Saturday, 23rd November 2024

ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ: ನಾಲ್ವರ ಅಮಾನತು

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಬರುವ ಮುಂಚೆಯೇ ವ್ಯಕ್ತಿಯೊಬ್ಬ ಪರವಾನಗಿ ಪಡೆದ ಗನ್​ ಹಿಡಿದು ಒಳನುಸುಳಿರುವುದು ಬೆಳಕಿಗೆ ಬಂದಿದೆ.​

ಗನ್​ ಹಿಡಿದ ವ್ಯಕ್ತಿಯನ್ನು ಆಡಿಟೋರಿಯಂ ಒಳಗೆ ಕಂಡಕೂಡಲೇ ಆತನನ್ನು ತಕ್ಷಣ ಭದ್ರತಾ ಸಿಬ್ಬಂದಿ ದೂರ ಕರೆದೊಯ್ದಿದ್ದಾರೆ. ಇದನ್ನು ಬಹು ದೊಡ್ಡ ಭದ್ರತಾ ಲೋಪ ಎಂದು ಪರಿಗಣಿಸಿರುವ ಸರ್ಕಾರ ನಾಲ್ವರು ಪೋಲಿಸ್​ ಸಿಬ್ಬಂದಿಯನ್ನು ಅಮಾನತು ಮಾಡಿದೆ.

ಸಿಎಂ ಯೋಗಿ ಅವರ ಬಸ್ತಿ ಜಿಲ್ಲೆಯಲ್ಲಿರುವ ಅಟಲ್​ ಬಿಹಾರಿ ವಾಜಪೇಯಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭದ್ರತೆಯಾಗಿ ಸ್ಥಳೀಯ ಪೊಲೀಸ್​ ಠಾಣೆ ಹಾಗೂ ಜಿಲ್ಲೆಯ ಇತರೆ ಠಾಣೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಜಾತ್ಶಂಕರ್​ ಶುಕ್ಲ ಅವರ ಕಿರಿಯ ಸಹೋದರ ಅಮರ್​ದೀಪ್​ ಅವರ ಬಾಮೈದ ಜೀತೇಂದರ್​ ಪಾಂಡೆ ಲೈಸೆನ್ಸ್​ ಪಡೆದಿದ್ದ ರಿವಾಲ್ವರ್​ ಹಿಡಿದು ಆಡಿಟೋ ರಿಯಂಗೆ ಮುಂಚೆಯೇ ಆಗಮಿಸಿದ್ದ. ರಿವಾಲ್ವರ್​ ಗಮನಿಸಿದ ಪೊಲೀಸ್​ ಸಿಬ್ಬಂದಿ ಜೀತೇಂದರ್​ ಪಾಂಡೆ ಸಮೇತ ಗನ್​ ಅನ್ನು ವಶಕ್ಕೆ ಪಡೆದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್​ ಹಿರಿಯ ಅಧಿಕಾರಿ ಕರ್ತವ್ಯ ನಿರ್ಲಕ್ಷ್ಯ ಆರೋಪದಲ್ಲಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.