Friday, 22nd November 2024

ಪ್ರೊ ಕಬಡ್ಡಿ ಲೀಗ್‌ನ ಎಂಟನೇ ಆವೃತ್ತಿಗೆ ಬೆಂಗಳೂರು ಆತಿಥ್ಯ

ಬೆಂಗಳೂರು: ]8ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿ ಡಿ. 21ರಂದು ಆರಂಭಗೊಳ್ಳಲಿದೆ.

ಈ ಕೂಟದ ಎಲ್ಲ ಪಂದ್ಯಗಳು ಬೆಂಗಳೂರಿನ “ಕಂಠೀರವ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆಯುವುದು. ಟೂರ್ನಿಯ ಆಯೋಜಕ ಸಂಸ್ಥೆ ಮಾರ್ಷಲ್‌ ಸ್ಪೋರ್ಟ್ಸ್ ಮಂಗಳವಾರ ಮಾಹಿತಿ ನೀಡಿದೆ.

ಈ ಬಗ್ಗೆ ಮಾತನಾಡಿದ ಮಾರ್ಷಲ್‌ ಸ್ಪೋರ್ಟ್ಸ್ ಕ್ಲಬ್‌ನ ಸಿಇಒ ಅನುಪಮ್‌ ಗೋಸ್ವಾಮಿ, “ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯನ್ನು ಆಯೋಜಿಸಲು ಎಲ್ಲರ ಹಿತದೃಷ್ಟಿಯಿಂದ ಬೆಂಗಳೂರೇ ಸೂಕ್ತ ಸ್ಥಳ ಎಂದು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಂದ್ಯಗಳನ್ನು ಕೋವಿಡ್‌-19 ಮಾರ್ಗಸೂಚಿಯನ್ವಯ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಆದರೆ ಪ್ರೇಕ್ಷಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದರು.

ಕೋವಿಡ್‌-19 ಕಾಟ ತಗ್ಗಿದ ಬಳಿಕ ಇದು ಭಾರತದಲ್ಲಿ ನಡೆಯಲಿರುವ ಪ್ರಮುಖ ಒಳಾಂಗಣ ಕ್ರೀಡಾಕೂಟ ವಾಗಿರಲಿದೆ. ಕೋವಿಡ್‌ ಭೀತಿಯಿಂದಾಗಿ 2020ರಲ್ಲಿ ಪ್ರೊ ಕಬಡ್ಡಿ ಲೀಗ್‌ ನಡೆದಿರಲಿಲ್ಲ.

ಎಲ್ಲ 12 ತಂಡಗಳ ತವರು ಮೈದಾನಗಳಲ್ಲಿ ಸುದೀರ್ಘ‌ 3 ತಿಂಗಳ ಕಾಲ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಿತ್ತು. ಆದರೆ ಕೋವಿಡ್‌ ಮುನ್ನೆಚ್ಚರಿಕೆಯ ಕಾರಣ ಈ ವರ್ಷ ಎಲ್ಲ ಪಂದ್ಯಗಳನ್ನು ಒಂದೇ ತಾಣಕ್ಕೆ ಸೀಮಿತಗೊಳಿಸ ಲಾಗುತ್ತಿದೆ. ಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರಿಗೆ ಲಸಿಕೆ ಕಡ್ಡಾಯವಾಗಿದ್ದು, ಟೂರ್ನಿಯ ಆರಂಭಕ್ಕೆ ಕನಿಷ್ಠ 14 ದಿನ ಮೊದಲೇ ಎಲ್ಲ ತಂಡಗಳು ಬೆಂಗಳೂರಿನಲ್ಲಿ ಹಾಜರಿರಬೇಕಿದೆ ಎಂದು ಗೋಸ್ವಾಮಿ ತಿಳಿಸಿದರು.

ಪ್ರೊ ಕಬಡ್ಡಿ ಆತಿಥ್ಯಕ್ಕೆ ಜೈಪುರ ಮತ್ತು ಅಹ್ಮದಾಬಾದ್‌ ರೇಸ್‌ನಲ್ಲಿದ್ದವು. ಆಟಗಾರರ ಹರಾಜು ಪ್ರಕ್ರಿಯೆ ಕಳೆದ ಆ. 29ರಿಂದ 31ರ ತನಕ ಮುಂಬಯಿಯಲ್ಲಿ ನಡೆದಿತ್ತು.

ಕಬಡ್ಡಿ ಭಾರತೀಯ ಮಣ್ಣಿನ ಕ್ರೀಡೆಯಾಗಿದ್ದು, ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ಮುಂಬರುವ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯುವುದನ್ನು ನಾವು ಸ್ವಾಗತಿಸುತ್ತೇವೆ. ಈ ಕ್ರೀಡಾಕೂಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.