ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಬಿಎಸ್ವೈ ಅಧಿಕಾರಾವಧಿಯಲ್ಲಿ ನೇಮಕವಾಗಿದ್ದ ನಾಮ ನಿರ್ದೇಶಿತರಿಗೆ ಗೇಟ್ಪಾಸ್ಗೆ ಸಿದ್ಧತೆ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಯಡಿಯೂರಪ್ಪ ಅವರ ಅವಧಿಯಲ್ಲಿ ನೇಮಕವಾಗಿದ್ದ ಹಲವು
ನೇಮಕಗಳನ್ನು ರದ್ದುಗೊಳಿಸುವ ಸಿದ್ಧತೆ ನಡೆದಿದೆ.
ಈಗಾಗಲೇ ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಬದಲಾವಣೆಗೆ ವೇದಿಕೆ ಸಜ್ಜಾಗಿರುವ ಬೆನ್ನಲೆ ಇದೀಗ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನೇಮಿಸಲಾಗಿದ್ದ ನಾಮನಿರ್ದೇಶಿತ ಸದಸ್ಯರನ್ನು ಬದಲಾವಣೆ ಮಾಡುವ ಲೆಕ್ಕಾಚಾರ ಶುರುವಾಗಿದೆ. ಬೊಮ್ಮಾಯಿ ಅವರ ಮೂಲಕ ಬಿಜೆಪಿ ವರಿಷ್ಠರು ಹಾಗೂ ಸಂಘ ಪರಿವಾರದವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆಯಿದ್ದರೂ, ಈ ಪ್ರಯತ್ನಕ್ಕೆ ಮುಂದಾಗಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಹಾಗೂ ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಈ ಹಂತದಲ್ಲಿ ಈ ರೀತಿಯ ನಿರ್ಧಾರದಿಂದ ಚುನಾವಣೆಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ವರ್ಷಾಂತ್ಯದವರೆಗೂ ಅವಕಾಶ ನೀಡಲಿ: ಬದಲಾವಣೆ ಬಗ್ಗೆ ಗುಸುಗುಸು ಆರಂಭವಾಗುತ್ತಿದ್ದಂತೆ ಹಲವು ನಾಮನಿರ್ದೇಶಿತ ಸದಸ್ಯರು, ‘ನಮ್ಮನ್ನು ನೇಮಿಸಿದ ದಿನದಿಂದ ಕರೋನಾ ಕಾಟ ಶುರುವಾಗಿದೆ. ಹೀಗಾಗಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕಳೆದ ಕೆಲ ತಿಂಗಳಿಂದ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಇದೀಗ ಪುನಃ ಅಧಿಕಾರವನ್ನು ಕಿತ್ತುಕೊಂಡರೆ ಸಮಸ್ಯೆಯಾಗಲಿದೆ. ಆದ್ದರಿಂದ ಈ ವರ್ಷದ ಅಂತ್ಯದವರೆಗೂ ಬದಲಾವಣೆ
ಮಾಡುವುದು ಬೇಡ. ಆ ವೇಳೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಆರಂಭವಾಗಲಿವೆ. ಆ ಸಮಯದಲ್ಲಿ ಬೇಕಿದ್ದರೆ ಬದಲಾವಣೆ ಮಾಡಲಿ’ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ‘ಜನವರಿಯಿಂದ ಬೇರೆಯವರಿಗೆ ಅವಕಾಶ ನೀಡಿದರೂ, ಅವರಿಗೆ ಒಂದೂವರೆ ವರ್ಷ ಕೆಲಸ ಮಾಡಲು ಅವಕಾಶವಿರುತ್ತದೆ. ಆದ್ದರಿಂದ ಇನ್ನೆರಡು ತಿಂಗಳಲ್ಲಿ ಮಾಡುವುದು ಬೇಡ. ಅದರಲ್ಲಿಯೂ ಉಪಚುನಾವಣೆ ನಡೆಯುತ್ತಿರುವ ಈ ಸಮಯದಲ್ಲಿ ಈ ರೀತಿಯ ಕಾರ್ಯಕ್ಕೆ ಮುಂದಾದರೆ ಪಕ್ಷಕ್ಕೆ ದೊಡ್ಡಮಟ್ಟದ ಸಮಸ್ಯೆಯಾಗಲಿದೆ’ ಎನ್ನುವ ಮಾತುಗಳನ್ನು ಹಲವರು ಆಡಿದ್ದಾರೆ.
ಸಿಎಂ ಕಚೇರಿಯಲ್ಲಿ ಫೈಲ್ : ಯಡಿಯೂರಪ್ಪ ಅವರ ಸರಕಾರದಲ್ಲಿ ನೇಮಕ ಮಾಡಲಾಗಿದ್ದ ನಾಮನಿರ್ದೇಶಿತ ಸದಸ್ಯರನ್ನು ವಜಾಗೊಳಿಸಿ, ಆ ಸ್ಥಾನಕ್ಕೆ ನೂತನ ಸದಸ್ಯರನ್ನು ನೇಮಿಸುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಅವರ ಕಚೇರಿಗೆ ಫೈಲ್ ತಲುಪಿದೆ. ಆದರೆ ಉಪಚುನಾವಣೆ ಇರುವ ಕಾರಣಕ್ಕೆ ಈ ಕಡತವನ್ನು ಮುಟ್ಟಿಲ್ಲ. ಚುನಾವಣೆ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿ ದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅಸಮಾಧಾನ ಭುಗಿಲೇಳುವ ಸಾಧ್ಯತೆ ಈ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಬದಲಾಯಿಸಲು ಸರಕಾರ ಹೊರಟರೆ, ಪಕ್ಷದಲ್ಲಿ ಕೆಟ್ಟ ಸಂದೇಶ ರವಾನೆಯಾಗಲಿದೆ. ಅದರಲ್ಲಿಯೂ ಯಡಿಯೂರಪ್ಪ ಆಪ್ತರನ್ನು ತಗೆದು ಹಾಕಲಾಗಿದೆ ಎನ್ನುವ ಸಂದೇಶ, ಪಕ್ಷದಲ್ಲಿ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆಯಿದೆ. ಆದ್ದರಿಂದ ಈ ವಿಷಯ ಜೇನುಗೂಡಿಗೆ ಕೈಹಾಕಿದಂತೆ ಎನ್ನುವುದು ಬೊಮ್ಮಾಯಿ ಅವರಿಗೆ ಗೊತ್ತಿದೆ. ಆದರೆ ಬಿಜೆಪಿ ವರಿಷ್ಠರು ಹಾಗೂ ಆರ್ಎಸ್ಎಸ್ ಪ್ರಮುಖರು ಈ ವಿಷಯದಲ್ಲಿ ತಮ್ಮ ನಿಲುವನ್ನು ಬದಲಾಯಿಸದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.