ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ranjith.hoskere@gmail.com
ಭಾರತೀಯ ಜನತಾ ಪಕ್ಷವೆಂದರೆ ಅಧಿಕಾರ, ಸರಕಾರ ರಚನೆಯ ವಿಷಯ ಬರುವುದಕ್ಕಿಂತ ಮೊದಲು ನೆನಪಿಗೆ ಬರುವುದು, ಪಕ್ಷದ ನಿಷ್ಠಾವಂತ ಕಾರ್ಯ ಕರ್ತರು, ಸಂಘಟನೆ. ಬಿಜೆಪಿಯ ಜೀವಾಳವೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರು.
ಇದು ಕೇವಲ ದೇಶದಲ್ಲಿ ಮಾತ್ರವಲ್ಲದೇ, ಕರ್ನಾಟಕ ಬಿಜೆಪಿಯಲ್ಲಿಯೂ ಇತ್ತು. ಆದರೆ ಆಡಳಿತಕ್ಕೆ ಬರುವ ಮೊದಲು ಪಕ್ಷದಲ್ಲಿದ್ದ ಸಮನ್ವಯತೆ ಅಧಿಕಾರಕ್ಕೆ ಬಂದ ಬಳಿಕ ಕುಗ್ಗಿತ್ತಿದೆಯೇ ಎನ್ನುವ ಅನುಮಾನಗಳು ಇತ್ತೀಚಿನ ಬೆಳವಣಿಗೆ ನೋಡಿದರೆ ಕಾಡುವುದು ಸಹಜ. ಹೌದು, ಇಡೀ ದೇಶದಲ್ಲಿ ಬಿಜೆಪಿ ಇದೀಗ ಶಕ್ತಿಯುತ ಪಕ್ಷ
ವಾಗಿ ಹೊರಹೊಮ್ಮುತ್ತಿದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ಬಿಜೆಪಿ ಚುಕ್ಕಾಣಿ ಹಿಡಿದ ಬಳಿಕ ಈ ಬೆಳವಣಿಗೆಗೆ ಇನ್ನಷ್ಟು ವೇಗ ಸಿಕ್ಕಿದೆ. ಕೇವಲ ರಾಷ್ಟ್ರ ರಾಜಕಾರಣದಲ್ಲಿ ಮಾತ್ರ ವಲ್ಲದೇ ಬಹುತೇಕ ರಾಜ್ಯಗಳಲ್ಲಿ ತಮ್ಮ ಸಂಘಟನೆಯನ್ನು ವಿಸ್ತರಿಸಿಕೊಳ್ಳುತ್ತಾ ಬಿಜೆಪಿ ಸಾಗಿದೆ. ಆದರೆ ಕರ್ನಾಟಕದ ವಿಷಯಕ್ಕೆ ಬಂದಾಗ ಮಾತ್ರ, ಇದು ಪೂರ್ಣವಾಗಿಲ್ಲ ಎನ್ನುವ ಮಾತಿದೆ.
ಯಾವುದೇ ರಾಜಕೀಯ ಪಕ್ಷಕ್ಕೆ ಆಡಳಿತ ಚುಕ್ಕಾಣಿ ಹಿಡಿಯುವುದು, ಅಧಿಕಾರ ನಡೆಸುವುದು ಒಂದು ಭಾಗ ವಾದರೆ, ಪಕ್ಷ ಸಂಘಟನೆಯನ್ನು ಉಳಿಸುವುದು. ಸಂಘಟನೆಯನ್ನು ಬೆಳೆಸುವುದು ಮತ್ತೊಂದು ಭಾಗ. ಆದರೆ ಕರ್ನಾಟಕದ ಬಿಜೆಪಿ ಮಟ್ಟಿಗೆ ಮಾತ್ರ ಆಡಳಿತ ಚುಕ್ಕಾಣಿಯನ್ನು ಹಿಡಿಯುವ ಧಾವಂತದಲ್ಲಿ ಸಂಘಟನೆಯನ್ನು ಮರೆಯುತ್ತಿದ್ದಾರೆಯೇ? ಯಾವುದೇ ರಾಜಕೀಯ ವ್ಯವಸ್ಥೆಯಲ್ಲಿ, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಂಘಟನೆಯ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಹಾಗೇ ನೋಡಿದರೆ ಪಕ್ಷ ಹಾಗೂ ಸರಕಾರದ ನಡುವೆ ಸಮನ್ವಯತೆಯ ಕೊರತೆಯಾಗುತ್ತಿರುವುದು ಕರ್ನಾಟಕ ಬಿಜೆಪಿಯಲ್ಲಿ ಮಾತ್ರ.
ಕರ್ನಾಟಕ ಬಿಜೆಪಿ ಹೊರತು, ರಾಷ್ಟ್ರ ಬಿಜೆಪಿ ಹಾಗೂ ಇನ್ನಿತರ ರಾಜ್ಯಗಳಲ್ಲಿಯೂ ಈ ಸಮಸ್ಯೆಯಿಲ್ಲ. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ, ಪಕ್ಷದ ನಿರ್ಣಯಗಳಲ್ಲಿ ಪ್ರಭಾವ ಬೀರು ತ್ತಿದ್ದರು. ಆದರೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಪಕ್ಷ, ಸರಕಾರದ ನಡುವಿನ ಸೇತುವೆಯಲ್ಲಿ ಒಂದು ಬಿರುಕು ಬಂದಿರುವುದನ್ನು ಒಪ್ಪಲೇಬೇಕು.
ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ನಳಿನ್ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ರಾದರೂ, ಪಕ್ಷದ, ಸಂಘಟನೆ ಹಾಗೂ ಆಡಳಿತಾತ್ಮಕ ವಿಷಯದಲ್ಲಿ ಯಡಿಯೂರಪ್ಪ ಅವರಿಂದ ಒಂದು ಸಲಹೆ, ಸೂಚನೆ ಪಡೆಯಲಾಗುತ್ತಿತ್ತು. ಆದರೀಗ ಬೊಮ್ಮಾಯಿ ಅವರು ಸರಕಾರದ ವಿಷಯದಲ್ಲಿ ತಗೆದುಕೊಳ್ಳುತ್ತಿರುವ ನಿರ್ಣಯದಿಂದ ಸರಕಾರಕ್ಕೆ ಉತ್ತಮ ಹೆಸರು ಬರುತ್ತಿದ್ದರೂ, ಸಂಘಟನಾತ್ಮಕ ಅಥವಾ ಪಕ್ಷದ ವಿಷಯ ಬಂದ ಕೂಡಲೇ, ಅವರ ಬಳಿ ಮೂಲ ಬಿಜೆಪಿಗರು ಹೋಗಲು ಹಿಂದೇಟು ಹಾಕುತ್ತಾರೆ.
ಒಂದು ವೇಳೆ ಹೋದರೂ, ಬೊಮ್ಮಾಯಿ ಅವರೇ ನಿರ್ಣಯ ಕೈಗೊಳ್ಳುವ ಮೊದಲು ದೆಹಲಿ ನಾಯಕರನ್ನು ನೋಡುತ್ತಿದ್ದಾರೆ. ಇದರಿಂದ ಪಕ್ಷ ಹಾಗೂ ಸರಕಾರದ ನಡುವೆ ಇರಬೇಕಾದ ಸಮನ್ವಯತೆಗೆ ಧಕ್ಕೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನು ರಾಷ್ಟ್ರ ಬಿಜೆಪಿ ಸಂಘಟನೆಯನ್ನು ಸೂಕ್ಷ್ಮವಾಗಿ ಗಮ
ನಿಸಿದರೆ, ಕೇಂದ್ರ ಸರಕಾರ ಕೈಗೊಳ್ಳುವ ನಿರ್ಣಯಗಳನ್ನು ಜನರಿಗೆ ತಲುಪಿಸುವ ಅಥವಾ ಪ್ರತಿಪಕ್ಷ ಹಾಗೂ ಸಾರ್ವಜನಿಕರ ಮುಂದೆ ಸರಕಾರವನ್ನು ಡಿಫೆಂಡ್ ಮಾಡಿಕೊಳ್ಳಲು ಪಕ್ಷದಲ್ಲಿ ದೊಡ್ಡ ಪಟ್ಟಿಯೇ ಇದೆ. ಆದರೆ ಕರ್ನಾಟಕದಲ್ಲಿ, ಈ ಕೊರತೆ ಕಾಣುತ್ತಿದೆ.
ಸರಕಾರ ಯೋಜನೆಗಳು ಸರಕಾರ ನಡೆಸುವವರು ಹೇಳಲಿ, ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವ ಮನಸ್ಥಿತಿ ಪಕ್ಷದ ಪದಾಧಿಕಾರಿಗಳ ಮನದಲ್ಲಿದೆ.
ಇನ್ನು ಸಚಿವರುಗಳ ನಡೆವಳಿಕೆ ನೋಡಿದರೆ, ‘ನಮಗೂ ಸಂಘಟನೆಗೂ ಸಂಬಂಧವೇ ಇಲ್ಲ’. ನಮ್ಮದು ಏನಿದ್ದರೂ ಪಕ್ಷ ಸಂಘಟನೆ, ದೆಹಲಿ ವರಿಷ್ಠರ ಸೂಚನೆ ಯನ್ನು ಚಾಚೂ ತಪ್ಪದೇ ಪಾಲಿಸುವುದಷ್ಟೇ ಎನ್ನುವ ವರ್ತನೆಯಿದೆ. ಈ ರೀತಿ ಲಕ್ಷ್ಮಣ ರೇಖೆ ಹಾಕಿಕೊಂಡು ಕೆಲಸ ಮಾಡುತ್ತಿರುವುದರಿಂದ ರಾಜ್ಯ ಬಿಜೆಪಿಯಲ್ಲಿ ’’common nderstanding’ ಕೊರಯತೆಯಂತೂ ಇದೆ. ಈ ಕೊರತೆ ಎದ್ದು ಕಾಣುತ್ತಿರುವುದು ಉಪಚುನಾವಣಾ ಅಖಾಡದಲ್ಲಿ ಎಂದರೆ ತಪ್ಪಾಗುವುದಿಲ್ಲ.
ಪಕ್ಷ ಹಾಗೂ ಸರಕಾರದ ನಡುವಿನ ಕೊರತೆಯಿಂದಾಗಿ, ಕೆಲ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಚುನಾವಣಾ ಪ್ರಚಾರದಲ್ಲಿ ‘ತಟಸ್ಥ’ ನಿಲುವು ತಾಳಿದ್ದಾರೆ. ಇನ್ನು ಜವಾಬ್ದಾರಿ ಹಂಚಿಕೆಯಾಗಿರುವ ಸಚಿವರು, ನಮಗೂ ಚುನಾವಣೆಗೂ ಸಂಬಂಧವಿಲ್ಲ. ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿ ಅವರು ಪ್ರಚಾರಕ್ಕೆ ಹೋಗುವ ಸಮಯದಲ್ಲಿ ಅವರೊಂದಿಗೆ ಹೋಗುತ್ತಿದ್ದಾರೆ. ಇದರಿಂದಾಗಿ ಸಿಂದಗಿ ಹಾಗೂ ಹಾನಗಲ್ ನಲ್ಲಿ ತಳಮಟ್ಟದಲ್ಲಿ ಭಾರಿ ಸಮಸ್ಯೆ ಎದುರಾಗುತ್ತಿದೆ. ಈ ಎಲ್ಲದರ ನಡುವೆ ರಾಜ್ಯ ಬಿಜೆಪಿಯಲ್ಲಿರುವ ಮತ್ತೊಂದು ಬಹುದೊಡ್ಡ ಸಮಸ್ಯೆ ಎಂದರೆ, ಬಿಜೆಪಿಯ ಬಹುದೊಡ್ಡ ಆಧಾರಶಕ್ತಿಯಾಗಿರುವ ಆರ್ಎಸ್ಎಸ್ ಅನ್ನು ಸಮಪರ್ಕವಾಗಿ ಬಳಸಿಕೊಳ್ಳದೇ ಇರುವುದು.
ಇಂದಿನ ಬಲಿಷ್ಠ ಬಿಜೆಪಿಗೆ ಪ್ರಮುಖ ಕಾರಣ ಆರ್ಎಸ್ಎಸ್. ಈಗಲೂ ಬಿಜೆಪಿ ಕೇಂದ್ರ ಕಚೇರಿಗೆ ಸಂಘಪರಿಹಾರದಿಂದ ಬರುವ ಯಾವುದೇ ಸಲಹೆ ಸೂಚನೆ ಗಳನ್ನು ತಗೆದುಹಾಕುವ ದಾಷ್ಟ್ಯ ತೋರುವುದಿಲ್ಲ. ಯಾವುದೇ ರಾಜ್ಯದಲ್ಲಿ ಚುನಾವಣೆಯಾದರೂ ಕೇಂದ್ರ ಬಿಜೆಪಿಯಿಂದ ಮೊದಲು ಸಂಘ ಪರಿವಾರದ ಸಮೀಕ್ಷೆ, ಕೆಲ ಕಾರ್ಯಕರ್ತರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸುವುದು ವಾಡಿಕೆ. ಈ ರೀತಿ ಆರ್ಎಸ್ಎಸ್ ಸಂಘಟನೆಯ ಸಹಾಯದೊಂದಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿಗೆ ಯಶಸ್ಸು ಲಭಿಸಿದೆ ಸಹ. ಸಂಘ ಪರಿವಾರವನ್ನು ಪ್ರತಿಪಕ್ಷಗಳು ಬಹಿರಂಗವಾಗಿ ಟೀಕಿಸಿದರೂ, ಆಫ್ ದಿ ರೆಕಾರ್ಡ್ ಮಾತನಾಡು ವಾಗ, ಆರ್ಎಸ್ಎಸ್ನಂತ ಸಂಘಟನೆ ನಮ್ಮ ಪಕ್ಷಕ್ಕೂ ಇದಿದ್ದರೆ ಫಲಿತಾಂಶ ಏರುಪೇರಾಗುತ್ತಿತ್ತು ಎನ್ನುವ ಮಾತನ್ನು ಹೇಳಿರುವುದು ಇದೆ.
ಆದರೆ ಕರ್ನಾಟಕದ ಮಟ್ಟಿಗೆ ನೋಡಿದರೆ, ಸ್ಥಳೀಯ ಬಿಜೆಪಿ ನಾಯಕರು ಸಂಘ-ಪರಿವಾರವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಖಟ್ಟರ್ ಆರ್ಎಸ್ಎಸ್ವಾದಿ ಆಗಿದ್ದರೂ, ಸಂಘಟನೆಯ ವಿಷಯದಲ್ಲಿ ಸಂಘಪರಿವಾರದವರೊಂದಿಗೆ ‘ರಾಜಕೀಯ ತಂತ್ರ ಗಾರಿಕೆ’ ಸಂಬಂಧ ಹೆಚ್ಚು ಚರ್ಚೆ ನಡೆಸಿದ್ದು ಕಂಡಿಲ್ಲ. ಇನ್ನು ಬೊಮ್ಮಾಯಿ ಅವರಿಗೆ ದೆಹಲಿ ವರಿಷ್ಠರಿಂದ ಸೂಚನೆ ಬಂದಾಗ ಕೇಶವಕೃಪಾಗೆ ಹೋಗುವುದನ್ನು
ನೋಡಿದ್ದೇವೆ ಹೊರತು, ತಾವಾಗಿಯೇ ಹೋಗಿಲ್ಲ. ಏಕೆಂದರೆ ಮೂಲತಃ ಅವರು ಆರ್ಎಸ್ಎಸ್ನಿಂದ ಸಾರ್ವಜನಿಕ ಜೀವನಕ್ಕೆ ಬಂದವರಲ್ಲ. ಆದ್ದರಿಂದ ಸಹಜ ವಾಗಿಯೇ ಅವರಿಗೆ ಕೇಶವಕೃಪ ಮೇಲಿನ ಒಲವು ಪೂರ್ಣ ಪ್ರಮಾಣದಲ್ಲಿ ಇರಬೇಕು ಎಂದಿಲ್ಲ.
ಇದೇ ರೀತಿ ಬೊಮ್ಮಾಯಿ ಸಚಿವ ಸಂಪುಟದಲ್ಲಿರುವ ವಲಸಿಗ ಸಚಿವರ ಪೈಕಿ ಶಿವರಾಂ ಹೆಬ್ಬಾರ್ ಹೊರತು, ಇನ್ನುಳಿದವರಿಗೆಲ್ಲ ಆರ್ಎಸ್ಎಸ್ ಹಿನ್ನಲೆಯಿಲ್ಲ. ಆದ್ದರಿಂದ ಸರಕಾರದ ವಿಷಯದಲ್ಲಿ ಸಂಘ ಪರಿವಾರದವರು ‘ಮೌನ’ಕ್ಕೆ ಶರಣಾಗಿದ್ದಾರೆ ಅಥವಾ ‘ತಮಗೆ ನೀಡಿರುವಷ್ಟೇ ಕೆಲಸ’ ಮಾಡಿಕೊಂಡಿದ್ದಾರೆ. ಕಳೆದ ವಾರದ ಲೇಖನದಲ್ಲಿ ಆರ್ಎಸ್ಎಸ್ ವಿರುದ್ಧ ಕುಮಾರಸ್ವಾಮಿ ಟೀಕಿಸಿದಾಗ, ಬಿಜೆಪಿಯ ಕೆಲ ನಾಯಕರು ಪ್ರತಿಕ್ರಿಯೆ ನೀಡಿದ್ದರು. ಈ ರೀತಿ ಹೇಳಿಕೆ ನೀಡುವ ಅವಶ್ಯಕತೆಯಿರಲಿಲ್ಲ ಎನ್ನುವ ಮಾತನ್ನು ಹೇಳಿದ್ದೆ. ಆದರೆ ಕೆಲ ನಾಯಕರನ್ನು ಹೊರತುಪಡಿಸಿದರೆ, ಬಹುತೇಕ ಬಿಜೆಪಿ ನಾಯಕರು ‘ಮೌನಕ್ಕೆ ಶರಣಾಗಿದ್ದರು’. ಈ ಮೂಲಕ ತಮಗೂ ವಿವಾದಕ್ಕೂ ಸಂಬಂಧವೇ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದರು.
ಬಿಜೆಪಿಯ ಬೆನ್ನಾಗಿರುವ ಸಂಸ್ಥೆಯ ಬಗ್ಗೆ ಮಾತನಾಡಿದಾಗ, ಕನಿಷ್ಠ ಪ್ರತಿಕ್ರಿಯೆಯನ್ನು ನೀಡದಿದ್ದರೆ ಸಾರ್ವಜನಿಕರಿಗೆ ನೀಡುವ ಸಂದೇಶವಾದರೂ ಏನು ಎನ್ನುವು ದನ್ನು ಯೋಚಿಸಬೇಕಿದೆ. ಹೀಗೆ ಸಾಲು ಸಾಲು ಸಮನ್ವಯ ಕೊರತೆಯ ನಡುವೆಯೂ ಸಿಂದಗಿ ಹಾಗೂ ಹಾನಗಲ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಹೊರಟಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರವೇ ಅಧಿಕಾರದಲ್ಲಿರುವುದರಿಂದ, ಆಡಳಿತ ವ್ಯವಸ್ಥೆಯನ್ನು ಬಳಸಿಕೊಂಡು ಚುನಾವಣೆ ನಡೆಸಬಹುದು.
ಅಧಿಕಾರದಲ್ಲಿರುವಾಗ ಯಾರಿಗೂ ಪಕ್ಷ, ಪಕ್ಷದ ಕಾರ್ಯಕರ್ತರು ಹಾಗೂ ಸಂಘಟನೆಯ ನೆನಪು ಹೆಚ್ಚಾಗಿ ಕಾಡುವುದಿಲ್ಲ. ಈಗಾಗಲೇ ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳು, ಸಂಘಟನೆ ವಿಷಯದಲ್ಲಿ ಮೈಮರೆತು ಬಳಿಕ ಭಾರಿ ಸಮಸ್ಯೆ ಅನುಭವಿಸುರುವುದನ್ನು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ನೋಡಿ
ದ್ದೇವೆ. ಆದ್ದರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ಪಾಲಿಗೆ ಇರುವ ಏಕೈಕ ರಾಜ್ಯ ಕರ್ನಾಟಕದಲ್ಲಿ, ಸಂಘಟನೆಯ ವಿಷಯದಲ್ಲಿ ಎಚ್ಚರಿಕೆ ವಹಿಸಲೇಬೇಕಿದೆ. ಅಧಿಕಾರ ಇರುವ ತನಕ ಸಂಘಟನೆಯ ನೆನಪು ಮಾಡಿಕೊಳ್ಳದಿದ್ದರೂ, ಇನ್ನೊಂದುವರೆ ವರ್ಷದಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಮಸ್ಯೆ ಯಾಗುವ ಮಾತನ್ನು ತಗೆದುಹಾಕಲು ಸಾಧ್ಯವೇ ಇಲ್ಲ.