ಮತಕ್ಕೆ ಮುನ್ನವೇ ಫಲಿತಾಂಶದ ಕ್ರೆಡಿಟ್ಗಾಗಿ ಬಿಜೆಪಿಯಲ್ಲಿ ಪೈಪೋಟಿ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಸರಕಾರದ ನಾಯಕತ್ವ ಬದಲಾವಣೆ ನಂತರ ನಡೆಯುತ್ತಿರುವ ನಂತರದ ಪ್ರಥಮ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಎದುರಾಳಿ
ವಿರುದ್ಧದ ಸಮರಕ್ಕಿಂತ ಶೀತಲ ಸೆಣಸಾಣ ತೀವ್ರಗೊಳ್ಳುತ್ತಿದೆ.
ಒಂದು ಕಡೆ ಮುಖಂಡರು ಪಕ್ಷ ಗೆಲ್ಲಿಸಲು ಹಗಲಿರುಳೂ ಹೋರಾಟ ನಡೆಸುತ್ತಿದ್ದರೆ, ಮತ್ತೊಂದು ಕಡೆ ಪಕ್ಷದ ನಾಯಕರೇ
ಚುನಾವಣೆ ಗೆಲವಿನ ಕ್ರೆಡಿಟ್ ವಿಚಾರದಲ್ಲಿ ರಾಜಕೀಯಕ್ಕೆ ಇಳಿದಿದ್ದಾರೆ. ವಿಚಿತ್ರವೆಂದರೆ, ಪಕ್ಷ ಗೆಲ್ಲಿಸುವ ಸಾಮರ್ಥ್ಯವಿರುವ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪುತ್ರ ವಿಜ ಯೇಂದ್ರ ಅವರನ್ನೇ ಪ್ರಚಾರ ಮತ್ತು ಕಾರ್ಯತಂತ್ರಗಳಿಂದಲೇ ದೂರ ಇರಿಸುವ ತೆರೆಮರೆಯ ಪ್ರಯತ್ನ ನಡೆಸಲಾಗುತ್ತಿದೆ.
ಜತೆಗೆ ಇವರನ್ನು ಸಾಧ್ಯವಾದಷ್ಟು ಲಾಭಕ್ಕೆ ಬಳಸಿಕೊಂಡು, ಚುನಾವಣೆಯಲ್ಲಿ ಗೆದ್ದರೆ, ಸಾಮಾಹಿಕ ಹೋರಾಟದ ಗೆಲವು, ಸೋತರು ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ಗುಂಪಿನ ತಲೆಗೆ ಕಟ್ಟುವ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ. ಈ ಮಧ್ಯೆ, ಗೆಲ್ಲಲೇ ಬೇಕಿರುವ ಹಾವೇರಿಯ ಹಾನಗಲ್ ಉಪ ಚುನಾವಣೆ ಮಾತ್ರ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಅವರನ್ನು ವಿಪರೀತ ಎನ್ನುವಂತೆ ಬಳಸಿಕೊಳ್ಳಲಾಗುತ್ತಿದ್ದು, ಇದ ಪಕ್ಷದ ಕಾರ್ಯಕರ್ತರ ಅಚ್ಚರಿ ಮೂಡಿಸಿದೆ.
ವಿಜಯಪುರದ ಸಿಂದಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಪ್ಪ, ಮಗನನ್ನು ಆದಷ್ಟು ಪ್ರಚಾರ ಮತ್ತು ಚುನಾವಣಾ ಕಾರ್ಯ ತಂತ್ರದಿಂದ ದೂರ ಇರಿಸುವ ಪ್ರಯತ್ನ ನಡೆಸ ಲಾಗುತ್ತಿದೆ. ಅದರಲ್ಲೂ ಉಪ ಚುನಾವಣೆಗಳ ಸ್ಪೆಷಲಿಸ್ಟ್ ಎಂದೇ ಹೆಸರಾದ ವಿಜಯೇಂದ್ರ ಅವರ ಪ್ರಚಾರಕ್ಕೆ ಕತ್ತರಿ ಹಾಕಲಾಗು ತ್ತಿದೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರಗಳಲ್ಲಿನ ಸಮಸ್ಯೆ ಏನು ?: ಇದೇ ತಿಂಗಳ ೩೦ಕ್ಕೆ ನಡೆಯುವ ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಿತಿ ಗಮನಿಸಿದರೆ, ಅದು ಕಾಂಗ್ರೆಸ್ ವಿರುದ್ಧ ಗೆಲ್ಲುವುದಕ್ಕಿಂತ ತನ್ನೊಳಗಿನ ಪೈಪೋಟಿ ವಿರುದ್ಧ ಸೆಣಸುವ ಅನಿವಾರ್ಯ ವಿದೆ. ಬಿಜಾಪುರ ಜಿಲ್ಲಾ ವ್ಯಾಪ್ತಿಗೆ ಬರುವ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಗೆ ಒಳ ಹೊಡೆತಗಳು ಹೆಚ್ಚು ಬೀಳುವ ಸಾಧ್ಯತೆ ಇದೆ.
ಕ್ಷೇತ್ರದಲ್ಲಿ ಈತನಕ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿತ್ತು. ಮಾಜಿ ಸಚಿವ, ಜೆಡಿಎಸ್ ನಾಯಕ ರಾಗಿದ್ದ ದಿ.ಎಂ.ಸಿ.ಮನಗೂಳಿ ಪುತ್ರ ಅಶೋಕ್ ಮನಗೂಳಿ ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಇವರಿಗೆ ತಂದೆ ಎಂ.ಸಿ.ಮನ ಗೂಳಿ ಅವರ ನಿಧನದ ನಂತರ ಅನುಕಂಪವಾಗಿ ಬಿಜೆಪಿಗೆ ನಷ್ಟ ಉಂಟು ಮಾಡಬಹುದು.
ಬಿಜೆಪಿಯ ಸ್ಪರ್ಧಾಳು ರಮೇಶ ಭೂಸನೂರು ಈ ಹಿಂದೆ ಶಾಸಕರಾಗಿದ್ದಾಗ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಆರೋಪವಿದೆ. ಜತೆಗೆ ಇವರಿಗೆ ಟಿಕೆಟ್ ನೀಡಿರುವುದು ಆರ್ ಎಸ್ಎಸ್ ನಾಯಕರಲ್ಲಿ ಅಷ್ಟಾಗಿ ತೃಪ್ತಿ ಇಲ್ಲ. ಹೀಗಾಗಿ ಸಿಂದಗಿಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತ ಪ್ರಚಾರ ಅಷ್ಟಕ್ಕಷ್ಟೇ ಎನ್ನಬಹುದು. ಇಂಥ ಸಂದರ್ಭದಲ್ಲಿ ಇಲ್ಲಿ ಪಕ್ಷ ಗೆಲ್ಲಿಸುವ ಉಸ್ತುವಾರಿ ಹೊತ್ತಿರುವ ನಾಯಕರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ, ವಿ.ಸೋಮಣ್ಣ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಅವರು ಯಡಿಯೂರಪ್ಪ ಮತ್ತು ವಿಜೇಂದ್ರ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎನ್ನುವ ಆರೋಪ ಪಕ್ಷದೊಳಗೇ ಕೇಳಿಬರುತ್ತಿದೆ.
ಹಾನಗಲ್ಗೆ ಅಪ್ಪ, ಮಗ ಏಕೆ ಅನಿವಾರ್ಯ?: ಇನ್ನು ಹಾನಗಲ್ ವಿಚಾರಕ್ಕೆ ಬಂದರೆ ಕ್ಷೇತ್ರದಲ್ಲಿ ಕಾಂಗ್ರೆ ಸ್ ನಿಂದ ವಿಧಾನ ಪರಿಷತ್ ಸದಸ್ಯ ಹಿಂದುಳಿದ ವರ್ಗದ ಶ್ರೀನಿವಾಸ ಮಾನೆ ಕಣದಲ್ಲಿದ್ದರೆ ಬಿಜೆಪಿಯಿಂದ ಪರಿಷತ್ ಮಾಜಿ ಸದಸ್ಯ ಲಿಂಗಾಯತ ಸಮಾಜದ ಶಿವರಾಜ್ ಸಜ್ಜನ್ ಹೋರಾಟಕ್ಕೆ ಇಳಿದಿದ್ದಾರೆ.
ಇಲ್ಲಿ ಲಿಂಗಾಯಿತ ಸಮುದಾಯ ಹೆಚ್ಚಾಗಿದ್ದು, ಈ ಮತಗಳ ಜೊತೆಗೆ ಇತರ ಸಮಾಜದ ಮತಗಳನ್ನು ಪಡೆದರೆ ಮಾತ್ರ ಬಿಜೆಪಿ ಗೆಲುವು ಸಾಧ್ಯ. ಈ ಮಧ್ಯೆ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನ್ಯ ಕಳೆದ ಚುನಾವಣೆಯಲ್ಲಿ ಕೇವಲ ೬೫೦೦ ಮತಗಳ ಅಂತರ ದಲ್ಲಿ ಸೋತಿದ್ದರು. ಈ ಅನುಕಂಪ ಮತದಾರರಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಇದು ಸಹಜವಾಗಿಯೇ ಈ ಬಾರಿ ಚುನಾವಣೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಬಿಜೆಪಿ ನಾಯಕರಿಗೂ ಭಯ ತಂದೊಡ್ಡಿದೆ. ಹಾಗೆಯೇ ಶಿವರಾಜ್ ಸಜ್ಜನ್ ಗೆ ಟಿಕೆಟ್ ಆಕಾಂಕ್ಷಿಗಳ ಒಳ ಏಟು ಬೀಳುವ ಆತಂಕ ಕೂಡ ಹೆಚ್ಚಾಗಿದೆ. ಕಾರಣ ಮಾಜಿ ಸಚಿವ ಸಿ.ಎಂ. ಉದಾಸಿ ಕುಟುಂಬದವರು ಕಣದಲ್ಲಿ ಇಲ್ಲ.
ಇಂಥ ಸಂದರ್ಭದಲ್ಲಿ ಹಾನಗಲ್ ನಲ್ಲಿ ಪಕ್ಷ ಗೆಲ್ಲಿಸುವ ಸಾಮರ್ಥ್ಯ ಇರುವುದು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೆ ಮಾತ್ರ ಎನ್ನುವ ಮಾತು ಪಕ್ಷದೊಳಗೇ ಕೇಳಿಬರುತ್ತಿದೆ. ಏಕೆಂದರೆ ಹಾವೇರಿ ಶಿವಮೊಗ್ಗ ಜಿಗೆ ಹೊಂದಿಕೊಂಡಂತಿರುವ ಪ್ರದೇಶ. ಇಲ್ಲಿ ಹೆಚ್ಚು ಲಿಂಗಾಯತ ಸಮುದಾಯ ಇರುವುದರಿಂದ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಪ್ರಭಾವ ಹೆಚ್ಚಾಗಿದೆ. ಹೀಗಾಗಿ ತವರಿ ಜಿಲ್ಲೆಯಲ್ಲಿ ಗೆಲ್ಲಲೇಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಚಾರಕ್ಕೆ ಹೆಚ್ಚಿನ ರೀತಿಯಲ್ಲಿ ಯಡಿಯೂ ರಪ್ಪ ಮತ್ತು ವಿಜಯೇಂದ್ರ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ನಿಗದಿತಗಿಂತ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಅಪ್ಪಮಕ್ಕಳನ್ನು ಕಾಣಿಸಿಕೊಳ್ಳುವಂತೆ ಮಾಡಲಾಗುತ್ತಿದೆ.