Sunday, 15th December 2024

ಸ್ವಾರ್ಥ ರಾಜಕಾರಣಕ್ಕಾಗಿ ಎಲ್ಲವೂ ಉಚಿತ, ಬೆಲೆ ಏರಿಕೆಯೂ ಖಚಿತ

ಅಭಿಪ್ರಾಯ

ಲತಾ ಆರ್‌.

lathar.1997@gmail.com

ಒಂದು ಕಡೆ ಕರೋನಾ, ಮತ್ತೊಂದು ಕಡೆ ಜಲಪ್ರಳಯ. ದುಡಿಯುವುದಕ್ಕೆ ಕೆಲಸ ಇಲ್ಲ. ಯಾವುದೇ ಆದಾಯವಿಲ್ಲದೇ ದೇಶದ ಜನತೆ ಕಷ್ಟದಲ್ಲಿ ಸಿಲುಕಿ
ನರಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿರುವುದು ದೇಶದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ದೇಶದ ಸಮಸ್ಯೆ ಹಾಗೂ ಜನರ ಕಷ್ಟಗಳನ್ನು ಆಳುವ ಸರಕಾರದ ಗಮನಕ್ಕೆ ತಂದು ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವುದಕ್ಕೆ ಶ್ರಮಿಸಬೇಕಾಗಿರುವುದು ಪ್ರತಿಪಕ್ಷಗಳ ನೈಜ ಕರ್ತವ್ಯ. ಈ ದೃಷ್ಟಿಯಿಂದಲೇ ಇಂಗ್ಲೆಂಡ್ ಜನತೆ ಇಂದಿಗೂ ಪ್ರತಿಪಕ್ಷವನ್ನು ನಮ್ಮ ಪಕ್ಷ ಎಂದೇ ಭಾವಿಸಿಕೊಂಡಿರುವುದು. ಆದರೆ, ನಮ್ಮ
ದೇಶದಲ್ಲಿ ವಿರೋಧಪಕ್ಷದವರು ಪ್ರತಿಯೊಂದು ವಿಚಾರವನ್ನು ಜನರ ಹಿತಾಸಕ್ತಿಗಿಂತ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ದುರಾದೃಷ್ಟಕರ. ಸದನದಲ್ಲಿ ಕುಳಿತು ಮಾತಾಡುವ ವಿಚಾರವನ್ನು ಬೀದಿಗೆ ತಂದು ರಂಪಾಟ ಮಾಡುತ್ತಿದ್ದಾರೆ.

ಬೆಲೆ ಏರಿಕೆ ವಿರೋಧಿ ಹೆಸರಿನಲ್ಲಿ ಪ್ರಚಾರಕ್ಕಾಗಿ ಎತ್ತಿನ ಬಂಡಿಯಲ್ಲಿ ವಿಧಾನಸಭೆ ಪ್ರವೇಶ ಮಾಡುತ್ತಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ಬೆಲೆ ಏರಿಕೆಯ ಕುರಿತು ಅಧಿವೇಶನದಲ್ಲಿ ಆರೋಗ್ಯಕರ ಚರ್ಚೆ ನಡೆಯ ಬೇಕಾಗಿತ್ತು. ಆ ಮೂಲಕ ಬೆಲೆ ಏರಿಕೆಯಿಂದ ಬಳಲಿರುವ ಸಾಮಾನ್ಯ ಜನರಿಗೆ ಅನುಕೂಲ ವಾಗುವಂತಹ ಯೋಜನೆಗಳನ್ನು ರೂಪಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಆದರೆ, ಅದ್ಯಾವುದನ್ನೂ ಮಾಡದೇ ಆಡಳಿತ ಹಾಗೂ ಪ್ರತಿಪಕ್ಷಗಳು ಒಬ್ಬರ ಮೇಲೆ ಒಬರು ಆರೋಪ-ಪ್ರತ್ಯಾರೋಪ ಮಾಡುತ್ತಾ ಅಧಿವೇಶನದಲ್ಲಿ ಕಾಲಹರಣ ಮಾಡಿದರು.

ಬೆಲೆ ಏರಿಕೆ ಎಂಬುದು ಒಂದು ಸಹಜ ಕ್ರಿಯೆ ಇರಬಹುದು. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಶ ಎಂದೂ ಬೆಲೆ ಏರಿಕೆ ಕಂಡಿರಲಿಲ್ಲ. ಅಡುಗೆ ಎಣ್ಣೆ, ಬೇಳೆ ಕಾಳುಗಳಂತಹ ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ತೈಲ ಬೆಲೆಯೂ ಸೆಂಚುರಿ ಬಾರಿಸಿವೆ. ತೈಲ ಬೆಲೆ ಏರಿಕೆಯ ಪರಿಣಾಮ ಸಾಗಾಣಿಕೆ ದರ ಹೆಚ್ಚಾಗಿ ಕಬ್ಬಿಣ, ಸಿಮೆಂಟ್ ಹಾಗೂ ಅಗತ್ಯ ವಸ್ತುಗಳು ಸೇರಿ ಎಲ್ಲವೂ ದುಬಾರಿಯಾಗಿವೆ. ಈ ರೀತಿ ರಾಕೆಟ್   ವೇಗದಲ್ಲಿ ಏರುತ್ತಿರುವ ಬೆಲೆ ಏರಿಕೆಯನ್ನು ಸಹಿಸಿ ಕೊಳ್ಳುವುದಕ್ಕೆ ಸಾಮಾನ್ಯ ಜನರಿಗೆ ಸಾಧ್ಯವಾಗುತ್ತಿಲ್ಲ.

ಕರೋನಾ ಸಂದರ್ಭದಲ್ಲಿ ಉತ್ಪಾದನಾ ಘಟಕಗಳು ಬಂದ್ ಆಗಿದ್ದರಿಂದ ಉತ್ಪಾದನೆ ಕುಂಠಿತಗೊಂಡು ಅವಶ್ಯಕ ವಸ್ತುಗಳ ಬೆಲೆ ದುಬಾರಿಗೊಂಡಿರುವುದು
ಸತ್ಯ. ಜನರು ಉದ್ಯೋಗವಿಲ್ಲದೇ ಕೊಂಡುಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದ್ದರು. ಇದರಿಂದ ಆರ್ಥಿಕ ವಹಿವಾಟುಗಳು ಕುಸಿತಗೊಂಡು ಸರಕಾರಕ್ಕೆ
ಬರಬೇಕಾಗಿದ್ದ ನಿರೀಕ್ಷಿತ ವರಮಾನಗಳು ಸಂಪೂರ್ಣವಾಗಿ ಬತ್ತಿಹೋದವು. ಇಂಥ ಸಂದರ್ಭದಲ್ಲಿ ಆಡಳಿತ ನಡೆಸುವುದು ತುಂಬಾ ಕಠಿಣ ಕೆಲಸ. ಹಾಗೆಂದು
ಸರಕಾರ ವರಮಾನ ಕಡಿತ ಕಾರಣ ಕೊಟ್ಟು ಕೈ ಕಟ್ಟಿ ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳು ಸೇರಿದಂತೆ ಅಭಿವೃದ್ಧಿ ಯೋಜನೆಗಳಿಗೆ ಆಯಾ ಕಾಲಕ್ಕೆ ಸರಕಾರ ಹಣ ಒದಗಿಸಲೇ ಬೇಕು. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರ ತೆರಿಗೆ ಹೆಚ್ಚಿಸುವುದು ಬಿಟ್ಟರೆ ಅದಕ್ಕೆ ಬೇರೆ ಯಾವ ಮಾರ್ಗವೂ ಇಲ್ಲ. ಬೆಲೆ ಏರಿಕೆಗೆ ಮೂಲ ಕಾರಣ ಇಂಧನ ಬೆಲೆ ಹೆಚ್ಚಳ ವಾಗಿರು ವುದು. ಆದ್ದರಿಂದ ತೈಲವನ್ನು ಜಿಎಸ್‌ಟಿ ಒಳಗೆ ತಂದರೆ ಅದರ ಬೆಲೆ ಕಡಿಮೆಯಾಗುವುದು ಸತ್ಯ ಎನ್ನಲಾಗುತ್ತಿದೆ. ರಾಜ್ಯ ಸರಕಾರಗಳು ಒಪ್ಪಿಕೊಂಡರೆ ತೈಲವನ್ನು ಜಿಎಸ್‌ಟಿ ಒಳಗೆ ತರಲು ತನ್ನದೇನೂ ಅಭ್ಯಂತರವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟವಾಗಿ ಹೇಳಿದೆ. ಇಡೀ ದೇಶಾದ್ಯಂತ ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ವಿರೋಧ ಪಕ್ಷಗಳು ತಾವು ಅಽಕಾರದಲ್ಲಿರುವ ರಾಜ್ಯಗಳಲ್ಲಿ ತೈಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ವಿರೋಧಿಸು ತ್ತಿರುವುದಾದರೂ ಏಕೆ? ಇದನ್ನ ದೇಶ ಪ್ರಜ್ಞಾವಂತ ಜನರು ಪ್ರಶ್ನೆ ಮಾಡಬೇಕು.

ತೈಲವೂ ಜಿಎಸ್‌ಟಿಯೊಳಗೆ ಬಂದರೆ ಪೆಟ್ರೋಲ್, ಡೀಸೇಲ್ ದರ ಸುಮಾರು 40 ರು. ಕಡಿಮೆಯಾಗುವುದರಿಂದ ಸಹಜವಾಗಿ ಅವಶ್ಯಕ ವಸ್ತುಗಳ ಬೆಲೆಯೂ ಶೇ.30 ರಷ್ಟು ಇಳಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಬೆಲೆ ಏರಿಕೆಗೆ ನಾನಾ ಕಾರಣಗಳಿವೆ. ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾದಾಗ ಸಾಮಾನ್ಯ ವಾಗಿ ಬೆಲೆ ಏರಿಕೆ ಆಗುತ್ತದೆ. ಸರಕಾರ ತನ್ನ ಸಾರ್ವಜನಿಕ ವೆಚ್ಚವನ್ನು ಸರಿದೂಗಿಸಲು ತೆರಿಗೆಗಳನ್ನು ಏರಿಸಿದಾಗಲೂ ಬೆಲೆ ಏರಿಕೆಯಾಗುತ್ತದೆ. ಇದೆಲ್ಲಾದಕ್ಕಿಂತ ಮುಖ್ಯವಾದುದು ಏನೆಂದರೆ 70 ವರ್ಷಗಳಿಂದ ನಮ್ಮ ರಾಜಕಾರಣಿಗಳು ಪೂರ್ವಾಪರ ಯೋಚಿಸದೇ ಕೇವಲ ತಮ್ಮ ರಾಜಕೀಯ ಹಿತಾಸಕ್ತಿ ಗೋಸ್ಕರ ಘೋಷಿಸುವ ಉಚಿತ ಭಾಗ್ಯಗಳೇ ನಿರಂತರ ಬೆಲೆ ಏರಿಕೆಗೆ ಕಾರಣ ಎಂದರೆ ತಪ್ಪಾಗಲಾರದು. ಆದ್ದರಿಂದಲೇ ಕುಮಾರಸ್ವಾಮಿಯವರು ಹೇಳಿದ್ದು, ಜನಪ್ರಿಯ ಯೋಜನೆಗಳನ್ನು ಘೋಷಿಸುವಾಗ ರಾಜಕಾರಣಿಗಳು ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಅರಿವು ಹೊಂದಿರಬೇಕು ಎಂದು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಉಚಿತ ಭಾಗ್ಯಗಳ ಸುರಿಮಳೆಯೇ ಆಯಿತು. ಇಡೀ ದೇಶದಲ್ಲಿ ಹೆಚ್ಚು ಉಚಿತ ಭಾಗ್ಯಗಳನ್ನು ಘೋಷಣೆ ಮಾಡುತ್ತಿರುವವರು ಎಂದರೆ ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲ್ ಅವರು. ಇವರು ಯಾವುದೇ ರಾಜ್ಯದ ಚುನಾವಣೆ ಪ್ರಚಾರಕ್ಕೆ ಹೋಗಲಿ ಉಚಿತ ಘೋಷಣೆಗಳೇ ಇವರ ಒಂದಂಶದ ಕಾರ್ಯಕ್ರಮ. ಏನ್ ಇವರು ತಮ್ಮ ಹೊಲದಲ್ಲಿ ಬೆಳೆದಂತಹ ಜೋಳ ಮಾರಿದ ದುಡ್ಡನಲ್ಲಿ ಏನಾದರೂ ತಂದು ಕೊಡು ತ್ತಿದ್ದಾರಾ? ಇವರು ಕೊಡೋದು ಸರಕಾರದ ಖಜಾನೆಯಿಂದ.

ಖಜಾನೆ ಖಾಲಿಯಾದರೆ ಅದನ್ನ ತುಂಬಿಸಿಕೊಳ್ಳುವುದಕ್ಕೆ ಮತ್ತೆ ಜನರ ಮೇಲೆ ತೆರಿಗೆ ಹಾಕುತ್ತಾರೆ. ಈ ಉಚಿತ ಯೋಜನೆಗಳೇ ಮುಂದೆ ಸರಕಾರಕ್ಕೆ ದೊಡ್ಡ ಹೊರೆಯಾಗಿ ಇಂದಿನ ಬೆಲೆ ಏರಿಕೆಗೆ ಕಾರಣವಾಗುತ್ತಿವೆ ಎಂಬುವುದರಲ್ಲಿ ಎರಡು ಮಾತಿಲ್ಲ. ದೇಶದಲ್ಲಿರುವ ಎಲ್ಲರಿಗೂ ಉಚಿತ ವ್ಯಾಕ್ಸೀನ್ ಕೊಡಬೇಕೆಂದು ಪ್ರತಿಪಕ್ಷಗಳು ಬೀದಿಗಿಳಿದು ರಂಪಾಟ ಮಾಡಿದ್ದರು. ಮಾನವೀಯತೆಯ ನೆಲೆಗಟ್ಟಿನಲ್ಲಿ ಕೇಂದ್ರ ಸರಕಾರ ಕೂಡ ದೇಶದ ಪ್ರತಿಯೊಬ್ಬರಿಗೂ ಉಚಿತ ವ್ಯಾಕ್ಸೀನ್ ನೀಡುತ್ತಿದೆ. ಪಾಶ್ಚಿಮಾತ್ಯ ದೇಶಗಳ ದೃಷ್ಟಿಯಲ್ಲಿ ಭಾರತ ಬಡ ದೇಶ ಎನ್ನಿಸಿಕೊಂಡಿರಬಹುದು.

ಆದರೆ ದೇಶದಲ್ಲಿ ಶ್ರೀಮಂತರ ಸಂಖ್ಯೆನೂ ಕಡಿಮೆ ಇಲ್ಲ. ಪ್ರತಿ ವರ್ಷ ಪ್ರಕಟವಾಗುವ ಜಾಗತಿಕ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತೀಯರ ಸಾಕಷ್ಟು ಹೆಸರುಗಳಿರುತ್ತದೆ. ಆಟೋ ಚಾಲಕರಿಗೆ, ಬೀದಿ ವ್ಯಾಪಾರಿಗಳಿಗೆ, ಕಟ್ಟಡ ಕಾರ್ಮಿಕರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ವ್ಯಾಕ್ಸೀನ್ ಕೊಡುವು ನೋ ಸರಿ. ಆದರೆ ಕೋಟಿ ಕೋಟಿ ಹಣ ಕೂಡಿಟ್ಟು ಕೊಂಡಿರುವವರಿಗೆ, ಐಷಾರಾಮಿ ಅಪಾರ್ಟ್‌ಮೆಂಟ್ಸ್‌ನಲ್ಲಿ ವಾಸ ಇರುವವರಿಗೆ, ಅರಮನೆ ಯಂಥಹ ಮನೆ ಕಟ್ಟಿಕೊಂಡಿರುವ ಶ್ರೀಮಂತರಿಗೆ ಉಚಿತವಾಗಿ ವ್ಯಾಕ್ಸೀನ್ ಕೊಡುವುದು ಎಷ್ಟು ಸರಿ? 140 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಒಂದು ಡೋಸ್ ವ್ಯಾಕ್ಸೀನ್ ಹಾಕುವುದಕ್ಕೆ ಸುಮಾರು 50 ಸಾವಿರ ಕೋಟಿ ರು. ಹಣ ಖರ್ಚಾಗುತ್ತೆ.

ಇದರ ಪ್ರಕಾರ 2 ಡೋಸ್ ಲಸಿಕೆ ಹಾಕಬೇಕಾದರೆ ಸುಮಾರು 1 ಲಕ್ಷ ಕೋಟಿಗೂ ಹೆಚ್ಚು ಹಣ ಖರ್ಚಾಗುತ್ತೆ. ಆದಾಯ ಮೂಲವೇ ಬತ್ತಿ ಹೋಗಿರುವ ಈ ಸಂದರ್ಭದಲ್ಲಿ ಸರಕಾರ ಇಷ್ಟು ದೊಡ್ಡ ಮೊತ್ತದ ಹಣವನ್ನು ಎಲ್ಲಿಂದ ತರುತ್ತೇ? ಕಳೆದ ಬಾರಿ ಲೋಕಸಭಾ ಚುನಾವಣೆ ಸಂದರ್ಭ ದಲ್ಲಿ ಕಾಂಗ್ರೆಸ್ ತಾನು ಅಽಕಾರಕ್ಕೆ ಬಂದರೆ ದೇಶದ ಶೇ.೨೦ ರಷ್ಟು ಬಡವರಿಗೆ ಉಚಿತವಾಗಿ ತಿಂಗಳಿಗೆ 6 ಸಾವಿರದಂತೆ ವರ್ಷಕ್ಕೆ 72000 ರು. ನಗದು ಕೊಡುವುದಾಗಿ ಘೋಷಣೆ ಮಾಡಿತು. ಇವರ ಉಚಿತ ಘೋಷಣೆ ಸಮಾಜದ ಮೇಲೆ ಎಂಥ ಕೆಟ್ಟ ಪರಿಣಾಮ ಬೀರಿತ್ತೆಂದರೆ ಮಾಸಾಶನ ಕೋರಿದ ಹೆಂಡತಿಗೆ ತಿಂಗಳಿಗೆ 3 ಸಾವಿರ ರು. ಕೊಡಬೇಕೆಂದು ಗಂಡನಿಗೆ ಕೋರ್ಟ್ ಆದೇಶ ನೀಡಿತು. ಅದಕ್ಕೆ ಆ ವ್ಯಕ್ತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೊಡುವುದಾಗಿ ಹೇಳಿದ್ದಾನೆ.

ಇವರ ವಿವೇಚನಾರಹಿತ ಘೋಷಣೆಗಳು ಕೇವಲ ಸರಕಾರಕ್ಕೆ ಮಾತ್ರ ಆರ್ಥಿಕ ಹೊರೆ ಆಗುತ್ತಿಲ್ಲ. ವ್ಯಕ್ತಿಯ ಸ್ವಾಭಿಮಾನ ಹಾಗೂ ಆತ್ಮಸ್ಥೆರ್ಯಕ್ಕೂ ಕುತ್ತು
ತರುತ್ತಿವೆ. ಕರ್ನಾಟಕದಲ್ಲಿ ಸುಮಾರು 1 ಕೋಟಿ 50 ಲಕ್ಷ ಕುಟುಂಬಗಳಿವೆ ಅಂತ ಅಂದಾಜಿಸಲಾಗಿದೆ. ಈಗಾಗಲೇ 1 ಕೋಟಿ 30 ಲಕ್ಷ ಕುಟುಂಬಕ್ಕೆ ಬಿಪಿಎಲ್
ಕಾರ್ಡ್ ಕೊಡಲಾಗಿದೆ. ಇನ್ನೂ 30 ಲಕ್ಷ ಜನ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿಕೊಂಡಿದ್ದಾರೆ. ಹಾಗಾದರೆ, ರಾಜ್ಯದಲ್ಲಿರುವ ಎಲ್ಲರೂ ಬಡವರಾ? ಬಿಪಿಎಲ್ ಕಾರ್ಡ್‌ದಾರರಿಗೆ 6 ತಿಂಗಳು ಉಚಿತವಾಗಿ ಅಕ್ಕಿ ಕೊಡುವುದಕ್ಕೆ ಕೇಂದ್ರ ಸರಕಾರ ಸುಮಾರು 60 ಸಾವಿರ ಕೋಟಿ ಖರ್ಚು ಮಾಡುತ್ತಿದೆ.

ಕರೋನಾದಿಂದ ಈಗಾಗಲೇ ರಾಜ್ಯ ಸರಕಾರದ ಖಜಾನೆ ಬರಿದಾಗಿದೆ. ಹಾಗಿದ್ದರೂ ಸಹ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಅಧಿಕಾವಹಿಸಿ ಕೊಂಡಾಗ ಮೊದಲು ಮಾಡಿದ ಕೆಲಸ ಏನೆಂದರೆ ಅಂಗವಿಕಲರಿಗೆ, ವೃದ್ಧರಿಗೆ, ವಿಧವೆಯವರಿಗೆ ಸರಕಾರ ಕೊಡುತ್ತಿರುವ ಪಿಂಚಣಿ ಹಣವನ್ನು ಶೇ.30 ರಷ್ಟು ಹೆಚ್ಚಿಗೆ ಮಾಡಿದ್ದರು. ಈ ರೀತಿ ಪಿಂಚಣಿ ಹಣವನ್ನು ಏರಿಕೆ ಮಾಡಿ ಎಂದು ಮನವಿ ಮಾಡಿಕೊಂಡು ಅರ್ಜಿ ಕೊಟ್ಟಿದ್ದೀರಾ? ಬೊಮ್ಮಾಯಿಯವರು ಬಡವರ ಮೇಲಿನ ಕನಿಕರದಿಂದ ಮಾಡಿದರೋ, ಇಲ್ಲ ರಾಜಕೀಯ ಲಾಭಕ್ಕೋಸ್ಕರ ಮಾಡಿದರೋ.

ಒಟ್ಟಿನಲ್ಲಿ ಈ ಒಂದು ಘೋಷಣೆಯಿಂದ ಸರಕಾರದ ಮೇಲೆ ನೂರಾರು ಕೋಟಿ ರು. ಹೆಚ್ಚುವರಿ ಹೊರೆಯಾಗಿದ್ದಂತೂ ಸತ್ಯ. ಹೋಗಲಿ, ಈ ಪಿಂಚಣಿಯಾದರೂ
ಅರ್ಹರಿಗೆ ಸಿಗುತ್ತಿದ್ದೀಯಾ? ಅದು ಇಲ್ಲ, ಎಷ್ಟೋ ಜನ ಆರ್ಥಿಕ ಸಬಲರಾಗಿದ್ದರೂ ಸಹ ಈ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಸರಕಾರದ ಜನಪ್ರಿಯ ಯೋಜನೆಗಳು ದುರುಪಯೋಗವಾಗುತ್ತಿರುವುದಕ್ಕೆ ಇವೆಲ್ಲಾ ಜೀವಂತ ಸಾಕ್ಷಿಗಳು. ರಾಜಕಾರಣಿಗಳು ಹಿಂದೆ ಮುಂದೆ ಯೋಚಿಸದೇ ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಘೋಷಿಸುವ ಇಂಥ ಯೋಜನೆಗಳು ಸಮಾಜದ ಯಾವ ವರ್ಗಕ್ಕೂ ಆರ್ಥಿಕ ಭದ್ರತೆ ನೀಡೋದಿಲ್ಲ. ಬದಲಿಗೆ ದುಡಿಯುವ ವರ್ಗವನ್ನು ಸೊಂಬೇರಿ ಗಳನ್ನಾಗಿ ಮಾಡುತ್ತವೆ. ಅಷ್ಟೇ ಅಲ್ಲ, ಸರಕಾರದ ಬೊಕ್ಕಸಕ್ಕೆ ಹೊರೆಯಾಗುವುದರೊಂದಿಗೆ ಬೆಲೆ ಏರಿಕೆಗೆ ನೇರ ಕಾರಣ ವಾಗುತ್ತವೆ. ರಾಜಕೀಯ ಪಕ್ಷಗಳ ಉದ್ದೇಶ ಮೊದಲು ಅಽಕಾರಕ್ಕೆ ಬರಬೇಕು, ನಂತರ ಅಽಕಾರ ಉಳಿಸಿಕೊಳ್ಳಬೇಕು. ಆದ್ದರಿಂದಲೇ ಎಲ್ಲಾ ರಾಜಕೀಯ ಪಕ್ಷಗಳು ಇಂಥ ಜನಪ್ರಿಯ ಯೋಜನೆ ಗಳನ್ನು ಘೋಷಣೆ ಮಾಡುತ್ತಾರೆ.

ರಾಜ್ಯದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರುವಂತಹ ಹಾಗೂ ಬೆಲೆ ಏರಿಕೆಗೆ ಕಾರಣ ವಾಗುವಂತಹ ಈ ರೀತಿಯ ಘೋಷಣೆಗಳ ವಿರುದ್ಧ ಪ್ರಜ್ಞಾವಂತರು ಧ್ವನಿ ಎತ್ತಬೇಕು. ಇಲ್ಲದೇ ಹೋದರೆ ಎಲ್ಲವೂ ಉಚಿತ, ಬೆಲೆ ಏರಿಕೆಯೂ ಖಚಿತ.