ನವದೆಹಲಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಹುದ್ದೆಯಿಂದ ವಜಾ ಮಾಡಿ ಬಂಧಿಸುವಂತೆ ಆಗ್ರಹಿಸಿ ಉತ್ತರಪ್ರದೇಶದ ಲಖೀಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿರುವ ಆರು ಗಂಟೆಗಳ ರೈಲ್ ರೋಖೋ ಪರಿಣಾಮ ಹಲವೆಡೆ ರೈಲು ಸಂಚಾರ ವ್ಯತ್ಯಯ ಉಂಟಾಗಿದೆ.
ರೈತರ ರೈಲ್ ರೋಖೊ ಪ್ರತಿಭಟನೆಯಿಂದ ಫಿರೋಜ್ ಪುರ್, ಫಾಝಿಲ್ಕಾ, ಫಿರೋಜ್ ಪುರ್ ಲೂಧಿಯಾನ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿರುವುದಾಗಿ ವರದಿ ವಿವರಿಸಿದೆ.
ಉತ್ತರಪ್ರದೇಶದ ಬಹ್ರೈಚ್, ಮೈಲಾನಿ, ಬಹ್ರೈಚ್ ನನ್ಪಾರಾ, ಗೋರಖ್ ಪುರ್ ಮೈಲಾನಿ ಮತ್ತು ಲಕ್ನೋ-ಮೈಲಾನಿ ಮಾರ್ಗಗಳಲ್ಲಿಯೂ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿ ಹೇಳಿದೆ.
ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆವರೆಗೆ ರೈಲ್ ರೋಖೋ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿತ್ತು.