Thursday, 21st November 2024

ಪಿಂಕ್ ಬಾಲ್ ಟೆಸ್ಟ್: ಆಸೀಸ್ ಇನ್ನಿಂಗ್ಸ್ ಡಿಕ್ಲೇರ್, ರೋಚಕತೆಯತ್ತ ಪಂದ್ಯ

ಕ್ವೀನ್ಸ್ ಲ್ಯಾಂಡ್: ಮೊದಲ ಇನ್ನಿಂಗ್ಸ್ ನಲ್ಲಿ ರನ್ ಹಿನ್ನಡೆಯಿದ್ದರೂ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಭಾರತ ವನಿತೆಯರ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ನಲ್ಲಿ ರೋಚಕ ರಣತಂತ್ರ ರೂಪಿಸಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 241 ರನ್ ಗೆ ಒಂಬತ್ತು ವಿಕೆಟ್ ಕಳೆದುಕೊಂಡ ಆಸೀಸ್ ವನಿತೆ ಯರ ತಂಡ ಡಿಕ್ಲೇರ್ ಘೋಷಣೆ ಮಾಡಿತು. ಭಾರತ ತಂಡಕ್ಕಿಂತ 136 ರನ್ ಹಿನ್ನಡೆ ಯಿದ್ದರೂ ಆಸೀಸ್ ತಂಡದ ರಣತಂತ್ರ ರೋಚಕವಾಗಿದೆ.

ಭಾರತ ತಂಡ ಸ್ಮೃತಿ ಮಂಧನಾ ಶತಕ, ದೀಪ್ತಿ ಶರ್ಮಾ ಅರ್ಧಶತಕದ ನೆರವಿನಿಂದ 377 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಉತ್ತರ ವಾಗಿ ಆಸೀಸ್ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದಾಗ ಡಿಕ್ಲೇರ್ ಮಾಡಿದೆ.

ಆಸೀಸ್ ಪರ ಎಲಿಸ್ ಪೆರ್ರಿ 68 ರನ್ ಗಳಿಸಿದರೆ, ಗಾರ್ಡ್ನರ್ 51 ರನ್ ಗಳಿಸಿದರು. ಭಾರತದ ಬೌಲರ್ ಗಳು ಆಸೀಸ್ ತಂಡದ ರನ್ ಓಟಕ್ಕೆ ಕಡಿವಾಣ ಹಾಕಿದರು. ಪೂಜಾ ವಸ್ತ್ರಾಕರ್ ಮೂರು ವಿಕೆಟ್, ಗೋಸ್ವಾಮಿ, ಮೇಘಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು.

ಪಂದ್ಯದ ಅಂತಿಮ ದಿನವಾಗಿದ್ದು, ಭಾರತವನ್ನು ಕಟ್ಟಿ ಹಾಕಿ ನಂತರ ರನ್ ಚೇಸ್ ಮಾಡುವ ಗುರಿಯನ್ನು ಆಸೀಸ್ ಹೊಂದಿದೆ. ಎರಡನೇ ಇನ್ನಿಂಗ್ಸ್ ಆಟ ಆರಂಭಿಸಿದ ಭಾರತ ತಂಡ ಎರಡು ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದ್ದು, 228 ರನ್ ಮುನ್ನಡೆ ಯಲ್ಲಿದೆ.