Friday, 22nd November 2024

ಭದ್ರಕೋಟೆಯನ್ನು ಭದ್ರಗೊಳಿಸುವ ಪ್ರಯತ್ನದಲ್ಲಿ ಜೆಡಿಎಸ್

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ದೇಶದ ರಾಜಕೀಯದಲ್ಲಿ ಕರ್ನಾಟಕ ವಿಭಿನ್ನ ಪಾತ್ರ ನಿಭಾಯಿಸುತ್ತದೆ. ಹಲವು ರಾಜಕೀಯ ನಾಯಕರಿಗೆ ರಾಜಕೀಯ ಮರುಹುಟ್ಟು ನೀಡಿರುವ ರಾಜ್ಯದ ರಾಜಕೀಯ ಇತಿಹಾಸದಲ್ಲಿ, ಇದೀಗ ಮತ್ತೊಂದು ಸ್ಥಿತ್ಯಂತರಕ್ಕೆ ಸಿದ್ಧತೆ ನಡೆಸಿಕೊಂಡಿದೆ.

ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ, ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿಕೊಂಡಿದ್ದರೆ, ಇತ್ತ ಕಾಂಗ್ರೆಸ್‌ನಲ್ಲಿ ಕರ್ನಾಟಕವನ್ನಾದರೂ ಉಳಿಸಿಕೊಳ್ಳುವ ಲೆಕ್ಕಾಚಾರಗಳು ನಡೆಯುತ್ತಿವೆ. ಈ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ, ಜೆಡಿಎಸ್ ಮಾತ್ರ ಸ್ವಂತ ಬಲದಲ್ಲಿ ಅಽಕಾರಕ್ಕೆ ಬಾರದಿದ್ದರೂ, ತಮಗೆ ಭದ್ರ ಕ್ಷೇತ್ರ ಎನಿಸಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಈ ಹಂತದಲ್ಲಿ ಬಿಜೆಪಿಗೆ ಕಾಂಗ್ರೆಸ್ ಎದುರಾಳಿ. ಜೆಡಿಎಸ್ ಗೂ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಎದುರಾಳಿ. ಆದ್ದರಿಂದ ಇದೀಗ ಬಿಜೆಪಿ ಹಾಗೂ ಜೆಡಿಎಸ್‌ಗೆ ‘ಕಾಮನ್ ಎನಿಮಿ’ ಆಗಿರುವ ಕಾಂಗ್ರೆಸ್ ಅನ್ನು ಮುಂದಿರುವ ಚುನಾವಣೆಯಲ್ಲಿ ಕಟ್ಟಿಹಾಕಲು ಸಿದ್ಧತೆ ನಡೆಸಿಕೊಂಡಿದೆ. ಅಂದ ಮಾತ್ರಕ್ಕೆ ಮುಂದಿನ ಚುನಾ ವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆ ಎನ್ನುವುದಲ್ಲ. ಬದಲಿಗೆ, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಭದ್ರಕೋಟೆಗಳನ್ನು ತಾವು ಉಳಿಸಿಕೊಂಡು, ಕಾಂಗ್ರೆಸ್‌ನ ನೆಚ್ಚಿನ ಕ್ಷೇತ್ರಗಳಲ್ಲಿ ಮತ ಒಡೆಯುವ ಲೆಕ್ಕಾಚಾರದಲ್ಲಿದೆ.

ಮುಂಬರಲಿರುವ ಬಿಬಿಎಂಪಿ ಚುನಾವಣೆ ಇರಬಹುದು, ಅಥವಾ 2023ರ ವಿಧಾನಸಭಾ ಚುನಾವಣೆ ಇರಬಹುದು, ಜೆಡಿಎಸ್‌ನ ನೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ‘ಡಮ್ಮಿ’ ಅಭ್ಯರ್ಥಿಗಳನ್ನು ಹಾಕುವ ಸಾಧ್ಯತೆಯಿದೆ. ಇನ್ನು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ದೊಡ್ಡ ಮಟ್ಟದಲ್ಲಿ ಇಲ್ಲದೇ ಇರುವುದರಿಂದ ಈ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಬಿಜೆಪಿ ಅಭ್ಯರ್ಥಿಯಿಂದ ಒಡೆಯುತ್ತಿದ್ದ ಮತಗಳು polarise ಆಗಿ ಜೆಡಿಎಸ್‌ಗೆ ಬಿದ್ದರೆ, ಅದರ ನೇರ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿಯ ಸೋಲಿನ ಮೇಲಾಗುತ್ತದೆ.

ಆದ್ದರಿಂದ ಈಗಿನಿಂದಲೇ ಜೆಡಿಎಸ್ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಹಂತದಲ್ಲಿ ಜೆಡಿಎಸ್ ನಾಯಕರು ಏಕೆ ಪಕ್ಷ ಸಂಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವ ಪ್ರಶ್ನೆ ಏಳುವುದು ಸಾಮಾನ್ಯ. ಮುಂದಿನ ವಿಧಾನ ಸಭೆಗೆ 18 ತಿಂಗಳು ಬಾಕಿ ಯಿರುವಾಗಲೇ, ಹಲವು ಜೆಡಿಎಸ್ ಶಾಸಕರು ಇತರ ಪಕ್ಷಗಳು ಸೇರಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ಶಾಸಕ ಶ್ರೀನಿವಾಸ್ ಅವರು ಕಾಂಗ್ರೆಸ್‌ಗೆ ಹಾರಿದ್ದು, ಜೆಡಿಎಸ್‌ನ ಹಿರಿಯ ಶಾಸಕರಾದ ಜಿ.ಟಿ ದೇವೇಗೌಡರು ಸಹ ಪಕ್ಷಾಂತರ ಮಾಡಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಜೆಡಿಎಸ್‌ನಲ್ಲಿರುವ ಕುಟುಂಬ ರಾಜಕಾರಣ ಹಾಗೂ ದೇವೇಗೌಡರು ಹಾಗೂ ಕುಮಾರ ಸ್ವಾಮಿ ಸುತ್ತಲಿನ ಪ್ರಭಾವಳಿಯಿಂದ ಬೇಸತ್ತು ಈ ನಿರ್ಧಾರಕ್ಕೆ ಶಾಸಕರು ಬರುತ್ತಿದ್ದಾರೆ.

ಈಗಾಗಲೇ ಪಕ್ಷಾಂತರದಿಂದ ನಾಲ್ಕೈದು ಕ್ಷೇತ್ರಗಳನ್ನು ಕಳೆದುಕೊಂಡಿರುವ ಜೆಡಿಎಸ್, ಇದನ್ನು ಹೀಗೆಯೇ ಬಿಟ್ಟರೆ ಇನ್ನಷ್ಟು ಹೆಚ್ಚಾಗುವ ಅಪಾಯವಿದೆ. ಇದನ್ನು ಮನಗಂಡು, ತಮ್ಮ ಹಿಡಿತದಲ್ಲಿರುವ ವಿಧಾನಸಭಾ ಕ್ಷೇತ್ರಗಳೊಂದಿಗೆ ಈ ಹಿಂದಿನ ಕ್ಷೇತ್ರಗಳನ್ನು ಮರಳಿ ಪಡೆಯುವ ಲೆಕ್ಕಾಚಾರದಲ್ಲಿ ನಾಯಕರಿದ್ದಾರೆ. ಹಾಗೆ ನೋಡಿದರೆ, ಜೆಡಿಎಸ್ ಎಂದಿಗೂ ಹಳೇ ಮೈಸೂರು ಭಾಗದಲ್ಲಿ ಬರುವ ಸರಿ ಸುಮಾರು 60 ರಿಂದ 70 ಕ್ಷೇತ್ರಗಳನ್ನು ಹೊರತುಪಡಿಸಿ, ಇನ್ನುಳಿದ ಕಡೆ ಹೆಚ್ಚು
ಗಮನಹರಿಸಿಲ್ಲ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಮೈಸೂರು ಜಿಲ್ಲೆಯೊಂದನ್ನು ಹೊರುತುಪಡಿಸಿದರೆ, ಇನ್ನುಳಿದ ಭಾಗದಲ್ಲಿ ಕಾಂಗ್ರೆಸ್ ನೇರ ಪ್ರತಿಸ್ಪಽ. ಬಿಜೆಪಿ ಅಲ್ಲಿನ್ನೂ ಪಕ್ಷ ಸಂಘಟನೆ ಮಾಡಿಕೊಳ್ಳುವಲ್ಲಿ ನಿರತವಾಗಿದೆ ಹೊರತು, ಬಲಿಷ್ಠವಾಗಿ ಈ ಹಂತದಲ್ಲಿಯೂ ಬೆಳೆದಿಲ್ಲ.

ಆದ್ದರಿಂದ ಕಾಂಗ್ರೆಸ್ ಒಂದನ್ನು ಬಗ್ಗು ಬಡಿದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ, ಜೆಡಿಎಸ್ ಕಳೆದ ಎರಡು ದಶಕದಿಂದ ಪಡೆಯುತ್ತಿರುವ 45ರಿಂದ 50 ಸೀಟುಗಳು ಸಿಗುವುದು ಖಚಿತ. ಆದರೆ ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯೂ ತನ್ನ ಸಂಘಟನೆಯನ್ನು ಹೆಚ್ಚಿಸಿಕೊಳ್ಳಲು ಸಿದ್ಧತೆ
ನಡೆಸಿಕೊಂಡಿತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಇದು ಸಾಧ್ಯವಾಗಿರಲಿಲ್ಲ. ಇದನ್ನು ಗಮನಿಸಿ, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ್ನು ನೆಲಕಚ್ಚುವಂತೆ ಮಾಡಲು ಜೆಡಿಎಸ್ ಬೆಂಬಲ ಪಡೆಯಲು ಬಿಜೆಪಿ ನಿರ್ಧರಿಸಿದೆ. ಈ ಭಾಗದಲ್ಲಿರುವ ವಿಧಾನಸಭಾ ಸೀಟುಗಳಲ್ಲಿ ನೇರವಾಗಿ ಅಲ್ಲದಿದ್ದರೂ, ’adjustment ರಾಜಕೀಯದ ಮೂಲಕ ಕೆಲ ಸೀಟುಗಳನ್ನು ಪಡೆಯಬಹುದು. ಇದನ್ನು ಗಮನಿಸಿಯೇ, ಬಿಜೆಪಿ ಜೆಡಿಎಸ್‌ನೊಂದಿಗೆ ‘ಹೊಂದಾಣಿಕೆ’ ಮಾಡಿಕೊಳ್ಳುವ ಲೆಕ್ಕಾಚಾರ ದಲ್ಲಿದೆ.

ಇದಕ್ಕೂ ಮೊದಲು ಬೊಮ್ಮಾಯಿ ಅವರ ಸರಕಾರಕ್ಕೆ ಯಡಿಯೂರಪ್ಪ ಹಾಗೂ ಅವರ ತಂಡದಿಂದ ಆಪತ್ತು ಬಂದರೆ, ಸರಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಜೆಡಿಎಸ್ ಮೈತ್ರಿಗೆ ಸಿದ್ಧತೆ ನಡೆಸಿಕೊಂಡಿದೆ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಈ ಮೈತ್ರಿ ಚುನಾವಣಾ ಸಮಯದಲ್ಲಿಯೂ ಮಾಡಿಕೊಳ್ಳುವ ಮೂಲಕ, ಕಾಂಗ್ರೆಸ್‌ನ ಕೆಲವು ಸೀಟುಗಳನ್ನು ಕಸಿದುಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ. ಈ ತಂತ್ರಗಾರಿಕೆಯಲ್ಲಿ ‘ಜೆಡಿಎಸ್‌ನ ಸೀಟುಗಳಿಗೆ ಬಿಜೆಪಿ ಕೈಹಾಕುವುದಿಲ್ಲ’ ಎನ್ನುವ ಒಪ್ಪಂದವೂ ಇರುವುದರಿಂದ, ಜೆಡಿಎಸ್ ಸಂಘಟನೆಗೆ ಸದ್ಯದ ಮಟ್ಟಿಗಂತೂ ಯಾವ ಸಮಸ್ಯೆಯೂ ಇಲ್ಲ.

ಬದಲಿಗೆ, ಬಿಜೆಪಿಯೊಂದಿಗಿನ ಒಳಮೈತ್ರಿಯಿಂದಾಗಿ, ಕೆಲ ಕ್ಷೇತ್ರಗಳನ್ನು ಪುನಃ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಲೆಕ್ಕಾಚಾರದಲ್ಲಿ ಜೆಡಿಎಸ್ ಇರುವುದರಿಂದ,
ಈ ಒಪ್ಪಂದ ಜೆಡಿಎಸ್ ನಾಯಕರಿಗೆ ‘ಬೋನಸ್ ಪಾಯಿಂಟ್’. ಮೊದಲೇ ಹೇಳಿದಂತೆ ಈಗಾಗಲೇ ಹಲವು ನಾಯಕರು ಪಕ್ಷದಿಂದ ಹಾರಲು ತಯಾರಿ ನಡೆಸಿರುವ ಸಮಯದಲ್ಲಿ, ಜೆಡಿಎಸ್‌ಗೆ ಈ ಚುನಾವಣೆ ಅನಿವಾರ್ಯ. 2004ರಲ್ಲಿ 58 ಶಾಸಕರನ್ನು ಹೊಂದಿದ್ದ ಜೆಡಿಎಸ್, 2018ರ ಚುನಾವಣೆ ವೇಳೆಗೆ ಇದನ್ನು 37ಕ್ಕೆ ಇಳಿಸಿಕೊಂಡಿದೆ. ಈ ಸಮಯದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ಘಟಾನುಘಟಿ ನಾಯಕರನ್ನು ಜೆಡಿಎಸ್ ಕಳೆದುಕೊಂಡಿದೆ.

ಆದ್ದರಿಂದ ಈಗಲೂ ಈ ಬಗ್ಗೆ ತಲೆಕೆಡಿಸಿಕೊಳ್ಳದೇ, ದೇವೇಗೌಡರ ಹಾಗೂ ಅವರ ಕುಟುಂಬದ ಹೆಸರಲ್ಲಿ ಚುನಾವಣೆಗೆ ಹೋದರೆ, ಈ ಸಂಖ್ಯೆ ಮುಂದಿನ
ಚುನಾವಣೆಯಲ್ಲಿ ಇನ್ನಷ್ಟು ಕುಸಿಯುವುದರೊಂದಿಗೆ, ತಮ್ಮ ಹಿಡಿತವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ 2023ರಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ ಜೆಡಿಎಸ್‌ನ ಅನಿವಾರ್ಯವಾಗಿದೆ. ಅದಕ್ಕಾಗಿಯೇ 18 ತಿಂಗಳ ಮೊದಲೇ, ಬಿಜೆಪಿಯೊಂದಿಗೆ ಒಂದು ರೀತಿಯ ಒಪ್ಪಂದ ಮಾಡಿಕೊಳ್ಳುವು ದರೊಂದಿಗೆ, ಸಾಲು ಸಾಲು ಸಭೆಗಳನ್ನು ನಡೆಸಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಕೆಲಸವನ್ನು ಜೆಡಿಎಸ್ ನಾಯಕರು ಮಾಡುತ್ತಿದ್ದಾರೆ.

ಈಗಾಗಲೇ ಹಲವು ಬಾರಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆಯಿಲ್ಲ. ಸ್ವಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸವನ್ನು ಕುಮಾರಸ್ವಾಮಿ ಹಾಗೂ ದೇವೇಗೌಡರು ಬಹಿರಂಗವಾಗಿ ಹೇಳಿದ್ದಾರೆ. 2023ರ ಚುನಾವಣೆಗೆ ‘ಮಿಷನ್ 123’ ಎನ್ನುವ ಗುರಿಯನ್ನು ಹೊಂದಿ, ಇದಕ್ಕೆ ಬೇಕಾದ ಸಂಘಟನೆಗೆ ಸೋಮವಾರದಿಂದ ನಾಲ್ಕು ದಿನಗಳ ಕಾಲ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜೆಡಿಎಸ್ ಅನ್ನು ತಳಹಂತಕ್ಕೆ ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂಬ ದೃಷ್ಟಿಯಲ್ಲಿ ಮೊದಲ 2 ದಿನ ಶಾಸಕ ಸ್ಥಾನದ ಆಕಾಂಕ್ಷಿಗಳು, ಜೆಡಿಎಸ್ ಶಾಸಕರಿಗೆ ಕಾರ್ಯಾಗಾರ ನಡೆಯುತ್ತದೆ. ಅದರಲ್ಲಿ ರಾಜ್ಯದಲ್ಲಿನ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಯಾವ ರೀತಿ ಮುಂದಿನ ವಿಧಾನಸಭೆ ಚುನಾವಣೆಗೆ ಸನ್ನದ್ಧರಾಗಬೇಕು, ನಮ್ಮ ಎದುರಾಳಿಗಳನ್ನು ಶಕ್ತಿ ಮತ್ತು ಸಂಘಟನೆಗೆ
ಪರ್ಯಾಯವಾಗಿ ನಾವು ಯಾವ ರೀತಿ ಮುನ್ನಡೆಯಬೇಕು ಎನ್ನುವ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಆದರೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಕ್ಕೆ ಈ ಸರ್ಕಸ್ ಎಂದು ಹೇಳುತ್ತಿದ್ದರೂ, ಬಿಜೆಪಿಯೊಂದಿಗೆ ಒಳ ಒಪ್ಪಂದವಿದೆ ಎನ್ನುವುದು ಜೆಡಿಎಸ್ ನಡೆದು ಕೊಳ್ಳುತ್ತಿರುವ ನಡೆಯಲ್ಲಿ ಸ್ಪಷ್ಟವಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಸರಕಾರ ಹೋಗಿ, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಅಧಿಕಾರಕ್ಕೆ ಬರುತ್ತಿದ್ದಂತೆ, ಜೆಡಿಎಸ್ ನಾಯಕರಿಗೆ ‘ಇದು ನಮ್ಮ ಸರಕಾರ’ ಎನ್ನುವ ಭಾವನೆ ಶುರುವಾಗಿತ್ತು. ಇದಕ್ಕೆ ಕಾರಣ, ಬಸವರಾಜ ಬೊಮ್ಮಾಯಿ ಅವರ ಜನತಾದಳದೊಂದಿನ ಸಂಬಂಧ ಹಾಗೂ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸುವ ಮೊದಲು, ಜೆಡಿಎಸ್ ವರಿಷ್ಠರೊಂದಿಗೆ ಚರ್ಚೆ ನಡೆಸಿ, ಅಗತ್ಯವಿದ್ದರೆ ಸಹಾಯ ನೀಡುವಂತೆ ಕೇಳಿದ್ದು.

ದೇವೇಗೌಡರು, ಒಂದು ಹಂತದಲ್ಲಿ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಬಹುಮತದ ಕೊರತೆ ಎದುರಾದರೆ, ಜೆಡಿಎಸ್ ಸಹಾಯಕ್ಕೆ ಬರುತ್ತದೆ ಎನ್ನುವ ಮೂಲಕ ಈ ಮಾತನ್ನು ನಿಜವಾಗಿಸಿದ್ದರು. ಇನ್ನು ಇದಾದ ಬಳಿಕ ಜೆಡಿಎಸ್ ಇತ್ತೀಚಿನ ದಿನದಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ಬಿಜೆಪಿ ಜತೆ ಉತ್ತಮ ಬಾಂಧವ್ಯವಿಟ್ಟುಕೊಳ್ಳಲು ಅಗತ್ಯ ತಯಾರಿ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ. 10 ದಿನಗಳ ಕಾಲ ನಡೆದ ಮುಂಗಾರು ಅಧಿವೇಶನದಲ್ಲಿ ಇದು ಪದೇಪದೆ
ಬಹಿರಂಗವಾಗುತ್ತಾ ಸಾಗಿತ್ತು. ಅಧಿವೇಶನ ಆರಂಭವಾದ ಮೊದಲ ವಾರದಲ್ಲಿ ಕಾಂಗ್ರೆಸ್ ನಾಯಕರು, ಬೆಲೆ ಏರಿಕೆ ಸಂಬಂಧಿಸಿದಂತೆ ಬಿಜೆಪಿ ಸರಕಾರವನ್ನು ತರಾಟೆ ತಗೆದುಕೊಂಡಿದ್ದರು.

ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಬೊಮ್ಮಾಯಿ ಸರಕಾರದ ತನಕ ಟೀಕೆ ನಡೆಸಿದರು. ಆದರೆ ಸಿದ್ದರಾಮಯ್ಯ ನಂತರ
ಮಾತನಾಡಿದ ಕುಮಾರಸ್ವಾಮಿ ಅವರು ಮಾತ್ರ, ‘ಎಲ್ಲ ಸರಕಾರಗಳಿಗೂ ಬೆಲೆ ಏರಿಕೆ ಅನಿವಾರ್ಯ’ ಎನ್ನುವ ಮೂಲಕ ಆರಂಭದಲ್ಲಿಯೇ ಸರಕಾರದ ಪರ ಪರೋಕ್ಷ ಬ್ಯಾಟ್ ಬೀಸಿದರು. ಇದಾದ ಬಳಿಕ ಬೆಲೆ ಏರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ ಅವರು, ಬಹುತೇಕ ಸಿದ್ದರಾಮಯ್ಯ ಅವರನ್ನು ಹಾಗೂ ಮೈತ್ರಿ ಸರಕಾರದಲ್ಲಿ ತಾವು ಅನುಭವಿಸಿದ ಸಂಕಷ್ಟವನ್ನು ಸದನದಲ್ಲಿ ‘ಆನ್ ರೆಕಾರ್ಡ್’ ಹೇಳಲು ಬಳಸಿಕೊಂಡರು.

ಇನ್ನೊಂದು ಉದಾಹರಣೆ ನೀಡುವುದಾದರೆ, ‘ಪ್ರಜಾಪ್ರಭುತ್ವ; ಸಂಸದೀಯ ಮೌಲ್ಯಗಳ ರಕ್ಷಣೆ’ ವಿಷಯದಲ್ಲಿ ಉಭಯ ಸದನದ ಸದಸ್ಯರನ್ನು ಉದ್ದೇಶಿಸಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಾಡಿದ ಭಾಷಣಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನವನ್ನು ಬಹಿಷ್ಕರಿಸಿತ್ತು. ಆದರೆ ಜೆಡಿಎಸ್ ಮಾತ್ರ ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೇ ಹಾಜರಾಯಿತು. ಕಳೆದರಡು ವರ್ಷದಿಂದ ಸದನಕ್ಕೆ ಅಪರೂಪ ಎನಿಸಿದ್ದ ಕುಮಾರಸ್ವಾಮಿ ಅವರು, ತಮ್ಮ ಮೊಮ್ಮಗ ಹುಟ್ಟಿದ್ದರೂ, ಸದನಕ್ಕೆ ಹಾಜರಾಗಿದ್ದರು.

ರೇವಣ್ಣ ಅವರು ಆಫ್ ದಿ ರೆಕಾರ್ಡ್ ಮಾತನಾಡುವಾಗ, ‘ದೊಡ್ಡ ಗೌಡರ ಸೂಚನೆ ಮೇರೆಗೆ ನಾವೆಲ್ಲ ಬಂದಿದ್ದೇವೆ’ ಎನ್ನುವ ಮಾತನ್ನು ಹೇಳಿದರು. ಸದನದಲ್ಲಿ ಕೆಲ ವಿಷಯಕ್ಕೆ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಅದ್ಯಾವುದೂ ಸರಕಾರದ ವಿರುದ್ಧವಾಗಿರಲಿಲ್ಲ. ಬದಲಿಗೆ ಸ್ಪೀಕರ್ ಕಾಗೇರಿ ಅವರು ತಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ತಮ್ಮ ವಿಚಾರ ಮಂಡನೆಗೆ ಅವಕಾಶ ನೀಡಲಿಲ್ಲ ಎನ್ನುವುದಕ್ಕೆ ಸೀಮಿತವಾಗಿತ್ತು.

ಈ ಎಲ್ಲ ಸಂಗತಿಗಳನ್ನು ಗಮನಿಸಿದಾಗ, ಜೆಡಿಎಸ್ ಈ ಹಂತದಲ್ಲಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟವಾದರೂ, ಬಿಜೆಪಿಗೆ ಬೆಂಬಲವಾಗಿ ಅಥವಾ ಮೈತ್ರಿಯೊಂದಿಗೆ ಆಡಳಿತ ಪಕ್ಷದ ಸಾಲಿನಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಕುಳಿತುಕೊಳ್ಳುವ ಲೆಕ್ಕಾಚಾರದಲ್ಲಿದೆ. ಆಡಳಿತ ಪಕ್ಷದಲ್ಲಿ ಕುಳಿತುಕೊಳ್ಳ ದಿದ್ದರೂ, ತನ್ನ ‘ಭದ್ರಕೋಟೆ ಎನಿಸಿ ರುವ ಕ್ಷೇತ್ರಗಳನ್ನು ಉಳಿಸಿಕೊಂಡು, ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ’ ಎಂದರೆ ತಪ್ಪಾಗುವುದಿಲ್ಲ. ಬಿಜೆಪಿ ವರಿಷ್ಠರು ಕಾಂಗ್ರೆಸ್ ಮಣಿಸಲು ಜೆಡಿಎಸ್ ಅಸವನ್ನು ಪ್ರಯೋಗಿಸಿದರೂ, ಈ ಅಸ್ತ್ರ ಕೆಲವೊಮ್ಮೆ ತಿರುಗುಬಾಣವಾಗುವುದರಲ್ಲಿಯೂ ಅನುಮಾನವಿಲ್ಲ ಎನ್ನುವ ಅರಿವು ಬಿಜೆಪಿಗೂ ಇದೆ. ಏನೇ ಆದರೂ ರಾಜಕೀಯದಲ್ಲಿ ‘ಶತ್ರುವಿನ ಶತ್ರು ಮಿತ್ರ’. ಕಾಲಕಾಲಕ್ಕೆ ಶತ್ರುತ್ವ, ಮಿತ್ರತ್ವ ಬದಲಾಗುತ್ತಲೇ ಇರುತ್ತದೆ ಎನ್ನುವುದು ಒಪ್ಪಬೇಕು.