ಕಾಂಗ್ರೆಸ್ – ಬಿಜೆಪಿ ನಡುವೆ ಪೈಪೋಟಿ: ಗೆಲುವು ಕಸಿವ ಯತ್ನದಲ್ಲಿ ಜೆಡಿಎಸ್
ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು
ಪ್ರತಿಷ್ಠೆ ಕಣವಾದ ಎರಡು ಕ್ಷೇತ್ರದ ಉಪಚುನಾವಣೆಗೆಲುವಿಗೆ ಆಡಳಿತಾರೂಢ ಬಿಜೆಪಿ ಪೈಪೋಟಿಗೆ ಬಿದ್ದಿದ್ದರೆ, ಕಾಂಗ್ರೆಸ್ ಇಲ್ಲಿಂದಲೇ ಗೆಲುವಿನ ಅಭಿಯಾನ ಆರಂಭಿಸಲು ಮುಂದಾಗಿದೆ. ಜೆಡಿಎಸ್ ಎರಡೂ ಪಕ್ಷಗಳ ಪಾಲಿಗೆ ಬಿಸಿತುಪ್ಪವಾಗಿದ್ದು, ಅವರ ಗೆಲುವಿನ ಅವಕಾಶವನ್ನು ತಲೆಕೆಳಗಾಗಿಸುವ ಲೆಕ್ಕಾಚಾರದಲ್ಲಿದೆ.
ಬೆಲೆ ಏರಿಕೆ, ಆಡಳಿತ ವೈಫಲ್ಯಗಳನ್ನೇ ಕಾಂಗ್ರೆಸ್ ಅಸ ವನ್ನಾಗಿ ಬಳಸಿಕೊಂಡು, ಪ್ರಚಾರ ದಲ್ಲಿ ತೊಡಗಿದ್ದರೆ, ಬಿಜೆಪಿ, ಕಾಂಗ್ರೆಸ್ನ ಹಿಂದಿನ ವೈಫಲ್ಯಗಳು, ಜಾತಿ ವಿಭಜನೆ ಕ್ರಮ, ರಾಷ್ಟ್ರೀಯತೆಗಳನ್ನು ಪ್ರಚಾರ ವಸ್ತುವನ್ನಾಗಿಸುವ ಪ್ರಯತ್ನ ನಡೆಸಿದೆ. ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನೇ ಅಸವನ್ನಾಗಿಸಿಕೊಂಡಿದೆ.
ಆ ಮೂಲಕ ಎರಡು ಪಕ್ಷದ ಪಾಲಿಗೆ ಅಲ್ಪಸಂಖ್ಯಾತ ಮತಗಳು ಬೀಳದಂತೆ ಮಾಡುವ ಪ್ರಯತ್ನದಲ್ಲಿದೆ. ಒಟ್ಟಾರೆ ಲಿಂಗಾಯತ ಮತದಾರರೇ ಪ್ರಮುಖ ಪಾತ್ರವಹಿಸಲಿದ್ದು, ಒಳಪಂಗಡಗಳ ಮೂಲಕ ಮತವಿಭಜನೆ ಮಾಡುವ ಆಟ ಆರಂಭವಾಗಿದೆ. ಬಿಜೆಪಿಗೆ
ಪಂಚಮಸಾಲಿ ಬಿಸಿ ಮುಟ್ಟಿಸುವ ಪ್ರಯತ್ನ ನಡೆದರೆ, ಕಾಂಗ್ರೆಸ್ನಿಂದ ಅಲ್ಪಸಂಖ್ಯಾತರ ದೂರ ಮಾಡುವ ತಂತ್ರಗಾರಿಕೆ ಜೆಡಿಎಸ್ನದ್ದು. ತ್ರಿಮುಖ ಕಾಲೆಳೆವ ಆಟದಂತೆ ಕಂಡು ಬರುತ್ತಿದ್ದು, ಜೆಡಿಎಸ್ ಪರೋಕ್ಷ ಬಿಜೆಪಿಗೆ ಸಹಕರಿಸುತ್ತಿದೆ ಎಂಬ ಆರೋಪವೂ ಇದೆ.
ಆದರೆ, ಜೆಡಿಎಸ್ ಇದನ್ನು ನಿರಾಕರಿಸಿದ್ದು, ಸಿಂದಗಿಯಲ್ಲಿ ಪುನರಾಯ್ಕೆ ವಿಶ್ವಾಸದಲ್ಲಿ ೩೫ ಸಾವಿರದಷ್ಟಿರುವ ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಉಳಿದಂತೆ ಇನ್ನಿತರ ಜನಾಂಗದ ಮತಗಳನ್ನು ಸೆಳೆವುದು ಜೆಡಿಎಸ್ ತಂತ್ರಗಾರಿಕೆ. ಸಿದ್ದರಾಮಯ್ಯ ಅವರನ್ನು ಹಣಿಯುತ್ತ, ಆರೆಸ್ಸೆಸ್ ಅನ್ನು ಹೀಯಾಳಿಸುತ್ತ ಅಲ್ಪಸಂಖ್ಯಾತ ಮತಗಳ ಕ್ರೋಡೀಕರಣದಲ್ಲಿ ಜೆಡಿಎಸ್ ನಾಯಕರು ತೊಡಗಿಸಿಕೊಂಡಿದ್ದಾರೆ.
ಯಡಿಯೂರಪ್ಪ ಪ್ರಚಾರದ ಬಳಿಕ ಚಿತ್ರಣ ಬದಲಾಗಿದ್ದು, ಬಿಜೆಪಿಗೆ ಸಹಾಯಕವಾಗಿದೆ. ಕಿತ್ತೂರು ಕರ್ನಾಟಕ ಘೋಷಣೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಭರವಸೆಗಳನ್ನು ಮುಂದಿಟ್ಟುಕೊಂಡು ಸಿಎಂ ಬೊಮ್ಮಾಯಿ ಅವರು ಕೂಡ ಪ್ರಚಾರದ
ಕಣವನ್ನು ರಂಗೇರಿಸಿದ್ದಾರೆ. ಕಾಂಗ್ರೆಸ್ನ ಸಿದ್ದರಾಮಯ್ಯ, ಡಿಕೆಶಿ, ಮೊದಲಾದ ಪ್ರಮುಖ ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟು, ಬಿಜೆಪಿಯ ವೈಫಲ್ಯಗಳು, ಜಾತಿ ರಾಜಕಾರಣಗಳನ್ನೇ ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದಾರೆ.