದೆ ಇದೇ ಬಸವರಾಜ ಬೊಮ್ಮಾಯಿ ಅವರ ತಂದೆ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರ ಸರಕಾರ ಉರುಳಲು ಇದೇ ದೇವೇಗೌಡರು ಕಾರಣ. ತಮ್ಮ ಮತ್ತು ರಾಮಕೃಷ್ಣ ಹೆಗಡೆ ಅವರ ನಡುವಣ ಕದನದ ಮಧ್ಯೆ ಬೊಮ್ಮಾಯಿ ನಿರಾಯಾಸವಾಗಿ ಸಿಎಂ ಆಗಿದ್ದನ್ನು ಸಹಿಸಿಕೊಳ್ಳಲು ಅವರಿಗೆ ಆಗಿರಲಿಲ್ಲ. ಇಂತಹ ಹಲವು ಕಾರಣಗಳಿಗಾಗಿ ತಮ್ಮ ಬೆಂಬಲಿಗ ಶಾಸಕ ರನ್ನು ರಾಜಭವನಕ್ಕೆ ಕಳಿಸಿ, ಈ ಸರಕಾರದ ಮೇಲೆ ನಮಗೆ ವಿಶ್ವಾಸವಿಲ್ಲ ಎಂಬ ಮಾತನ್ನು ಗೌಡರು ಹೇಳಿಸಿದ್ದರು.

ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ರಾಜ್ಯಪಾಲ ವೆಂಕಟ ಸುಬ್ಬಯ್ಯ ಬೊಮ್ಮಾಯಿ ಸರಕಾರವನ್ನು ವಜಾ ಮಾಡಿದ್ದರು. ಮುಂದೆ ಇದರ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ಬಂತು ಎಂಬುದೇನೋ ನಿಜ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ದೇವೇಗೌಡರ ಹಣೆಯ ಮೇಲೆ ಲಿಂಗಾಯತ ವಿರೋಧಿ ಎಂಬ ಹೆಡ್ಡಿಂಗು ಬಿದ್ದಿದ್ದು ಇದೇ ಕಾರಣಕ್ಕಾಗಿ ಎಂಬುದು ರಹಸ್ಯವೇನಲ್ಲ. ಈಗ ದೇವೇಗೌಡರಿಗೆ ತಾವು
ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕಿದೆ. ಬಸವರಾಜ ಬೊಮ್ಮಾಯಿ ಅವರ ಸರಕಾರಕ್ಕೆ ಏನೇ ತೊಂದರೆ ಯಾದರೂ ನಾವು ಜತೆಗೆ ನಿಲ್ಲುತ್ತೇವೆ ಎಂಬ ಭರವಸೆ ಅವರ ಹಣೆಯ ಮೇಲಿದ್ದ ಹೆಡ್ಡಿಂಗು ಸ್ವಲ್ಪವಾದರೂ ಮಸುಕಾಗುವಂತೆ ಮಾಡಿದೆ
ಎಂಬುದೂ ನಿಜ. ಇದು ಮೊದಲ ಕಾರಣವಾದರೆ,ಎರಡನೆಯ ಕಾರಣ, ತಮ್ಮ ರಾಜಕೀಯ ವಿರೋಧಿಗಳಾದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರನ್ನು ಎದುರಿಸಲು ಈ ತಂತ್ರ ಬಳಕೆಯಾಗುತ್ತದೆ ಎಂಬುದು.

ಇದೇ ರೀತಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಜತೆ ಒಪ್ಪಂದ ಮಾಡಿಕೊಂಡು ಗಣನೀಯ ಗೆಲುವು ಸಾಧಿಸಲು ವೇದಿಕೆ ಸೃಷ್ಟಿ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ಅವರಲ್ಲಿದೆ. ಇಂತಹ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುವ ಕಾರಣಕ್ಕಾಗಿಯೇ ಯಡಿಯೂರಪ್ಪ ಕೂಡಾ ಬಸವರಾಜ ಬೊಮ್ಮಾಯಿ ಅವರ ಸರಕಾರದ ವಿಷಯದಲ್ಲಿ ದುಡುಕುವ ಸ್ಥಿತಿಯಲ್ಲಿಲ್ಲ. ಹಾಗಂತ ಸುಮ್ಮನೆ ಕೂರಲೂ ಅವರಿಂದ ಸಾಧ್ಯವಿಲ್ಲ. ಹೀಗಾಗಿ ಅವರು ತಮ್ಮ ಮುಂದಿನ ಹೆಜ್ಜೆಗಳಿಗೆ ಪೂರಕವಾದ ಎರಡು ಅಂಶಗಳನ್ನು ಪಕ್ಷದ ಕಾರ್ಯ ಕಾರಿಣಿ ಸಭೆಯಲ್ಲಿ ಪ್ರಸ್ತಾಪಿಸಿದರು.

ಮೊದಲನೆಯದು, ಮುಂದಿನ ವಿಧಾನಸಭಾ ಚುನಾವಣೆಯನ್ನು ಕೇವಲ ನರೇಂದ್ರ ಮೋದಿ ಅವರ ನಾಮಬಲದ ಮೇಲೆ ಎದುರಿಸಲು ಸಾಧ್ಯವಿಲ್ಲ ಎಂಬುದು. ಎರಡನೆಯದು, ಪಕ್ಷದ ಇಪ್ಪತ್ತರಷ್ಟು ಶಾಸಕರನ್ನು ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದು. ಈ ಪೈಕಿ ಮೊದಲನೆಯ ಮಾತನ್ನೇ ತೆಗೆದುಕೊಳ್ಳಿ. ಮುಂದಿನ ವಿಧಾನಸಭಾ ಚುನಾವಣೆಯನ್ನು ನರೇಂದ್ರ ಮೋದಿ ಅವರ ನಾಮಬಲದ ಮೇಲೆ ಎದುರಿಸಲು ಸಾಧ್ಯವಿಲ್ಲ ಎಂದು ಅವರೇನು ಹೇಳಿದ್ದಾರೆ?ಅದು ಸತ್ಯವಾದ ಮಾತು.

ವಾಸ್ತವವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಲು ಇದ್ದ ಪ್ರಮುಖ ಕಾರಣ ನರೇಂದ್ರ ಮೋದಿ ಅವರಲ್ಲ, ಬದಲಿಗೆ, ಯಡಿಯೂರಪ್ಪ ಅವರು ರೂಪಿಸಿದ ಕಾರ್ಯತಂತ್ರ. ಆದರೆ ಈಗ ಮುಖ್ಯಮಂತ್ರಿ ಹುದ್ದೆಯಿಂದ ತಾವು ಕೆಳಗಿಳಿ ದಿರುವುದರಿಂದ ಮುಂದಿನ ಚುನಾವಣೆಯಲ್ಲಿ ಅವರು ಇಂತಹ ಕಾರ್ಯತಂತ್ರಕ್ಕೆ ಮುಂದಾಗುವುದಿಲ್ಲ ಎಂಬುದು ಸ್ಪಷ್ಟ.

ಹೀಗಾಗಿ ಈ ಕುರಿತಂತೆ ಅವರು ಹೇಳಿದ ಮಾತೇನಿದೆ? ಅದು ರಾಜ್ಯ ಬಿಜೆಪಿಯ ಪಾಲಿಗೆ ಎಚ್ಚರಿಕೆಯ ಗಂಟೆ. ಮೋದಿ ನಾಮಬಲದ ಮೇಲೆ ಚುನಾವಣೆಗೆ ಹೋಗಿ ಅಧಿಕಾರ ಹಿಡಿಯುವುದು ಅಸಾಧ್ಯ ಎಂದರೆ ಸಹಜವಾಗಿಯೇ ಬಿಜೆಪಿಯ ಆತ್ಮವಿಶ್ವಾಸ ಕದಡುತ್ತದೆ. ಉಳಿದಂತೆ ಪಕ್ಷದ ಶಾಸಕರನ್ನು ಸೆಳೆಯಲು ಡಿ.ಕೆ.ಶಿವಕುಮಾರ್ ಯತ್ನಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಯಡಿಯೂರಪ್ಪ ಅವರ ಮಾತುಗಳ ಹಿಂದಿನ ಧ್ವನಿ ಬೇರೆ.

ಅದೆಂದರೆ, ಒಂದು ಕಾಲದಲ್ಲಿ ತಾವು ಬೇರೆ ಪಕ್ಷಗಳಿಂದ ಶಾಸಕರನ್ನು ಸೆಳೆದಿದ್ದಾಯಿತು.ಇನ್ನು ಬಿಜೆಪಿಯ ಶಾಸಕರೇ ಕಾಂಗ್ರೆಸ್ ಕಡೆ ಹೋಗುತ್ತಾರೆ ಎಂಬ ಅವರ ಮಾತು, ಇಂತಹ ಬೆಳವಣಿಗೆ ಘಟಿಸಲಿ ಎಂಬ ಇಚ್ಛೆ ಹೊಂದಿರುವಂತಿದೆ. ಅಂದ ಹಾಗೆ ಯಡಿಯೂರಪ್ಪ ಅವರ ಸರಕಾರ ಬರಲು ಏನು ಕಾರಣ? ಅದಕ್ಕೆ ನೆರವು ನೀಡಿದವರು ಯಾರು? ಎಂಬ ಪ್ರಶ್ನೆಗಳ ಬಗ್ಗೆ ಹಲವಾರು ಚರ್ಚೆಗಳು ನಡೆದಿವೆ. ಮತ್ತು ಇಂತಹ ಬೆಳವಣಿಗೆಗೆ ನಾವು ಕಾರಣರಲ್ಲ ಎಂದು ಕೆಲ ನಾಯಕರು ಬಹಿರಂಗವಾಗಿ ಹೇಳಿದ್ದಾರೆ. ಇದರಲ್ಲಿ ಸತ್ಯ ಏನು? ಎಂಬ ಬಗೆಗಿನ ಚರ್ಚೆಗೆ ಈಗ ಮಹತ್ವ ಉಳಿದಿಲ್ಲ.

ಆದರೆ ಸರಕಾರ ಬರಲು ನೆರವು ನೀಡಿದವರು ಮುಂದಿನ ದಿನಗಳಲ್ಲಿ ರಾಜಕೀಯ ಪ್ರಯೋಜನ ಪಡೆಯಲಿದ್ದಾರೆ ಎಂಬುದಂತೂ ನಿಸ್ಸಂಶಯ. ಬಿಜೆಪಿಯ ಇಪ್ಪತ್ತು ಶಾಸಕರ ಜತೆ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎಂಬ ಯಡಿಯೂರಪ್ಪ ಅವರ ಮಾತುಗಳು ಇಂತಹ ಬೆಳವಣಿಗೆ ಘಟಿಸಲಿದೆ ಎಂಬುದರ ಮುನ್ಸೂಚನೆ. ಆದರೆ ಇಂತಹ ಮಾತುಗಳನ್ನಾಡಿದರೂ ತಾಂತ್ರಿಕವಾಗಿ ಅವರು ಲಕ್ಷ್ಮಣ ರೇಖೆ ಮೀರಿಲ್ಲ.ಬದಲಿಗೆ ಆ ಗೆರೆಯ ಸನಿಹ ಬಂದು ಅವರಾಡಿದ ಸೇಫ್ ಗೇಮು, ಅವರ ಹೆಸರಿಗೆ ಕಳಂಕ ತಗಲದಂತೆ ಮಾಡಿದೆ. ಅದೇ ಕಾಲಕ್ಕೆ ಬಿಜೆಪಿಯ ಅಂತರಂಗವನ್ನು ಅಲುಗಾಡುವಂತೆ ಮಾಡಿದೆ. ಅಲ್ಲಿಗೆ ಅವರ ಏಕ್ ಮಾರ್ ಬಿಜೆಪಿ ದೋ ತುಕಡಾ ಆಗುವಂತೆ ಮಾಡುತ್ತದೆಯೇ? ಎಂಬ ಚರ್ಚೆ ಶುರುವಾಗಿರುವುದು ನಿಜ.