ಶಾರ್ಜಾ: ಬ್ಯಾಟಿಂಗ್ ಹಾಗೂ ಬೌಲಿಂಗ್ ನಿರ್ವಹಣೆಯಿಂದ ಗಮನ ಸೆಳೆದ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಪ್ಲೇಆಫ್ ಸ್ಥಾನ ಖಾತ್ರಿಪಡಿಸಿಕೊಂಡಿತು.
ಗುರುವಾರ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ ಬಳಗ ಸನ್‌ರೈಸರ್ಸ್ ಹೈದರಾಬಾದ್ ತಂ ಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದರಿಂದ ಲೀಗ್‌ನಲ್ಲಿ 9ನೇ ಜಯ ದಾಖಲಿಸಿದ ಸಿಎಸ್‌ಕೆ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ದಾಖಲೆಯ 11ನೇ ಬಾರಿಗೆ ಪ್ಲೇಆಫ್ ಹಂತಕ್ಕೇರಿತು.
ಟಾಸ್ ಜಯಿಸಿದ ಸಿಎಸ್‌ಕೆ ನಾಯಕ ಎಂಎಸ್ ಧೋನಿ, ಸನ್‌ರೈಸರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ವೇಗಿಗಳಾದ ಜೋಸ್ ಹ್ಯಾಸಲ್‌ವುಡ್ (24ಕ್ಕೆ 3) ಹಾಗೂ ಡ್ವೇನ್ ಬ್ರಾವೊ (17ಕ್ಕೆ 2) ಕರಾರುವಾಕ್ ದಾಳಿಗೆ ನಲುಗಿದ ಸನ್‌ರೈಸರ್ಸ್ 7 ವಿಕೆಟ್‌ಗೆ 134 ರನ್‌ಗಳಿಸಲಷ್ಟೇ ಶಕ್ತವಾಯಿತು. ಮೊತ್ತ ಬೆನ್ನಟ್ಟಿದ ಸಿಎಸ್‌ಕೆ, ಋತುರಾಜ್ ಗಾಯಕ್ವಾಡ್ (45ರನ್) ಹಾಗೂ ಫಾಫ್ ಡು ಪ್ಲೆಸಿಸ್ (41ರನ್) ಬಿರುಸಿನ ಆರಂಭದ ಫಲವಾಗಿ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 139 ರನ್‌ಗಳಿಸಿದರು.
ಅಂಬಟಿ ರಾಯುಡು(ಔಟಾಗದೆ 17) ಹಾಗೂ ನಾಯಕ ಧೋನಿಯವರ(ಔಟಾಗದೆ 14) ಜವಾಬ್ದಾರಿಯುತ ಬ್ಯಾಟಿಂಗ್ ಗೆಲುವಿಗೆ ನೆರವಾಯಿತು.
ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ಜೇಸನ್ ಹೋಲ್ಡರ್(3-27)ಮೂರು ವಿಕೆಟ್ ಕಬಳಿಸಿದರು.