Thursday, 19th September 2024

ಕ್ಷಿಪ್ರಕ್ರಾಂತಿ: ಸೂಡಾನ್ ಹಂಗಾಮಿ ಪ್ರಧಾನಿ ಬಂಧನ

ಸುಡಾನ್​: ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸ ಲಾಗಿದೆ.

ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ ಇಂಟರ್ನೆಟ್​ ಹಾಗೂ ದೂರವಾಣಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸುಡಾನ್​ ಪ್ರಧಾನಿ ಅಬ್ದಲ್ಲಾ ಹಮ್​ಡೋಕ್​ ಸುಳಿವಿಲ್ಲ. ಈ ನಡುವೆ ದೇಶದ ನ್ಯೂಸ್​ ಚಾನೆಲ್​ ದೇಶಭಕ್ತಿಯ ಸಾಂಪ್ರದಾಯಿಕ ಸಂಗೀತ ಹಾಗೂ ನೈಲ್​​ ನದಿಯ ಸೀನ್​ಗಳನ್ನು ಪ್ರಸಾರ ಮಾಡಿದೆ.

ದೇಶದ ಪ್ರಮುಖ ಪ್ರಜಾಪ್ರಭುತ್ವ ಗುಂಪು ಹಾಗೂ ಅತಿದೊಡ್ಡ ರಾಜಕೀಯ ಪಕ್ಷವು ಸ್ಪಷ್ಟವಾದ ಸೇನಾ ದಂಗೆಯನ್ನು ಎದುರಿಸಲು ಜನರಿಗೆ ಬೀದಿ ಗಿಳಿಯುವಂತೆ ಕರೆ ನೀಡಿದೆ. ಸಾವಿರಾರು ಜನರು ಖಾರ್ಟೂಮ್​ ಹಾಗೂ ಓಮ್ದುರ್ಮಾನ್​​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಜನರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಬಳಕೆ ಮಾಡಿದ್ದಾರೆ ಹಾಗೂ ಇದರಿಂದ ಕೋಪಗೊಂಡ ಪ್ರತಿಭಟನಾಕಾರು ಬೀದಿಗಳಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.