ತಿಳಿರುತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
‘ಅಮೃತವಾಣೀ ಸಂಸ್ಕೃತ ಭಾಷಾ ನೈವ ಕ್ಲಿಷ್ಟಾನ ಚ ಕಠಿನಾ…’ ಎಂದು ಕೊಂಡಾಡುತ್ತದೆ ಸಂಸ್ಕೃತವನ್ನು ಬಣ್ಣಿಸುವ ಒಂದು ಜನಪ್ರಿಯ ಪದ್ಯ. ‘ಸುರಸ ಸುಬೋಧಾ ವಿಶ್ವ ಮನೋe ಲಲಿತಾ ಹೃದ್ಯಾರ ಮಣೀಯಾ…’ ಎಂದು ಮತ್ತಷ್ಟು ಬಣ್ಣನೆ. ಹಾಗೆಯೇ ‘ಪಠತ ಸಂಸ್ಕೃತಂ ವದತ ಸಂಸ್ಕೃತಂ ಲಸತು ಸಂಸ್ಕೃತಂ ಚಿರಂಗೃ ಹೇಗೃ ಹೇಚ ಪುನರಪಿ…’ ಎಂದು ಬೋಧನೆ, ಪ್ರಚೋದನೆ.
ಇದೆಲ್ಲ ಸಂಸ್ಕೃತವನ್ನು ಚೂರು ಪಾರು ಕಲಿತವರು, ಬಲ್ಲವರು, ಸಂಸ್ಕೃತದ ಬಗೆಗೆ ಅಭಿಮಾನವುಳ್ಳವರು ಹೇಳುವ ಮಾತಾಯ್ತು. ಆದರೆ ಸಂಸ್ಕೃತ ಒಂದು ಗುಮ್ಮ ಇದ್ದಹಾಗೆ ಎಂದು ಒಂದು ರೀತಿಯ ಹೆದರಿಕೆ ಇಟ್ಟು ಕೊಂಡವರು ಅನೇಕರಿರುತ್ತಾರೆ. ಆ ಭಾಷೆ ಅರ್ಥವಾಗುವುದಿಲ್ಲ, ಕಲಿಯುವುದಂತೂ ದೂರವೇ ಉಳಿಯಿತು ಎಂದು ಕೆಲವರ ಅಂಬೋಣವಾದರೆ, ಅದು ದೇವಭಾಷೆ ಅಂತೆ ವಿದ್ವಜ್ಜನರು ಆಡುವ ಅದನ್ನು ಕಲಿಯುವ ಮಾತನಾಡುವ ಅರ್ಹತೆ-ಯೋಗ್ಯತೆ ನಮಗಿದೆಯೇ ಎಂದು ಅಂದುಕೊಳ್ಳುವವರೂ ಇದ್ದಾರೆ.
ಒಟ್ಟಿನಲ್ಲಿ ಜನಸಾಮಾನ್ಯರಿಗೂ ಸಂಸ್ಕೃತಕ್ಕೂ ನಡುವೆ ಒಂದು ದೊಡ್ಡ ಕಂದರ, ಅಂದೂ ಇಂದೂ. ಅಂತಹ ಸಂಸ್ಕೃತವನ್ನು ‘ಯೂಸರ್ ಫ್ರೆಂಡ್ಲಿ’ ಅಂದರೆ
ಬಳಕೆದಾರ- ಸ್ನೇಹಿ ಅನಿಸುವಂತೆ ಮಾಡುವುದು ಹೇಗೆ? ಅದಕ್ಕೂ ಮೊದಲು, ಸಂಸ್ಕೃತದ ಬಗ್ಗೆ ಜನಸಾಮಾನ್ಯರಲ್ಲಿ ಆಸಕ್ತಿ ಕುತೂಹಲ ಹುಟ್ಟುವಂತೆ ಮಾಡು ವುದು ಹೇಗೆ? ಒಂದು ವಿಧಾನ ಸಂಸ್ಕೃತದಲ್ಲಿರುವ ಮೋಜಿನ ರಸ ಪ್ರಸಂಗಗಳನ್ನು, ವಿನೋದ- ವಿಲಾಸ ಗಳನ್ನು, ಅಕ್ಷರ ಚಮತ್ಕಾರಗಳನ್ನು ಸ್ವಾರಸ್ಯಕರವಾಗಿ ಪರಿಚಯಿಸುವುದು. ತಮ್ಮ ಆಸಕ್ತಿಗೆ ಎಟಕುವ, ಅರಿವಿಗೆ ನಿಲುಕುವ ಸರಕು ಅದರಲ್ಲಿದೆ ಎಂದು ಜನ ಸಾಮಾನ್ಯರಿಗೆ ಮನದಟ್ಟುಮಾಡುವುದು. ಇದನ್ನು ಮಾಡಬೇಕಾದ್ದು ಸಂಸ್ಕೃತ ಪಂಡಿತರು, ಅಧ್ಯಾಪಕರು, ಮತ್ತು ಮುಖ್ಯವಾಗಿ ಯಾವುದೇ ತೆರನಾದ ಮಡಿ ವಂತಿಕೆ ಇಲ್ಲದೆ ಸಂಸ್ಕೃತವು ಎಲ್ಲರನ್ನೂ ತಲುಪಬೇಕು ಎಂಬ ತುಡಿತವುಳ್ಳವರು.
ನನ್ನೊಬ್ಬ ಸನ್ಮಿತ್ರ, ಗೋವಾದಲ್ಲಿ ಅಧ್ಯಾಪನ ವೃತ್ತಿಯಲ್ಲಿರುವ ಕನ್ನಡಿಗ ಮಹಾಬಲ ಭಟ್ ಅವರು ತಮ್ಮ ಇತಿಮಿತಿಗಳೊಳಗೆ ಈ ತೆರನಾದ ಚಿಕ್ಕಪುಟ್ಟ ಸತ್ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಸಂಸ್ಕೃತದ ಪ್ರಖ್ಯಾತ ಕಾವ್ಯಗಳ, ಸೂಕ್ತಿ-ಮುಕ್ತಾವಳಿಗಳ, ರಾಮರಕ್ಷಾ ಮುಂತಾದ ಜನಪ್ರಿಯ ಸ್ತೋತ್ರಗಳ ಸರಳ ಸುಂದರ ವ್ಯಾಖ್ಯಾನವನ್ನು ಕನ್ನಡದಲ್ಲಿ ತಮ್ಮದೇ ಧ್ವನಿಯಲ್ಲಿ ಧ್ವನಿಮುದ್ರಿಸಿ ವಾಟ್ಸಪ್‌ನಲ್ಲಿ ವಿತರಿಸುತ್ತಾರೆ. ಸುeನಮ್ ಎಂಬ ಬ್ಲಾಗ್ ನಲ್ಲೊಂದಿಷ್ಟು ಚಿಕ್ಕಚೊಕ್ಕ ಮೌಲಿಕ ಲೇಖನಗಳನ್ನು ಬರೆಯುತ್ತಾರೆ.
‘ಸಂಸ್ಕೃತ ಪ್ರಪಂಚದ ರಸ ಪ್ರಸಂಗಗಳು’ ಎಂಬ ಸರಣಿಯಲ್ಲಿ ಅವರು ಬರೆದ ೩೧ ಪುಟ್ಟಪುಟ್ಟ ಲೇಖನ ಗಳಂತೂ ಭಲೇ ಮನೋರಂಜನೆಯವೂ ಜ್ಞಾನಪ್ರದವೂ ಆಗಿವೆ. ಇಂದಿನ ಅಂಕಣದಲ್ಲಿ ನಾನು ಆ ರೀತಿಯಾದ ಸಂಸ್ಕೃತದ ಕೆಲವು ವಿನೋದ-ವಿಲಾಸಗಳನ್ನು, ಅಕ್ಷರ ಚಮತ್ಕಾರಗಳನ್ನು, ಒಟ್ಟಾರೆಯಾಗಿ ಲಘುಬಗೆ ಎನಿಸಿಕೊಳ್ಳುವಂಥವುಗಳನ್ನು ಪ್ರಸ್ತುತ ಪಡಿಸ ಬೇಕೆಂದಿದ್ದೇನೆ. ಇದರಲ್ಲಿ ಕೆಲವು ಮಹಾಬಲ ಭಟ್ಟರ ಸಂಗ್ರಹದಿಂದ ಎತ್ತಿಕೊಂಡವಾದರೆ ಮತ್ತೆ ಕೆಲವು ಅಲ್ಲಿ ಇಲ್ಲಿ ಓದಿ/ಕೇಳಿ ನನ್ನ ಸಂಗ್ರಹಕ್ಕೆ ಸೇರಿಸಿ ಕೊಂಡಂಥವು.
‘ಸಮಯೋಚಿತ ಪದ್ಯಗಳು’ ಎಂಬ ಪುಸ್ತಕದಿಂದ (ಬೆಂಗಳೂರಿನ ಎನ್.ವಿ.ಅನಂತರಾಮಯ್ಯಎಂಬ ತ್ರಿಭಾಷಾ ಪಂಡಿತರು ಬರೆದದ್ದು) ಆಯ್ದುಕೊಂಡಂಥವೂ ಕೆಲವಿವೆ. ಇವೆಲ್ಲ ಒಂದು ರೀತಿಯಲ್ಲಿ ಜನಪದ ಸಾಹಿತ್ಯದಂಥವು. ಭೋಜರಾಜ- ಕಾಳಿದಾಸ ಅಂತೆಲ್ಲ ವಿವರಣೆಗಳಿದ್ದರೂ ಬಹುತೇಕ ಅಜ್ಞಾತ ಅನಾಮಧೇಯ ಕವಿಗಳ ರಚನೆಗಳು. ಅಷ್ಟಾಗಿ ಕಾಳಿದಾಸನು ಭೋಜರಾಜನ ಆಸ್ಥಾನದಲ್ಲಿದ್ದವನಲ್ಲ, ಅವರಿಬ್ಬರು ಸಮಕಾಲೀನರೂ ಅಲ್ಲವೆಂದು ಇತಿಹಾಸಜ್ಞರ ಅಭಿಪ್ರಾಯ.
ಆದರೂ ಸಂಸ್ಕೃತ ರಸ ಪ್ರಸಂಗಗಳಲ್ಲಿ ಭೋಜರಾಜ- ಕಾಳಿದಾಸ ಉಲ್ಲೇಖಗೊಂಡರೆ ಅದಕ್ಕೊಂದು ವಿಶೇಷ ಖದರು. ಮೊದಲಿಗೆ ಶಂಖನಾದದಿಂದ ಈ ರಸಯಾತ್ರೆಯನ್ನು ಆರಂಭಿಸೋಣ.
‘ಪಿತಾ ರತ್ನಾಕರೋ ಯಸ್ಯ ಲಕ್ಷ್ಮೀರ್ಯಸ್ಯ
ಸಹೋದರೀ| ಶಂಖೋ ಭಿಕ್ಷಾಟನಂ
ಕುರ್ಯಾನ್ನಾದತ್ತಮುಪತಿಷ್ಠತೇ||’ ಎಂಬಸೂಕ್ತಿ.
ಇದು ಶಂಖಕ್ಕೆ ಕವಿ ಮಾಡುತ್ತಿರುವ ಲೇವಡಿ. ಶಂಖದ ತಂದೆ ರತ್ನಾಕರ ಅಂದರೆ ರತ್ನಗಳ ಗಣಿ ಎನಿಸಿರುವ ಸಮುದ್ರ. ಸಹೋದರಿಯು ಲಕ್ಷ್ಮೀ ದೇವಿ (ಸಮುದ್ರ ಮಥನದ ವೇಳೆ ಹುಟ್ಟಿದವಳೆಂಬ ಪ್ರತೀತಿ ಇದೆಯಲ್ಲವೇ?) ಹೀಗಿದ್ದರೂ ದಾಸಯ್ಯರೊಂದಿಗೆ ಭಿಕ್ಷಾಟನೆಗೆ ಹೋಗಬೇಕಾದ ದುರ್ಗತಿ ಶಂಖಕ್ಕೆ. ಜನ್ಮಾಂತರಗಳಲ್ಲಿ
ದಾನಧರ್ಮಗಳನ್ನು ಮಾಡದಿದ್ದರೆ ಇದೇ ಅವಸ್ಥೆ ಮನುಷ್ಯರಿಗೂ ಆಗುವುದು ಎಂದು ಕವಿಯ ಅಂಬೋಣ.
ಇದೇ ರೀತಿಯಾಗಿ ಈಶ್ವರನನ್ನು ಲೇವಡಿ ಮಾಡುವ ಒಂದು ಸೂಕ್ತಿ: ‘ಸ್ವಯಂಮಹೇಶಃ ಶ್ವಶುರೋ ನಗೇಶಃ ಸಖಾ ಧನೇಶಸ್ತನಯೋ ಗಣೇಶಃ| ತಥಾಪಿ ಭಿಕ್ಷಾಟನ ಮೇವ ಶಂಭೋಃ ಬಲೀಯಸೀ ಕೇವಲಮೀಶ್ವರೇಚ್ಛಾ||’ ಇದರ ಅರ್ಥಶಂಭುವು (ಈಶ್ವರನು) ಸ್ವಯಂಮಹೇಶ. ಜಗತ್ತಿಗೆಲ್ಲ ಒಡೆಯನೆನಿಸಿದ ಜಗದೀಶ.
ಹೆಣ್ಣು ಕೊಟ್ಟ ಮಾವ ಪರ್ವತೇಶ ಅಂದರೆ ಹಿಮಾಲಯ. ತನಯನು ಗಣೇಶ. ಸ್ನೇಹಿತನು ಧನೇಶನಾದ ಕುಬೇರ. ಆದರೂ ಭಿಕ್ಷೆ ಬೇಡುವುದು ತಪ್ಪಲಿಲ್ಲ ಅಂದ ಮೇಲೆ ಈಶ್ವರೇಚ್ಛೆಯೇ ಬಲವಾದದ್ದು ಎಂದು ಹೇಳಬೇಕು. ಇಲ್ಲಿ ಈಶ್ವರೇಚ್ಛೆ ಎಂದರೆ ವಿಧಿಯ ಇಚ್ಛೆ ಎಂದು ತಿಳಿಯಬೇಕು.
‘ಕಮಲೇ ಕಮಲಾ ಶೇತೇ ಹರಶ್ಶೇತೇ ಹಿಮಾಲಯೇ| ಕ್ಷೀರಾಬ್ಧೌಚ ಹರಿಶ್ಶೇತೇ ಮನ್ಯೇಮತ್ಕುಣ ಶಂಕಯಾ||’ಅಂತ ಇನ್ನೊಂದಿದೆ.
ಲಕ್ಷ್ಮೀಯು ತಾವರೆಯಲ್ಲೂ, ಶಿವನು ಹಿಮಾಲಯದಲ್ಲೂ, ವಿಷ್ಣುವು ಕ್ಷೀರ ಸಮುದ್ರದಲ್ಲೂ ಮಲಗುತ್ತಾರೆ. ಇದರ ಗುಟ್ಟೇನು? ಒಬ್ಬ ರಸಿಕನು ತನ್ನ ಅನುಭವಾಮೃತ ದಿಂದ ‘ಇದಕ್ಕೆಲ್ಲ ತಿಗಣೆಯ ಕಾಟವೇ ಕಾರಣ’ ಎನ್ನುತ್ತಾನೆ. ಮತ್ಕುಣ ಅಂದರೆ ತಿಗಣೆ, ಅದು ಥಂಡಿಯಿರುವ ಕಡೆ ಹೋಗುವುದಿಲ್ಲ. ಹೀಗೆ ದೇವ- ದೇವತೆಯರನ್ನು ಮನುಷ್ಯ ಸಮಾನಗೊಳಿಸಿದ ಸೂಕ್ತಿಗಳನ್ನು ಕೇಳಿದರೆ ದೇವಭಾಷೆಯೇ ಮನುಷ್ಯ ಭಾಷೆಯೂ ಆಗ ಬಲ್ಲದು ಎಂದು ಅನಿಸುವುದು ಸಹಜ.
ಇನ್ನು, ಪಫಬಭಮ ಅಕ್ಷರಗಳಿಗೆ ಸಂಬಂಧಿಸಿದ ಒಂದೆರಡು ಸೂಕ್ತಿಗಳನ್ನು ನೋಡೋಣ. ‘ಪಾರ್ವತೀಫಣಿಬಾಲೇಂದು ಭಸ್ಮ ಮಂದಾಕಿನೀಯುತಾ| ಪವರ್ಗರಚಿತಾಮೂರ್ತಿರಪವರ್ಗ ಪ್ರದಾಯಿನೀ||’ ಇದು ಈಶ್ವರನ ಬಗ್ಗೆಲೇವಡಿ ಅಲ್ಲ, ಸ್ತುತಿ. ಈಶ್ವರನ ಒಡನಾಡಿಗಳಾರು? ಪಾರ್ವತಿ, ಫಣಿ(ಸರ್ಪ),
ಬಾಲಚಂದ್ರ, ಭಸ್ಮ, ಮತ್ತು ಮಂದಾಕಿನೀ (ದೇವಗಂಗೆ).
ಅನುಕ್ರಮವಾಗಿ ಪಫಬಭಮ ಅಕ್ಷರಗಳಿಂದ ಅಥವಾ ‘ಪವರ್ಗ’ದಿಂದ ಆರಂಭವಾಗುವವರು. ಆದರೆ ಈಶ್ವರನು ಮೋಕ್ಷದಾಯಕನು. ಅಪವರ್ಗ ಎಂಬ ಪದದ ಅರ್ಥ ಮೋಕ್ಷ ಎಂದು. ಪವರ್ಗದಿಂದ ರಚಿಸಲ್ಪಟ್ಟ ದೇಹವು ಅಪವರ್ಗವನ್ನು ಕೊಡುತ್ತದೆ! ‘ಕುಂಭಕರ್ಣೇ ಭಕಾರೋಧಿಸ್ತಿ ಭಕಾರೋಧಿಸ್ತಿ ವಿಭೀಷಣೇ| ತಯೋರ್ಜ್ಯೇಷ್ಠೇ ಕುಲಶ್ರೇಷ್ಠೇ ಭಕಾರಃ ಕಿಂ ನ ವಿದ್ಯತೇ||’- ಇದು ಭೋಜರಾಜನ ಆಸ್ಥಾನಕ್ಕೆ ಬಹುಮಾನದಾಸೆಯಿಂದ ಬಂದಿದ್ದ ಒಬ್ಬ ಬಡಬ್ರಾಹ್ಮಣ
ಕವಿಯನ್ನು ಕಾಳಿದಾಸನು ಪಾರು ಮಾಡಿದ ರೀತಿ. ಆ ಬ್ರಾಹ್ಮಣನು ರಾಮಾಯಣದ ಶ್ಲೋಕವನ್ನು ಹೇಳುವಾಗ ರಾವಣ ಎನ್ನಲಿಕ್ಕೆ ‘ರಾಭಣ’ ಎಂದು ಉಚ್ಚರಿಸಿದ್ದನಂತೆ.
ಅಪಶಬ್ದವನ್ನು ಕೇಳಿ ಭೋಜರಾಜಸಿಟ್ಟಾಗಿ ‘ಯಾಕೆ ಹೀಗೆ?’ ಎಂದು ಅವನನ್ನು ಗದರಿಸಿದ್ದ. ಬ್ರಾಹ್ಮಣನಿಗೆ ತನ್ನ ಉಚ್ಚಾರಣೆಯನ್ನು ಸಮರ್ಥಿಸಿಕೊಳ್ಳಲಿಕ್ಕಾಗಲಿಲ್ಲ. ಅಲ್ಲೇ ಇದ್ದ ಕಾಳಿದಾಸ ಹೀಗೆಂದ: ಕುಂಭಕರ್ಣನ ಹೆಸರಿನಲ್ಲಿ ಭಕಾರವಿದೆ. ವಿಭೀಷಣನಲ್ಲೂ ಭಕಾರವಿದೆ. ಅವರಿಗಿಂತ ಹಿರಿಯನಾದ ಅವರ ಕುಲದಲ್ಲೇ ಶ್ರೇಷ್ಠನಾದ ರಾವಣನ ಹೆಸರಿನಲ್ಲೂ ಭಕಾರ ಇರಬಹುದಲ್ಲ? ‘ರಾಭಣೋ ನ ತು ರಾವಣಃ’ ರಾಭಣ ಎನ್ನುವುದೇ ಸರಿ ರಾವಣ ಅಲ್ಲ! ಇನ್ನೊಂದು, ಕಾಶ್ಮೀರದ ಬಿಲ್ಹಣ ಯಾನೆ ಭುಕ್ಕುಂಡ ಎಂಬ ಕವಿಯದ್ದೆನ್ನಲಾದ ಚಾಟೂಕ್ತಿ.
ಭುಕ್ಕುಂಡನು ಗುಜರಾತ ಪ್ರಾಂತದ ರಾಜನ ಮಗಳಿಗೆ ಸಂಸ್ಕೃತ ಕಲಿಸುತ್ತಿದ್ದ. ಆಕೆಯ ಪ್ರೇಮ ಪಾಶಕ್ಕೂ ಸಿಲುಕಿದ. ರಾಜನಿಗದು ಪ್ರತಿಷ್ಠೆಗೆ ಕುಂದೆಂಬ ಕಾರಣಕ್ಕೆ ಒಪ್ಪಿಗೆಯಿಲ್ಲ. ಭುಕ್ಕುಂಡನಿಗೆ ಮರಣದಂಡನೆ ವಿಽಸಿದ. ವಧಸ್ಥಾನಕ್ಕೆ ಒಯ್ಯುವಾಗ ಭುಕ್ಕುಂಡ ಹೇಳಿದ ಪದ್ಯ: ‘ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟೋ ಭಿಕ್ಷುರ್ನಷ್ಟೋ ಭೀಮಸೇನೋಧಿಪಿ ನಷ್ಟಃ| ಭುಕ್ಕುಂಡೋಧಿಹಂ ಭೂಪತಿಸ್ತ್ವಂ ಚ ರಾಜನ್ ಭಂಭಾವಲ್ಯಾ ಮಂತಕಃ ಸನ್ನಿವಿಷ್ಟಃ||’ ಇದರರ್ಥ- ಭಟ್ಟಿ(ಕವಿ), ಭಾರವಿ(ಕವಿ), ಭಿಕ್ಷು(ಬುದ್ಧ), ಭೀಮಸೇನ ಇವರೆಲ್ಲ ಯಮನವಶರಾಗಿದ್ದಾರೆ.
ಈಗ ಭುಕ್ಕುಂಡನೆಡೆಗೆ ಯಮಬಂದಿದ್ದಾನೆ. ಭ-ಕಾರ ಬಳ್ಳಿಯನ್ನು ಹಿಡಿದಿರುವ ಯಮ ಭ, ಭಾ, ಭಿ, ಭೀ ಗಳನ್ನು ಮುಗಿಸಿ ‘ಭು’ವನ್ನು ತಲುಪಿದ್ದಾನೆ. ನೀನು ಭೂಪತಿ. ಮುಂದಿನ ಸರದಿ ನಿನ್ನದು. ನನ್ನ ಮರಣ ತಡವಾದಷ್ಟೂ ನಿನ್ನ ಮರಣವೂ ಮುಂದೂಡಲ್ಪಡುತ್ತದೆ ಹಾಗಾಗಿ ಯೋಚನೆ ಮಾಡು ಎಂದು. ಭುಕ್ಕುಂಡನ ಚಾತುರ್ಯವನ್ನು ಮೆಚ್ಚಿದ ರಾಜ ಅವನಿಗೇ ತನ್ನ ಮಗಳನ್ನು ಧಾರೆಯೆರೆದು ಕೊಟ್ಟನಂತೆ. ‘ಮನೋ ಮಧುಕರೋ ಮೇಘೋ ಮಾನಿನೀ ಮದನೋಮರುತ್| ಮಾ ಮದೋ ಮರ್ಕಟೋ ಮತ್ಸ್ಯೋಮ ಕಾರಾ ದಶ ಚಂದಲಾಃ||’ಎಂದು ಇನ್ನೊಬ್ಬ ಕವಿಯ ಉವಾಚ. ಮನಸ್ಸು, ದುಂಬಿ, ಮೋಡ, ಸ್ತ್ರೀ, ಮನ್ಮಥ, ಗಾಳಿ, ಲಕ್ಷ್ಮೀ, ಮದ, ಮಂಗ, ಮೀನು- ಈ ಹತ್ತೂ ಮಕಾರಗಳೂ ಚಂಚಲವಾದವುಗಳು.
ಹತ್ತಕ್ಕೆ ಹತ್ತು ಅಂಕ ಕೊಡ ಬಹುದಾದ ಜೋಡಣೆ ಅಲ್ಲವೇ? ಈಗ, ಪ್ರಶ್ನೆಯೂ ಉತ್ತರವೂ ಏಕಕಾಲಕ್ಕೇ ಆಗಬಲ್ಲ ಒಂದು ಚಮತ್ಕಾರ ಸೂಕ್ತಿ. ‘ಕಂ ಸಂಜಘಾನ ಕೃಷ್ಣಃ ಕಾ ಶೀತಲವಾಹಿನೀ ಗಂಗಾ| ಕೇ ದಾರಪೋಷಣರತಾಃ ಕಂ ಬಲವಂತಂ ನ ಬಾಧತೇ ಶೀತಮ್||’ ಪ್ರಶ್ನೆ- ಕಂಸಂಜಘಾನ? ಕೃಷ್ಣನು ಯಾರನ್ನು
ಕೊಂದನು? ಉತ್ತರ-ಕಂಸಂಜಘಾನ. ಕಂಸನನ್ನು ಕೃಷ್ಣನುಕೊಂದನು.
ಪ್ರಶ್ನೆ-ಶೀತಲವಾಹಿನೀ ಗಂಗೆ ಯಾರು? ಉತ್ತರ-ಕಾಶೀತಲದಲ್ಲಿ ಅಂದರೆ ಕಾಶಿಯಲ್ಲಿ ಹರಿಯುವವಳು. ದಾರಪೋಷಣರತಾಃ ಅಂದರೆ ಹೆಂಡತಿಯನ್ನು
ಸಾಕುವವರಾರು? ಕೇದಾರ = ಭೂಮಿ ಅಥವಾ ಕ್ಷೇತ್ರ (ಹೊಲ). ಅದನ್ನು ಪೋಷಿಸುವವರು ಅಂದರೆ ಕೃಷಿ ಮಾಡುವವರು. ಶೀತವು (ಚಳಿಯು) ಯಾವ ಬಲವುಳ್ಳವನನ್ನು ಬಾಧಿಸುವುದಿಲ್ಲ? ಕಂಬಲವಂತಂ = ಕಂಬಳಿ ಹೊದ್ದವನನ್ನು ಬಾಽಸುವುದಿಲ್ಲ! ಇನ್ನೊಂದು, ಶ, ಷ, ಸ ಅಕ್ಷರಗಳನ್ನು ಸರಿಯಾಗಿ ಉಚ್ಚರಿಸಲು
ಬಾರದ ಒಬ್ಬ ಗಮಾರನ ಬಗೆಗಿನದು. ಕಾಶ್ಮೀರದ ಪಂಡಿತ ಪರಂಪರೆಯಲ್ಲಿ ಹುಟ್ಟಿದ ಒಬ್ಬ ಕವಯಿತ್ರಿ ವಿಕಟನಿತಂಬಾ ಎಂಬಾಕೆ.
ತರ್ಕ- ವ್ಯಾಕರಣ- ಸಾಹಿತ್ಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಅವಳಿಗೆ ಗಂಡನಾಗಿ ಸಿಕ್ಕಿದವನು ನಿರಕ್ಷರ ಕುಕ್ಷಿ. ಅವಳ ಪರಿಸ್ಥಿತಿಯನ್ನು ನೋಡಿ ಅವಳ ಸಖಿಯೊಬ್ಬಳು ವರ್ಣಿಸಿದ ಕ್ರೂರವಿಡಂಬನೆ ಇದು: ‘ಕಾಲೇಮಾಷಂ ಸಸ್ಯೇ ಮಾಸಂ ವದತಿ ಸಕಾಶಂ ಯಶ್ಚಶಕಾಸಂ| ಉಷ್ಟ್ರೇ ಲುಂಪತಿ ಷಂ ವಾ ರಂ ವಾ ತಸ್ಮೈ ದತ್ತಾ ವಿಕಟನಿತಂಬಾ||’ ಅಂದರೆ, ಕಾಲಕ್ಕೆ ಸಂಬಂಧಿಸಿದ ಪದವನ್ನು ಹೇಳುವಾಗ ಮಾಸ ಎನ್ನಲಿಕ್ಕೆ ಮಾಷ ಎನ್ನುತ್ತಾನೆ.
ಸಸ್ಯ ಅಥವಾ ಧಾನ್ಯಕ್ಕೆ ಸಂಬಂಧಪಟ್ಟಂತೆ ಮಾಷ (ಉದ್ದು) ಎನ್ನಲಿಕ್ಕೆ ಮಾಸ ಎನ್ನುತ್ತಾನೆ. ಸಕಾಶ(ಸಮೀಪ) ಎನ್ನಲಿಕ್ಕೆ ಶಕಾಸ ಎನ್ನುತ್ತಾನೆ. ಉಷ್ಟ್ರ ಎಂದು ಹೇಳುವಾಗ ಒಂದೋ ಷ-ಕಾರ ಬಿಟ್ಟು ಉಟ್ರ ಎನ್ನುತ್ತಾನೆ ಇಲ್ಲವೇ ರ-ಕಾರ ಬಿಟ್ಟು ಉಷ್ಟ ಎನ್ನುತ್ತಾನೆ. ಇಂತಹ ಪುರುಷನಿಗೆ ವಿಕಟನಿತಂಬೆಯನ್ನು ಕೊಟ್ಟಿದ್ದಾರೆ. ಇಲ್ಲಿ ನನಗೊಂದು ಕೆಟ್ಟಕುತೂಹಲವೆಂದರೆ ಈಗಿನ ಕನ್ನಡ ಓರಾಟಗಾರರ, ಸುದ್ದಿ ವಾಹಿನಿಗಳ ಚೀರಾಟಗಾರರ ಆ-ಹಾ ಕಾರಗಳನ್ನು ಕೇಳುತ್ತಿದ್ದರೆ ಈ ಕವಯಿತ್ರಿ ಅದೆಂಥ ಲೇವಡಿ ಪದ್ಯಗಳಿಂದ ಕುಟ್ಟುತ್ತಿದ್ದಳೋ! ಮತ್ತೊಂದು ಶ್ಲೋಕ ‘ಗುಲುಗುಗ್ಗುಲುಗುಗ್ಗುಲೂ’ ಎಂದು ಅಂತ್ಯವಾಗುತ್ತದೆ.
ಇದ್ಯಾವ ಗುಗ್ಗು ಹೀಗೆ ತೊದಲು ಮಾತನಾಡುತ್ತಿದ್ದಾನೆ ಎಂದು ಕೊಂಡರೆ, ವಿಷಯ ಬೇರೆಯೇ ಇದೆ! ‘ಜಂಬೂ ಫಲಾನಿ ಪಕ್ವಾನಿ ಪತಂತಿ ವಿಮಲೇಜಲೇ|
ಕಪಿಕಂಪಿತ ಶಾಖಾ ಭ್ಯೋಗುಲುಗುಗ್ಗುಲುಗುಗ್ಗುಲೂ||’ -ಇದು ಶ್ಲೋಕ ದ ಪೂರ್ಣರೂಪ. ಜಂಬುನೇರಳೆ ಹಣ್ಣಿನ ಮರವೇರಿದ ಕಪಿಯು ಮರದಗೆಲ್ಲನ್ನು ಅಲುಗಾಡಿಸಲು, ಮಾಗಿದ್ದ ಹಣ್ಣುಗಳೆಲ್ಲಅಲ್ಲೇ ಕೆಳಗೆ ಶಾಂತವಾಗಿ ಹರಿಯುವ ನೀರಿನಲ್ಲಿ ಬಿದ್ದಾಗ ‘ಗುಲುಗುಗ್ಗುಲು ಗುಗ್ಗುಲೂ…’ ಎಂಬ ಶಬ್ದ.
ಯಃಕಶ್ಚಿತ್ ಕಪಿಯೊಂದರ ಕಾರುಬಾರನ್ನು ಕವಿ ವರ್ಣಿಸಿದ ರೀತಿ ಇದು! ಹಾಗೆ ದಾರಿ ತಪ್ಪಿಸುವ ಬೇರೆ ಕೆಲವು ಪದ್ಯಗಳೂ ಇವೆ. ‘ಪ್ರಾತರ್ದ್ಯೂತಪ್ರಸಂಗೇನ ಮಧ್ಯಾಹ್ನೇ ಸ್ತ್ರೀಪ್ರಸಂಗತಃ| ರಾತ್ರೌ ಚೋರಪ್ರಸಂಗೇನ ಕಾಲೋ ಗಚ್ಛತಿ ಧಿಮತಾಂ||’ಅಂತ ಒಂದು ಸೂಕ್ತಿ. ವಿದ್ಯೆ ಕಲಿತು ಽಮಂತರೆನಿಸಿದವರ ಸಮಯವು ಪ್ರಾತಃ ಕಾಲದಲ್ಲಿ ಜೂಜಿಗೆ, ಮಧ್ಯಾಹ್ನದಲ್ಲಿ ಸ್ತ್ರೀ ಪ್ರಸಂಗಕ್ಕೆ, ರಾತ್ರಿಯಲ್ಲಿ ಕಳ್ಳತನಕ್ಕೆ ವ್ಯಯವಾಗುತ್ತದಂತೆ.
ಇದೇನಪ್ಪಾ ಹೀಗೆ ಎಂದು ಆಶ್ಚರ್ಯ ಪಟ್ಟರೆ ಅಲ್ಲಿ ಹೇಳಿರುವುದು ಅನುಕ್ರಮವಾಗಿ ದ್ಯೂತ ಪ್ರಸಂಗ = ಮಹಾಭಾರತ; ಸ್ತ್ರೀ ಪ್ರಸಂಗ = ರಾಮಾಯಣ (ಸೀತಾಯನ ಎನ್ನೋಣ); ಚೋರ ಪ್ರಸಂಗವೆಂದರೆ ಬೆಣ್ಣೆ ಕಳ್ಳ ಬಟ್ಟೆ ಕಳ್ಳ ಕೃಷ್ಣನ ಬಗೆಬಗೆಯ ಕಳ್ಳಾಟಗಳ ಭಾಗವತ. ಈ ಎಲ್ಲ ಪುರಾಣ ಶ್ರವಣ/ಪಠನಗಳಿಂದ ವಿದ್ವಾಂಸರು ಕಾಲ ಕಳೆಯುತ್ತಾರೆಂಬ ಒಳ್ಳೆಯ ಅರ್ಥ. ಇನ್ನೊಂದು, ನೀವು ಕೇಳಿಯೇ ಇರುವ ‘ದಂಡಂ ದಶಗುಣಂ ಭವೇತ್’ ನುಡಿಗಟ್ಟಿನ ಪೂರ್ಣರೂಪ.
ಮೊದಲನೆಯದಾಗಿ ಅದು ‘ದಂಡೋ ದಶಗುಣೋ ಭವೇತ್’ ಎಂದಾಗಬೇಕು. ಪೂರ್ತಿ ಶ್ಲೋಕ ಹೀಗೆ: ‘ವಿಶ್ವಾಮಿತ್ರಾಹಿಪಶ್ವಾದೌಕರ್ದ ಮೇಷುಜಲೇಷುಚ| ಅಂಧೇತ ಮಸಿವಾರ್ಧಕ್ಯೇ ದಂಡೋ ದಶಗುಣೋ ಭವೇತ್||’ ಇದರರ್ಥ ದಂಡ (ದೊಣ್ಣೆ) ಹತ್ತು ಗುಣವುಳ್ಳದ್ದು. ಯಾವುವೆಂದರೆ, ೧. ವಿ = ಕಾಗೆ ಹದ್ದು ಮುಂತಾದ ಪಕ್ಷಿಗಳನ್ನು ಓಡಿಸಲು; ೨. ಶ್ವಾ = ನಾಯಿಯನ್ನು ಓಡಿಸಲು; ೩. ಅಮಿತ್ರ = ಶತ್ರುಗಳನ್ನು ಸದೆಬಡಿಯಲು; ೪. ಅಹಿ = ಹಾವನ್ನು ಓಡಿಸಲು; ೫. ಪಶು = ಹಸು, ಎತ್ತು ಮುಂತಾದುವನ್ನು ಅಂಕೆಯಲ್ಲಿಡಲು; ೬. ಕರ್ದಮ = ಕೆಸರಿನಲ್ಲಿ ನಡೆಯುವಾಗ ಬಲಕ್ಕಾಗಿ; ೭. ಜಲ = ನೀರಿನಲ್ಲಿ ಹರಿಗೋಲಾಗಿ; ೮. ಅಂಧೇ = ಕುರುಡನಿಗೆ ದಾರಿ ದೀವಿಗೆಯಾಗಿ; ೯. ತಮಸಿ = ಕತ್ತಲಿನಲ್ಲಿ ತಡಕಾಡಲು; ೧೦. ವಾರ್ಧಕ್ಯೇ = ಮುಪ್ಪಿನಲ್ಲಿ ಊರುಗೋಲಾಗಿ; ಮತ್ತೆ ಸಂಸ್ಕೃತ
ಶ್ಲೋಕದಲ್ಲಿಲ್ಲದೆ ಕನ್ನಡ ಶಿಶುಗೀತೆಯಲ್ಲಿ ಹನ್ನೊಂದನೆಯ ಉಪಯೋಗ ಅಜ್ಜನಕೋಲು ಮೊಮ್ಮಗನ ಆಟಕ್ಕೆ ಕುದುರೆ!
ಯಾವ್ಯಾವುದೋ ಹಳೇ ಕಥಾನಕಗಳಿಗೆ, ಕಪೋಲಕಲ್ಪನೆಗಳಿಗೆ ಮಾತ್ರ ಸಂಸ್ಕೃತ ಸೂಕ್ತಿಗಳ ಬಳಕೆಯಾಗುವುದು ಎಂದು ತಿಳಿಯಬೇಡಿ. ಪ್ರಚಲಿತ ವಿದ್ಯಮಾನ ಗಳಿಗೆ, ಕರೆಂಟ್ ಅಫೇರ್ಸ್ ಎನ್ನಲ್ಪಡುವ ಆಗುಹೋಗುಗಳಿಗೆಲ್ಲ ಸರಿಹೊಂದುವ ಒಂದಿಲ್ಲೊಂದು ಸಂಸ್ಕೃತ ಸೂಕ್ತಿ ಸುಭಾಷಿತಗಳು ಇದ್ದೇ ಇರುತ್ತವೆ. ಅಷ್ಟರ ಮಟ್ಟಿಗೆ ಅವು ಟೈಮ್-ಟೆಸ್ಟೆಡ್ ಸಾರ್ವಕಾಲಿಕ ಸರಕು. ಒಂದು ತಾಜಾ ಉದಾಹರಣೆ ಬೇಕೇ?
ಈ ಸೂಕ್ತಿಯನ್ನು ಗಮನಿಸಿ: ‘ಅಪಾತ್ರೇ ಪಾತ್ರತಾ ಬುದ್ಧಿಃ ಪಾತ್ರೇ ಬುದ್ಧಿರ ಪಾತ್ರತಾ| ಋಣಾನುಬಂಧರೂಪೇಣ ದಾತುರುತ್ಪದ್ಯತೇ ಮತಿಃ’ – ಇದರ ಅರ್ಥ ಹೀಗೆ: ಋಣಾನುಬಂಧರೂಪದಿಂದ ದಾನ ಮಾಡುವವನಿಗೆ ಅಯೋಗ್ಯನು ಯೋಗ್ಯನಾಗಿಯೂ ಯೋಗ್ಯನು ಅಯೋಗ್ಯನಾಗಿಯೂ ಕಾಣಿಸುತ್ತಾನೆ. ಅಂತಹ ಬುದ್ಧಿಯು ಹುಟ್ಟುತ್ತದೆ. ಕಳೆದ ವಾರ ಕ್ಲಬ್‌ಹೌಸ್‌ನಲ್ಲಿ ನಾನೊಂದು ಚರ್ಚೆ/ಸಂವಾದ ಕೇಳಿಸಿಕೊಂಡೆ.
‘ಜ್ಞಾನಪೀಠ ಪ್ರಶಸ್ತಿಯು ಆಟಿಕೆಯಂತಾಗಿದೆಯೇ?’ ಎಂಬ ವಿಷಯ. ವಿಶ್ವೇಶ್ವರ ಭಟ್ಟರು, ಪ್ರೇಮಶೇಖರ್, ರೋಹಿತ್ ಚಕ್ರತೀರ್ಥ ಮುಂತಾದವರು ಭಾಗವಹಿಸಿ ದ್ದರು. ವೀರಪ್ಪ ಮೊಯಿಲಿಯ ಹೆಸರನ್ನು eನಪೀಠ ಪ್ರಶಸ್ತಿಗೆ ಶಿಫಾರಸು ಮಾಡಿದವರಿಗೆ (ಅಷ್ಟಕ್ಕೂ ಅವರಾರೆಂದರೆ ಕನ್ನಡದ ಅಷ್ಟಮ ‘ಜ್ಞಾನಪೀಠಿ’ ಅಂತೆ!) ಋಣಾನುಬಂಧ ರೂಪದಿಂದಲೇ ಆ ಬುದ್ಧಿ ಹುಟ್ಟಿದ್ದೆಂದು ಅಂದಿನ ಸಂವಾದದಲ್ಲಿ ಮಂಥನವಾಯ್ತು. ಸಂಸ್ಕೃತದ ಸೂಕ್ತಿ ಈ ಸಂದರ್ಭಕ್ಕೆ ಎಷ್ಟು ಪರ್ಫೆಕ್ಟ್ ಆಗಿ ಫಿಟ್ ಆಗುತ್ತದೆ ನೋಡಿ! ಇರಲಿ, ಅಂಥಋಣ- ಪಾರ್ಟಿಗಳ ಉಲ್ಲೇಖದಿಂದ ನಮ್ಮೀ ರಸಯಾತ್ರೆಯನ್ನು ಮುಗಿಸುವುದು ಬೇಡ.
ಅದಕ್ಕಿಂತ, ಸಜ್ಜನರ ಸ್ವಭಾವದ ಬಗೆಗಿರುವ ಸೂಕ್ತಿಯಿಂದ ಮುಕ್ತಾಯಗೊಳಿಸೋಣ. ‘ಘೃಷ್ಟಂ ಘೃಷ್ಟಂ ಪುನರಪಿ ಪುನಶ್ಚಂದನಂ ಚಾರುಗಂಧಮ್|ಛಿನ್ನಂ ಛಿನ್ನಂ ಪುನರಪಿ ಪುನಃ ಸ್ವಾದು ಚೈವೇಕ್ಷುದಂಡಮ್| ದಗ್ಧಂ ದಗ್ಧಂ ಪುನರಪಿ ಪುನಃ ಕಾಂಚನಂಕಾಂತ ವರ್ಣಮ್| ನ ಪ್ರಾಣಾಂತೇ ಪ್ರಕೃತಿ ವಿಕೃತಿ ರ್ಜಾಯ ತೇಚೋತ್ತಮಾನಾಮ್||’-ಅಂದರೆ, ಉತ್ತಮರ ಸ್ವಭಾವವು ಏನಾದರೂ ಬದಲಾಗುವುದಿಲ್ಲ. ಅವರನ್ನು ಪೀಡಿಸಿದರೂ ಒಳ್ಳೆಯದನ್ನೇ ಮಾಡುತ್ತಾರೆ. ಗಂಧದ ಕೊರಡನ್ನು ಮತ್ತೆ ಮತ್ತೆ ತೇಯ್ದರೂ ಪರಿಮಳವನ್ನೇ ಕೊಡುತ್ತದೆ. ಕಬ್ಬಿನ ಜಲ್ಲೆಯನ್ನು ಎಷ್ಟು ಕತ್ತರಿಸಿದರೂ ಹಿಂಡಿದರೂ ತನ್ನ ಮಾಧುರ್ಯವನ್ನೇ ಕೊಡುತ್ತದೆ. ಚಿನ್ನವನ್ನು ಎಷ್ಟು ಸಲ ಬೆಂಕಿಯಲ್ಲಿ ಹಾಕಿದರೂ ಹೊಳಪು ಹೆಚ್ಚುತ್ತದೆ.
ಸಜ್ಜನರ ಸ್ವಭಾವವೇ ಹೀಗೆ. ಅವರು ಪ್ರಶಸ್ತಿಗಳಿಗೆ ಹಪಹಪಿಸುವವರಲ್ಲ. ತಮ್ಮ ಒಳ್ಳೆಯ ಕೆಲಸಗಳಿಂದ, ಒಳ್ಳೆಯ ನಡೆನುಡಿಯಿಂದ ಜನಮಾನಸದಲ್ಲಿ ಗೌರವದ ಗೌರೀಶಂಕರಕ್ಕೇರಿದವರು. ಪ್ರಾಣ ಹೋದರೂ ಚಿಂತೆಯಿಲ್ಲ, ಒಳ್ಳೆಯತನವನ್ನು ಗುಲಗಂಜಿಯಷ್ಟೂ ಕಳೆದು ಕೊಳ್ಳದವರು. ಅಂಥವರು ಈ ಪ್ರಪಂಚದಲ್ಲಿ
ಇದ್ದಾರಾದ್ದರಿಂದಲೇ ಮಳೆ-ಬೆಳೆ ಎಲ್ಲ ಕಾಲಕಾಲಕ್ಕೆ ಸರಿಯಾಗಿ ಆಗುತ್ತಿರುವುದು. ಪ್ರಪಂಚದಲ್ಲಿ ತಾಂಡವವಾಡುತ್ತಿರುವ ಅಧರ್ಮದ ವಿರುದ್ಧ ಶಂಖ ಊದಬೇಕಾದವರು ಅವರೇ- ಎಂದು ಶಂಖದ ಉಲ್ಲೇಖದಿಂದಲೇ ಮಂಗಳ ಹಾಡೋಣ.