Saturday, 23rd November 2024

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

ನವದೆಹಲಿ: ಕ್ಯಾ.ಅಮರಿಂದರ್ ಸಿಂಗ್ ಜತೆ ಮುನಿಸಿಕೊಂಡು, ಸಿಂಗ್ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವಲ್ಲಿ ಯಶಸ್ಸು ಕಂಡಿದ್ದ ನವಜ್ಯೋತ್ ಸಿಂಗ್ ಸಿಧು ಮಂಗಳವಾರ ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೈಕಮಾಂಡ್‌ಗೆ ಅಚ್ಚರಿ ಮೂಡಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದಷ್ಟೇ ಅಧ್ಯಕ್ಷ ಸ್ಥಾನಕ್ಕೆ ಏರಿದ್ದ ನವಜ್ಯೋತ್ ಸಿಂಗ್ ಸಿಧು ಅವರು ದಿಢೀರನೆ ರಾಜೀನಾಮೆ ನೀಡಿರುವ ಹಿಂದೆ ಹೊಸ ಮುಖ್ಯಮಂತ್ರಿ ಜತೆಗೂ ಸಿಧು ಮುನಿಸಿಕೊಂಡಿರುವುದಾಗಿ ವರದಿಯಾಗಿದೆ.

ಪಂಜಾಬ್ ನ ಭವಿಷ್ಯದ ವಿಚಾರ ಹಾಗೂ ಪಂಜಾಬ್ ಜನತೆಯ ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಿಯಾಗಲಾರೆ. ಈ ನಿಟ್ಟಿನಲ್ಲಿ ನಾನು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಕಾಂಗ್ರೆಸ್ ನಲ್ಲಿಯೇ ಮುಂದುವರಿಯುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.