Thursday, 19th September 2024

‌ಆರು ಮಾನವ ಹಕ್ಕು ಗುಂಪುಗಳನ್ನು ನಿಷೇಧಿಸಿದ ಇಸ್ರೇಲ್

ನವದೆಹಲಿ: ಆರು ಪ್ರಮುಖ ಫೆಲೆಸ್ತೀನ್ ಮಾನವ ಹಕ್ಕು ಗುಂಪುಗಳನ್ನು ಇಸ್ರೇಲ್ ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿ ನಿಷೇಧಿಸಿದೆ.

ಈ ಘೋಷಣೆಯಿಂದಾಗಿ ಇನ್ನು ಇಸ್ರೇಲ್ ಗೆ ಈ ಸಂಘಟನೆಗಳ ಕಚೇರಿಗಳ ಮೇಲೆ ದಾಳಿ ನಡೆಸಲು, ಅವುಗಳ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಲು, ಸಿಬ್ಬಂದಿಯನ್ನು ಬಂಧಿಸಲು ಸಾಧ್ಯವಾಗಲಿದೆ. ಅಲ್ಲದೆ ಈ ಗುಂಪುಗಳನ್ನು ಬೆಂಬಲಿಸಿ ಬಹಿರಂಗವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಬಹುದಾಗಿದೆ.

ನಿಷೇಧಕ್ಕೊಳಗಾಗಿರುವ ಈ ಸಂಘಟನೆಗಳಲ್ಲಿ ಹೆಚ್ಚಿನವು ಇಸ್ರೇಲ್ ಹಾಗೂ ಫೆಲೆಸ್ತೀನ್ ಪ್ರಾಧಿ ಕಾರವು ನಡೆಸಿದ ಮಾನವಹಕ್ಕು ಉಲ್ಲಂಘನೆಗಳ ಘಟನೆಗಳನ್ನು ದಾಖಲಿಸಿಕೊಂಡಿವೆ. ಇಸ್ರೇಲ್ ಹಾಗೂ ಫೆಲೆಸ್ತೀನ್ ಪ್ರಾಧಿಕಾರ ಇವೆರಡೂ ಫೆಲೆಸ್ತೀನ್ ಹೋರಾಟ ಗಾರರನ್ನು ಬಂಧಿಸುತ್ತಿರುತ್ತವೆ.

ಇಸ್ರೇಲ್ ಸರಕಾರದ ಕ್ರಮವನ್ನು ಇಸ್ರೇಲಿ ಹಾಗೂ ಅಂತಾರಾಷ್ಟ್ರೀಯ ಮಾನವಹಕ್ಕು ಸಂಘಟನೆ ಗಳು ಖಂಡಿಸಿದ್ದು, ನಿಷೇಧಕೊಳಗಾದ ಸಂಘಟನೆಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಇಸ್ರೇಲ್ ಈಗಾಗಲೇ ಆಕ್ರಮಿತ ಪಶ್ಚಿಮದಂಡೆಯಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಕೂಡಾ ನಿಷೇಧಿಸಿರುವುದನ್ನು ಕೂಡಾ ಹಲವು ಸಂಘಟನೆಗಳು ಗಮನಕ್ಕೆ ತಂದಿವೆ.