Saturday, 23rd November 2024

ಆಲ್‌ರೌಂಡರ್‌ ಹಾರ್ದಿಕ್‌ ಭುಜಕ್ಕೆ ಗಾಯ: ಬಿಸಿಸಿಐ ಕಾದುನೋಡುವ ತಂತ್ರ

ದುಬೈ: ಕಳೆದ ಭಾನುವಾರ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಭುಜಕ್ಕೆ ಗಾಯವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಅ.31ರಂದು ನ್ಯೂಜಿಲೆಂಡ್‌ ವಿರುದ್ಧ ನಡೆಯಲಿರುವ ಎರಡನೇ ಪಂದ್ಯದಲ್ಲಿ ಹಾರ್ದಿಕ್‌ ಆಡುವ ಸಾಧ್ಯತೆ ಇದೆ. ಆದರೂ ಬಿಸಿಸಿಐ ಕಾದುನೋಡುವ ತಂತ್ರ ಅನುಸರಿಸಿದೆ.

ಅಭ್ಯಾಸ ಪಂದ್ಯಗಳಲ್ಲಿ ಹಾರ್ದಿಕ್‌ ಪಾಂಡ್ಯ ಬೌಲಿಂಗ್ ಮಾಡಿರಲಿಲ್ಲ. ಅಲ್ಲದೆ ಪಾಕ್ ವಿರುದ್ಧದ ಪಂದ್ಯದಲ್ಲಿ ಕೇವಲ ಬ್ಯಾಟ್ಸ್‌ ಮನ್ ಆಗಿ ಕಣಕ್ಕಿಳಿದಿದ್ದು, 8 ಎಸೆತಗಳಲ್ಲಿ 11 ರನ್‌ ಗಳಿಸಿದ್ದರು. ಎರಡನೇ ಪಂದ್ಯಕ್ಕೆ 6 ದಿನ ಬಾಕಿ ಇರುವುದರಿಂದ ಅವರಿಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಅವರು ಬೌಲಿಂಗ್‌ ಮಾಡಿರಲಿಲ್ಲ. ನ್ಯೂಜಿಲೆಂಡ್‌ ವಿರುದ್ಧ ಬೌಲಿಂಗ್ ಮಾಡಲಿದ್ದಾರಾ ಎಂಬುದರ ಬಗ್ಗೆ ಬಿಸಿಸಿಐ ಕಾದುನೋಡುವ ತಂತ್ರ ಅನುಸರಿಸುತ್ತಿದೆ’ ಎನ್ನಲಾ ಗಿದೆ.

ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಅಫ್ಗಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಸುಲಭ ಜಯಗಳಿಸುವ ನಿರೀಕ್ಷೆಯಲ್ಲಿವೆ. ಒಂದು ವೇಳೆ ನ್ಯೂಜಿ ಲೆಂಡ್‌ ವಿರುದ್ಧ ಭಾರತ ಸೋತರೆ ಗುಂಪಿನಲ್ಲಿ ಅಗ್ರ ಎರಡನೇ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗಿದೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು.