ಶಾಸಕರ ಅಭಿಪ್ರಾಯ ಸಂಗ್ರಹ, ಆರ್. ಅಶೋಕ್ಗೆ ವಿರೋಧ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿಯೇ ಬೆಂಗಳೂರು
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬೀದಿ ರಂಪಾಟವಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಸ್ತುವಾರಿಗಳ ತ್ವರಿತ ನೇಮಕದ ತೀವ್ರ ಒತ್ತಡದಲ್ಲಿದ್ದಾರೆ. ಅಷ್ಟೇ ಅಲ್ಲ. ಉಪ ಚುನಾವಣೆ ಮುಗಿಯುತ್ತಿದ್ದಂತೆ ಉಸ್ತುವಾರಿ ಸಚಿವರ ನಿಯೋಜನೆ ಮಾಡಲು ತೀರ್ಮಾನಿಸಿದ್ದು, ಇದಕ್ಕಾಗಿ ಶಾಸಕರಿಂದ ಅಭಿಪ್ರಾಯವನ್ನೂ ಸಂಗ್ರಹಿಸುತ್ತಿದ್ದಾರೆ.
ಅದರಲ್ಲೂ ಉಸ್ತುವಾರಿ ವಿಚಾರದಲ್ಲಿ ಸಚಿವರ ಬೀದಿ ಜಗಳ ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದ್ದು, ಪ್ರತಿಪಕ್ಷಗಳ ಟೀಕೆಗೆ ಆಹಾರವೂ ಆಗುತ್ತಿದೆ. ಹೀಗಾಗಿ ಸಿಎಂ ಅವರು ಉಪ ಚುನಾವಣೆ ನಡುವೆಯೇ ಅಥವಾ ಚುನಾವಣೆ ನಂತರ ಒಮ್ಮೆ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತಕ್ಷಣವೇ ಉಸ್ತುವಾರಿ ಗಳನ್ನು ಹಂಚಿಕೆ ಮಾಡಲಿದ್ದಾರೆ. ಬೆಂಗ ಳೂರು ಉಸ್ತುವಾರಿಗೆ ತೀವ್ರ ರಾಜಕೀಯ ಗುದ್ದಾಟ ನಡೆಯಲುತ್ತಿದ್ದು, ಬಳ್ಳಾರಿ, ಮೈಸೂರು, ಬೆಳಗಾವಿ ಸೇರಿದಂತೆ ಕೆಲವೇ ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಪೈಪೋಟಿ ಉಂಟಾಗಿದ್ದು, ಉಳಿದ ಜಿಲ್ಲೆಗಳನ್ನು ಕೇಳುವವರೇ ಇಲ್ಲ.
ಈ ಮಧ್ಯೆ, ಬೆಂಗಳೂರು ಉಸ್ತುವಾರಿ ನೇಮಕ ವಿಚಾರದಲ್ಲಿ ಸ್ವತಃ ಮುಖ್ಯಮಂತ್ರಿ ಅವರೇ ಗೊಂದಲದಲ್ಲಿದ್ದು, ಹೈಕಮಾಂಡ್ ಸಲಹೆ ನಂತರ ಉಸ್ತುವಾರಿ ಗಳನ್ನು ಹಂಚಿಕೆ ಮಾಡಲಿದ್ದಾರೆ. ಬಹುತೇಕ ಈ ಹಿಂದೆ ಕೋವಿಡ್ ಮತ್ತು ಪ್ರವಾಹ ನಿರ್ವಹಣೆಗೆ ಹಂಚಿಕೆ ಮಾಡಿದ್ದ ಜಿಲ್ಲೆಗಳನ್ನೇ ಸಚಿವರಿಗೆ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.
ಇವರಿಗೆ ಬೆಂಗಳೂರೇ ಏಕೆ ಬೇಕು?: ಉಸ್ತುವಾರಿ ಮೇಲೆ ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಸುಧಾಕರ್, ಎಸ್ .ಟಿ. ಸೋಮಶೇಖರ್ ಆಸೆ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇವರ ಪೈಕಿ ಅಶೋಕ್, ಸೋಮಣ್ಣ ಮತ್ತು ಅಶ್ವತ್ಥ ನಾರಾಯಣ ನಡುವೆ ತೀವ್ರ ಪೈಪೋಟಿ ಇದ್ದು, ಇವರು ನೇರವಾಗಿಯೇ ಲಾಬಿ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಕಳೆದೊಂದು ವರ್ಷಗಳಿಂದ ಬಿಬಿಎಂಪಿ ಚುನಾವಣೆಯೇ ನಡೆದಿಲ್ಲ. ಹೀಗಾಗಿ ಸಾವಿರಾರು ಕೋಟಿ ರುಪಾಯಿಗಳ ಆದಾಯ ಇರುವ ಮತ್ತು ಕೋಟ್ಯಂತರ ರುಪಾಯಿಗಳ ವಿಶ್ವಮಟ್ಟದ ವ್ಯವಹಾರಗಳು ನಡೆಯುವ ಬೆಂಗಳೂರು ಆಡಳಿತವನ್ನು ನಿಯಂತ್ರಿಸಬೇಕಾದ ೧೯೭ ಬಿಬಿಎಂಪಿ ಸದಸ್ಯರು ಮತ್ತು ಮೇಯರ್ ಸದ್ಯ ಅಸ್ತಿತ್ವದಲ್ಲಿ ಇಲ್ಲ. ಇದರಿಂದ ಬಿಬಿಎಂಪಿ
ವ್ಯಾಪ್ತಿಯ ವ್ಯವಹಾರಗಳು ಮತ್ತು ಕಾಮಗಾರಿಗಳನ್ನು ಲಾಭ, ನಷ್ಟದ ನಿಯಂತ್ರಣವನ್ನು ಮಾಡಲು ಶಾಸಕರು ಮುಂದಾಗುತ್ತಿದ್ದಾರೆ.
ಇಂಥ ಸಮಯದಲ್ಲಿ ಎಲ್ಲಾ ಶಾಸಕರನ್ನು ನಿಯಂತ್ರಿಸಬೇಕಾದರೆ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ಬೇಕಾಗುತ್ತದೆ. ಹೀಗಾಗಿ ಸಚಿವರಲ್ಲಿ ಬೆಂಗಳೂರು ಉಸ್ತುವಾರಿ ಹೆಬ್ಬಯಕೆ ಹೆಚ್ಚಾಗಿದೆ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು ಉಸ್ತುವಾರಿ ಯನ್ನು ಉತ್ತರ, ದಕ್ಷಿಣ ಎಂದು ವಿಂಗಡಿಸಿ ಸೋಮಣ್ಣ ಮತ್ತು ಅಶೋಕ್ ಅವರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ.
ಸಚಿವರಿಗೆ ಈ ಜಿಲ್ಲೆಗಳೇ ಏಕೆ ಬೇಕು?: ಸಚಿವ ಸೋಮಣ್ಣ ಅವರ ರಾಜಕೀಯ ಬೇರು ಬೆಂಗಳೂರೇ ಆಗಿರುವ ಕಾರಣ ಅವರು ಬೆಂಗಳೂರು ಕೇಳು ತ್ತಿದ್ದಾರೆ. ಇಲ್ಲವಾದರೆ ವೀರಶೈವ ಲಿಂಗಾಯತ ಸಮುದಾಯದ ಸಂಘಟನೆ ದೃಷ್ಠಿಯಿಂದ ಮೈಸೂರ ಚಾಮರಾಜನಗರ ಎರಡನ್ನೂ ನೀಡುವಂತೆ ಕೂಡ ಸೋಮಣ್ಣ ವಿನಂತಿಸಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಇದಕ್ಕೆ ಸಚಿವರಾದ ಉಮೇಶ್ ಕತ್ತಿ ಮತ್ತು ಶಶಿಕಲಾ ಜೊಲ್ಲೆ ತೀವ್ರ ಪೈಪೋಟಿ ನಡೆಸಿದ್ದಾರೆ. ಕಾರಣ ಇವರ ರಾಜಕಾರಣ ಮತ್ತು ರಾಜಕೀಯ ವ್ಯವಹಾರಗಳ ವಿಸ್ತರಣೆಗಾಗಿ ಬೆಳಗಾವಿಯೇ ಬೇಕೆಂದು ಕೇಳುತ್ತಿದ್ದು, ಆದರೆ ಸದ್ಯ ಹಿರಿಯ ಸಚಿವ ಗೋವಿಂದ ಕಾರಜೋಳ ಅವರು ಉಸ್ತುವಾರಿ ನಿರ್ವಹಿಸುತ್ತಿದ್ದು, ಇವರಿಗೆ ಇದು ಬೇಡವಾಗಿದೆ.
ಬದಲಾಗಿ ಬಾಗಲಕೋಟೆ ಬಗ್ಗೆ ಅವರು ಆಸೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಹಾಗೆಯೇ ಸಚಿವ ಶ್ರೀರಾಮಲು ಬಳ್ಳಾರಿ ಮತ್ತು ಚಿತ್ರದುರ್ಗ ಎರಡನ್ನೂ ಕೇಳುತ್ತಿದ್ದಾರೆ. ಈ ಮಧ್ಯೆ, ಕಲಬುರ್ಗಿ ಉಸ್ತುವಾರಿ ಕೋವಿಡ್ ಉಸ್ತುವಾರಿ ಹೊತ್ತಿರುವ ಮುರುಗೇಶ್ ನಿರಾಣಿ ಅವರು ಬಾಗಲಕೋಟೆ ಕೇಳುತ್ತಿದ್ದಾರೆ. ಆದರೆ ತೀರಾ ಹಿಂದಿಳಿದಿರುವ ಚಾಮರಾಜನಗರ, ಕೋಲಾರ, ದಾವಣೆಗೆರೆ, ಹಾವೇರಿ ಜಿಲ್ಲೆಗಳನ್ನು ಕೇಳುವವರೇ ಗತಿ ಇಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಶೋಕ್ಗೆ ಏಕೆ ಈ ಪರಿ ವಿರೋಧ ?
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಉಸ್ತುವಾರಿ ನೇಮಕ ಸಂಪುಟ ವಿಸ್ತರಣೆಯಷ್ಟೇ ದೊಡ್ಡ ತಲೆನೋವಾಗಿದೆ. ಏಕೆಂದರೆ, ಸೋಮಣ್ಣ, ಆರ್.ಅಶೋಕ್, ಸೋಮಶೇಖರ್, ಅಶ್ವತ್ಥ ನಾರಾಯಣ ಹಾಗೂ ಶ್ರೀರಾಮಲು ಸೇರಿದಂತೆ ಅನೇಕ ಸಚಿವರು ಉಸ್ತುವಾರಿ ಬೇಡಿಕೆಯಿಟ್ಟು ಬೀದಿ ರಂಪಾಟಕ್ಕೆ ಇಳಿದಿದ್ದಾರೆ. ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆ ಸಂದರ್ಭದಲ್ಲಿ ಕೆಲವು ಸಚಿವರು ಉಸ್ತುವಾರಿ ವಿಚಾರದಲ್ಲಿ ಒತ್ತಡ ಹೇರಿ ತಲೆನೋವು ತಂದಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರಿಲ್ಲದೆ ಅಧಿಕಾರಿಗಳು ಸರಕಾರದ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ. ಅಧಿಕಾರಿಗಳು ಯಾರಿಂದಲೂ
ನಿಯಂತ್ರಣವಿಲ್ಲದೆ ಯೋಜನೆಗಳಲ್ಲಿ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಬೊಮ್ಮಾಯಿ ಅವರು ಈ ವಿಚಾರದಲ್ಲಿ ಅವಸರದಲ್ಲಿದ್ದಾರೆ. ಸದ್ಯ ಹೆಚ್ಚು ಬೇಡಿಕೆ ಇರುವ ಬೆಂಗಳೂರು ಉಸ್ತುವಾರಿ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಇದರಲ್ಲಿ ಬೆಂಗಳೂರಿನ ಬಹುತೇಕ ಶಾಸಕರು ಸಚಿವ ಆರ್.ಅಶೋಕ್ ಉಸ್ತುವಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಉಸ್ತುವಾರಿ ಯಾರಿಗಾದರೂ ನೀಡಿ, ಆದರೆ ಅಶೋಕ್ ಅವರಿಗೆ ಮಾತ್ರ ಬೇಡ ಎಂದು ಬಹುತೇಕ ಎಲ್ಲಾ ಸಚಿವರೂ ಮುಖ್ಯಮಂತ್ರಿ ಅವರಲ್ಲಿ ವಿನಂತಿಸಿದ್ದಾರೆ ಎಂದು ಮೂಲಗಳು ಹೇಳಿವೆ.