ಭೋಪಾಲ್: ಸರ್ಕಾರಿ ಜಾಹೀರಾತು ಪಡೆಯಲು ತಪ್ಪು ಪ್ರಸಾರ ಸಂಖ್ಯೆ ನೀಡಿದ ಮಧ್ಯ ಪ್ರದೇಶದ ಮೂರು ಪತ್ರಿಕೆಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ ಎಫ್ಐಆರ್ ದಾಖಲಿಸಿದೆ.
ಜಬಲ್ಪುರದ ಒಂದು ಪತ್ರಿಕೆ ಮತ್ತು ಸಿಯೋನಿಯ ಎರಡು ಪತ್ರಿಕೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮೂರು ಪತ್ರಿಕೆಗಳ ಪ್ರಕಾಶಕರು /ಮಾಲೀಕರ ವಿರುದ್ಧ ಅ.4 ರಂದು ಜಬಲ್ಪುರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಗಸ್ಟ್ 13 ರಂದು ಸಿಬಿಐನ ಜಬಲ್ಪುರ್ ಕಚೇರಿಯಲ್ಲಿ ಹಿಮಾಂಶು ಕೌಶಲ್ ಎಂಬವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಕ್ರಿಮಿನಲ್ ಪಿತೂರಿ, ನಕಲಿ ಮತ್ತು ವಂಚನೆ ಆರೋಪದ ಅಡಿಯಲ್ಲಿ ಮೂರು ಪತ್ರಿಕೆಗಳ ವಿರುದ್ಧ ಎಫ್ಐಆರ್ ದಾಖಲಿಸ ಲಾಗಿದೆ.
ಪತ್ರಿಕೆಗಳು ಕೇಂದ್ರ ಸರ್ಕಾರದ ಏಜೆನ್ಸಿಯ ಮೂಲಕ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯದಿಂದ(ಡಿಎವಿಪಿ) ಲಕ್ಷಾಂತರ ರೂಪಾಯಿ ಮೌಲ್ಯದ ಜಾಹೀರಾತು ಗಳನ್ನು ಪಡೆಯುತ್ತಿವೆ ಎಂದು ಆರೋಪಿಸಲಾಗಿದೆ.