ಪಾಟ್ನಾ: ಗಾಂಧಿ ಮೈದಾನ ಸರಣಿ ಬಾಂಬ್ ಸ್ಫೋಟ ಪ್ರಕರಣ(2013) ದಲ್ಲಿ 10 ಮಂದಿ ಆರೋಪಿಗಳಲ್ಲಿ 9 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡ ಲಾಗಿದ್ದು ಓರ್ವನನ್ನು ಖುಲಾಸೆಗೊಳಿಸಲಾಗಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದ ಓರ್ವನನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಪಾಟ್ನಾದ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಹೇಳಿದೆ.
ಅಂದಿನ ಪ್ರಧಾನಿ ಅಭ್ಯರ್ಥಿ, ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ‘ಹುಂಕಾರ್’ ರ್ಯಾಲಿ ಸಂದರ್ಭದಲ್ಲಿ ರ್ಯಾಲಿ ನಡೆಯುತ್ತಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿತ್ತು.
ಅಕ್ಟೋಬರ್ 27, 2013 ರಂದು ಬಿಹಾರದ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಸರಣಿ ಸ್ಫೋಟಗಳಲ್ಲಿ ಆರು ಜನರು ಮೃತಪಟ್ಟು 90 ಕ್ಕೂ ಹೆಚ್ಚು ಜನರು ಗಾಯಗೊಂಡರು. ಅದಾಗ್ಯೂ, ಮೋದಿ ಭಾಷಣ ಮಾಡುವುದರೊಂದಿಗೆ ರ್ಯಾಲಿ ಮುಂದುವರೆಯಿತು. ಮೈದಾನದಲ್ಲಿ ಕಾಲ್ತುಳಿತವನ್ನು ಪೊಲೀಸರು ತಪ್ಪಿಸಿದ್ದರು. ಎನ್‌ಐಎ ನವೆಂಬರ್ 6, 2013 ರಂದು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿತು. 11 ಆರೋಪಿಗಳ ವಿರುದ್ಧ ಆಗಸ್ಟ್ 21, 2014 ರಂದು ಚಾರ್ಜ್ ಶೀಟ್ ಸಲ್ಲಿಸಿತು.
9 ಮಂದಿ ಇಂಡಿಯನ್ ಮುಜಾಹಿದೀನ್ ಶಂಕಿತರು ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ ಅನ್ನು ಪ್ರಕರಣದಲ್ಲಿ ಅಪರಾಧಿಗಳೆಂದು ತೀರ್ಪು ನೀಡಲಾಗಿದೆ.